ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕೆಫೆಯಲ್ಲಿನ ವಿಡಿಯೊ ಫೇಕ್‌ ಎಂದವರಿಗೆ ಬೆಂಜಮಿನ್‌ ನೆತನ್ಯಾಹು ತಿರುಗೇಟು; ಮತ್ತೊಂದು ವಿಡಿಯೊ ಹರಿಯಬಿಟ್ಟ ಇಸ್ರೇಲ್‌ ಪ್ರಧಾನಿ

Benjamin Netanyahu: ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಮತ್ತೊಂದು ವಿಡಿಯೊ ಪೋಸ್ಟ್‌ ಮಾಡುವ ಮೂಲಕ ತಾವು ಜೀವಂತವಾಗಿರುವುದನ್ನು ಸಾರಿ ಹೇಳಿದ್ದಾರೆ. ಹೊಸ ವಿಡಿಯೊದಲ್ಲಿ ನೆತನ್ಯಾಹು ಹಸಿರು ಮತ್ತು ಪರ್ವತದ ಹಿನ್ನೆಲೆ ಹೊಂದಿರುವ ಪ್ರದೇಶದಲ್ಲಿ ನಾಗರಿಕರೊಂದಿಗೆ ಬೆರೆತು ಮಾತನಾಡುತ್ತಿರುವುದು ಕಂಡು ಬಂದಿದೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ.

ಬದುಕಿರುವುದಕ್ಕೆ ಮತ್ತೊಂದು ಸಾಕ್ಷಿ ಕೊಟ್ಟ ಬೆಂಜಮಿನ್‌ ನೆತನ್ಯಾಹು

ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು -

Ramesh Ballamoole
Ramesh Ballamoole Mar 16, 2026 11:24 PM

ಜೆರುಸಲೇಂ, ಮಾ. 16: ಅಮೆರಿಕ-ಇಸ್ರೇಲ್‌-ಇರಾನ್‌ ಯುದ್ಧ ಆರಂಭವಾದಾಗಿನಿಂದ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು (Benjamin Netanyahu) ಅವರ ʼಸಾವಿನʼ ಸುದ್ದಿ ಹರಿದಾಡುತ್ತಲೇ ಇದೆ. ಯುದ್ಧಕ್ಕಿಂತ ಜಾಸ್ತಿ ಈ ವಿಚಾರವೇ ಚರ್ಚೆಗೆ ಒಳಗಾಗುತ್ತಿದೆ. ಅವರು ಇರಾನ್‌ನ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎನ್ನುವ ವದಂತಿ ಜೋರಾಗಿದೆ. ಸ್ವತಃ ನೆತನ್ಯಾಹು ವಿಡಿಯೊ ಮಾಡುವ ಮೂಲಕ ಈ ವದಂತಿಯನ್ನು ತಳ್ಳಿ ಹಾಕಲು ಯತ್ನಿಸಿದರೂ ಮತ್ತೆ ಮತ್ತೆ ಅನುಮಾನ ಮೂಡುತ್ತಿದೆ. ಇದೀಗ ಅವರು ಎಕ್ಸ್‌ನಲ್ಲಿ ಮತ್ತೊಂದು ವಿಡಿಯೊ ಹಂಚಿಕೊಳ್ಳುವ ಮೂಲಕ ತಾವು ಆರೋಗ್ಯವಾಗಿರುವುದನ್ನು ಸಾಬೀತುಪಡಿಸಿದ್ದಾರೆ. ಭಾನುವಾರ (ಮಾ. 15) ಎಕ್ಸ್‌ನಲ್ಲಿ ಕಾಣಿಸಿಕೊಂಡ ಅವರು ತಾವು ಜೀವಂತವಾಗಿರುವುದಾಗಿ ಘೋಷಿಸಿದ್ದರು. ಅದನ್ನು ಹಲವರು ಎಐ ರಚಿತ ವಿಡಿಯೊ ಎಂದು ಕರೆದಿದ್ದರು. ಹೀಗಾಗಿ ಇದೀಗ ಮತ್ತೊಂದು ವಿಡಿಯೊ ಶೇರ್‌ ಮಾಡಿ ತಾವು ಸರಕ್ಷಿತವಾಗಿರುವುದಾಗಿ ಹೇಳಿದ್ದಾರೆ.

