Kantara Chapter 1 Collection: ಬಾಕ್ಸ್ ಆಫೀಸ್‌ನಲ್ಲಿ ಈಗ ʼಕಾಂತಾರʼದ್ದೇ ಹವಾ; ಇದುವರೆಗೆ ಗಳಿಸಿದ್ದೆಷ್ಟು?
Kantara Chapter 1: ಭಾರತ ಮಾತ್ರವಲ್ಲ ಜಾಗತಿಕ ಮಟ್ಟದಲ್ಲಿ ʼಕಾಂತಾರ ಚಾಪ್ಟರ್ 1ʼ ಚಿತ್ರ ಸದ್ದು ಮಾಡುತ್ತಿದೆ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಈ ಚಿತ್ರ ಒಟ್ಟು 760.5 ಕೋಟಿ ರೂ. ಗಳಿಸಿದ್ದು ಇತಿಹಅಸ ಬರೆದಿದೆ.

-

ಬೆಂಗಳೂರು, ಅ. 22: ಅಕ್ಟೋಬರ್ 2ರಂದು ಅದ್ಧೂರಿಯಾಗಿ ತೆರೆಗೆ ಬಂದಿರುವ ʼಕಾಂತಾರ ಚಾಪ್ಟರ್ 1' (Kantara Chapter 1) ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಕರ್ನಾಟಕ ಗಡಿ ದಾಟಿ ದೇಶವನ್ನೂ ಮೀರಿ ಜಾಗತಿಕವಾಗಿ ಗಮನ ಸೆಳೆಯುತ್ತಿದೆ. ನಿರ್ದೇಶನ ಮತ್ತು ನಟನೆಯಲ್ಲಿ ರಿಷಬ್ ಶೆಟ್ಟಿ (Rishab Shetty) ಮತ್ತೊಮ್ಮೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. ಜತೆಗೆ ಗಳಿಕೆಯಲ್ಲೂ ದಾಖಲೆ ಬರೆದಿದೆ. ಕನ್ನಡ ಜತೆಗೆ ವಿವಿಧ ಭಾಷೆಗಳಲ್ಲಿ ತೆರೆಕಂಡಿದ್ದು, ಎಲ್ಲ ಕಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೀಗ ರಿಲೀಸ್ ಆಗಿ 21 ದಿನ ಕಳೆದಿದ್ದು, ದೀಪಾವಳಿ ಪ್ರಯುಕ್ತ ಕಲೆಕ್ಷನ್ ಮತ್ತಷ್ಟು ಹೆಚ್ಚಾಗಿದೆ.
ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಚಿತ್ರದ ಕಲೆಕ್ಷನ್ 750 ಕೋಟಿ ರೂ. ದಾಟಿದೆ. ಇನ್ನು ಭಾರತವೊಂದರಲ್ಲೇ 500 ಕೋಟಿ ರೂ.ಗಿಂತ ಅಧಿಕ ಗಳಿಸಿದ್ದು, ಹೊಸ ಇತಿಹಾಸ ಬರೆಯಲು ಸಜ್ಜಾಗಿದೆ. ಆ ಮೂಲಕ ಸ್ಯಾಂಡಲ್‌ವುಡ್ ಮತ್ತೊಮ್ಮೆ ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಿದೆ.
ಈ ಸುದ್ದಿಯನ್ನೂ ಓದಿ: Kantara Chapter 1 Collection: ದೀಪಾವಳಿ ವೇಳೆ ಮತ್ತೆ ಹೆಚ್ಚಾಯ್ತು ʼಕಾಂತಾರ ಚಾಪ್ಟರ್ 1' ಕಲೆಕ್ಷನ್; 1 ಸಾವಿರ ಕೋಟಿ ರೂ. ಗುರಿಗೆ ಇನ್ನಷ್ಟು ಸನಿಹ
ಕಲೆಕ್ಷನ್ ಎಷ್ಟಾಯ್ತು?
