Flood: ಪಾಕಿಸ್ತಾನದಲ್ಲಿ ವರುಣಾರ್ಭಟ; ಪ್ರವಾಹದಿಂದ 850 ಕ್ಕೂ ಅಧಿಕ ಸಾವು
ಕಳೆದೊಂದು ವಾರದಿಂದ ಪಾಕಿಸ್ತಾನದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಪಂಜಾಬ್ ಮತ್ತು ಖೈಬರ್ ಪಖ್ತುಂಖ್ವಾ ಪ್ರಾಂತ್ಯಗಳಲ್ಲಿ ಪ್ರವಾಹ ಸೃಷ್ಟಿಯಾಗಿದೆ. ಕಳೆದ 24 ಗಂಟೆಗಳಲ್ಲಿ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ ಮತ್ತು ಲಕ್ಷಾಂತರ ಜನರ ಬದುಕು ಅಸ್ತವ್ಯಸ್ತಗೊಂಡಿದೆ.

-

ಇಸ್ಲಾಮಾಬಾದ್: ಕಳೆದೊಂದು ವಾರದಿಂದ ಪಾಕಿಸ್ತಾನದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಪಂಜಾಬ್ ಮತ್ತು ಖೈಬರ್ ಪಖ್ತುಂಖ್ವಾ ಪ್ರಾಂತ್ಯಗಳಲ್ಲಿ ಪ್ರವಾಹ ಸೃಷ್ಟಿಯಾಗಿದೆ. ಕಳೆದ 24 ಗಂಟೆಗಳಲ್ಲಿ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ ಮತ್ತು ಲಕ್ಷಾಂತರ ಜನರ ಬದುಕು ಅಸ್ತವ್ಯಸ್ತಗೊಂಡಿದೆ ಎಂದು ವರದಿಗಳು ತಿಳಿಸಿವೆ. ಕಳೆದ 24 ಗಂಟೆಗಳಲ್ಲಿ ಪಂಜಾಬ್ ಪ್ರಾಂತ್ಯದಲ್ಲಿ ಹತ್ತು ಜನರು ಸಾವನ್ನಪ್ಪಿದ್ದರೆ, ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ. ಜೂನ್ 26 ರಿಂದ ಆಗಸ್ಟ್ 31 ರವರೆಗೆ ಪಾಕಿಸ್ತಾನದಾದ್ಯಂತ ಸಾವಿನ ಸಂಖ್ಯೆ 854 ಕ್ಕೆ ಏರಿದ್ದು, 1,100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ವರದಿ ತಿಳಿಸಿದೆ.
ಸರ್ಕಾರವು ಪ್ರವಾಹದಲ್ಲಿ ಸಿಲುಕಿದ್ದ 7,60,000 ಜನರನ್ನು ಮತ್ತು 5,00,000 ಕ್ಕೂ ಹೆಚ್ಚು ಜಾನುವಾರುಗಳನ್ನು ರಕ್ಷಿಸಿದೆ" ಎಂದು ಪಂಜಾಬ್ ಮಾಹಿತಿ ಸಚಿವೆ ಅಜ್ಮಾ ಬೊಖಾರಿ ಭಾನುವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಖೈಬರ್ ಪಖ್ತುಂಖ್ವಾದಲ್ಲಿ, ಪ್ರಾಂತ್ಯದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಜೂನ್ ಅಂತ್ಯದಿಂದ 406 ಜನರು ಸಾವನ್ನಪ್ಪಿದ್ದಾರೆ ಎಂದು ಖೈಬರ್ ಪಖ್ತುಂಖ್ವಾ ಪ್ರಾಂತೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಪಿಡಿಎಂಎ) ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ ನಾಲ್ವರು ಮಕ್ಕಳು ಮತ್ತು ಒಬ್ಬ ಮಹಿಳೆ ಸಾವನ್ನಪ್ಪಿದ್ದಾರೆ.
ಜೂನ್ 26 ರಿಂದ ಆಗಸ್ಟ್ 31 ರವರೆಗೆ ಮುಂಗಾರು ಮಳೆ ಆರಂಭವಾಗಿ, ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ 484 ಸಾವುಗಳು ಸಂಭವಿಸಿವೆ ಎಂದು NDMA ದತ್ತಾಂಶವು ತೋರಿಸಿದೆ. ನಂತರ ಪಂಜಾಬ್ ಪ್ರಾಂತ್ಯದಲ್ಲಿ 209, ಸಿಂಧ್‌ನಲ್ಲಿ 58, ಬಲೂಚಿಸ್ತಾನದಲ್ಲಿ 25, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ 70 ಮತ್ತು ಇಸ್ಲಾಮಾಬಾದ್ ರಾಜಧಾನಿ ಪ್ರದೇಶದಲ್ಲಿ (ICT) ಎಂಟು ಸಾವುಗಳು ಸಂಭವಿಸಿವೆ. ಜೂನ್ ತಿಂಗಳ ಕೊನೆಯಿಂದ ಪಾಕಿಸ್ತಾನದಲ್ಲಿ ಮುಂಗಾರು ಮಳೆ ಪ್ರಾರಂಭವಾಗಿದೆ. ಮಳೆಯಿಂದಾಗಿ. ಇದರಿಂದ ದೇಶಾದ್ಯಂತ ಪ್ರವಾಹ ಉಂಟಾಗಿದೆ. ಅದರಲ್ಲೂ ವಿಶೇಷವಾಗಿ ಖೈಬರ್ ಪಖ್ತುಂಖ್ವಾ ಮತ್ತು ಉತ್ತರದ ಪ್ರದೇಶಗಳಲ್ಲಿ ಹೆಚ್ಚು ಹಾನಿಯಾಗಿದೆ.
ಈ ಸುದ್ದಿಯನ್ನೂ ಓದಿ: Pakistan Flood: ಪ್ರವಾಹದ ರಿಪೋರ್ಟಿಂಗ್‌ಗೆ ಹೋದ ಪಾಕ್ ಪತ್ರಕರ್ತೆಯ ಸ್ಥಿತಿ ಅಧೋಗತಿ! ಈ ಶಾಕಿಂಗ್ ವಿಡಿಯೊ ಇಲ್ಲಿದೆ
ಪ್ರವಾಹದಿಂದಾಗಿ ಅನೇಕ ಜನರು ಮನೆಗಳನ್ನು ಕಳೆದುಕೊಂಡಿದ್ದು, ಜನರ ಜೀವನ ಅಸ್ತವ್ಯಸ್ತವಾಗಿದೆ. ಮಹಿಳೆಯರು, ಮಕ್ಕಳು ಸೇರಿದಂತೆ ಅನೇಕರು ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಹಾನಿಗೀಡಾದ ಒಂಭತ್ತು ಜಿಲ್ಲೆಗಳಲ್ಲಿ ಸುಮಾರು 2,000 ರಕ್ಷಣಾ ಕಾರ್ಯಕರ್ತರು ಕಾರ್ಯನಿರ್ವಹಿಸುತ್ತಿದ್ದಾರೆ. ಮನೆ, ಅಂಗಡಿ ಇನ್ನಿತರ ಪ್ರದೇಶಗಳಲ್ಲಿ ಅವಶೇಷಗಳಡಿ ಸಿಲುಕಿದವರ ಶವಗಳನ್ನು ಹೊರತೆಗೆಯುತ್ತಿದ್ದಾರೆ.