Afghanistan earthquake: ಭೂಕಂಪಕ್ಕೆ 800 ಕ್ಕೂ ಅಧಿಕ ಬಲಿ, ಪ್ರಧಾನಿ ಮೋದಿಯಿಂದ ನೆರವಿನ ಭರವಸೆ
ಪೂರ್ವ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ (Afghanistan earthquake) 800 ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. 2500 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ನಂಗರ್‌ಹಾರ್ ಪ್ರಾಂತ್ಯದಲ್ಲಿ 12 ಜನರು ಸಾವನ್ನಪ್ಪಿದ್ದಾರೆ ಮತ್ತು 255 ಜನರು ಗಾಯಗೊಂಡಿದ್ದಾರೆ ಎಂದು ಹೇಳಿದರು.

-

ಕಾಬೂಲ್: ಪೂರ್ವ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ (Afghanistan earthquake) 800 ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. 2500 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ರಿಕ್ಟರ್ ಮಾಪಕದಲ್ಲಿ 6.0 ರಷ್ಟು ತೀವ್ರತೆಯ ಕಂಪನವು ಬೆಳಗಿನ ಜಾವ 12:27 ಕ್ಕೆ (IST) ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತಿಳಿಸಿದೆ. ಕುನಾರ್‌ನಲ್ಲಿ ಸುಮಾರು 800 ಜನರು ಸಾವನ್ನಪ್ಪಿದ್ದಾರೆ ಮತ್ತು 2,500 ಜನರು ಗಾಯಗೊಂಡಿದ್ದಾರೆ ಎಂದು ವಕ್ತಾರ ಜಬಿಹುಲ್ಲಾ ಮುಜಾಹಿದ್ ರಾಜಧಾನಿ ಕಾಬೂಲ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ, ನಂಗರ್‌ಹಾರ್ ಪ್ರಾಂತ್ಯದಲ್ಲಿ 12 ಜನರು ಸಾವನ್ನಪ್ಪಿದ್ದಾರೆ ಮತ್ತು 255 ಜನರು ಗಾಯಗೊಂಡಿದ್ದಾರೆ ಎಂದು ಹೇಳಿದರು.
ಯುರೇಷಿಯನ್ ಮತ್ತು ಭಾರತೀಯ ಟೆಕ್ಟೋನಿಕ್ ಪ್ಲೇಟ್‌ಗಳ ಜಂಕ್ಷನ್ ಬಳಿ, ವಿಶೇಷವಾಗಿ ಹಿಂದೂ ಕುಶ್ ಪ್ರದೇಶದಲ್ಲಿ ಅಫ್ಘಾನಿಸ್ತಾನ ಇರುವುದರಿಂದ ಈ ಪ್ರದೇಶಗಳಲ್ಲಿ ಹೆಚ್ಚು ಭೂಕಂಪ ಸಂಭವಿಸುತ್ತದೆ. ನಂಗರ್‌ಹಾರ್ ಪ್ರಾಂತ್ಯದಲ್ಲಿ ಶುಕ್ರವಾರ ರಾತ್ರಿಯಿಂದ ಶನಿವಾರದವರೆಗೆ ಭಾರೀ ಪ್ರವಾಹ ಉಂಟಾಗಿ ಐದು ಜನರು ಸಾವನ್ನಪ್ಪಿ, ಬೆಳೆಗಳು ಮತ್ತು ಆಸ್ತಿಪಾಸ್ತಿಗಳು ನಾಶವಾದ ಕೆಲವೇ ದಿನಗಳ ನಂತರ ಈ ಭೂಕಂಪ ಸಂಭವಿಸಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಭೂಕಂಪದ ಕೇಂದ್ರಬಿಂದು ಅಫ್ಘಾನಿಸ್ತಾನದ ಬಸಾವುಲ್‌ನಿಂದ ಉತ್ತರಕ್ಕೆ 36 ಕಿ.