ಭಾನುವಾರ ಹಂಚಿಕೊಂಡ ವಿಡಿಯೊದಲ್ಲಿ ನೆತನ್ಯಾಹು ಕೆಫೆಯೊಂದರಲ್ಲಿ ಕಾಫಿ ಕುಡಿಯುತ್ತಿರುವುದು ಕಂಡು ಬಂದಿತ್ತು. ಆದರೆ ಇದು ಎಐ ರಚಿತ ವಿಡಿಯೊ ಎನ್ನುವ ವಾದ ರಾತ್ರಿ ಬೆಳಗಾಗುವಷ್ಟರಲ್ಲಿ ಹರಿದಾಡತೊಡಗಿತು. ಭಾನುವಾರ ರಾತ್ರಿ ನೆತನ್ಯಾಹು ಬದುಕಿದ್ದಾರೆ ಎಂದವರೇ ಸೋಮವಾರ ಇದು ಎಐ ವಿಡಿಯೊ ಎನ್ನತೊಡಗಿದರು.

ಬೆಂಜಮಿನ್‌ ನೆತನ್ಯಾಹು ಅವರ ಹೊಸ ವಿಡಿಯೊ:



ಎಐ ಚಾಟ್‌ಬಾಟ್ ಗ್ರೋಕ್ ಕೂಡ ಇದನ್ನು ಸಂಭಾವ್ಯ ಡೀಪ್‌ಫೇಕ್ ವಿಡಿಯೊ ಎಂದು ಕರೆದಿದೆ. ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ ಜೋರಾದ ಬೆನ್ನಲ್ಲೇ ಬೆಂಜಮಿನ್‌ ನೆತನ್ಯಾಹು ಸೋಮವಾರ ಮತ್ತೊಂದು ವಿಡಿಯೊ ಸಂದೇಶ ಬಿಡುಗಡೆ ಮಾಡಿದ್ದಾರೆ.

ಹೊಸ ವಿಡಿಯೊದಲ್ಲಿ ಏನಿದೆ?

ಹೊಸ ವಿಡಿಯೊದಲ್ಲಿ ನೆತನ್ಯಾಹು ಹಸಿರು ಮತ್ತು ಪರ್ವತದ ಹಿನ್ನೆಲೆ ಹೊಂದಿರುವ ಪ್ರದೇಶದಲ್ಲಿ ನಾಗರಿಕರೊಂದಿಗೆ ಬೆರೆತು ಮಾತನಾಡುತ್ತಿರುವುದು ಕಂಡು ಬಂದಿದೆ. ಅಲ್ಲಿದ್ದ ಜನರೊಂದಿಗೆ ಅವರು ಆತ್ಮೀಯವಾಗಿ ಸಮಯ ಕಳೆದಿದ್ದಾರೆ. ಜತೆಗೆ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಜೆರುಸಲೇಂನ ಸಮೀಪ ಈ ವಿಡಿಯೊವನ್ನು ಚಿತ್ರೀಕರಿಸಲಾಗಿದೆ ಎನ್ನಲಾಗಿದೆ.

ಬೆಂಜಮಿನ್‌ ನೆತನ್ಯಾಹು ಬದುಕಿದ್ದಾರೆ; ಇಸ್ರೇಲ್‌ ಪ್ರಧಾನಿ ಹಂಚಿಕೊಂಡ ವಿಡಿಯೊ ಮೂಲಕ ಸಿಕ್ತು ಪುರಾವೆ

