ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʼʼಯುಪಿಎ ಸರ್ಕಾರದ ಅವಧಿಯಲ್ಲಿ ನಿಯಮ ಪಾಲಿಸದೆ ಸ್ಪೆಕ್ಟ್ರಮ್ ಮಾರಾಟ ಮಾಡಲಾಗಿತ್ತುʼʼ: ರಾಹುಲ್‌ ಗಾಂಧಿ ವಿರುದ್ಧ ತಿರುಗಿಬಿದ್ದ ಬಿಜೆಪಿ

Spectrum Allocation: ಅಂಬಾನಿ ಕಾರಣದಿಂದ ಭಾರತದಲ್ಲಿ ಸ್ಟಾರ್‌ಲಿಂಕ್ ಇಂಟರ್ನೆಟ್ ಸೇವೆ ಆರಂಭ ವಿಳಂಬವಾಗುತ್ತಿದೆ ಎಂದು ಎಲಾನ್‌ ಮಸ್ಕ್‌ ಮಾಡಿದ್ದ ಎಕ್ಸ್‌ ಪೋಸ್ಟ್‌ಗೆ ಲೋಕಸಭೆಯ ವಿಪಕ್ಷದ ನಾಯಕ ರಾಹುಲ್ ಗಾಂಧಿ ನೀಡಿದ ಪ್ರತಿಕ್ರಿಯೆಯ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಭಾರತದಲ್ಲಿ ಸ್ಟಾರ್‌ಲಿಂಕ್ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಸ್ಪೇಸ್‌ಎಕ್ಸ್ ಸಂಸ್ಥಾಪಕ ಹಾಗೂ ಸಿಇಒ ಎಲಾನ್ ಮಸ್ಕ್ ಪೋಸ್ಟ್‌ಗೆ ರಾಹುಲ್ ಪ್ರತಿಕ್ರಿಯಿಸಿದ್ದರು.

ಎಲಾನ್ ಮಸ್ಕ್ ಪೋಸ್ಟ್: ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ

ಬಿಜೆಪಿ ನಾಯಕ ರಾಮ್ ಮಾಧವ್ (ಸಂಗ್ರಹ ಚಿತ್ರ) -

Priyanka P
Priyanka P Oct 9, 2026 7:44 PM

ನವದೆಹಲಿ, ಅ. 9: ಭಾರತದಲ್ಲಿ ಸ್ಟಾರ್‌ಲಿಂಕ್ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಸ್ಪೇಸ್‌ಎಕ್ಸ್ ಸಂಸ್ಥಾಪಕ ಹಾಗೂ ಸಿಇಒ ಎಲಾನ್ ಮಸ್ಕ್ (Elon Musk) ಅಂಬಾನಿ ಕುರಿತು ಮಾಡಿದ್ದ ಪೋಸ್ಟ್‌ಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ನೀಡಿದ ಪ್ರತಿಕ್ರಿಯೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಸ್ಪೆಕ್ಟ್ರಮ್ ಹಂಚಿಕೆ ವಿಚಾರದಲ್ಲಿ ಯಾವುದೇ ಕಂಪನಿಗೆ ವಿಶೇಷ ಸೌಲಭ್ಯ ನೀಡುವುದಿಲ್ಲ ಅಥವಾ ತಾರತಮ್ಯ ಮಾಡುವುದಿಲ್ಲ ಎಂದು ಬಿಜೆಪಿ ಹೇಳಿದೆ.

ಭಾರತವು ಯಾವುದೇ ಅನಿಯಂತ್ರಿತ ಆಡಳಿತವಿರುವ ದೇಶ ಅಲ್ಲ ಎಂದು ಬಿಜೆಪಿ ನಾಯಕ ರಾಮ್ ಮಾಧವ್ ಹೇಳಿದ್ದಾರೆ. ಜಿಯೋ, ಏರ್‌ಟೆಲ್ ಮತ್ತು ಸ್ಟಾರ್‌ಲಿಂಕ್‌ನಂತಹ ಕಂಪನಿಗಳೂ ಸ್ಪೆಕ್ಟ್ರಮ್ ಹಂಚಿಕೆಗಾಗಿ ಕಾಯುತ್ತಿವೆ ಎಂದು ಅವರು ತಿಳಿಸಿದ್ದಾರೆ.

