ಕೆಂಪು ಸಮುದ್ರದಲ್ಲಿ ಭಾರತದ ಹಡಗಿನ ಮೇಲೆ ದಾಳಿ: ನಾವಿಕರ ರಕ್ಷಣೆ
ಯೆಮೆನ್‌ನ ಪಶ್ಚಿಮ ಕರಾವಳಿಯ ಕೆಂಪು ಸಮುದ್ರದಲ್ಲಿ ಇರಾನ್ ಬೆಂಬಲಿತ ಹೌತಿಗಳು ಮಂಗಳವಾರ ಭಾರತದ ಧ್ವಜ ಹೊತ್ತ ಹಡಗಿನ ಮೇಲೆ ದಾಳಿ ನಡೆಸಿದ್ದು, ಹಡಗು ಸಂಪೂರ್ಣವಾಗಿ ಸಮುದ್ರದಲ್ಲಿ ಮುಳುಗಿದೆ. ಹಡಗಿನಲ್ಲಿದ್ದ 13 ಭಾರತೀಯ ನಾವಿಕರನ್ನು ಯೆಮೆನ್ ಪಡೆಗಳು ರಕ್ಷಿಸಿ ಅವರಿಗೆ ವೈದ್ಯಕೀಯ ನೆರವು ನೀಡಿದರು. ಭಾರತ ಈ ದಾಳಿಯನ್ನು ಖಂಡಿಸಿದೆ.
ಸಂಗ್ರಹ ಚಿತ್ರ -
ಯೆಮೆನ್: ಇರಾನ್ ಬೆಂಬಲಿತ ಹೌತಿಗಳು (Iran backed Houthis) ಮಂಗಳವಾರ ಭಾರತದ ಹಡಗಿನ (India Flagged Ship) ಮೇಲೆ ದಾಳಿ ನಡೆಸಿದ್ದಾರೆ. ಇದರಿಂದ ಹಡಗು ಕೆಂಪು ಸಮುದ್ರದಲ್ಲಿ (Red sea) ಮುಳುಗಿತು. ಹಡಗಿನಲ್ಲಿದ್ದ ಒಬ್ಬ ಯೆಮೆನ್ ಸಿಬ್ಬಂದಿ ಹಾಗೂ 13 ಭಾರತೀಯ ನಾವಿಕರನ್ನು (Indian Sailors) ಯೆಮೆನ್ ಪಡೆಗಳು (Yemeni forces) ರಕ್ಷಿಸಿ ವೈದ್ಯಕೀಯ ನೆರವು ನೀಡಿದರು. ಹೌತಿ ಬಂದರು ನಗರವಾದ ಹೊಡೈದಾದಿಂದ ದಕ್ಷಿಣಕ್ಕೆ ಕೆಂಪು ಸಮುದ್ರದಲ್ಲಿ ಸುಮಾರು 13 ನಾಟಿಕಲ್ ಮೈಲು ದೂರದಲ್ಲಿ ಸಾಗುತ್ತಿದ್ದ ಭಾರತೀಯ ಧ್ವಜ ಹೊತ್ತಿದ್ದ ಎಂಎಸ್ ವಿ ಫೈಜ್ ನೂರ್ ಒಲಿಯಾ ಸರಕು ಹಡಗಿನ ಮೇಲೆ ದಾಳಿ ನಡೆಸಲಾಗಿದೆ.
ಯೆಮೆನ್‌ನ ಪಶ್ಚಿಮ ಕರಾವಳಿಯ ಕೆಂಪು ಸಮುದ್ರದಲ್ಲಿ ಭಾರತದ ಸರಕು ಸಾಗಣೆ ಹಡಗಿನ ಮೇಲೆ ಮಂಗಳವಾರ ಹೌತಿಗಳು ದಾಳಿ ನಡೆಸಿದ್ದರಿಂದ ಹಡಗು ಕೆಂಪು ಸಮುದ್ರದಲ್ಲಿ ಮುಳುಗಿದೆ. ಅದರಲ್ಲಿದ್ದ 14 ಸಿಬ್ಬಂದಿಯನ್ನು ಯೆಮೆನ್ ಪಡೆಗಳು ರಕ್ಷಿಸಿದವು.
