ಎಲಾನ್ ಮಸ್ಕ್‌ಗೆ ಮತ್ತೊಂದು ಗರಿ: ವಿಶ್ವದ ಮೊದಲ ಟ್ರಿಲಿಯನೇರ್ ಆದ ಸ್ಪೇಸ್‌ಎಕ್ಸ್ ಮಾಲಕ
Elon Musk Becomes the World's First Trillionaire: ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಇದೀಗ ವಿಶ್ವದ ಮೊದಲ ಟ್ರಿಲಿಯನೇರ್ ಆಗಿದ್ದಾರೆ. ಸ್ಪೇಸ್‌ಎಕ್ಸ್ ಷೇರುಗಳ ಆರಂಭಿಕ ಸಾರ್ವಜನಿಕ ಕೊಡುಗೆ ಬೆಲೆ 135 ಡಾಲರಿಂದ 150 ಡಾಲರ್‌ಗೆ ಏರಿದ ನಂತರ ಮಸ್ಕ್ ಟ್ರಿಲಿಯನೇರ್ ಆದರು. ಎಲಾನ್ ಮಸ್ಕ್ ಅವರ ಒಟ್ಟು ಆಸ್ತಿ ಮೌಲ್ಯವು ಒಂದು ಟ್ರಿಲಿಯನ್ ಡಾಲರ್‌ಗಳನ್ನು ದಾಟಿದೆ
ಎಲಾನ್ ಮಸ್ಕ್ (ಸಂಗ್ರಹ ಚಿತ್ರ) -
ವಾಷಿಂಗ್ಟನ್, ಜೂ. 13: ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ (Elon Musk) ಮತ್ತೊಂದು ಇತಿಹಾಸ ಬರೆದಿದ್ದಾರೆ. ವಿಶ್ವದ ಮೊದಲ ಟ್ರಿಲಿಯನೇರ್ (First Trillionaire) ಆಗಿ ಹೊರ ಹೊಮ್ಮಿದ್ದಾರೆ. ಅವರ ರಾಕೆಟ್ ಕಂಪನಿ ಸ್ಪೇಸ್‌ಎಕ್ಸ್‌ನ ಷೇರುಗಳು ಮಾರುಕಟ್ಟೆಯಲ್ಲಿ ಮೊದಲ ದಿನದ ವಹಿವಾಟಿನಲ್ಲಿ ಶೇ. 11ರಷ್ಟು ಏರಿಕೆಯಾಗಿ 150 ಡಾಲರ್‌ಗೆ ತಲುಪಿ ನಂತರ ಸುಮಾರು 172 ಡಾಲರ್‌ಗೆ ಏರಿತು. ಇದರಿಂದಾಗಿ ಕಂಪನಿಗೆ 2.18 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ಸಿಕ್ಕಿತು.
ಸ್ಪೇಸ್ ಎಕ್ಸ್ ಷೇರುಗಳ ಆರಂಭಿಕ ಸಾರ್ವಜನಿಕ ಕೊಡುಗೆ ಬೆಲೆ 135 ಡಾಲರ್‌ನಿಂದ 150 ಡಾಲರ್‌ಗೆ ಏರಿದ ನಂತರ ಮಸ್ಕ್ ಟ್ರಿಲಿಯನೇರ್ ಆದರು. ಅವರ ಪ್ರಸ್ತುತ ನಿವ್ವಳ ಮೌಲ್ಯವು ಸ್ಪೇಸ್‌ಎಕ್ಸ್ ಮತ್ತು ಕ್ಲೀನ್ ಎನರ್ಜಿ ಕಂಪನಿ ಟೆಸ್ಲಾದಲ್ಲಿನ ಅವರ ಷೇರುಗಳನ್ನು ಒಳಗೊಂಡಿದೆ. ಮಸ್ಕ್ ಸಹ-ಸ್ಥಾಪಿಸಿದ ನ್ಯೂರೋಟೆಕ್ನಾಲಜಿ ಕಂಪನಿಯಾದ ನ್ಯೂರಾಲಿಂಕ್ ಮತ್ತು ಅವರು ಸ್ಥಾಪಿಸಿದ ಸುರಂಗ ಸಂಸ್ಥೆಯಾದ ದಿ ಬೋರಿಂಗ್ ಕಂಪನಿ ಸೇರಿದಂತೆ ಇತರ ಉದ್ಯಮಗಳಲ್ಲಿ ಅವರು ಮಾಲೀಕತ್ವದ ಪಾಲನ್ನು ಹೊಂದಿದ್ದಾರೆ.
ಎಐ ಕ್ರಾಂತಿಯಿಂದ ಉದ್ಯೋಗವೇ ಅನಗತ್ಯ: ಉದ್ಯಮಿ ಎಲಾನ್ ಮಸ್ಕ್
2021ರ ಜನವರಿಯಲ್ಲಿ ಟೆಸ್ಲಾ ಷೇರುಗಳು ಹೆಚ್ಚಾದ ನಂತರ ಅವರ ನಿವ್ವಳ ಮೌಲ್ಯವು 185 ಬಿಲಿಯನ್ ಡಾಲರ್ ದಾಟಿದಾಗ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರನ್ನು ಹಿಂದಿಕ್ಕಿ ಮಸ್ಕ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾದರು.
ಬಾಹ್ಯಾಕಾಶದಲ್ಲಿ ಉಪಗ್ರಹಗಳು ಮತ್ತು ದತ್ತಾಂಶ ಕೇಂದ್ರಗಳನ್ನು ಸ್ಥಾಪಿಸುವ ಮತ್ತು ಅಂತಿಮವಾಗಿ ಮಂಗಳ ಗ್ರಹದಲ್ಲಿ ಜನರ ವಸಾಹತು ಸ್ಥಾಪಿಸುವ ಮಹತ್ವಾಕಾಂಕ್ಷೆಗಳಿಗೆ ಹಣದ ಅಗತ್ಯವಿರುವುದರಿಂದ ಸ್ಪೇಸ್ ಎಕ್ಸ್ ಸಾರ್ವಜನಿಕವಾಗಿ ಮಾರಾಟ ಮಾಡುತ್ತಿದೆ ಎಂದು ಟೆಸ್ಲಾ ಮುಖ್ಯಸ್ಥರು ಹೇಳಿದರು.
ಭವಿಷ್ಯದಲ್ಲಿ ಸಾಮಾನ್ಯ ಜನರೂ ವಿಮಾನದಲ್ಲಿ ಪ್ರಯಾಣಿಸುವಂತೆ ಬಾಹ್ಯಾಕಾಶಕ್ಕೂ ಹೋಗುವ ಅವಕಾಶ ಹೊಂದಬೇಕು ಎಂಬುದು ತಮ್ಮ ಆಶಯ ಎಂದು ಎಲಾನ್ ಮಸ್ಕ್ ಹೇಳಿದ್ದಾರೆ.