ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅಮೆರಿಕ-ಚೀನಾ ವಾಣಿಜ್ಯ ಸಂಘರ್ಷ ನವೆಂಬರ್‌ 1ರಿಂದ ಮತ್ತಷ್ಟು ತೀವ್ರ?

Trade War 2.0: ಮತ್ತೊಂದು ಸುತ್ತಿನ ವಾಣಿಜ್ಯ ಸಮರ ನಡೆಯುವ ಸಾಧ್ಯತೆ ಇದೆ. ಅಮೆರಿಕ-ಚೀನಾ ನಡುವಣ ವಾಣಿಜ್ಯ ಸಂಘರ್ಷ ಇನ್ನೊಂದೇ ವಾರದಲ್ಲಿ ತಾರಕ ಸ್ವರೂಪಕ್ಕೆ ತಿರುಗುವ ಲಕ್ಷಣ ಕಾಣಿಸುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ 2025ರ ನವೆಂಬರ್‌ 1ರಿಂದ ಚೀನಾ ವಿರುದ್ಧ 155 ಪರ್ಸೆಂಟ್‌ ಟಾರಿಫ್‌ ಅನ್ನು ಜಾರಿಗೊಳಿಸುವ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ.

ಅಮೆರಿಕ-ಚೀನಾ ವಾಣಿಜ್ಯ ಸಂಘರ್ಷ ಮತ್ತಷ್ಟು ತೀವ್ರ?

-

Ramesh B Ramesh B Oct 22, 2025 6:16 PM
  • ಕೇಶವ ಪ್ರಸಾದ್‌ ಬಿ.

ವಾಷಿಂಗ್ಟನ್‌, ಅ. 22: ಅಮೆರಿಕ-ಚೀನಾ ನಡುವಣ ವಾಣಿಜ್ಯ ಸಂಘರ್ಷ ಇನ್ನೊಂದೇ ವಾರದಲ್ಲಿ ತಾರಕ ಸ್ವರೂಪಕ್ಕೆ ತಿರುಗುವ ಲಕ್ಷಣ ಕಾಣಿಸುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) 2025ರ ನವೆಂಬರ್‌ 1ರಿಂದ ಚೀನಾ ವಿರುದ್ಧ 155 ಪರ್ಸೆಂಟ್‌ ಟಾರಿಫ್‌ ಅನ್ನು ಜಾರಿಗೊಳಿಸುವ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ (Trade War 2.0). ಒಂದು ಕಡೆ ಬೀಜಿಂಗ್‌ ಜತೆಗೆ ಸೌಹಾರ್ದ ಸಂಬಂಧ ಬಯಸುತ್ತಿರುವುದಾಗಿಯೂ, ಮತ್ತೊಂದು ಕಡೆ, ಅನೂಹ್ಯ ಟಾರಿಫ್‌ ವಿಧಿಸುವುದಾಗಿಯೂ ಹೇಳಿದ್ದಾರೆ.

"ಚೀನಾ ನಮಗೆ ಅತ್ಯಂತ ಗೌರವ ಕೊಡುತ್ತಿದೆ ಎಂದು ನನಗನ್ನಿಸುತ್ತಿದೆ. ಏಕೆಂದರೆ ಅವರು ಈಗಾಗಲೇ ಟಾರಿಫ್‌ ರೂಪದಲ್ಲಿ ದೊಡ್ಡ ಮೊತ್ತದ ಹಣವನ್ನು ನೀಡುತ್ತಿದ್ದಾರೆ. ಸದ್ಯಕ್ಕೆ 55% ಕೊಡುತ್ತಿದ್ದಾರೆ. ನವೆಂಬರ್‌ 1ರೊಳಗೆ ಡೀಲ್‌ ಆಗದಿದ್ದರೆ ಇದೇ ಸುಂಕವು 155%ಕ್ಕೆ ಏರಿಕೆಯಾಗಲಿದೆ. ನಾನು ಚೀನಾ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್ ಜತೆಗೆ ಮಾತುಕತೆ ನಡೆಸಿದ್ದೇನೆ. ಒಂದೆರಡು ವಾರದಲ್ಲಿ ದಕ್ಷಿಣ ಕೊರಿಯಾದಲ್ಲಿ ಸಭೆ ಸೇರಲಿದ್ದೇವೆ. ಎರಡೂ ದೇಶಗಳಿಗೆ ಒಳ್ಳೆಯದಾಗುವ ಡೀಲ್‌ ಆಗುವ ವಿಶ್ವಾಸ ಇದೆʼʼ ಎಂದು ಟ್ರಂಪ್‌ ವಿವರಿಸಿದ್ದಾರೆ.