ಯೆಮೆನ್ ನ ರಾಷ್ಟ್ರೀಯ ಪ್ರತಿರೋಧ ಪಡೆ ಗಾರ್ಡ್ಸ್ ಆಫ್ ದಿ ರಿಪಬ್ಲಿಕ್ ನೀಡಿರುವ ಮಾಹಿತಿ ಪ್ರಕಾರ, ಕೆಂಪು ಸಮುದ್ರದಲ್ಲಿ ಮುಳುಗಿದ ಭಾರತೀಯ ಧ್ವಜ ಹೊತ್ತ ಹಡಗಿನಲ್ಲಿದ್ದ ನಾವಿಕರನ್ನು ರಕ್ಷಿಸಲು ಯೆಮೆನ್ ಕರಾವಳಿ ಕಾವಲು ಪಡೆ ಮತ್ತು ನೌಕಾ ಘಟಕಗಳು ಜಂಟಿ ಕಾರ್ಯಾಚರಣೆಯನ್ನು ನಡೆಸಿತು ಎಂದು ತಿಳಿಸಿದೆ.
Indian MSV Faize Noore Oliya has been hit by a projectile near Yemeni waters, causing the vessel to capsize and sink.
— Sarbananda Sonowal (@sarbanandsonwal) August 4, 2026
India strongly condemns this unprovoked attack on the defenseless mechanised sailing vessel. The safety of our people is our supreme priority & I am relieved to…
ಯೆಮೆನ್ ಜಲಪ್ರದೇಶದ ಬಳಿ ಸಾಗುತ್ತಿದ್ದ ಸರಕು ಹಡಗಿನ ಮೇಲೆ ನಡೆಸಿರುವ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಬರೆದಿರುವ ಬಂದರು, ಹಡಗು ಮತ್ತು ಜಲಮಾರ್ಗಗಳ ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್, ಭಾರತೀಯ ಹಡಗಿನ ಮೇಲೆ ದಾಳಿಯಾಗಿದ್ದರಿಂದ ಹಡಗು ಸಮುದ್ರದಲ್ಲಿ ಮುಳುಗಿದೆ. ಈ ಪ್ರದೇಶದಲ್ಲಿ ಭಾರತೀಯ ನಾವಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ರಕ್ಷಿಸಲ್ಪಟ್ಟ ಸಿಬ್ಬಂದಿಗೆ ಅಗತ್ಯ ಸಹಾಯವನ್ನು ಒದಗಿಸಲು ತಕ್ಷಣ ಕ್ರಮಕೈಗೊಳ್ಳುವಂತೆ ಸಾಗರ ಆಡಳಿತ ಮಹಾನಿರ್ದೇಶಕರಿಗೆ (ಡಿಜಿಎಂಎ) ಸೂಚಿಸಲಾಗಿದೆ ಎಂದರು.
ರಕ್ಷಣೆಯಿಲ್ಲದ ಯಾಂತ್ರಿಕೃತ ನೌಕಾಯಾನ ಹಡಗಿನ ಮೇಲಿನ ನಡೆದಿರುವ ಈ ದಾಳಿಯನ್ನು ಭಾರತ ಬಲವಾಗಿ ಖಂಡಿಸುತ್ತದೆ. ಸಿಬ್ಬಂದಿಯ ಸುರಕ್ಷತೆ ನಮ್ಮ ಅತ್ಯುನ್ನತ ಆದ್ಯತೆಯಾಗಿದೆ. ಯೆಮೆನ್ ಕರಾವಳಿ ಕಾವಲು ಪಡೆ ಎಲ್ಲಾ 14 ನಾವಿಕರನ್ನು ರಕ್ಷಿಸಿ ಮೋಖಾ ಬಂದರಿಗೆ ಕರೆತಂದಿದೆ ಎಂಬುದು ಸಮಾಧಾನಕರ ವಿಷಯವಾಗಿದೆ ಎಂದು ತಿಳಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವಾಲಯ, ರಿಯಾದ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಇಲ್ಲಿ ಸಿಬ್ಬಂದಿಯ ಸುರಕ್ಷತೆ ಮತ್ತು ಭದ್ರತೆಗಾಗಿ ಯೆಮೆನ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದೆ. ಸಮುದ್ರದಲ್ಲಿ ಯಾವುದೇ ಭದ್ರತೆ ಇಲ್ಲದೆ ಸಾಗುವ ವಾಣಿಜ್ಯ ಹಡಗುಗಳ ಮೇಲೆ ದಾಳಿಯಾಗುವುದು ಕೊನೆಯಾಗಬೇಕು ಎಂದು ಹೇಳಿದೆ.
