Islamabad Violence: ಟಿಎಲ್ಪಿ ಸದಸ್ಯರು ಭದ್ರತಾ ಸಿಬ್ಬಂದಿ ನಡುವೆ ಘರ್ಷಣೆ: ಇಸ್ಲಾಮಾಬಾದ್ ಉದ್ವಿಗ್ನ
ಗಾಜಾದಲ್ಲಿನ ಹತ್ಯೆಯನ್ನು ಖಂಡಿಸಿ ತೆಹ್ರೀಕ್-ಎ-ಲಬ್ಬೈಕ್ ಪಾಕಿಸ್ತಾನ್ ನ ಲಕ್ಷಾಂತರ ಸದಸ್ಯರು ಬೀದಿಗೆ ಇಳಿದಿದ್ದು,ಇಸ್ಲಾಮಾಬಾದ್‌ನಲ್ಲಿರುವ ಯುಎಸ್ ರಾಯಭಾರ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದಾರೆ. ಈ ವೇ ಉಂಟಾದ ಹಿಂಸಾತ್ಮಕ ಘರ್ಷಣೆಯಿಂದ ಇಬ್ಬರು ಮೃತಪಟ್ಟಿದ್ದಾರೆ. ಹಲವಾರು ವಾಹನಗಳು, ಅಪಾರ ಆಸ್ತಿಗಳಿಗೆ ಹಾನಿಯಾಗಿವೆ.

-

ಲಾಹೋರ್: ಉಗ್ರ ಬಲಪಂಥೀಯ ಸಂಘಟನೆಯಾದ ತೆಹ್ರೀಕ್-ಎ-ಲಬ್ಬೈಕ್ ಪಾಕಿಸ್ತಾನ್ (Tehreek-e-Labbaik Pakistan) ಸದಸ್ಯರು ಶುಕ್ರವಾರ ಲಾಹೋರ್ (Lahore) ನಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ಘರ್ಷಣೆಗೆ ಇಳಿದಿದ್ದರಿಂದ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ (Islamabad Violence) ಉದ್ವಿಗ್ನವಾಗಿದೆ. ತೆಹ್ರೀಕ್-ಎ-ಲಬ್ಬೈಕ್ ಪಾಕಿಸ್ತಾನ್ ನ ಲಕ್ಷಾಂತರ ಮಂದಿ ಇಸ್ಲಾಮಾಬಾದ್‌ನಲ್ಲಿರುವ ಅಮೆರಿಕನ್ ರಾಯಭಾರ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದು, ಇದರಿಂದ ರಸ್ತೆಗಳನ್ನು ಮುಚ್ಚಲಾಯಿತು. ಇಂಟರ್ನೆಟ್ ಸಂಪರ್ಕವನ್ನು ಕಡಿತಗೊಳಿಸಲಾಯಿತು. ಪ್ರತಿಭಟನಾ ಮೆರವಣಿಗೆಯಲ್ಲಿ ನಡೆದ ಹಿಂಸಾಚಾರದಿಂದ ಇಬ್ಬರು ಸಾವನ್ನಪ್ಪಿದ್ದು,12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಗಾಜಾದಲ್ಲಿನ ಹತ್ಯೆಯನ್ನು ಖಂಡಿಸಿ ತೆಹ್ರೀಕ್-ಎ-ಲಬ್ಬೈಕ್ ಪಾಕಿಸ್ತಾನ್ ನ ಲಕ್ಷಾಂತರ ಸದಸ್ಯರು ಇಸ್ಲಾಮಾಬಾದ್‌ನಲ್ಲಿರುವ ಯುಎಸ್ ರಾಯಭಾರ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದು, ಈ ವೇಳೆ ಲಾಹೋರ್‌ನಲ್ಲಿ ಪೊಲೀಸ್ ಸಿಬ್ಬಂದಿ ಅವರನ್ನು ತಡೆದಿದ್ದಾರೆ. ಇದು ಹಿಂಸಾತ್ಮಕ ಘರ್ಷಣೆಗೆ ಕಾರಣವಾಯಿತು. ಟಿಎಲ್‌ಪಿ ಪ್ರತಿಭಟನಾಕಾರರು ಹಲವಾರು ವಾಹನಗಳು ಮತ್ತು ಆಸ್ತಿಗಳಿಗೆ ಹಾನಿಗೊಳಿಸಿದ್ದಾರೆ.
