ಕಾಕ್ರೋಚ್ ಜನತಾ ಪಾರ್ಟಿಗೆ 3 ದಿನಗಳಲ್ಲಿ 20 ಲಕ್ಷ ಸದಸ್ಯರ ಸೇರ್ಪಡೆ: ರಾಜಕೀಯ ಸಂಚಲನ ಮೂಡಿಸಿದ ಸಂಘಟನೆ
ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಿವಾದಾತ್ಮಕ ಹೇಳಿಕೆಯಿಂದ ಹುಟ್ಟಿಕೊಂಡ ಕಾಕ್ರೋಚ್ ಜನತಾ ಪಾರ್ಟಿ ಎಂಬ ಡಿಜಿಟಲ್ ಆಂದೋಲನ ಕೇವಲ ಮೂರು ದಿನಗಳಲ್ಲಿ 20 ಲಕ್ಷಕ್ಕೂ ಅಧಿಕ ಸದಸ್ಯರನ್ನು ಸೆಳೆಯುವ ಮೂಲಕ ದೇಶದ ಯುವಕರ ಅಸಮಾಧಾನದ ಪ್ರತೀಕವಾಗಿ ಹೊರಹೊಮ್ಮಿದೆ. ನಿರುದ್ಯೋಗ, ರಾಜಕೀಯ ಅಸಮಾಧಾನ ಮತ್ತು ಸಾಮಾಜಿಕ ಜಾಲತಾಣಗಳ ಶಕ್ತಿಯನ್ನು ಒಟ್ಟುಗೂಡಿಸಿದ ಈ ವ್ಯಂಗ್ಯಾತ್ಮಕ ಅಭಿಯಾನ ಇದೀಗ ರಾಷ್ಟ್ರವ್ಯಾಪಿ ಚರ್ಚೆಗೆ ಕಾರಣವಾಗಿದೆ.
ಎಐ ರಚಿತ ಚಿತ್ರ -
ದೆಹಲಿ, ಮೇ 21: ನ್ಯಾಯಾಲಯದ ವಿವಾದಾತ್ಮಕ ಹೇಳಿಕೆಯಿಂದ ಹುಟ್ಟಿಕೊಂಡ ಕಾಕ್ರೋಚ್ ಜನತಾ ಪಾರ್ಟಿ (Cockroach Janta Party) ಎಂಬ ವ್ಯಂಗ್ಯಭರಿತ ಆಂದೋಲನವು ದೇಶದ ಅತಿ ದೊಡ್ಡ ಆನ್‌ಲೈನ್ ಟ್ರೆಂಡ್ (Online Trend) ಆಗಿ ಮಾರ್ಪಟ್ಟಿದೆ. ಕೇವಲ ಮೂರೇ ದಿನಗಳಲ್ಲಿ 20 ಲಕ್ಷಕ್ಕೂ ಹೆಚ್ಚು ಜನರು ಇದರ ಸದಸ್ಯತ್ವ ಪಡೆದಿದ್ದಾರೆ. ಇನ್‌ಸ್ಟಾಗ್ರಾಮ್ (Instagram)ನಲ್ಲಿ 40 ಲಕ್ಷ ಹಾಗೂ ಎಕ್ಸ್‌ನಲ್ಲಿ ಒಂದು ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದುವ ಮೂಲಕ ಈ 'ಪಕ್ಷ' ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿದೆ. ಇದು ಅಧಿಕೃತವಾಗಿ ನೋಂದಾಯಿತ ರಾಜಕೀಯ ಪಕ್ಷವಲ್ಲದಿದ್ದರೂ, ಯುವ ಸಮೂಹದ ಆಕ್ರೋಶ, ಮೀಮ್ಸ್ ಹಾಗೂ ರಾಜಕೀಯ ಸಂದೇಶಗಳನ್ನು ಒಳಗೊಂಡ ಡಿಜಿಟಲ್ ಯುಗದ ಪ್ರತಿಭಟನೆಯ ಸಂಕೇತವಾಗಿ ಹೊರ ಹೊಮ್ಮಿದೆ.
ಮೇ 15ರಂದು ಸುಪ್ರೀಂ ಕೋರ್ಟ್ ವಿಚಾರಣೆ ವೇಳೆ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಕೆಲವು ಯುವಕರನ್ನು ʼಜಿರಳೆಗಳುʼ ಎಂದು ಕರೆದಿದ್ದು, ಈ ಆಂದೋಲನಕ್ಕೆ ಕಿಡಿ ಹೊತ್ತಿಸಿತು. ನಿರುದ್ಯೋಗದಿಂದ ಕಂಗೆಟ್ಟಿದ್ದ ಯುವಜನತೆ ಇದರಿಂದ ತೀವ್ರ ಆಕ್ರೋಶಗೊಂಡು, ಮೇ 16ರಂದು ಗೂಗಲ್ ಫಾರ್ಮ್ ಮೂಲಕ ಈ ಡಿಜಿಟಲ್ ಆಂದೋಲನ ಆರಂಭಿಸಿದರು. ಯುವಕರ ಈ ದಿಢೀರ್ ಪ್ರತಿಕ್ರಿಯೆಯು ಇಂಟರ್‌ನೆಟ್‌ನ ಶಕ್ತಿಯನ್ನು ದೇಶಕ್ಕೆ ತೋರಿಸಿಕೊಟ್ಟಿದೆ.
