ಅಮೆರಿಕದಲ್ಲೂ ಕರ್ನಾಟಕ ಮಾದರಿ ಗ್ಯಾರಂಟಿ
ಚುನಾವಣೆಗೂ ಉಚಿತ ಆಮಿಷಗಳನ್ನೊಡ್ಡಿ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬರುವುದು ಭಾರತ ದಲ್ಲೀಗ ಮಾಮೂಲಿ ವಿದ್ಯಮಾನ. ಹಿಂದೆ ದೆಹಲಿಯನ್ನು ಗೆಲ್ಲಲು ಅರವಿಂದ್ ಕೇಜ್ರಿವಾಲ್ ಉಚಿತಗಳ ಮೊರೆ ಹೋಗಿದ್ದರು. ಅದೇ ದಾರಿಯನ್ನು ಹಿಡಿದು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಇದೇ ಮಾದರಿಯನ್ನು ಅನುಸರಿಸಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಸಿದ್ಧವಾಗಿದ್ದಾರೆ.
-
ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ ಗೆದ್ದರೆ 27 ಕೋಟಿ ಮಂದಿಗೆ ತಲಾ 5000 ಡಾಲರ್: ಟ್ರಂಪ್ ಆಮಿಷ
ನೇರವಾಗಿಯೇ ಮತದಾರರಿಗೆ ಟ್ರಂಪ್ ಲಂಚ: ವಿರೋಧಪಕ್ಷ ಡೆಮೋಕ್ರಾಟ್ ಸೇರಿ, ಹಲವರಿಂದ ತೀವ್ರ ವಿರೋಧ
ವಾಷಿಂಗ್ಟನ್: ಚುನಾವಣೆಗೂ ಉಚಿತ ಆಮಿಷಗಳನ್ನೊಡ್ಡಿ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬರುವುದು ಭಾರತದಲ್ಲೀಗ ಮಾಮೂಲಿ ವಿದ್ಯಮಾನ. ಹಿಂದೆ ದೆಹಲಿಯನ್ನು ಗೆಲ್ಲಲು ಅರವಿಂದ್ ಕೇಜ್ರಿವಾಲ್ ಉಚಿತಗಳ ಮೊರೆ ಹೋಗಿದ್ದರು. ಅದೇ ದಾರಿಯನ್ನು ಹಿಡಿದು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಇದೇ ಮಾದರಿಯನ್ನು ಅನುಸರಿಸಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಸಿದ್ಧವಾಗಿದ್ದಾರೆ.
ನವೆಂಬರ್‌ನಲ್ಲಿ ಅಮೆರಿಕದಲ್ಲಿ ಮಧ್ಯಂತರ ಚುನಾವಣೆ ನಡೆಯಲಿದ್ದು, ಆ ವೇಳೆ ಸೆನೇಟ್ (ಮೇಲ್ಮನೆ) ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ (ಕೆಳ ಮನೆ) ಎರಡರಲ್ಲೂ ರಿಪಬ್ಲಿಕನ್ ಅಧಿಕಾರ ವುಳಿಸಿಕೊಂಡರೆ, ಪ್ರತಿ ವಯಸ್ಕ ನಾಗರಿಕರಿಗೆ ತಲಾ 5000 ಡಾಲರ್ (4.75 ಲಕ್ಷ ರು.) ನೀಡುವುದಾಗಿ ಘೋಷಿಸಿದ್ದಾರೆ. ಅಮೆರಿಕ ಅದ್ಭುತ ಪ್ರಗತಿ ಸಾಧಿಸಿದೆ. ಅದರ ಲಾಭಾಂಶವಾಗಿ ತಲಾ 4.75 ಲಕ್ಷ ರು. ನೀಡುತ್ತೇನೆ. ಹೀಗೆ ನೀಡುವುದು ನನಗೆ ಮಾತ್ರ ಸಾಧ್ಯ. ಆದರೆ ಈ ಹಣವನ್ನು ಅಮೆರಿಕ ದಲ್ಲೇ ಬಳಸಬೇಕು. ಅದನ್ನು ವಿದೇಶದಲ್ಲಿ ಬಳಸು ವಂತಿಲ್ಲ ಎಂದಿದ್ದಾರೆ. ಇದು ಅಮೆರಿಕದಲ್ಲಿ ತೀವ್ರ ಪರವಿರೋಧ ಚರ್ಚೆಗೆ ಕಾರಣವಾಗಿದೆ. ವಿರೋಧಪಕ್ಷ ಗಳು ಟ್ರಂಪ್ ನೇರವಾಗಿ ಮತದಾರರಿಗೆ ಲಂಚದ ಆಮಿಷವೊಡ್ಡಿದ್ದಾರೆ ಎಂದು ಆರೋಪಿಸಿವೆ.