ಲಕ್ಷಾಂತರ ತೆಹ್ರೀಕ್-ಎ-ಲಬ್ಬೈಕ್ ಪಾಕಿಸ್ತಾನದ ಸದಸ್ಯರು ಇಸ್ಲಾಮಾಬಾದ್‌ನಲ್ಲಿ ಬೀಡು ಬಿಟ್ಟಿದ್ದು, ಇದರಿಂದ ಭದ್ರತೆ ಕೈಗೊಳ್ಳಲಾಗಿದೆ. ಘರ್ಷಣೆ ವೇಳೆ ಇಬ್ಬರು ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದ್ದು,ಪೊಲೀಸ್ ಮೂಲಗಳು ಒಬ್ಬರು ಮಾತ್ರ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಇಸ್ಲಾಮಾಬಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿ, ಲಾಹೋರ್, ಕರಾಚಿ ಮತ್ತು ಪೇಶಾವರದಲ್ಲಿರುವ ಅಮೆರಿಕ ದೂತಾವಾಸಗಳ ಮೇಲೆ ಜನರು ಮುತ್ತಿಗೆ ಹಾಕಲು ಪ್ರಯತ್ನಿಸಿದ್ದಾರೆ. ಇಲ್ಲಿಗೆ ಯಾರೂ ಬರಬೇಡಿ ಎಂದು ಕರೆ ನೀಡಲಾಗಿದ್ದು,ಸುತ್ತಮುತ್ತ ಸಭೆ ಸೇರುವುದನ್ನು ನಿಷೇಧಿಸಲಾಗಿದೆ. ಪಾಕಿಸ್ತಾನದಾದ್ಯಂತ ಪ್ರತಿಭಟನೆಗಳು ತೀವ್ರಗೊಂಡಿವೆ.
ಈ ಕುರಿತು ಎಕ್ಸ್ ನಲ್ಲಿ ಮಾಹಿತಿ ನೀಡಿರುವ ಇಸ್ಲಾಮಾಬಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯು, ತೀವ್ರ ಪ್ರತಿಭಟನೆಗಳ ಕಾರಣದಿಂದ ರಸ್ತೆಗಳನ್ನು ಮುಚ್ಚಲಾಗಿದೆ. ಇದರಿಂದ ಸಂಚಾರ ವಿಳಂಬ, ತಿರುವುಗಳ ಮೂಲಕ ಬರಬೇಕಾಗುವುದು. ಪ್ರತಿಭಟನೆಗಳು ಎಷ್ಟು ಸಮಯದವರೆಗೆ ನಡೆಯುತ್ತದೆ ಎಂಬುದು ತಿಳಿದಿಲ್ಲ ಎಂದು ತಿಳಿಸಿದೆ.
ಲಾಹೋರ್ ಪೊಲೀಸರೊಂದಿಗಿನ ಘರ್ಷಣೆಯ ಬಳಿಕ ಟಿಎಲ್‌ಪಿ ಲಾಹೋರ್‌ನಲ್ಲಿ ನಾಗರಿಕರು ಒಟ್ಟುಗೂಡಲು ತನ್ನ ಬೆಂಬಲಿಗರನ್ನು ಕರೆಸಿಕೊಂಡಿದೆ. ತೆಹ್ರೀಕ್-ಇ-ಲಬೈಕ್ ಯಾ ರಸೂಲ್ ಅಲ್ಲಾ ಎಂಬ ಧಾರ್ಮಿಕ ರಾಜಕೀಯ ಗುಂಪಿನ ಭಾಗವಾದ ತೀವ್ರ ಬಲಪಂಥೀಯ ಟಿಎಲ್ಪಿ ಪ್ಯಾಲೆಸ್ಟೀನಿಯನ್ನರಿಗೆ ಬೆಂಬಲ ನೀಡಲು ಇಸ್ಲಾಮಾಬಾದ್ ನಲ್ಲಿ ಹೋರಾಟವನ್ನು ಪ್ರಾರಂಭಿಸಿದೆ.
ಟಿಎಲ್‌ಪಿ ತನ್ನ ಬೆಂಬಲಿಗರೊಂದಿಗೆ ಸಂವಹನ ನಡೆಸುವುದನ್ನು ತಡೆಯಲು ಇಸ್ಲಾಮಾಬಾದ್‌ನ ಆಂತರಿಕ ಸಚಿವಾಲಯವು ಪಾಕಿಸ್ತಾನ ದೂರಸಂಪರ್ಕ ಪ್ರಾಧಿಕಾರಕ್ಕೆ (PTA) ಇಸ್ಲಾಮಾಬಾದ್ ಮತ್ತು ರಾವಲ್ಪಿಂಡಿಯ ಅವಳಿ ನಗರಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದೆ.
