ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬಾಂಗ್ಲಾದೇಶದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ; ಯುನಿಸ್‌ ಮನೆ, ಬ್ಯಾಂಕ್‌ಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ನಿಷೇಧಿತ ಅವಾಮಿ ಲೀಗ್ ಪಕ್ಷವು ಕರೆ ನೀಡಿರುವ ರಾಷ್ಟ್ರವ್ಯಾಪಿ ಬಂದ್‌ಗೂ ಮುನ್ನ ಬಾಂಗ್ಲಾದೇಶದಲ್ಲಿ ವ್ಯಾಪಕ ಹಿಂಸಾಚಾರ ಸಂಭವಿಸಿದ್ದು, ಘರ್ಷಣೆಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಇದೇ ವೇಳೆ, ಚಟ್ಟೋಗ್ರಾಮ್‌ನಲ್ಲಿರುವ ಬಾಂಗ್ಲಾದೇಶದ ಮಾಜಿ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ಅವರ ಪೂರ್ವಜರ ಮನೆಗೆ ಬೆಂಕಿ ಹಚ್ಚಿದ್ದಾರೆ.

ಬಾಂಗ್ಲಾದೇಶದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Nov 19, 2026 1:59 PM

ಢಾಕಾ: ನಿಷೇಧಿತ ಅವಾಮಿ ಲೀಗ್ ಪಕ್ಷವು ಕರೆ ನೀಡಿರುವ ರಾಷ್ಟ್ರವ್ಯಾಪಿ ಬಂದ್‌ಗೂ ಮುನ್ನ ಬಾಂಗ್ಲಾದೇಶದಲ್ಲಿ (Bangladesh) ವ್ಯಾಪಕ ಹಿಂಸಾಚಾರ ಸಂಭವಿಸಿದ್ದು, ಘರ್ಷಣೆಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಇದೇ ವೇಳೆ, ಚಟ್ಟೋಗ್ರಾಮ್‌ನಲ್ಲಿರುವ (Muhammad Yunus) ಬಾಂಗ್ಲಾದೇಶದ ಮಾಜಿ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ಅವರ ಪೂರ್ವಜರ ಮನೆ ಹಾಗೂ ವಿವಿಧೆಡೆ ಇರುವ ಗ್ರಾಮೀಣ ಬ್ಯಾಂಕ್ ಶಾಖೆಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.

ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಗೈರುಹಾಜರಿಯಲ್ಲಿ ಗಲ್ಲುಶಿಕ್ಷೆ ವಿಧಿಸಿದ ವಿಶೇಷ ನ್ಯಾಯಮಂಡಳಿಯ ತೀರ್ಪಿನ ಮೊದಲ ವಾರ್ಷಿಕೋತ್ಸವದ ಅಂಗವಾಗಿ ಅವಾಮಿ ಲೀಗ್ ಗುರುವಾರ ಬಂದ್‌ಗೆ ಕರೆ ನೀಡಿತ್ತು. ಪ್ರತಿಭಟನೆಗೂ ಮುನ್ನವೇ ದೇಶದ 28 ಜಿಲ್ಲೆಗಳಲ್ಲಿ ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು, ರಾಜಧಾನಿ ಢಾಕಾದಲ್ಲಿ ಬಿಗಿ ಭದ್ರತೆಯ ನಡುವೆಯೂ ಹಲವೆಡೆ ಕಚ್ಚಾ ಬಾಂಬ್ (IED) ಸ್ಫೋಟಗಳು ಸಂಭವಿಸಿ ನಾಲ್ವರು ಗಾಯಗೊಂಡಿದ್ದಾರೆ. ಅತ್ತ ನರೈಲ್ ಜಿಲ್ಲೆಯಲ್ಲಿ ಆಡಳಿತಾರೂಢ ಬಿಎನ್‌ಪಿ ಪಕ್ಷದ ಪ್ರತಿಭಟನಾ ಮೆರವಣಿಗೆ ಮೇಲೆ ಅವಾಮಿ ಲೀಗ್ ಕಾರ್ಯಕರ್ತರು ನಡೆಸಿದ ದಾಳಿಯಲ್ಲಿ ಇಬ್ಬರು ಸ್ಥಳೀಯ ನಾಯಕರು ಹತ್ಯೆಯಾಗಿದ್ದಾರೆ.

