ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nepal Gen Z Protest: ಜೆನ್‌ ಝಿ ಪ್ರತಿಭಟನೆಗೆ ಮಣಿದು ನೇಪಾಳ ಪ್ರಧಾನಿ ಒಲಿ, ಅ‍ಧ್ಯಕ್ಷ ರಾಮಚಂದ್ರ ಪೌಡೆಲ್‌ ರಾಜೀನಾಮೆ

ಫೇಸ್‌ಬುಕ್‌, ವ್ಯಾಟ್ಸ್‌ಆ್ಯಪ್‌, ಇನ್‌ಸ್ಟಾಗ್ರಾಮ್‌, ಯೂಟ್ಯೂಬ್‌ ಸೇರಿ 26 ಸಾಮಾಜಿಕ ಜಾಲತಾಣಗಳ ಮೇಲೆ ನೇಪಾಳ ಸರ್ಕಾರ ಹೇರಿದ ನಿಷೇಧದ ವಿರುದ್ಧ ಸಾವಿರಾರು ಮಂದಿ ಬೀದಿಗಿಳಿದಿದ್ದು, ಪ್ರಧಾನಿ ಕೆ.ಪಿ. ಶರ್ಮಾ ಒಲಿ ಮತ್ತು ರಾಷ್ಟ್ರಾಧ್ಯಕ್ಷ ರಾಮಚಂದ್ರ ಪೌಡೆಲ್‌ ರಾಜೀನಾಮೆ ನೀಡಿದ್ದಾರೆ.

ನೇಪಾಳ ಪ್ರಧಾನಿ ಒಲಿ, ಅ‍ಧ್ಯಕ್ಷ ರಾಮಚಂದ್ರ ಪೌಡೆಲ್‌ ರಾಜೀನಾಮೆ

-

Ramesh B Ramesh B Sep 9, 2025 6:08 PM

ಕಠ್ಮಂಡು: ನೇಪಾಳದಲ್ಲಿ ಜೆನ್‌ ಝಿ (Nepal Gen Z Protest) ತಲೆಮಾರು ಹೊಸ ಕ್ರಾಂತಿಯನ್ನೇ ಮಾಡಿದೆ. ಫೇಸ್‌ಬುಕ್‌, ವ್ಯಾಟ್ಸ್‌ಆ್ಯಪ್‌, ಇನ್‌ಸ್ಟಾಗ್ರಾಮ್‌, ಯೂಟ್ಯೂಬ್‌ ಸೇರಿ 26 ಸಾಮಾಜಿಕ ಜಾಲತಾಣಗಳ ಮೇಲೆ ಅಲ್ಲಿನ ಸರ್ಕಾರ ಹೇರಿದ ನಿಷೇಧದ ವಿರುದ್ಧ ಸಾವಿರಾರು ಮಂದಿ ಬೀದಿಗಿಳಿದಿದ್ದು, ಪ್ರಧಾನಿ ಕೆ.ಪಿ. ಶರ್ಮಾ ಒಲಿ (KP Sharma Oli) ಮತ್ತು ರಾಷ್ಟ್ರಾಧ್ಯಕ್ಷ ರಾಮಚಂದ್ರ ಪೌಡೆಲ್‌ (Ram Chandra Poudel) ರಾಜೀನಾಮೆ ನೀಡಿದ್ದಾರೆ. ಜತೆಗೆ ಸಾಮಾಜಿಕ ಜಾಲತಾಣಗಳಿಗೆ ವಿಧಿಸಿದ್ದ ನಿಷೇಧವನ್ನು ವಾಪಸ್‌ ಪಡೆಯಲಾಗಿದೆ. ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಜೆನ್‌ ಝಿ (1997 - 2012ರ ನಡುವೆ ಜನಿಸಿದವರು) ತಲೆಮಾರಿನ 10 ಸಾವಿರಕ್ಕೂ ಹೆಚ್ಚು ಮಂದಿ ಬೀದಿಗಿಳಿದು ಸರ್ಕಾರದ ವಿರುದ್ಧ ದಂಗೆ ಎದ್ದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ನೆರೆಯ ಶ್ರೀಲಂಕಾ ಮತ್ತು ಬಾಂಗ್ಲಾ ನಡೆದ ಘರ್ಷಣೆಯನ್ನು ನೆನಪಿಸುವ ರೀತಿಯಲ್ಲಿ ಹೋರಾಟ ನಡೆಸಿದ್ದಾರೆ.

ಸೋಶಿಯಲ್‌ ಮೀಡಿಯಾ ಬ್ಯಾನ್ ಜತೆಗೆ ಭ್ರಷ್ಟಾಚಾರ ವಿರೋಧಿಸಿ ನಡೆದ ಈ ಹೋರಾಟದಲ್ಲಿ ಇದುವರೆಗೆ 21ಕ್ಕೂ ಅಧಿಕ ಮಂದಿ ಬಲಿಯಾಗಿದ್ದು, 100ರಷ್ಟು ಮಂದಿ ಗಾಯಗೊಂಡಿದ್ದಾರೆ. "ದೇಶದಲ್ಲಿನ ಪ್ರತಿಕೂಲ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮತ್ತು ಸಂವಿಧಾನಕ್ಕೆ ಅನುಗುಣವಾಗಿ ಸೂಕ್ತ ಕ್ರಮ ಕೈಗೊಳ್ಳಲು ರಾಜೀನಾಮೆ ನೀಡಿದ್ದೇನೆ" ಎಂದು ಒಲಿ ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.