"ಚೀನಾದ ಮುಂದಿರುವುದು ಎರಡೇ ದಾರಿ. ಒಂದೋ ಅಮೆರಿಕದ ಜತೆಗೆ ವ್ಯಾಪಾರ ಒಪ್ಪಂದ ಮಾಡಬೇಕು, ಇಲ್ಲವೇ 155% ಸುಂಕ ಕೊಡಬೇಕುʼʼ ಎನ್ನುತ್ತಾರೆ ಟ್ರಂಪ್.

ಈ ಸುದ್ದಿಯನ್ನೂ ಓದಿ: Donald Trump: ರಷ್ಯಾದ ತೈಲವನ್ನು ಭಾರತ ಖರೀದಿಸುವುದಿಲ್ಲ-ಡೊನಾಲ್ಡ್ ಟ್ರಂಪ್ ಮತ್ತೆ ಅದೇ ರಾಗ... ಅದೇ ಹಾಡು!

ಇಂಥ ಟ್ರಂಪ್‌ ಜತೆಗೆ ಮತ್ತೊಂದು ಸುತ್ತಿನ ಹಣಾಹಣಿಗೆ ಚೀನಾ ಸನ್ನದ್ಧವಾಗಿದೆ. ಚೀನಾ ತನ್ನ ಉತ್ಪಾದನಾ ಸಾಮರ್ಥ್ಯವನ್ನೇ ಅಮೆರಿಕ ವಿರುದ್ಧ ಅಸ್ತ್ರವಾಗಿ ಬಳಸಲು ಉದ್ದೇಶಿಸಿದೆ. ಕಾರ್ಖಾನೆಗಳು ಮತ್ತಷ್ಟು ಅಗ್ಗದ ದರದಲ್ಲಿ ಉತ್ಪನ್ನಗಳನ್ನು ತಯಾರಿಸಿ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಪೂರೈಸಲು ಸಜ್ಜಾಗಿವೆ. ಈ ಮೂಲಕ ಅಮೆರಿಕದ ಟಾರಿಫ್‌ ಸುಂಕವನ್ನು ಎದುರಿಸುವುದು ಚೀನಾದ ತಂತ್ರವಾಗಿದೆ. ಈ ನಡುವೆ ಡಾಲರ್‌ ಬಾಂಡ್‌ಗಳ ಖರೀದಿಯನ್ನು ಕಡಿಮೆ ಮಾಡುತ್ತಾ, ಚಿನ್ನದ ಖರೀದಿಯನ್ನು ಚೀನಾ ಹಿಂದೆಂದೂ ಕಂಡರಿಯದಷ್ಟು ಪ್ರಮಾಣದಲ್ಲಿ ಮುಂದುವರಿಸಿದೆ. ಇದರ ಪರಿಣಾಮ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಸಾರ್ವಕಾಲಿಕ ಎತ್ತರಕ್ಕೇರಿದೆ.

ಈ ಮೂಲಕ ತಾನು ಹೋರಾಟಕ್ಕೆ ಸಿದ್ಧನಾಗಿದ್ದೇನೆ ಎಂಬ ಖಡಕ್‌ ಸಂದೇಶವನ್ನು ಚೀನಾವು ಅಮೆರಿಕಕ್ಕೆ ರವಾನಿಸಿದೆ. ಹಗಲಿರುಳೆನ್ನದೆ ನಿರಂತರ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಚೀನಿ ಕಾರ್ಖಾನೆಗಳು ಕ್ಸಿ ಜಿನ್‌ಪಿಂಗ್‌ಗೆ ಅಮೆರಿಕದ ಸುಂಕಾಸ್ತ್ರವನ್ನು ಎದುರಿಸಲು ಶಕ್ತಿ ತುಂಬುತ್ತಿವೆ.

