"ತಕ್ಷಣ ಹೊರ್ಮುಜ್ ಜಲಸಂಧಿ ತೆರೆಯದಿದ್ದರೆ ತೈಲ ಘಟಕ, ವಿದ್ಯುತ್ ಸ್ಥಾವರ, ಖರ್ಗ್ ದ್ವೀಪ ನಾಶ ಮಾಡುತ್ತೇವೆʼʼ: ಇರಾನ್‌ಗೆ ಟ್ರಂಪ್‌ನಿಂದ ಮತ್ತೊಂದು ಬೆದರಿಕೆ
Iran, Israel-US War: ಕೂಡಲೇ ಹೊರ್ಮುಜ್ ಜಲಸಂಧಿಯನ್ನು ತೆರೆಯದಿದ್ದರೆ ಇರಾನ್‌ನ ತೈಲ ಘಟಕಗಳು ಮತ್ತು ಮೂಲ ಸೌಕರ್ಯಗಳ ಮೇಲೆ ಶಕ್ತವಾಗಿ ದಾಳಿ ನಡೆಸುವುದಾಗಿ ಅಮೆರಿಕ ಮತ್ತೊಮ್ಮೆ ಎಚ್ಚರಿಸಿದೆ. ಈ ಬಗ್ಗೆ ಅಮೆರಿಕ ಅಧ್ಯಕ್ಷ ಸೋಶಿಯಲ್ ಮೀಡಿಯಶದಲ್ಲಿ ಬರೆದುಕೊಂಡಿದ್ದಾರೆ.
ಹೊರ್ಮುಜ್ ಜಲಸಂಧಿ (ಸಂಗ್ರಹ ಚಿತ್ರ) -
ವಾಷಿಂಗ್ಟನ್, ಮಾ. 30: ಫೆಬ್ರವರಿ 28ರಂದು ಇರಾನ್ ಮೇಲೆ ಇಸ್ರೇಲ್ ಜತೆಗೂಡಿ ಅಮೆರಿಕ ದಾಳಿ ನಡೆಸುವ ಮೂಲಕ ಆರಂಭವಾದ ಯುದ್ಧ (Iran-Israel-US War) ಈಗಲೂ ಮುಂದುವರಿದಿದೆ. ದಾಳಿಯ ಬೆನ್ನಲ್ಲೇ ಇರಾನ್ ತನ್ನ ವಶದಲ್ಲಿರುವ, ಜಗತ್ತಿನ ಪ್ರಮುಖ ತೈಲ ಸಾಗಾಟ ಮಾರ್ಗ ಹೊರ್ಮುಜ್ ಜಲಸಂಧಿಯನ್ನು ಸ್ಥಗಿತಗೊಳಿಸಿದ್ದು, ಜಗತ್ತಿನೆಲ್ಲೆಡೆ ಇಂಧನ ಬಿಕ್ಕಟ್ಟು ಸೃಷ್ಟಿಯಾಗಿದೆ. ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸದಿದ್ದರೆ ಆಕ್ರಮಣ ಇನ್ನಷ್ಟು ತೀವ್ರಗೊಳ್ಳಲಿದೆ ಎಂದಿದ್ದ ಅಮೆರಿಕ ಇದೀಗ ಮತ್ತೊಮ್ಮೆ ಇರಾನ್‌ಗೆ ಇದೇ ವಿಚಾರವಾಗಿ ಬೆದರಿಕೆ ಹಾಕಿದೆ. ಕೂಡಲೇ ಹೊರ್ಮುಜ್ ಜಲಸಂಧಿಯನ್ನು ತೆರೆಯದಿದ್ದರೆ ಇರಾನ್‌ನ ತೈಲ ಘಟಕಗಳು ಮತ್ತು ಮೂಲ ಸೌಕರ್ಯಗಳ ಮೇಲೆ ಶಕ್ತವಾಗಿ ದಾಳಿ ನಡೆಸುವುದಾಗಿ ಎಚ್ಚರಿಸಿದೆ.