ಈ ಸುದ್ದಿಯನ್ನೂ ಓದಿ: Nepal Gen Z Protest: ನೇಪಾಳದಲ್ಲಿ ಭುಗಿಲೆದ್ದ ಹಿಂಸಾಚಾರ; ಗುಂಡು ಹಾರಿಸಲು ಆದೇಶ

ರಾಜೀನಾಮೆ ನೀಡಿದ ಬಳಿಕ ಒಲಿ ತಮ್ಮ ಕಚೇರಿಯಿಂದ ಸೇನಾ ಹೆಲಿಕಾಪ್ಟರ್‌ನಲ್ಲಿ ತೆರಳುತ್ತಿರುವ ದೃಶ್ಯ ವೈರಲ್‌ ಆಗಿದೆ. ನೇಪಾಳ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. "ಪ್ರಧಾನಿಯ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ. ಹೀಗಾಗಿ ಮತ್ತಷ್ಟು ಜೀವಕ್ಕೆ ಮತ್ತು ಆಸ್ತಿಗೆ ಹಾನಿಯಾಗುವುದನ್ನು ತಪ್ಪಿಸಲು ಎಲ್ಲಯೂ ಸಂಯಮ ಕಾಪಾಡಬೇಕುʼʼ ಎಂದು ಕರೆ ನೀಡಿದ್ದಾರೆ.

ಮಂಗಳವಾರ (ಸೆಪ್ಟೆಂಬರ್‌ 9) ಬೆಳಗ್ಗೆ 73 ವರ್ಷದ ಒಲಿ ಎಲ್ಲ ನೇಪಾಳಿ ರಾಜಕೀಯ ಪಕ್ಷಗಳ ಸಭೆಯ ಅಧ್ಯಕ್ಷತೆ ವಹಿಸಿ 'ʼಹಿಂಸೆ ರಾಷ್ಟ್ರದ ಹಿತಾಸಕ್ತಿಯಲ್ಲಿಲ್ಲ. ಈ ಸಮಸ್ಯೆಗೆ ಪರಿಹಾರಗಳನ್ನು ಕಂಡುಕೊಳ್ಳಲು ನಾವು ಶಾಂತಿ ಮಾರ್ಗವನ್ನು ಹಿಡಿಯಬೇಕುʼʼ ಎಂದು ಅವರು ಹೇಳಿದ್ದರು. ಒಲಿ ಅವರ ರಾಜೀನಾಮೆ ಜೆನ್‌ ಝಿ ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಾಗಿತ್ತು.

ವಿವಿಧ ಕಟ್ಟಡಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು

ಪ್ರತಿಭಟನಾಕಾರರು ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಮತ್ತು ರಾಷ್ಟ್ರಾಧ್ಯಕ್ಷ ರಾಮಚಂದ್ರ ಪೌಡೆಲ್‌ ಅವರ ಖಾಸಗಿ ಮನೆಗೆ ಬೆಂಕಿ ಹಚ್ಚಿದ್ದಾರೆ. ಅಲ್ಲದೆ ನೇಪಾಳದ ಮಾಜಿ ಪ್ರಧಾನಿಗಳಾದ ಪುಷ್ಪ ಕಮಲ್‌ ದಾಹಲ್‌ ಮತ್ತು ಶೇರ್‌ ಬಹಾದ್ದೂರ್‌ ದೌಬ, ಸಚಿವ ದೀಪಕ್‌ ಖದ್ಕ ಅವರ ನಿವಾಸವನ್ನೂ ಪ್ರತಿಭಟನಾಕಾರರು ಹಾನಿಗೊಳಿಸಿದ್ದಾರೆ. ಜತೆಗೆ ನೇಪಾಳ ಸಂಸತ್ತಿನ ಕಟ್ಟಡಕ್ಕೂ ಬೆಂಕಿ ಹಚ್ಚಿದ್ದಾರೆ.





ಸೋಶಿಯಲ್‌ ಮೀಡಿಯಾ ಬ್ಯಾನ್‌ ಏಕೆ?

ನೇಪಾಳದಲ್ಲಿ ವ್ಯಾಪಕವಾಗಿ ಬಳಸಲಾಗುವ ಸುಮಾರು 26ಕ್ಕೂ ಅಧಿಕ ಸೋಶಿಯಲ್‌ ಮೀಡಿಯಾಗಳ ಕಂಪನಿಗಳಿಗೆ ಅಧಿಕೃತವಾಗಿ ತಮ್ಮ ಕಂಪನಿಗಳನ್ನು ನೋಂದಾಯಿಸಲು ಪದೇ ಪದೆ ನೋಟಿಸ್‌ ನೀಡಲಾಗುತ್ತಿದ್ದರೂ ನೋಂದಾಯಿಸಲು ವಿಫಲವಾದ ಕಂಪನಿಗಳನ್ನು ಕಳೆದ ವಾರದಿಂದ ನಿರ್ಬಂಧಿಸಲಾಗಿದೆ. ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ನೋಂದಾಯಿಸಲು ಆಗಸ್ಟ್ 28ರಿಂದ ಏಳು ದಿನಗಳ ಕಾಲಾವಕಾಶ ನೀಡಲಾಗಿತ್ತು.