ವಿಶ್ವದ ಅತಿ ದೊಡ್ಡ ಹೋಲ್‌ಸೇಲ್‌ ಮಾರುಕಟ್ಟೆಯಾಗಿರುವ ಚೀನಾದ ಯಿವು ನಗರದಲ್ಲಿ ಉತ್ಪಾದನೆ ಸಾಮರ್ಥ್ಯದ ವಿಶ್ವರೂಪ ದರ್ಶನ ನಡೆಯುತ್ತಿದೆ. ಮಕ್ಕಳ ಆಟಕೆಗಳಿಂದ ಹೋಮ್‌ ಎಲೆಕ್ಟ್ರಾನಿಕ್ಸ್‌ ತನಕ ಇಲ್ಲಿ ಸಿಗದ ವಸ್ತುಗಳಿಲ್ಲ. ನೂರಾರು ಫುಟ್ಬಾಲ್‌ ಮೈದಾನಗಳಷ್ಟು ಪ್ರದೇಶದಲ್ಲಿ ರಫ್ತುದಾರರು ವ್ಯಾಪಾರದಲ್ಲಿ ನಿರತರಾಗಿದ್ದಾರೆ. ಅಮೆರಿಕದ ಗ್ರಾಹಕರು ಬರದಿದ್ದರೇನಂತೆ, ಯುರೋಪ್‌ ಮತ್ತು ಆಗ್ನೇಯ ಏಷ್ಯಾದ ಹೊಸ ಗ್ರಾಹಕರು ಪ್ರವಾಹೋಪಾದಿಯಲ್ಲಿ ಬರುತ್ತಿದ್ದಾರೆ. ಈ ವರ್ಷ ಚೀನಾವು ಜಗತ್ತಿನ ಇತರ ರಾಷ್ಟ್ರಗಳ ಜತೆಗೆ ದಾಖಲೆಯ 875 ಶತಕೋಟಿ ಡಾಲರ್‌ ವ್ಯಾಪಾರ ಹೆಚ್ಚಳ ಸಾಧಿಸುವ ನಿರೀಕ್ಷೆ ಇದೆ.

ಚೀನಾದ ಅನೇಕ ರಫ್ತುದಾರರು ಕಳೆದ ಜುಲೈ-ಆಗಸ್ಟ್‌ನಲ್ಲಿ ಅಮೆರಿಕಕ್ಕೆ ಇಡೀ ವರ್ಷಕ್ಕಾಗುವಷ್ಟು ರಫ್ತನ್ನು ಮಾಡಿದ್ದರು. ಏಕೆಂದರೆ ಆಗ ಟ್ರಂಪ್‌ ತಮ್ಮ ಭಾರಿ ಸುಂಕ ಪ್ರಯೋಗಕ್ಕೆ 90 ದಿನಗಳ ಬ್ರೇಕ್‌ ನೀಡಿದ್ದರು. ಈ ಗ್ಯಾಪ್‌ನಲ್ಲಿಯೇ ಚೀನಿ ರಫ್ತುದಾರರು ಅಮೆರಿಕಕ್ಕೆ ದಂಡಿಯಾಗಿ ಆಟಿಕೆಗಳಿಂದ ಹಿಡಿದು ಎಲ್ಲವನ್ನೂ ರಫ್ತು ಮಾಡಿ ದುಡ್ಡು ಎಣಿಸಿದ್ದಾರೆ. ಈಗ ಆಗ್ನೇಯ ಏಷ್ಯಾ, ದಕ್ಷಿಣ ಆಫ್ರಿಕಾ, ಯುರೋಪಿನ ಗ್ರಾಹಕರನ್ನು ಆಕರ್ಷಿಸುತ್ತಿದ್ದಾರೆ.

ಹೀಗಿದ್ದರೂ, ಚೀನಾದಲ್ಲಿ ಎಲ್ಲವೂ ಸರಿ ಇದೆ ಅಂತಿಲ್ಲ. ಚೀನಾಕ್ಕೆ ತನ್ನ ರಫ್ತನ್ನು ಸಮೃದ್ಧವಾಗಿ ಇಟ್ಟುಕೊಳ್ಳಬೇಕಾದ ಒತ್ತಡ ಇದೆ. ಏಕೆಂದರೆ ಅವುಗಳನ್ನು ಅಲ್ಲಿಯೇ ಖರೀದಿಸುವವರು ಇಲ್ಲ. ನಾಲ್ಕು ವರ್ಷಗಳ ಹಿಂದೆ ಚೀನಾದಲ್ಲಿ ಪ್ರಾಪರ್ಟಿ ದರಗಳು ಕುಸಿತಕ್ಕೀಡಾಗಿತ್ತು. ಕಟ್ಟಿದ ಅಸಂಖ್ಯಾತ ಅಪಾರ್ಟ್‌ಮೆಂಟ್‌ಗಳು ಖರೀದಿದಾರರು ಇಲ್ಲದೆ ಸಮಸ್ಯೆ ಎದುರಾಗಿತ್ತು. ಕೆಲವು ಇಂಡಸ್ಟ್ರಿಗಳು ಕುಸಿಯುತ್ತಿವೆ. ನಗರಗಳಲ್ಲಿ ವೇತನ ಇಳಿಯುತ್ತಿದೆ. ಇಂಥ ಸವಾಲುಗಳನ್ನು ಜೀರ್ಣಿಸಿಕೊಂಡು ಚೀನಾವು ಟ್ರಂಪ್‌ ಸುಂಕಾಸ್ತ್ರಕ್ಕೆ ಉತ್ತರ ಕೊಡುತ್ತಿದೆ.