ಈ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇರಾನ್ ಜತೆಗಿನ ಮಾತುಕತೆಯಲ್ಲಿ ಮಹತ್ವದ ಬೆಳವಣಿಗೆ ಸಾಧಿಸಿರುವುದಾಗಿ ತಿಳಿಸಿದ ಟ್ರಂಪ್ ಶೀಘ್ರದಲ್ಲೇ ಕದನ ವಿರಾಮ ಏರ್ಪಡುವ ಸಾಧ್ಯತೆ ಇದೆ ಎಂದಿದ್ದಾರೆ. ಒಂದು ವೇಳೆ ಇರಾನ್ ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಮತ್ತು ಹೊರ್ಮುಜ್ ಜಲಸಂಧಿಯನ್ನು ತಕ್ಷಣ ವ್ಯವಹಾರಕ್ಕೆ ಮುಕ್ತವಾಗದಿದ್ದರೆ ಅಮೆರಿಕವು ಇರಾನ್‌ನ ವಿದ್ಯುತ್ ಉತ್ಪಾದನಾ ಸ್ಥಾವರಗಳು, ತೈಲ ಬಾವಿಗಳು ಮತ್ತು ಖರ್ಗ್ ದ್ವೀಪವನ್ನು ಸಂಪೂರ್ಣವಾಗಿ ನಾಶ ಪಡಿಸಲಿದೆ ಎಂದಿದ್ದಾರೆ.

ಮಾತುಕತೆಗೂ ಸಿಗುತ್ತಿಲ್ಲ ಇರಾನ್ ನಾಯಕರು! ಕದನ ವಿರಾಮಕ್ಕೆ ಟ್ರಂಪ್ ನಡೆಯೇನು?
ಟ್ರಂಪ್ ಹೇಳಿದ್ದೇನು?
"ಇರಾನ್‌ನಲ್ಲಿನ ನಮ್ಮ ಮಿಲಿಟರಿ ಕಾರ್ಯಾಚರಣೆಗಳನ್ನು ಕೊನೆಗೊಳಿಸಲು ಗಂಭೀರ ಚರ್ಚೆಯಲ್ಲಿ ತೊಡಗಿಸಿಕೊಂಡಿದ್ದೇವೆ. ಈ ಸಂಬಂಧ ಹೆಚ್ಚಿನ ಪ್ರಗತಿ ಸಾಧಿಸಲಾಗಿದೆ. ಆದರೆ ಯಾವುದೇ ಕಾರಣಕ್ಕೂ ಶೀಘ್ರದಲ್ಲೇ ಒಪ್ಪಂದಕ್ಕೆ ಬರದಿದ್ದರೆ, ಹೊರ್ಮುಜ್ ಜಲಸಂಧಿಯನ್ನು ತಕ್ಷಣವೇ ತೆರೆಯದಿದ್ದರೆ ನಾವು ಇರಾನ್‌ನಲ್ಲಿ ಎಲ್ಲ ವಿದ್ಯುತ್ ಉತ್ಪಾದನಾ ಸ್ಥಾವರಗಳು, ತೈಲ ಬಾವಿಗಳು ಮತ್ತು ಖರ್ಗ್ ದ್ವೀಪವನ್ನು ಸ್ಫೋಟಿಸಿ ಸಂಪೂರ್ಣವಾಗಿ ನಾಶ ಮಾಡುತ್ತೇವೆ. ಇವನ್ನು ನಾವು ಇನ್ನೂ ಉದ್ದೇಶಪೂರ್ವಕವಾಗಿ ಮುಟ್ಟಿಲ್ಲ" ಎಂದು ಟ್ರಂಪ್ ಹೇಳಿದ್ದಾರೆ.
"ಇರಾನ್‌ನ ಹಳೆಯ 47 ವರ್ಷಗಳ ಭಯೋತ್ಪಾದನೆಯ ಆಳ್ವಿಕೆಯಲ್ಲಿ ನಮ್ಮ ಅನೇಕ ಸೈನಿಕರು ಮತ್ತು ನಾಗರಿಕರು ಹತರಾಗಿದ್ದು, ಅದರ ಪ್ರತೀಕಾರದ ಭಾಗವಾಗಿ ಈ ಕಾರ್ಯಾಚರಣೆ ನಡೆಯಲಿದೆʼʼ ಎಂದು ಅವರು ಹೇಳಿದ್ದಾರೆ.