ಇರಾನ್ ಜತೆ ನಡೆಯುತ್ತಿರುವ ಯುದ್ಧದಿಂದ ಈ ಪ್ರದೇಶವು ಉದ್ವಿಗ್ನತೆಯಿಂದ ಕೂಡಿರುವಾಗ ನೆತನ್ಯಾಹು ಸ್ಥಳೀಯರೊಂದಿಗೆ ಬೆರೆತು ಅವರಿಗೆ ಧೈರ್ಯ ತುಂಬಿದ್ದಾರೆ. "ಪ್ರಕೃತಿ ಎಷ್ಟು ಸುಂದರವಾಗಿದೆ. ತುಂಬಾ ಧನ್ಯವಾದಗಳು. ಸ್ವಲ್ಪ ಬಿಸಿಲಿಗೆ ಮುಖ ಒಡ್ಡೋಣ" ಎಂದು ನೆತನ್ಯಾಹು ಹೇಳಿದ್ದಾರೆ. ಅಲ್ಲಿದ್ದರ ಪೈಕಿ ಕೆಲವರು ಶ್ವಾನವನ್ನು ಕರೆತಂದಿದ್ದರು. ಯಾವ ತಳಿಯ ಶ್ವಾನ ಇದು ಎಂದೂ ಪ್ರಧಾನಿ ಪ್ರಶ್ನಿಸಿದರು. ಅದಕ್ಕೆ ಆ ಶ್ವಾನವನ್ನು ಕರೆತಂದ ಮಹಿಳೆ ಕಾನಾನೈಟ್-ಇಸ್ರೇಲಿ ಎಂದು ಉತ್ತರಿಸಿರುವುದು ವಿಡಿಯೊದಲ್ಲಿ ಕಂಡುಬಂದಿದೆ. ಹೀಗೆ ಅಲ್ಲಿದ್ದವರೊಂದಿಗೆ ಮಾತನಾಡುತ್ತ ನೆತನ್ಯಾಹು ಸ್ವಲ್ಪ ಸಮಯ ಕಳೆದಿದ್ದಾರೆ.

ಸದ್ಯ ಈ ವಿಡಿಯೊ ವೈರಲ್‌ ಆಗಿದ್ದು, ಸಹಜವಾಗಿಯೇ ಒಂದಷ್ಟು ಮಂದಿ ಇದು ಕೂಡ ಎಐ ವಿಡಿಯೊ ಎನ್ನತೊಡಗಿದ್ದಾರೆ. ಹಲವರು ಇದು ಎಐ ರಚಿತ ವಿಡಿಯೊವಾ ಎಂದು ಗ್ರೂಕ್‌ ಬಳಿ ಕೇಳುತ್ತಿದ್ದಾರೆ. ಸದ್ಯ ಗ್ರೂಕ್‌ ಇದಕ್ಕೆ ಯಾವುದೇ ರೀತಿಯ ಉತ್ತರ ನೀಡಿಲ್ಲ.

4 ಸುತ್ತಿನ ಮಾತುಕತೆ, ಪ್ರಧಾನಿಯಿಂದ ಸಂಧಾನ; ಹೊರ್ಮುಜ್ ಜಲಸಂಧಿ ದಾಟಲು ಭಾರತದ 2 ಹಡಗುಗಳಿಗೆ ಇರಾನ್‌ ಅನುಮತಿ ನೀಡಿದ್ದೇಗೆ?

ಇನ್ನೂ ದಟ್ಟವಾಗಿಯೇ ಇದೆ ವದಂತಿ

ಯುದ್ಧ ಆರಂಭವಾದ ಕೆಲ ದಿನಗಳಲ್ಲೇ ನೆತನ್ಯಾಹು ತನ್ನ ದಾಳಿಗೆ ಬಲಿಯಾಗಿರುವುದಾಗಿ ಇರಾನ್‌ ಹೇಳುತ್ತಲೇ ಇದೆ. ಅದಕ್ಕೆ ತಕ್ಕಂತೆ ಅದಾದ ಬಳಿಕ ನೆತನ್ಯಾಹು ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಅವರು ಜೀವಂತವಾಗಿರುವ ಕುರಿತು ಹಲವರು ಅನುಮಾನ ವ್ಯಕ್ತಪಡಿಸಿದ್ದರು. ಸದ್ಯ ಅವರು ವಿಡಿಯೊ ಮಾಡುತ್ತಿದರೂ ಅನೇಕರು ನಂಬಲು ತಯಾರಿಲ್ಲ. ಮುಂದೆ ಅವರು ಯಾವ ರೀತಿ ತಾವು ಬದುಕಿರುವುದನ್ನು ಸಾಬೀತು ಪಡಿಸುತ್ತಾರೆ ಎನ್ನುವ ಕುತೂಹಲ ಮೂಡಿದೆ.

ವಿದೇಶ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.