ಎಲಾನ್ ಮಸ್ಕ್ ವಿರುದ್ಧ ಬಿಜೆಪಿ ನಾಯಕ ರಾಮ್ ಮಾಧವ್ ವಾಗ್ದಾಳಿ:



“ರಾತ್ರೋರಾತ್ರಿ ಏನಾಯಿತು ಎಂಬುದನ್ನು ತಿಳಿದುಕೊಳ್ಳಲು ಇಡೀ ದೇಶ ಬಯಸುತ್ತಿದೆ. ರಾಹುಲ್ ಗಾಂಧಿ ಈ ಬಗ್ಗೆ ದೇಶಕ್ಕೆ ವಿವರಣೆ ನೀಡಬೇಕು. ಸ್ಪೆಕ್ಟ್ರಮ್ ವಿಚಾರಕ್ಕೆ ಬಂದರೆ, ಯುಪಿಎ ಸರ್ಕಾರದ ಅವಧಿಯಲ್ಲಿ ಆ ಪಕ್ಷದ ನಾಯಕರು ಸ್ಪೆಕ್ಟ್ರಮ್‌ಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಯಾವುದೇ ನಿಯಮಗಳ ಪಾಲನೆಯಿಲ್ಲದೆ ಸ್ಪೆಕ್ಟ್ರಮ್ ಮಾರಾಟ ಮಾಡಲಾಗಿತ್ತು. ಇದರಿಂದ ಭಾರಿ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿದ್ದವು. ಇದು ಮೋದಿ ಸರ್ಕಾರ. ಇಲ್ಲಿ ಎಲ್ಲವೂ ಪಾರದರ್ಶಕವಾಗಿ ಮತ್ತು ಯಾವುದೇ ತಾರತಮ್ಯವಿಲ್ಲದೆ ನಡೆಯಲಿದೆ” ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ರಾಮ್ ಮಾಧವ್ ಹೇಳಿದ್ದಾರೆ.

ಸ್ಟಾರ್‌ಲಿಂಕ್ ಉಪಕರಣ ಬಳಸುತ್ತಿದ್ದ ಮಣಿಪುರ ಉಗ್ರಗಾಮಿಗಳು

ದೇಶೀಯ ಉದ್ಯಮಿಗಳ ಹಿತಾಸಕ್ತಿಗಾಗಿ ಸ್ಟಾರ್‌ಲಿಂಕ್‌ನ ಉಪಗ್ರಹ ಇಂಟರ್‌ನೆಟ್‌ ಸೇವೆಗಳಿಗೆ ಅಡ್ಡಿಪಡಿಸಲಾಗುತ್ತಿದೆ ಎಂಬ ಆರೋಪವನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದೆ.