ಇರಾನ್ ಪ್ರತಿಕ್ರಿಯೆ
ಈ ಬಗ್ಗೆ ಇರಾನ್ ಪ್ರತಿಕ್ರಿಯಿಸಿದ್ದು, "ಅಮೆರಿಕದಿಂದ ನೇರ ಮಾತುಕತೆ ನಡೆದಿಲ್ಲ. ಮಧ್ಯವರ್ತಿಗಳ ಮೂಲಕ ಅವಿವೇಕದ ಬೇಡಿಕೆ ಬಂದಿದೆ. ಅಮೆರಿಕದ ರಾಜತಾಂತ್ರಿಕತೆ ನಿರಂತರವಾಗಿ ಬದಲಾಗುತ್ತದೆ. ನಮ್ಮ ನಿಲುವು ಸ್ಪಷ್ಟವಾಗಿದೆ. ಮಧ್ಯಸ್ಥಿಕೆ ವಹಿಸಿರುವ ಪಾಕಿಸ್ತಾನದ ವೇದಿಕೆ ಅಮರಿಕದ್ದೇ. ಅದರಲ್ಲಿ ನಾವು ಭಾಗವಹಿಸಿಲ್ಲ. ಯುದ್ಧವನ್ನು ಕೊನೆಗೊಳಿಸುವ ಪ್ರಯತ್ನ ಸ್ವಾಗತಾರ್ಹ. ಆದರೆ ಯುದ್ಧ ಯಾರು ಪ್ರಾರಂಭಿಸಿದರು ಎಂಬುದನ್ನೂ ನೆನಪಿಡಬೇಕಾಗುತ್ತದೆ" ಎಂದು ಮುಂಬೈಯಲ್ಲಿರುವ ಇರಾನ್ ಕಾನ್ಸುಲೇಟ್ ಜನರಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹೊರ್ಮುಜ್ ಬಿಕ್ಕಟ್ಟು: ತೈಲದಿಂದ ದಿನಕ್ಕೆ ಇರಾನ್ ಗಳಿಸುತ್ತಿರುವ ಆದಾಯ ಎಷ್ಟು ಗೊತ್ತೇ?
ಮುಂದುವರಿದ ದಾಳಿ
ಈ ಮಧ್ಯೆ ಅಮೆರಿಕ ಮತ್ತು ಇಸ್ರೇಲ್ ಇಂದೂ ಇರಾನ್ ಮೇಲಿನ ದಾಳಿ ಮುಂದುವರಿಸಿದವು. ಇದಕ್ಕೆ ಪ್ರತಿಕ್ರಿಯೆಯಾಗಿ, ಇರಾನ್ ಕುವೈತ್‌ನಲ್ಲಿರುವ ಪ್ರಮುಖ ನೀರು ಶುದ್ಧೀಕರಣ ಘಟಕ ಮತ್ತು ವಿದ್ಯುತ್ ಸ್ಥಾವರವನ್ನು ಹೊಡೆದುರುಳಿಸಿತು. ಜತೆಗೆ ಉತ್ತರ ಇಸ್ರೇಲ್‌ನಲ್ಲಿರುವ ತೈಲ ಸಂಸ್ಕರಣಾಗಾರವನ್ನೂ ನಾಶಪಡಿಸಿತು. ಮಾರ್ಚ್ 30ರಿಂದ ಹೊರ್ಮುಜ್ ಜಲಸಂಧಿಯ ಮೂಲಕ ಸಾಗಲು ಇರಾನ್ 20 ತೈಲ ಟ್ಯಾಂಕರ್‌ಗಳಿಗೆ ಅನುಮತಿ ನೀಡಿದೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ. ಈ ಬಗ್ಗೆ ಇರಾನ್ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.
ವಿದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.