ಈಗ ಬಂದಿರುವ ವರದಿ ಪ್ರಕಾರ 21ನೇ ದಿನವಾದ ಅಕ್ಟೋಬರ್ 22ರಂದು ಚಿತ್ರ ಭಾರತದಲ್ಲಿ 5.59 ಕೋಟಿ ರೂ. ಗಳಿಸಿದೆ. ಆ ಮೂಲಕ ಕಲೆಕ್ಷನ್ 550 ಕೋಟಿ ರೂ. ಗಡಿ ದಾಟಿದೆ. ಅಂದರೆ ಇದುವರೆಗೆ 552.69 ಕೋಟಿ ರೂ. ಬಾಚಿಕೊಂಡಿದೆ. ರಜೆಯ ಹಿನ್ನೆಲೆಯಲ್ಲಿ ವಿವಿಧ ಭಾಷೆಗಳಲ್ಲಿಯೂ ಜನ ಪ್ರವಾಹವೇ ಥಿಯೇಟರ್ ಕಡೆಗೆ ಹರಿದು ಬಂದಿದೆ.
ಜಾಗತಿಕ ಕಲೆಕ್ಷನ್ ನೋಡುವುದಾದರೆ, ಗಳಿಕೆ 760.5 ಕೋಟಿ ರೂ.ಗೆ ತಲುಪಿದೆ. ಆ ಮೂಲಕ ಈ ವರ್ಷ ಅತೀ ಹೆಚ್ಚು ಗಳಿಸಿದ ಸಿನಿಮಾ ಎನಿಸಿಕೊಳ್ಳುವ ಹಾದಿಯಲ್ಲಿದೆ. 2025ರಲ್ಲಿ ತೆರೆಕಂಡ ಚಿತ್ರಗಳ ಪೈಕಿ 800 ಕೋಟಿ ರೂ.ಗಿಂತ ಅಧಿಕ ಗಳಿಸಿದ ಹಿಂದಿಯ ʼಛಾವಾʼ ಸದ್ಯ ಮೊದಲ ಸ್ಥಾನದಲ್ಲಿದೆ. ಇನ್ನೇನು ಈ ವಾರ ಕಳೆದರೆ ʼಕಾಂತಾರ ಚಾಪ್ಟರ್ 1' ಈ ದಾಖಲೆಯನ್ನು ಉಡೀಸ್ ಮಾಡಲಿದೆ.
ಇತ್ತ 1 ಸಾವಿರ ಕೋಟಿ ರೂ. ಕ್ಲಬ್ ಸನಿಹದಲ್ಲಿದೆ. ಒಂದುವೇಳೆ ಈ ಗಡಿ ದಾಟಿದರೆ 2025ರಲ್ಲಿ ಈ ಅಪರೂಪದ ಸಾಧನೆ ಮಾಡಿದ ಹೆಗ್ಗಳಿಕೆಗೆ ರಿಷಬ್ ಶೆಟ್ಟಿ ಸಿನಿಮಾ ಪಾತ್ರವಾಗಲಿದೆ. ಒಂದುವೇಳೆ ಈ ಮೈಲಿಗಲ್ಲು ದಾಟಿದರೆ 1 ಸಾವಿರ ಕೋಟಿ ರೂ. ಕ್ಲಬ್ ಸೇರಿದ 2ನೇ ಕನ್ನಡ ಚಿತ್ರವಾಗಲಿದೆ. 2022ರಲ್ಲಿ ರಿಲೀಸ್ ಆದ ಪ್ರಶಾಂತ್ ನೀಲ್-ಯಶ್ ಕಾಂಬಿನೇಷನ್‌ನ ʼಕೆಜಿಎಫ್ 2' ಮೊದಲು ಈ ಸಾಧನೆ ಮಾಡಿದ ಚಿತ್ರ ಎನಿಸಿಕೊಂಡಿದೆ. ಸದ್ಯ ʼಕಾಂತಾರ ಚಾಪ್ಟರ್ 1ʼ ಸಾಗುತ್ತಿರುವ ವೇಗ ಗಮನಿಸಿದರೆ ಈ ಮೈಲಿಗಲ್ಲು ತಲುಪುವುದು ಕಷ್ಟವೇನಲ್ಲ.
ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದಂತೆ ಇಂಗ್ಲಿಷ್ ಅವತರಣಿಕೆಯ ಬಿಡುಗಡೆ ದಿನಾಂಕ ಘೋಷಿಸಲಾಗಿದೆ. ಅಕ್ಟೋಬರ್ 31ರಂದು ವಿಶ್ವಾದ್ಯಂತ ಇಂಗ್ಲಿಷ್ ʼಕಾಂತಾರ ಚಾಪ್ಟರ್ 1ʼ ತೆರೆೆಗೆ ಬರಲಿದೆ. ಈ ಬಗ್ಗೆ ಚಿತ್ರತಂಡವೇ ಅಧಿಕೃತವಾಗಿ ಘೋಷಿಸಿದೆ. ʼ