ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

PM Modi In China: 7 ವರ್ಷಗಳ ಬಳಿಕ ಚೀನಾಕ್ಕೆ ಬಂದಿಳಿದ ಪ್ರಧಾನಿ ಮೋದಿ; ಅಮೆರಿಕಕ್ಕೆ ಸಡ್ಡು ಹೊಡೆಯಲು ಮುಹೂರ್ತ ಫಿಕ್ಸ್‌

Narendra Modi: ಜಪಾನ್‌ ಪ್ರವಾಸ ಮುಗಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇದೀಗ ಚೀನಾಕ್ಕೆ ತೆರಳಿದ್ದಾರೆ. ಶಾಂಘೈ ಸಹಕಾರ ಸಂಸ್ಥೆಯ ಶೃಂಗಸಭೆಯಲ್ಲಿ ಭಾಗವಹಿಸಲು ನರೇಂದ್ರ ಮೋದಿ ಶನಿವಾರ (ಆಗಸ್ಟ್‌ 30) ಚೀನಾದ ಬಂದರು ನಗರಿ ಟಿಯಾಂಜಿನ್‌ಗೆ ಆಗಮಿಸಿದರು. ನಾಳೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಮೋದಿ ಮಾತುಕತೆ ನಡೆಸಲಿದ್ದಾರೆ.

7 ವರ್ಷಗಳ ಬಳಿಕ ಚೀನಾಕ್ಕೆ ಬಂದಿಳಿದ ಪ್ರಧಾನಿ ಮೋದಿ

-

Ramesh B Ramesh B Aug 30, 2025 6:36 PM

ಬೀಜಿಂಗ್‌: ಅಮೆರಿಕದ ಶೇ. 50ರಷ್ಟು ಹೆಚ್ಚುವರಿ ಸುಂಕದ ವಿರುದ್ಧ ತಿರುಗಿ ಬಿದ್ದಿರುವ ಭಾರತ ನೆರೆ ರಾಷ್ಟ್ರಗಳೊಂದಿಗಿನ ಸಂಬಂಧ ವೃದ್ಧಿಗೆ ಮುಂದಾಗಿದೆ. ಇದರ ಭಾಗವಾಗಿ ಸುಮಾರು 7 ವರ್ಷಗಳ ಬಳಿಕ ಪ್ರಧಾನಿ ನರೇಂದ್ರ ಮೋದಿ (Narendra Modi) ಚೀನಾಕ್ಕೆ ತೆರಳಿದ್ದಾರೆ. 2 ದಿನಗಳ ಜಪಾನ್‌ ಪ್ರವಾಸ ಮುಗಿಸಿದ ಅವರು 2 ದಿನಗಳ ಪ್ರವಾಸಕ್ಕಾಗಿ ಚೀನಾದಲ್ಲಿ ಬಂದಿಳಿದರು. ಶಾಂಘೈ ಸಹಕಾರ ಸಂಸ್ಥೆಯ (Shanghai Cooperation Organisation-SCO) ಶೃಂಗಸಭೆಯಲ್ಲಿ ಭಾಗವಹಿಸಲು ನರೇಂದ್ರ ಮೋದಿ ಶನಿವಾರ (ಆಗಸ್ಟ್‌ 30) ಚೀನಾದ ಬಂದರು ನಗರಿ ಟಿಯಾಂಜಿನ್‌ಗೆ ಆಗಮಿಸಿದರು.

7 ವರ್ಷಗಳ ಬಳಿಕ ಮೋದಿ ಅವರ ಮೊದಲ ಚೀನಾ ಪ್ರವಾಸ ಇದಾಗಿದ್ದು, ಅಮೆರಿಕದ ಸುಂಕ ನೀತಿಗಳಿಂದ ಉಂಟಾದ ದೆಹಲಿ-ವಾಷಿಂಗ್ಟನ್‌ ವ್ಯಾಪಾರ ಸಂಬಂಧಗಳು ಹದಗೆಟ್ಟಿರುವ ಸಮಯದಲ್ಲಿ ಈ ಬೆಳವಣಿಗೆ ನಡೆದಿರುವುದು ಜಗತ್ತಿನ ಮನ ಸೆಳೆದಿದೆ.



ಈ ಸುದ್ದಿಯನ್ನೂ ಓದಿ: PM Modi Japan Visit: ಜಪಾನ್‌ ಪ್ರಧಾನಿ ಶಿಗೇರು ಇಶಿಬಾ ಜತೆ ಬುಲೆಟ್‌ ಟ್ರೈನ್‌ನಲ್ಲಿ ಪ್ರಯಾಣಿಸಿದ ಮೋದಿ

ಟಿಯಾಂಜಿನ್ ಏರ್​​ಪೋರ್ಟ್​ನಲ್ಲಿ ಮೋದಿ ಅವರಿಗೆ ಅದ್ಧೂರಿ ಸ್ವಾಗತ ಸಿಕ್ಕಿದ್ದು, ಚೀನಾ ಸಚಿವ ಲೀ ಲೆಚೆಂಗ್ ಬರಮಾಡಿಕೊಂಡರು. ಆಗಸ್ಟ್ 31ರಿಂದ ಸೆಪ್ಟೆಂಬರ್ 1ರವರೆಗೆ ನಡೆಯಲಿರುವ ವಾರ್ಷಿಕ ಎಸ್‌ಸಿಒ ಶೃಂಗಸಭೆಯಲ್ಲಿ ಭಾಗವಹಿಸಲಿರುವ ಮೋದಿ ಭಾನುವಾರ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದು, ಇದಕ್ಕಾಗಿ ಇಡೀ ವಿಶ್ವವೇ ಕುತೂಹಲದಿಂದ ಕಾಯುತ್ತಿದೆ. ಪ್ರಮುಖ ಘೋಷಣೆ ಹೊರ ಬೀಳುವ ಸಾಧ್ಯತೆ ಇದೆ.

