ಟ್ರಾಫಿಕ್ ಕ್ಯಾಮರಾದಿಂದ ಫೋನ್ ನೆಟ್‌ವರ್ಕ್‌ವರೆಗೆ: ಖಮೇನಿ ಅಡಗು ತಾಣವನ್ನು ಇಸ್ರೇಲ್ ಪತ್ತೆ ಹಚ್ಚಿದ್ದು ಹೇಗೆ?
ಇಸ್ರೇಲ್ ಗುಪ್ತಚರ ಸಂಸ್ಥೆ ಮೊಸಾದ್ ಮೂಲಕ ಇರಾನ್‌ನ ಸುಪ್ರೀಂ ಲೀಡರ್ ಆಲಿ ಖಮೇನಿಯ ಚಲನವಲನಗಳನ್ನು ವರ್ಷಗಳ ಕಾಲ ಸೂಕ್ಷ್ಮವಾಗಿ ಗಮನಿಸುತ್ತಿತ್ತು. ಟೆಹರಾನ್‌ನ ಟ್ರಾಫಿಕ್ ಕ್ಯಾಮರಾಗಳು ಮತ್ತು ಮೊಬೈಲ್ ಫೋನ್ ವ್ಯವಸ್ಥೆಗಳನ್ನು ಹ್ಯಾಕ್ ಮಾಡಿ ಅವರ ದೈನಂದಿನ ದಿನಚರಿಯನ್ನು ಟ್ರ್ಯಾಕ್ ಮಾಡಿತ್ತು. ನಂತರ ಶನಿವಾರ (ಫೆಬ್ರವರಿ 28) ಬೆಳಗ್ಗೆ ನಿಖರವಾದ ದಾಳಿಯಲ್ಲಿ ಖಮೇನಿ ಅವರನ್ನು ಹತ್ಯೆ ಮಾಡಲಾಯಿತು.
ಆಲಿ ಖಮೇನಿ (ಸಂಗ್ರಹ ಚಿತ್ರ) -
ಟೆಹರಾನ್, ಮಾ. 3: ಇರಾನ್ (Iran) ಸುಪ್ರೀಂ ಲೀಡರ್ ಆಲಿ ಖಮೇನಿ (Ali Khamenei) ಅವರ ಹತ್ಯೆಗೂ ಮುನ್ನ ಇಸ್ರೇಲ್ (Israel) ವರ್ಷಗಳ ಕಾಲ ಅವರ ಪ್ರತಿಯೊಂದು ಚಲನವಲನಗಳನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಿತ್ತು ಎಂದು 'ಫೈನಾನ್ಷಿಯಲ್ ಟೈಮ್ಸ್ (Financial Times)' ವರದಿ ಮಾಡಿದೆ. ಇರಾನ್‌ನ ಟ್ರಾಫಿಕ್ ಕ್ಯಾಮರಾ ನೆಟ್‌ವರ್ಕ್ (Traffic Camera Network) ಮತ್ತು ಮೊಬೈಲ್ ಫೋನ್ ವ್ಯವಸ್ಥೆಗಳನ್ನು ಹ್ಯಾಕ್ ಮಾಡುವ ಮೂಲಕ ಇಸ್ರೇಲಿ ಗುಪ್ತಚರ ಸಂಸ್ಥೆಗಳು ಈ ಬೃಹತ್ ಕಾರ್ಯಾಚರಣೆಯನ್ನು ಯೋಜಿಸಿದ್ದವು.
ವರದಿಯ ಪ್ರಕಾರ, ಟೆಹರಾನ್‌ನಲ್ಲಿರುವ ಬಹುತೇಕ ಎಲ್ಲ ಟ್ರಾಫಿಕ್ ಕ್ಯಾಮರಾಗಳನ್ನು ಇಸ್ರೇಲ್ ಹ್ಯಾಕ್ ಮಾಡಿತ್ತು. ಈ ಕ್ಯಾಮರಾಗಳ ದೃಶ್ಯಗಳನ್ನು ಎನ್‌ಕ್ರಿಪ್ಟ್ ಮಾಡಿ ಇಸ್ರೇಲ್ ರಾಜಧಾನಿ ಟೆಲ್ ಅವಿವ್‌ನಲ್ಲಿರುವ ಸರ್ವರ್‌ಗಳಿಗೆ ರವಾನಿಸಲಾಗುತ್ತಿತ್ತು. ವಿಶೇಷವಾಗಿ ಖಮೇನಿ ಅವರ ನಿವಾಸದ ಸಮೀಪವಿರುವ ಕ್ಯಾಮರಾಗಳು ಅವರ ಭದ್ರತಾ ಸಿಬ್ಬಂದಿ ವಾಹನಗಳನ್ನು ಎಲ್ಲಿ ನಿಲ್ಲಿಸುತ್ತಾರೆ ಮತ್ತು ಅವರ ದೈನಂದಿನ ದಿನಚರಿ ಏನು ಎಂಬುದನ್ನು ಪತ್ತೆ ಹಚ್ಚಲು ಇಸ್ರೇಲ್‌ಗೆ ಸಹಾಯ ಮಾಡಿದವು.
ಖಮೇನಿ ಅಡಗುತಾಣ ಇಸ್ರೇಲ್ ಪತ್ತೆ ಹಚ್ಚಿದ ವಿಧಾನ:
Israelis hacked traffic cameras, internet cables, mobile net to constantly watch Iran & tracked precisely to kill Khamenei with surgical precision.