ಸ್ಟಾರ್‌ಲಿಂಕ್ ಪರವಾನಗಿಗೆ ಸಂಬಂಧಿಸಿದ ಅಗತ್ಯ ಪ್ರಕ್ರಿಯೆಗಳನ್ನು ನಿಯಮಾನುಸಾರ ಪಾಲಿಸಲಾಗುತ್ತಿದೆ ಎಂದು ರಾಮ್ ಮಾಧವ್ ಹೇಳಿದ್ದಾರೆ. “ಎಲಾನ್ ಮಸ್ಕ್ ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಅವರು ವ್ಯವಹರಿಸುತ್ತಿರುವುದು ಬನಾನಾ ರಿಪಬ್ಲಿಕ್ (ಅನಿಯಂತ್ರಿತ ಆಡಳಿತ) ಅಲ್ಲ. ಜಾಗತಿಕವಾಗಿ ಗೌರವಿಸಲ್ಪಡುವ ನಾಯಕತ್ವವನ್ನು ಹೊಂದಿರುವ ದೊಡ್ಡ ದೇಶದೊಂದಿಗೆ ಅವರು ವ್ಯವಹರಿಸುತ್ತಿದ್ದಾರೆ. ಈ ದೇಶ ಮತ್ತು ಅದರ ನಾಯಕತ್ವಕ್ಕೆ ಅವರು ಗೌರವ ನೀಡಬೇಕು. ಇಲ್ಲಿ ಸ್ಪೆಕ್ಟ್ರಮ್ ಹಂಚಿಕೆ ಮಾಡಲು ಸೂಕ್ತವಾದ ವ್ಯವಸ್ಥೆಯಿದೆ. ಯಾವುದೇ ತಾರತಮ್ಯವಿಲ್ಲದೆ ಸ್ಪೆಕ್ಟ್ರಮ್ ಹಂಚಿಕೆ ಮಾಡಲಾಗುತ್ತದೆ. ಮಸ್ಕ್ ನಮ್ಮ ಕೆಲವು ನಾಯಕರನ್ನು ಒಲಿಗಾರ್ಕ್‌ಗಳು (ಭಾರತದ ಕೆಲವು ನಾಯಕರನ್ನು ಶ್ರೀಮಂತ ಉದ್ಯಮಿಗಳ ಪರವಾಗಿ ಕೆಲಸ ಮಾಡುವ ಪ್ರಭಾವಶಾಲಿ ವ್ಯಕ್ತಿಗಳು) ಎಂದು ಅಪಹಾಸ್ಯ ಮಾಡಲು ಪ್ರಯತ್ನಿಸಿದ್ದಾರೆ” ಎಂದು ಹೇಳಿದ್ದಾರೆ. ಸ್ಟಾರ್‌ಲಿಂಕ್ ಜತೆಗೆ ಜಿಯೋ ಮತ್ತು ಏರ್‌ಟೆಲ್‌ನಂತಹ ಭಾರತೀಯ ಕಂಪನಿಗಳು ಸಹ ಅನುಮೋದನೆಗಳಿಗಾಗಿ ಕಾಯುತ್ತಿವೆ ಎಂದು ಅವರು ತಿಳಿಸಿದ್ದಾರೆ.

ಏನಿದು ವಿವಾದ?

ಭಾರತದ ಇಂಟರ್‌ನೆಟ್‌ ಮಾರುಕಟ್ಟೆಯನ್ನು ಪ್ರವೇಶಿಸಲು ಎಲಾನ್ ಮಸ್ಕ್ ಅವರ ಸ್ಟಾರ್‌ಲಿಂಕ್ ಕಾಯುತ್ತಿದೆ. ಆದರೆ ಭಾರತ ಸರ್ಕಾರ ಇನ್ನೂ ಅದಕ್ಕೆ ಅನುಮತಿ ನೀಡಿಲ್ಲ. ಇದಕ್ಕೆ ಪ್ರತಿಕ್ರಿಯಿಸಿರುವ ಎಲಾನ್ ಮಸ್ಕ್ ವಿಶ್ವದ 165ಕ್ಕೂ ಹೆಚ್ಚು ದೇಶಗಳಲ್ಲಿ ಸ್ಟಾರ್‌ಲಿಂಕ್‌ ಸಂಸ್ಥೆಗೆ ಪರವಾನಗಿ ಸಿಕ್ಕಿದೆ. ಐದು ವರ್ಷಗಳಿಂದ ಭಾರತ ಸರ್ಕಾರದ ಲೈಸೆನ್ಸ್ ಏಕೆ ಸಿಗುತ್ತಿಲ್ಲ? ಭಾರತದ ನಿಜವಾದ ಬಾಸ್ ಅಂಬಾನಿಯೇ? ಎಂದು ಎಕ್ಸ್‌ನಲ್ಲಿ ಪ್ರಶ್ನಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ರಾಹುಲ್ ಗಾಂಧಿ, ಭಾರತಕ್ಕೆ ಸ್ವಾಗತ ಎಲಾನ್, ನೀವು ಇನ್ನೊಬ್ಬ ವ್ಯಕ್ತಿಯನ್ನು ಕಂಡುಕೊಳ್ಳುವವರೆಗೂ ಕಾಯಿರಿ ಎಂದು ಪ್ರತಿಕ್ರಿಯಿಸಿದ್ದರು.