ಇದನ್ನೂ ಓದಿ: Trump-Netanyahu: ನೆತನ್ಯಾಹು - ಟ್ರಂಪ್ ಫೋನ್ ಕಾಲ್ ಮೂಲಕ ಮಾತುಕತೆ; ಗಾಜಾ ಯುದ್ಧ, ಸಿರಿಯಾ ಬಗ್ಗೆ ಚರ್ಚೆ
ಸಾಮಾಜಿಕ ತಾಣದಲ್ಲಿ ವಿರೋಧ ವ್ಯಕ್ತವಾಗಿದೆ. ನಮ್ಮ ತೆರಿಗೆ ಹಣವನ್ನು ಇವರು ಮತಖರೀದಿಗೆ ಬಳಸುತ್ತಿದ್ದಾರೆ, ಅವರನ್ನು ಚುನಾವಣೆಯಿಂದ ನಿಷೇಧಿಸಬೇಕು ಎಂದು ಹೇಳಿದ್ದಾರೆ. ಡಸ್‌ನಲ್ಲಿ ನಡೆದ ರಿಪಬ್ಲಿಕನ್ ಪಕ್ಷದ ಪ್ರಥಮ ಮಧ್ಯಂತರ ಸಮಾವೇಶದಲ್ಲಿ ಸುಮಾರು 1 ಗಂಟೆ 45 ನಿಮಿಷ ಗಳ ಕಾಲ ಭಾಷಣ ಮಾಡಿದ ಟ್ರಂಪ್, ರಿಪಬ್ಲಿಕನ್‌ಗಳು ಉಭಯ ಸದನಗಳಲ್ಲೂ ಜಯಭೇರಿ ಬಾರಿಸಿದರೆ, ಪ್ರತಿಯೊಬ್ಬ ಅಮೆರಿಕನ್ ವಯಸ್ಕ ನಾಗರಿಕನಿಗೆ 5000 ಟ್ರಂಪ್ ಡಿವಿಡೆಂಡ್ ವಿತರಿಸು ತ್ತೇನೆ. ಇದು ನನ್ನ ವಾಗ್ದಾನ ಎಂದು ಹೇಳುವ ಮೂಲಕ ಮತದಾರರ ಓಲೈಕೆಗೆ ಮುಂದಾಗಿದ್ದಾರೆ.
ಕಂಪನಿಗಳು ಷೇರುದಾರರಿಗೆ ಡಿವಿಡೆಂಡ್ ನೀಡುವಂತೆ ಈ ಹಣವನ್ನು ವಿತರಿಸಲಾಗುವುದು ಎಂದು ಟ್ರಂಪ್ ಹೇಳಿಕೊಂಡಿದ್ದರೂ, ಈ ಬೃಹತ್ ಯೋಜನೆಗೆ ಹಣ ಹೇಗೆ ಕ್ರೋಢೀಕರಿಸಲಾಗುತ್ತದೆ ಮತ್ತು ಇದಕ್ಕೆ ಕಾನೂನಿನಲ್ಲಿ ಅವಕಾಶವಿದೆಯೇ ಎಂಬ ಬಗ್ಗೆ ಅವರು ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ. ಜೀವನ ವೆಚ್ಚ ಏರಿಕೆ, ಆರ್ಥಿಕ ಹಿನ್ನಡೆ ಹಾಗೂ ಇರಾನ್ ಯುದ್ಧದ ಕಾರಣಗಳಿಂದಾಗಿ ಟ್ರಂಪ್ ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ.