ಕಾಕ್ರೋಚ್ ಜನತಾ ಪಾರ್ಟಿಯ ಪ್ರಣಾಳಿಕೆ:
क्यों बनीं है कांकरोच जनता पार्टी आगे सुनिए और रीपोस्ट जरूर करें।
— The Cockroach Youth 🇮🇳 (@indraj143_m) May 19, 2026
Cockroach janta party 🎉 pic.twitter.com/idBaQa74SS
ಬೋಸ್ಟನ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಹಾಗೂ ಮಾಜಿ ಆಪ್ ಸ್ವಯಂ ಸೇವಕ ಅಭಿಜೀತ್ ದೀಪ್ಕೆ ಈ ಆಂದೋಲನದ ಸಂಸ್ಥಾಪಕ. "ವ್ಯವಸ್ಥೆಯು ಯಾರನ್ನು ಎಣಿಸಲು ಮರೆತಿದೆಯೋ ಅಂತಹ ಸೋಮಾರಿಗಳ ಮತ್ತು ನಿರುದ್ಯೋಗಿಗಳ ಧ್ವನಿ ಇದಾಗಿದೆ" ಎಂದು ಪಕ್ಷದ ಅಧಿಕೃತ ವೆಬ್‌ಸೈಟ್ ಹೇಳಿಕೊಂಡಿದೆ. ನಿರುದ್ಯೋಗಿಯಾಗಿರುವುದು ಹಾಗೂ ಸದಾ ಆನ್‌ಲೈನ್‌ನಲ್ಲಿ ಇರುವುದು ಇದರ ಅರ್ಹತೆ.
ಮೋದಿಯ ಪ್ರೀತಿಯ ಮೆಲೋನಿ ಬೆಂಕಿಯಲ್ಲಿ ಅರಳಿದ ಹೂ; ಇವರದು ನೋವಿನ ಜೀವನ ಚರಿತ್ರೆ
ಹಾಸ್ಯಭರಿತ ಧಾಟಿಯಲ್ಲಿದ್ದರೂ, ಈ ಪಕ್ಷವು ರಾಜಕೀಯ ಹೊಣೆಗಾರಿಕೆ, ಮಾಧ್ಯಮ ನಿಯಂತ್ರಣ, ಲಿಂಗ ಪ್ರಾತಿನಿಧ್ಯ ಮತ್ತು ಚುನಾವಣಾ ಸುಧಾರಣೆಗಳನ್ನೊಳಗೊಂಡ 5 ಅಂಶಗಳ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಟಿಎಂಸಿ ನಾಯಕರಾದ ಮಹುವಾ ಮೊಯಿತ್ರಾ, ಕೀರ್ತಿ ಆಜಾದ್ ಹಾಗೂ ಹಾರ್ಟ್‌ಮೇಲ್ ಸಹ-ಸಂಸ್ಥಾಪಕ ಸಬೀರ್ ಭಾಟಿಯಾ ಕೂಡ ಈ ಆಂದೋಲನಕ್ಕೆ ಬೆಂಬಲ ಸೂಚಿಸಿದ್ದಾರೆ. ಆರಂಭದಲ್ಲಿ ಕೇವಲ ತಮಾಷೆಯಾಗಿ ಕಂಡರೂ, ಪ್ರಸ್ತುತ ಭಾರತದ ಜೆನ್ ಝಿ ಯುವಜನತೆಯ ನಿರುದ್ಯೋಗದ ವಿರುದ್ಧದ ಅಸಮಾಧಾನದ ಪ್ರತಿಫಲನವಾಗಿ ಇದು ಕಾಣಿಸಿಕೊಳ್ಳುತ್ತಿದೆ.
ಈ ಆಂದೋಲನವು ಭವಿಷ್ಯದಲ್ಲಿ ಯುವ ರಾಜಕಾರಣದ ದಿಕ್ಕನ್ನು ಬದಲಿಸುವ ಸಾಂಪ್ರದಾಯಿಕವಲ್ಲದ ಹೊಸ ಮಾದರಿಯಾಗಿ ಹೊರಹೊಮ್ಮುವ ಎಲ್ಲ ಲಕ್ಷಣಗಳನ್ನು ತೋರಿಸುತ್ತಿದೆ. ಸದ್ಯಕ್ಕೆ ಇದು ಕೇವಲ ಸಾಮಾಜಿಕ ಜಾಲತಾಣಗಳ ಮೀಮ್ಸ್ ಪ್ರಪಂಚಕ್ಕೆ ಸೀಮಿತವಾಗದೆ, ವ್ಯವಸ್ಥೆಯ ವಿರುದ್ಧ ಯುವಜನತೆ ತಮ್ಮ ಹತಾಶೆಯನ್ನು ವ್ಯಕ್ತಪಡಿಸಲು ಬಳಸುತ್ತಿರುವ ಒಂದು ಪ್ರಭಾವಶಾಲಿ ಅಸ್ತ್ರವಾಗಿ ದೇಶದಾದ್ಯಂತ ಗುರುತಿಸಿಕೊಳ್ಳುತ್ತಿದೆ.