ಮೀ. (22 ಮೈಲುಗಳು) ದೂರದಲ್ಲಿತ್ತು ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ. ಈ ಭೂಕಂಪವು ಕಾಬೂಲ್‌ನಿಂದ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ವರೆಗಿನ ಕಟ್ಟಡಗಳನ್ನು ಸುಮಾರು 370 ಕಿ.ಮೀ. ದೂರದಲ್ಲಿ ಹಲವಾರು ಸೆಕೆಂಡುಗಳ ಕಾಲ ಭೂಮಿಯನ್ನು ನಡುಗಿಸಿತು. ಈ ಮೊದಲು ಅಕ್ಟೋಬರ್ 7, 2023ರಂದು ಅಫ್ಘಾನಿಸ್ತಾನವನ್ನು 6.3 ತೀವ್ರತೆಯ ಭೂಕಂಪವು ಬಲವಾದ ನಂತರದ ಕಂಪನಗಳೊಂದಿಗೆ ಅಪ್ಪಳಿಸಿತು. ಕುನಾರ್ ಪ್ರಾಂತ್ಯದಲ್ಲಿ 3 ಗ್ರಾಮಗಳು ನಾಶವಾಗಿವೆ. ನುರ್ಗಲ್, ಚಾವ್ಕೇ ಮತ್ತು ವಟಪುರ್ ಭೂಕಂಪದಿಂದ ಹೆಚ್ಚು ಹಾನಿಗೊಳಗಾದ ಜಿಲ್ಲೆಗಳಾಗಿವೆ ಎಂದು ಬಖ್ತರ್ ವರದಿ ಮಾಡಿದೆ.
ಭಾರತದಿಂದ ನೆರವು
ಭೂಕಂಪದಲ್ಲಿ ಮೃತಪಟ್ಟವರಿಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ಪೀಡಿತ ರಾಷ್ಟ್ರಕ್ಕೆ ಸಂಪೂರ್ಣ ಮಾನವೀಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, “ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪದಿಂದ ಉಂಟಾದ ಜೀವಹಾನಿಯಿಂದ ತೀವ್ರ ದುಃಖಿತನಾಗಿದ್ದೇನೆ. ಈ ಕಷ್ಟದ ಸಮಯದಲ್ಲಿ ನಮ್ಮ ಪ್ರಾರ್ಥನೆಗಳು ಮೃತರ ಕುಟುಂಬಗಳೊಂದಿಗೆ ಇವೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ನಾವು ಬಯಸುತ್ತೇವೆ. ಭಾರತವು ಪೀಡಿತರಿಗೆ ಸಾಧ್ಯವಿರುವ ಎಲ್ಲಾ ಮಾನವೀಯ ನೆರವು ಮತ್ತು ಪರಿಹಾರವನ್ನು ಒದಗಿಸಲು ಸಿದ್ಧವಾಗಿದೆ” ಎಂದು ಅವರು ಬರೆದಿದ್ದಾರೆ.
ಈ ಸುದ್ದಿನ್ನೂ ಓದಿ: Afghanistan earthquake: ಭಾರೀ ಭೂಕಂಪ; 250 ಬಲಿ- 400ಕ್ಕೂ ಹೆಚ್ಚು ಜನರಿಗೆ ಗಾಯ
ವಿದೇಶಾಂಗ ಸಚಿವ ಎಸ್ ಜೈಶಂಕರ್ ಕೂಡ “ಅಫ್ಘಾನ್ ಜನರಿಗೆ ಈ ಅಗತ್ಯದ ಸಮಯದಲ್ಲಿ ಭಾರತ ಸಹಾಯವನ್ನು ನೀಡುತ್ತದೆ. ಮೃತರ ಕುಟುಂಬಗಳಿಗೆ ನಮ್ಮ ಸಂತಾಪಗಳು. ಗಾಯಾಳುಗಳ ಚೇತರಿಕೆಗಾಗಿ ನಮ್ಮ ಪ್ರಾರ್ಥನೆಗಳು” ಎಂದು ಅವರು ಹೇಳಿದ್ದಾರೆ.