ಸಾರ್ವಜನಿಕರ ದಾರಿ ತಪ್ಪಿಸಲು ಪ್ರಯತ್ನ: ಆರೋಪ
ಟಿಎಲ್ ಪಿ ಯ ಹೋರಾಟ ಶಾಂತಿಯುತವಾಗದಿರಬಹುದು ಎಂದು ಇಸ್ಲಾಮಾಬಾದ್ ಸರ್ಕಾರ ಭಯಪಡುತ್ತಿದೆ. ದೇಶೀಯ ಅಶಾಂತಿಯನ್ನು ಪ್ರಚೋದಿಸಲು ಈ ಗುಂಪು ಗಾಜಾ ಸಂಘರ್ಷವನ್ನು ಬಳಸಿಕೊಳ್ಳುತ್ತಿದೆ ಎಂದು ಆಂತರಿಕ ಖಾತೆಯ ರಾಜ್ಯ ಸಚಿವ ತಲಾಲ್ ಚೌಧರಿ ಆರೋಪಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಂಧಿತ ಪ್ರತಿಭಟನಾಕಾರರು ಲಾಠಿ, ರಾಸಾಯನಿಕಗಳು, ಗಾಜಿನ ಅಮೃತಶಿಲೆಗಳು, ಅಶ್ರುವಾಯು ಚಿಪ್ಪುಗಳು ಮತ್ತು ಬಂದೂಕುಗಳನ್ನು ಸಹ ಹೊತ್ತೊಯ್ದಿರುವುದು ಕಂಡುಬಂದಿದೆ. ಇದು ಅವರ ಹಿಂಸಾತ್ಮಕ ಉದ್ದೇಶವನ್ನು ಸೂಚಿಸುತ್ತದೆ ಎಂದು ತಿಳಿಸಿದ್ದಾರೆ.
ಟಿಎಲ್‌ಪಿ ಅನುಮತಿ ಕೇಳಿಲ್ಲ ಅಥವಾ ಯಾವುದೇ ಕಾನೂನನ್ನು ಪಾಲಿಸುವ ಭರವಸೆ ನೀಡಿಲ್ಲ ಎಂದು ಹೇಳಿರುವ ಅವರು, ಸಾಮಾಜಿಕ ಮಾಧ್ಯಮದಲ್ಲಿ ಸಾವುನೋವುಗಳ ಬಗ್ಗೆ ಸುಳ್ಳು ಹೇಳಿಕೆಗಳನ್ನು ನೀಡಿ ಅವರು ಸಾರ್ವಜನಿಕರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ತೆಹ್ರೀಕ್-ಇ-ಪಾಕಿಸ್ತಾನ ಎಂದರೇನು?
ಬಲಪಂಥೀಯ ರಾಜಕೀಯ ಪಕ್ಷವಾಗಿರುವ ಟಿಎಲ್‌ಪಿಯನ್ನು 2015ರಲ್ಲಿ ಬರೇಲ್ವಿ ಧರ್ಮಗುರು ಖಾದಿಮ್ ಹುಸೇನ್ ರಿಜ್ವಿ ಸ್ಥಾಪಿಸಿದರು. ಲಕ್ಷಾಂತರ ಸದಸ್ಯರನ್ನು ಹೊಂದಿರುವ ಈ ಗುಂಪು, ಪಾಕಿಸ್ತಾನದ ಧರ್ಮನಿಂದನೆ ವಿರೋಧಿ ಕಾನೂನುಗಳಲ್ಲಿ ಬದಲಾವಣೆಗಳನ್ನು ವಿರೋಧಿಸುತ್ತಾ ಬಂದಿದೆ. 2020ರಲ್ಲಿ ಖಾದಿಮ್ ಹುಸೇನ್ ರಿಜ್ವಿ ನಿಧನರಾಗಿದ್ದು, ಬಳಿಕ ಅವರ ಮಗ ಸಾದ್ ರಿಜ್ವಿ ಈ ಸಂಘಟನೆಯನ್ನು ಮುನ್ನಡೆಸುತ್ತಿದ್ದಾರೆ.
ಇದನ್ನೂ ಓದಿ: Viral Video: ವಿಮಾನದಲ್ಲೇ ಪ್ರಯಾಣಿಸಿದ್ರೂ ಗುಟ್ಕಾ ಮಾತ್ರ ಬಿಡಲ್ಲ! ಈ ವಿಡಿಯೊ ನೋಡಿ
2018ರ ಪಾಕಿಸ್ತಾನದ ಚುನಾವಣೆಗಳಲ್ಲಿ ಈ ಪಕ್ಷವು ಪ್ರಾಮುಖ್ಯತೆಗೆ ಬಂದಿದ್ದು, ಇದು ಇಸ್ಲಾಂ ಧರ್ಮವನ್ನು ಅವಮಾನಿಸಿದವರಿಗೆ ಮರಣದಂಡನೆ ವಿಧಿಸುವ ಧರ್ಮನಿಂದೆಯ ಕಾನೂನನ್ನು ಸಮರ್ಥಿಸಲು ಒಗ್ಗೂಡಿದೆ ಎಂದು ಹೇಳಿದೆ. ಟಿಎಲ್‌ಪಿ 22 ಲಕ್ಷಕ್ಕೂ ಹೆಚ್ಚು ಮತಗಳನ್ನು ಗಳಿಸುವ ಮೂಲಕ ದೇಶದ ಐದನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.