ವಾಣಿಜ್ಯ ಹಡಗುಗಳ ಮೇಲಿನ ದಾಳಿಯ ನಿರಂತರ ಘಟನೆಗಳು ತೀವ್ರ ಕಳವಳಕಾರಿ. ಅಂತಾರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ಈ ಪ್ರದೇಶದಲ್ಲಿನ ಜಲಮಾರ್ಗಗಳಲ್ಲಿ ಸುರಕ್ಷತೆಯನ್ನು ಆದಷ್ಟು ಬೇಗ ಮರುಸ್ಥಾಪಿಸಬೇಕು. ಭಾರತೀಯ ನಾವಿಕರ ಸುರಕ್ಷತೆ ಭಾರತಕ್ಕೆ ತೀವ್ರ ಮಾನವೀಯ ಮತ್ತು ರಾಜತಾಂತ್ರಿಕ ಬಿಕ್ಕಟ್ಟಾಗಿ ಪರಿಣಮಿಸಿದೆ ಎಂದು ತಿಳಿಸಿದೆ.
ಇರಾನ್ ಮತ್ತು ಯುಎಸ್ ನಡುವಿನ ಸಂಘರ್ಷದ ಹೊಸ ಭಾಗವಾಗಿ ಇರಾನ್ ಬೆಂಬಲಿತ ಹೌತಿಗಳು ಕಳೆದ ತಿಂಗಳಲ್ಲಿ ಸೌದಿ ಅರೇಬಿಯಾ ವಿರುದ್ಧ ಕೆಂಪು ಸಮುದ್ರದಲ್ಲಿ ನೌಕಾ ದಿಗ್ಬಂಧನವನ್ನು ಘೋಷಿಸಿದರು. ಇದು ಗಲ್ಫ್ ಜೊತಗಿನ ಜಾಗತಿಕ ಇಂಧನ ಪೂರೈಕೆ ಮತ್ತು ವ್ಯಾಪಾರಕ್ಕೆ ಅಡ್ಡಿಯನ್ನು ಉಂಟು ಮಾಡುವ ಆತಂಕ ಸೃಷ್ಟಿಸಿದೆ.
ಕೆಂಪು ಸಮುದ್ರದ ಮುಖಭಾಗದಲ್ಲಿರುವ ಬಾಬ್ ಎಲ್-ಮಂಡೇಬ್ ಜಲಸಂಧಿಯು ಅಡೆನ್ ಕೊಲ್ಲಿ ಮತ್ತು ಹಿಂದೂ ಮಹಾಸಾಗರವನ್ನು ಸಂಪರ್ಕಿಸಲು ಇರುವ ಪ್ರಮುಖ ದಾರಿಯಾಗಿದೆ. ತೀವ್ರ ಗಾಳಿ, ಪ್ರವಾಹ, ಬಂಡೆಗಳಿರುವ ಕಾರಣ ಹಲವಾರು ಅಪಘಾತಗಳು ಇಲ್ಲಿ ನಡೆದಿದೆ. ಹೀಗಾಗಿ ಅತ್ಯಂತ ಕಠಿಣ ಜಲ ಮಾರ್ಗವಾಗಿರುವ ಇದನ್ನು "ದುಃಖದ ದ್ವಾರ" ಎಂದು ಕೂಡ ಕರೆಯಲಾಗುತ್ತದೆ.