ಚಟ್ಟೋಗ್ರಾಮ್‌ನ ಪಂಚ್‌ಲೈಶ್ ಪ್ರದೇಶದಲ್ಲಿರುವ ಮುಹಮ್ಮದ್ ಯೂನಸ್ ಅವರ ಪೂರ್ವಜರ ಮನೆಯ ನೆಲಮಹಡಿಗೆ ಅಪರಿಚಿತರು ಬೆಂಕಿ ಹಚ್ಚಿದ್ದಾರೆ. ಅದೃಷ್ಟವಶಾತ್ ನೆಲಮಹಡಿಯಲ್ಲಿ ಯಾರೂ ವಾಸವಿರಲಿಲ್ಲವಾದರೂ, ಮೇಲಿನ ಮಹಡಿಗಳಲ್ಲಿ ಯೂನಸ್ ಅವರ ಸಹೋದರರ ಕುಟುಂಬಗಳು ವಾಸಿಸುತ್ತಿವೆ. ಇದಕ್ಕೂ ಮುನ್ನ ಸಿಲ್ಹೆಟ್, ರಾಜ್‌ಶಾಹಿ, ಬರಿಶಾಲ್ ಮತ್ತು ಫರೀದ್‌ಪುರಗಳಲ್ಲಿರುವ ಯೂನಸ್ ಅವರ ಗ್ರಾಮೀಣ ಬ್ಯಾಂಕ್ ಶಾಖೆಗಳಿಗೂ ಬೆಂಕಿ ಹಚ್ಚಲಾಗಿತ್ತು.

ಪರಿಸ್ಥಿತಿ ನಿಯಂತ್ರಿಸಲು ಮುಂದಾಗಿರುವ ಢಾಕಾ ಪೊಲೀಸರು ಕಳೆದ 24 ಗಂಟೆಗಳಲ್ಲಿ ಕಾರ್ಯಾಚರಣೆ ನಡೆಸಿ, ಮಾಜಿ ಶಿಕ್ಷಣ ಸಚಿವ ನೂರುಲ್ ಇಸ್ಲಾಂ ನಾಹಿದ್ ಸೇರಿದಂತೆ 565 ಮಂದಿಯನ್ನು ಬಂಧಿಸಿದ್ದಾರೆ. ಹಿಂಸಾಚಾರಕ್ಕೆ ಕಾರಣರಾದವರನ್ನು ಆಡಿಯೋ ಮತ್ತು ವಿಡಿಯೋ ಸಾಕ್ಷ್ಯಗಳ ಆಧಾರದ ಮೇಲೆ ಪತ್ತೆಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಸಲಾಹುದ್ದೀನ್ ಅಹ್ಮದ್ ಎಚ್ಚರಿಸಿದ್ದಾರೆ.

ಢಾಕಾ ಭದ್ರತಾ ಖಾತರಿ ನೀಡಿದರೆ ಮಾತ್ರ ಶೇಖ್ ಹಸೀನಾ ಬಾಂಗ್ಲಾಗೆ ವಾಪಸ್: ಭಾರತದ ಮಹತ್ವದ ನಿಲುವು

ಸಂಸತ್ತಿನಲ್ಲಿ ಮಾತನಾಡಿದ ಪ್ರಧಾನಿ ರೆಹಮಾನ್, ಅವಾಮಿ ಲೀಗ್ ಪಕ್ಷವನ್ನು 'ಭಯೋತ್ಪಾದಕ ಸಂಘಟನೆ' ಮತ್ತು 'ಸೋತ ಫ್ಯಾಸಿಸ್ಟ್ ಶಕ್ತಿ' ಎಂದು ಕರೆದಿದ್ದಾರೆ. "2024ರ ಹೋರಾಟದ ಸ್ಫೂರ್ತಿಯೊಂದಿಗೆ ಎಲ್ಲ ಪ್ರಜಾಸತ್ತಾತ್ಮಕ ಶಕ್ತಿಗಳು ಒಂದಾಗಿ ಈ ದುಷ್ಟ ಶಕ್ತಿಗಳನ್ನು ನಿರ್ಣಾಯಕವಾಗಿ ಸೋಲಿಸಬೇಕು" ಎಂದು ಅವರು ಕರೆ ನೀಡಿದ್ದು, ಬೀದಿಗಿಳಿದು ಪರಿಸ್ಥಿತಿ ಎದುರಿಸುವಂತೆ ತಮ್ಮ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದ್ದಾರೆ.