ಅಮೆರಿಕ ಮತ್ತು ಚೀನಾದ ನಡುವೆ ಇತ್ತೀಚಿನ ದಶಕಗಳಲ್ಲಿ ವ್ಯಾಪಾರ ಗಣನೀಯವಾಗಿ ಬೆಳೆದಿದೆ. ಅಮೆರಿಕವು ಮೆಕ್ಸಿಕೊ ಬಿಟ್ಟರೆ ಚೀನಾಕ್ಕೆ ಹೆಚ್ಚು ಉತ್ಪನ್ನ ಮತ್ತು ಸರಕುಗಳನ್ನು ರಫ್ತು ಮಾಡುತ್ತದೆ. ಅದೇ ರೀತಿ ಚೀನಾಕ್ಕೂ ಅಮೆರಿಕ ಅತಿ ದೊಡ್ಡ ರಫ್ತು ಮಾರುಕಟ್ಟೆಯಾಗಿದೆ. 2001ರಲ್ಲಿ ಚೀನಾವು ವಿಶ್ವ ವ್ಯಾಪಾರ ಸಂಘಟನೆಯನ್ನು ಸೇರಿದ ಬಳಿಕ ಉಭಯ ದೇಶಗಳ ನಡುವೆ ಕೊಡು ಕೊಳ್ಳುವಿಕೆಯೂ ಹೆಚ್ಚಾಗಿತ್ತು. ಇದರಿಂದ ಅಮೆರಿಕದ ಗ್ರಾಹಕರಿಗೆ ಚೀನಾದ ಅಗ್ಗದ ದರದ ಉತ್ಪನ್ನಗಳು ಮತ್ತು ಸೇವೆಗಳು ಸಿಕ್ಕಿದರೆ, ಅಮೆರಿಕದ ಬಹುರಾಷ್ಟ್ರೀಯ ಕಂಪನಿಗಳು ಕೂಡ ಭಾರಿ ಲಾಭ ಮಾಡಿಕೊಂಡವು. ಆದರೆ ಅಮೆರಿಕನ್ನರಿಗೆ ಉದ್ಯೋಗಗಳು ಕೈ ತಪ್ಪಿತು. ತೀವ್ರ ಸ್ಪರ್ಧೆ, ಆಟೊಮೇಶನ್‌ ಜತೆಗೆ ಕಂಪನಿಗಳು ಅಮೆರಿಕದ ಹೊರಗಡೆ ಉತ್ಪಾದನೆಯನ್ನು ಹೆಚ್ಚಿಸಿದವು. 2018ರಲ್ಲಿ ಟ್ರಂಪ್‌ ಚೀನಾ ವಿರುದ್ಧ ವಾಣಿಜ್ಯ ಸಂಘರ್ಷ ಆರಂಭಿಸಿದರು. ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷರಾದ ಬಳಿಕ ಇದು ತೀವ್ರ ಸ್ವರೂಪಕ್ಕೆ ತಿರುಗಿದೆ. ಡೀಲ್‌ ಆಗದಿದ್ದರೆ, ನವೆಂಬರ್‌ 1ರಿಂದ ಅಮೆರಿಕಕ್ಕೆ ಆಮದಾಗುವ ಚೀನಿ ಉತ್ಪನ್ನಗಳ ಮೇಲೆ 150% ಸುಂಕವನ್ನು ವಿಧಿಸಲಾಗುವುದು ಎಂದು ಟ್ರಂಪ್‌ ಹೇಳಿದ್ದಾರೆ. ಆದರೆ ಟ್ರಂಪ್‌ ಚೌಕಾಶಿ ಮತ್ತು ಬೆದರಿಕೆಯ ತಂತ್ರ ಎಲ್ಲಿಗೆ ಮುಟ್ಟುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.