— Jawhar Sircar (@jawharsircar) March 3, 2026
Does India realise imported Chinese CCTV cameras, mobiles, cables, port equipment are just Sitting Ducks? https://t.co/sJgNbsS5Bx
ಹಗಲಿನಲ್ಲೇ ದಾಳಿ
ಖಮೇನಿ ಎಲ್ಲಿ ವಾಸಿಸುತ್ತಿದ್ದರು, ಯಾರನ್ನು ಭೇಟಿಯಾಗುತ್ತಿದ್ದರು ಮತ್ತು ಅಪಾಯದ ಸಂದರ್ಭದಲ್ಲಿ ಎಲ್ಲಿಗೆ ಹೋಗುತ್ತಿದ್ದರು ಎಂಬುದನ್ನು ಅಮೆರಿಕ ಮತ್ತು ಇಸ್ರೇಲ್ ಗುಪ್ತಚರ ಸಂಸ್ಥೆಗಳು ಸೂಕ್ಷ್ಮವಾಗಿ ಅಧ್ಯಯನ ಮಾಡಿದ್ದವು. ಶನಿವಾರ (ಫೆಬ್ರವರಿ 28) ಬೆಳಗ್ಗೆ 6 ಗಂಟೆಯ ಸುಮಾರಿಗೆ ಖಮೇನಿ ಮತ್ತು ಇತರ ಉನ್ನತ ಅಧಿಕಾರಿಗಳು ಸಭೆ ಸೇರಿದ್ದ ಸಂದರ್ಭದಲ್ಲಿಯೇ ಫೈಟರ್ ಜೆಟ್‌ಗಳ ಮೂಲಕ ನಿಖರವಾದ ದಾಳಿ ನಡೆಸಲಾಯಿತು. ಕೇವಲ 60 ಸೆಕೆಂಡ್‌ಗಳಲ್ಲಿ ಮೂರು ಗುರಿಗಳನ್ನು ಧ್ವಂಸಗೊಳಿಸಲಾಯಿತು. ಈ ಹಗಲಿನ ದಾಳಿಯು ಇರಾನ್ ಅನ್ನು ಆಶ್ಚರ್ಯಚಕಿತಗೊಳಿಸಿತು.
ಇಸ್ರೇಲ್-ಇರಾನ್ ಯುದ್ಧ; ಗಲ್ಫ್ ರಾಷ್ಟ್ರಗಳಿಗೆ ಬೆಂಗಳೂರು, ಮಂಗಳೂರಿನಿಂದ ವಿಮಾನಗಳ ಹಾರಾಟ ರದ್ದು
ಹಿಂದಿನ ಕಾರ್ಯಾಚರಣೆಗಳ ನೆನಪು
ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸಾದ್ ಈ ಹಿಂದೆಯೂ ಇಂತಹ ತಾಂತ್ರಿಕ ಚಾತುರ್ಯವನ್ನು ಪ್ರದರ್ಶಿಸಿದೆ. 2024ರ ಸೆಪ್ಟೆಂಬರ್‌ನಲ್ಲಿ ಲೆಬನಾನ್‌ನ ಹಿಜ್ಬುಲ್ಲಾ ಉಗ್ರರನ್ನು ಗುರಿಯಾಗಿಸಿ ಪೇಜರ್ ಮತ್ತು ವಾಕಿ-ಟಾಕಿ ಸ್ಫೋಟಗಳನ್ನು ನಡೆಸಿತ್ತು. ಪೇಜರ್‌ಗಳ ಒಳಗೆ ಸ್ಫೋಟಕಗಳನ್ನು ಅಡಗಿಸಿಟ್ಟು, ಶಬ್ದ ಕೇಳಿದ ತಕ್ಷಣ ಅದನ್ನು ಹೊರತೆಗೆದಾಗ ಸ್ಫೋಟಗೊಳ್ಳುವಂತೆ ವಿನ್ಯಾಸಗೊಳಿಸಲಾಗಿತ್ತು. ಈ ಕಾರ್ಯಾಚರಣೆಗಾಗಿ ನಕಲಿ ಕಂಪನಿಗಳನ್ನು ಸೃಷ್ಟಿಸಿ ಹಿಜ್ಬುಲ್ಲಾವನ್ನು ನಂಬಿಸಲಾಗಿತ್ತು.
ಪ್ರಾದೇಶಿಕ ಸಂಘರ್ಷದ ತೀವ್ರತೆ
ಖಮೇನಿ ಹತ್ಯೆಯ ನಂತರ ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಹೆಚ್ಚಾಗಿದೆ. ಈವರೆಗೆ ಇರಾನ್‌ನ 1,250 ಗುರಿಗಳ ಮೇಲೆ ದಾಳಿ ನಡೆದಿದ್ದು, ಇರಾನ್‌ನ ಅನೇಕ ಯುದ್ಧನೌಕೆಗಳು ನಾಶವಾಗಿವೆ. ಪ್ರತಿಯಾಗಿ ಇರಾನ್ ನಡೆಸಿದ ದಾಳಿಯಲ್ಲಿ ಆರು ಅಮೆರಿಕನ್ ಸೈನಿಕರು ಸಾವನ್ನಪ್ಪಿದ್ದಾರೆ. ಈ ಸಂಘರ್ಷದಿಂದಾಗಿ ಹಾರ್ಮುಜ್ ಜಲಸಂಧಿಯ ಮೂಲಕ ನಡೆಯುವ ಹಡಗು ಸಂಚಾರ ಸ್ಥಗಿತಗೊಂಡಿದ್ದು, ಜಾಗತಿಕ ಇಂಧನ ಬೆಲೆ ಗಗನಕ್ಕೇರುತ್ತಿದೆ.