PM Modi In China 1

2018ರ ನಂತರ ಮೊದಲ ಪ್ರಧಾನಿ ಮೋದಿ ಇದೇ ಮೊದಲ ಬಾರಿಗೆ ಚೀನಾಗೆ ತೆರಳಿದ್ದಾರೆ. ಲಡಾಕ್‌ನ ಘಲ್ವಾನ್ ಕಣಿವೆಯಲ್ಲಿನ ಘರ್ಷಣೆಯ ನಂತರ 2020ರಲ್ಲಿ ಹದಗೆಟ್ಟಿದ್ದ ಭಾರತ-ಚೀನಾ ಸಂಬಂಧ ಮತ್ತೆ ಸುಧಾರಿಸುವ ಸಾಧ್ಯತೆ ಇದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಆ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ದುಬಾರಿ ಸುಂಕ ನೀತಿಗೆ ಭಾರತ-ಚೀನಾ ಸಡ್ಡು ಹೊಡೆಯಲಿದೆ. ಇದಕ್ಕೆ ಪೂರಕವಾಗಿ ಜಪಾನ್‌ನಿಂದ ಚೀನಾಕ್ಕೆ ಹೊರಡುವ ಮುನ್ನ ಪ್ರತಿಕ್ರಿಯಿಸಿದ ಮೋದಿ "ವಿಶ್ವ ಆರ್ಥಿಕತೆಗೆ ಸ್ಥಿರತೆ ತರಲು 2 ಪ್ರಮುಖ ರಾಷ್ಟ್ರಗಳಾದ ಭಾರತ ಮತ್ತು ಚೀನಾ ಒಟ್ಟಾಗಿ ಕೆಲಸ ಮಾಡುವುದು ಮುಖ್ಯ" ಎಂದು ಹೇಳಿದ್ದರು.



ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗಿನ ಮಾತುಕತೆಯ ಹೊರತಾಗಿ ಪ್ರಧಾನಿ ಮೋದಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದ್ವಿಪಕ್ಷೀಯ ಸಭೆಯನ್ನೂ ಇತರ ಪ್ರಾದೇಶಿಕ ನಾಯಕರೊಂದಿಗೆ ಸಂವಾದವನ್ನೂ ನಡೆಸಲಿದ್ದಾರೆ. ಈ ವೇಳೆ ಭಾರತ, ಚೀನಾದೊಂದಿಗೆ ಆರ್ಥಿಕ ಸಂಬಂಧ ಬಲಪಡಿಸುವುದು, ಗಡಿಯಲ್ಲಿ ಶಾಂತಿ ಸ್ಥಾಪಿಸುವುದು, ರಷ್ಯಾದೊಂದಿಗೆ ಇಂಧನ ಮತ್ತು ರಕ್ಷಣಾ ಸಹಕಾರವನ್ನು ವಿಸ್ತರಿಸುವುದು, ಜಾಗತಿಕ ಆಡಳಿತದಲ್ಲಿ ಬಹುಧ್ರುವೀಯತೆಯನ್ನು ಬೆಂಬಲಿಸುವುದು ಮುಂತಾದ ವಿಷಯಗಳ ಕುರಿತು ಚರ್ಚೆ ನಡೆಯಲಿದೆ.

ಇತ್ತೀಚಿನ ದಿನಗಳಲ್ಲಿ ಭಾರತ ಮತ್ತು ಚೀನಾ ಸಂಬಂಧಗಳನ್ನು ಪುನಃಸ್ಥಾಪಿಸಲು ಎಚ್ಚರಿಕೆಯಿಂದ ಹೆಜ್ಜೆ ಇಟ್ಟಿವೆ. ಕಳೆದ ತಿಂಗಳು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಭಾರತಕ್ಕೆ ಭೇಟಿ ನೀಡಿದ್ದರು. ಈ ವೇಳೆ, ವಿವಾದಿತ ಗಡಿಯಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳುವುದು, ಗಡಿ ವ್ಯಾಪಾರ ಮಾರ್ಗಗಳನ್ನು ಪುನಃ ತೆರೆಯುವುದು, ಎರಡೂ ದೇಶಗಳ ನಡುವೆ ನೇರ ವಿಮಾನ ಸೇವೆಗಳನ್ನು ಪುನರಾರಂಭಿಸುವುದು ಮುಂತಾದ ವಿಚಾರಗಳ ಬಗ್ಗೆ ಮಾತುಕತೆ ನಡೆಸಲಾಗಿತ್ತು.