ತಮ್ಮ ಅಧಿಕಾರದ ಕೊನೆಯ ಎರಡು ವರ್ಷಗಳಲ್ಲಿ ಡೆಮಾಕ್ರಾಟ್‌ಗಳಿಂದ ಎದುರಾಗಬಹುದಾದ ತನಿಖೆಗಳು ಮತ್ತು ತೀವ್ರ ವಿರೋಧವನ್ನು ತಡೆಯಲು ಅವರು ಕಾಂಗ್ರೆಸ್ ಮೇಲೆ ನಿಯಂತ್ರಣ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಡೆಮಾಕ್ರಾಟ್‌ಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಟ್ರಂಪ್, ನಾವು ಅಮೆರಿಕದ ಭವಿಷ್ಯವನ್ನು ತೀವ್ರ ಎಡಪಂಥೀಯ ಡೆಮಾಕ್ರಾಟ್ ಗಳ ಕೈಗೊಪ್ಪಿಸಿ ದರೆ, ದೇಶವು ಮತ್ತೆ ಮೊದಲಿನ ಸ್ಥಿತಿಗೆ ಮರಳಲು ಮುಂದಿನ ಒಂದು ದಶಕವನ್ನೇ ವ್ಯಯಿಸ ಬೇಕಾಗುತ್ತದೆ. ರಿಪಬ್ಲಿಕನ್ನರಿಗೆ ಮತ ನೀಡಿ ನಾವು ವಿಶ್ವವೇ ಬೆರಗಾಗುವಂತೆ ಮುನ್ನಡೆಯುತ್ತೇವೆ ಎಂದು ಮತದಾರರಿಗೆ ಕರೆ ನೀಡಿದ್ದಾರೆ.
27 ಕೋಟಿ ಮಂದಿಗೆ, ರೂ.95 ಲಕ್ಷ ಕೋಟಿ ಬೇಕು
ಡೊನಾಲ್ಡ್ ಟ್ರಂಪ್ ಪ್ರತಿ ವಯಸ್ಕರಿಗೂ ತಲಾ 4.75 ರು. ನೀಡುವುದಾಗಿ ಹೇಳುವುದರ ಮೂಲಕ ಭಾರೀ ಸವಾಲನ್ನು ತೆಗೆದು ಕೊಂಡಿದ್ದಾರೆ. ಅಮೆರಿಕದಲ್ಲಿ ಸದ್ಯ 27 ಕೋಟಿ ವಯಸ್ಕ ವ್ಯಕ್ತಿಗಳಿದ್ದಾರೆ. ಅಷ್ಟೂ ಮಂದಿಗೆ ಹಣ ನೀಡಲು 128 ಲಕ್ಷ ಕೋಟಿ ರು. (1.35 ಟ್ರಿಲಿಯನ್ ಡಾಲರ್) ಹಣ ಬೇಕಾಗುತ್ತದೆ. ಈ ಹಣವನ್ನು ಹೇಗೆ ಹೊಂದಿಸುತ್ತಾರೆ, ಇದರ ಮೂಲವೇನು, ಯಾವ ರೀತಿಯಲ್ಲಿ ಅಮೆರಿಕಕ್ಕೆ ಲಾಭಾಂಶ ಬಂದಿದೆ ಎಂಬ ಮಾಹಿತಿಗಳು ಗೊತ್ತಾಗಿಲ್ಲ.
ಏನಿದು ಮಧ್ಯಂತರ ಚುನಾವಣೆ ಬಿಸಿ?
ಅಮೆರಿಕದಲ್ಲಿ ಅಧ್ಯಕ್ಷರ ಆಯ್ಕೆಯಾಗಿ ಮಧ್ಯಾವಧಿಯಾದಾಗ ಕಾಂಗ್ರೆಸ್‌ನಲ್ಲಿ ಎಲ್ಲ 435 ಸ್ಥಾನ ಗಳಿಗೆ, ಸೆನೇಟ್‌ನಲ್ಲಿ 100 ಸ್ಥಾನಗಳ ಪೈಕಿ 33-34 ಸ್ಥಾನಗಳಿಗೆ ಚುನಾವಣೆ ನಡೆಯುತ್ತದೆ. ಇದೇ ಚುನಾವಣೆಯಲ್ಲಿ 50 ರಾಜ್ಯಗಳ ಪೈಕಿ 34 ರಾಜ್ಯಗಳು ತಮ್ಮ ಗವರ್ನರ್‌ನನ್ನು ಆಯ್ಕೆ ಮಾಡುತ್ತವೆ. ಇದು ಆಡಳಿತಾರೂಢ ಪಕ್ಷಕ್ಕೆ ಸತ್ವಪರೀಕ್ಷೆಯಾಗುತ್ತದೆ. ಬಹುತೇಕ ಜನಪ್ರಿಯತೆ ಕಳೆದು ಕೊಂಡಿರುವ ಟ್ರಂಪ್‌ಗೆ ಈ ಚುನಾವಣೆ ಅಗ್ನಿಪರೀಕ್ಷೆಯಾಗಿದೆ.