Crime News: ಸೊಸೆ ಜತೆ ಸೇರಿ ಮಗನನ್ನು ಕೊಂದು ತುಂಡು ತುಂಡಾಗಿ ಕತ್ತರಿಸಿದ ತಾಯಿ
ತಾಯಿ ಮತ್ತು ಸೊಸೆಯಿಂದ ಮಗನ ಭೀಕರ ಹತ್ಯೆ ಮಾಡಿರುವ ಪ್ರಕರಣವೊಂದು ಇಟಲಿಯಲ್ಲಿ ಬೆಳಕಿಗೆ ಬಂದಿದೆ. ಲೊರೆನಾ ವೆನಿಯರ್ ತನ್ನ ಮಗ ಅಲೆಸ್ಸಾಂಡ್ರೊ ವೆನಿಯರ್‌ನನ್ನು ಕೊಂದು, ಶವವನ್ನು ತುಂಡು ಮಾಡಿದ್ದಾಳೆ. ಈ ಕೃತ್ಯದಲ್ಲಿ ಅಲೆಸ್ಸಾಂಡ್ರೋನ ಪತ್ನಿ ಮೈಲಿನ್ ಸಹ ಭಾಗಿಯಾಗಿದ್ದು, ತನಿಖೆ ಸಂದರ್ಭದಲ್ಲಿ ಈ ಆಘಾತಕಾರಿ ವಿಷಯ ಬಯಲಾಗಿದೆ.

ಸಾಂಧರ್ಬಿಕ ಚಿತ್ರ

ರೋಮ್: ಇಟಲಿಯಲ್ಲಿ (Italy) ತಾಯಿಯೇ ಮಗನನ್ನು (Mother) ಭೀಕರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ. 61 ವರ್ಷದ ಲೊರೆನಾ ವೆನಿಯರ್ ಎಂಬ ಮಹಿಳೆ ತನ್ನ 35 ವರ್ಷದ ಮಗ ಅಲೆಸ್ಸಾಂಡ್ರೊ ವೆನಿಯರ್‌ನನ್ನು (Alessandro Venier) ಕೊಂದು, ಶವವನ್ನು ತುಂಡುತುಂಡಾಗಿ ಕತ್ತರಿಸಿದ್ದಾಳೆ. ಈ ಕೃತ್ಯದಲ್ಲಿ ಮಹಿಳೆಯ ಜತೆ ಲೆಸ್ಸಾಂಡ್ರೊನ ಪತ್ನಿ, 30 ವರ್ಷದ ಮೈಲಿನ್ ಕಾಸ್ಟ್ರೊ ಮೊನ್ಸಾಲ್ವೊ ಕೂಡ ಭಾಗಿಯಾಗಿದ್ದಾಳೆ (Crime News). ಮೈಲಿನ್‌ನ ದೂರಿನಿಂದಲೇ ಕೊಲೆಯ ವಿಷಯ ಬೆಳಕಿಗೆ ಬಂದಿದೆ.
ವೃತ್ತಿಯಲ್ಲಿ ನರ್ಸ್ ಆಗಿರುವ ಲೊರೆನಾ, ತನ್ನ ಮಗನನ್ನು ಮೈಲಿನ್‌ನ ಸಹಾಯದಿಂದ ಕೊಂದಿದ್ದೇನೆ ಎಂದು ಒಪ್ಪಿಕೊಂಡಿದ್ದಾಳೆ. ಅಲೆಸ್ಸಾಂಡ್ರೊನ ಶವವನ್ನು ಅವನ ಮನೆಯ ನೆಲಮಾಳಿಗೆಯಲ್ಲಿ ತುಂಡುತುಂಡಾಗಿ ಕತ್ತರಿಸಲಾಗಿತ್ತು. “ನಾನೇ ಅಲೆಸ್ಸಾಂಡ್ರೊನ ಶವವನ್ನು ತುಂಡರಿಸಿದೆ” ಎಂದು ಲೊರೆನಾ ನ್ಯಾಯಾಲಯದಲ್ಲಿ ತಿಳಿಸಿದ್ದಾಳೆ.
ಮೈಲಿನ್ ಜನವರಿಯಲ್ಲಿ ಮಗುವಿಗೆ ಜನ್ಮ ನೀಡಿದ ದಿನದಿಂದಲೂ ಅಲೆಸ್ಸಾಂಡ್ರೊನನ್ನು ಕೊಲ್ಲುವಂತೆ ತನ್ನ ಅತ್ತೆಯನ್ನು ಕೇಳಿಕೊಳ್ಳುತ್ತಿದ್ದಳು ಎಂದು ಹೇಳಿದ್ದಾಳೆ. ಅಲೆಸ್ಸಾಂಡ್ರೊ ಮೈಲಿನ್‌ಗೆ ದೈಹಿಕ ಹಿಂಸೆ, ಅವಮಾನ ಮತ್ತು ಕೊಲೆ ಬೆದರಿಕೆ ಒಡ್ಡುತ್ತಿದ್ದ ಎಂದು ಆರೋಪಿಸಲಾಗಿದೆ. “ಅವನು ಮೈಲಿನ್‌ನ ಹೆರಿಗೆ ನಂತರದ ಖಿನ್ನತೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಈ ಬಗ್ಗೆ ನಾನು ದೂರು ನೀಡಲು ತೀರ್ಮಾನಿಸಿದಾಗ, ಅವನು ನನ್ನ ಬೆನ್ನಿಗೆ ಗುದ್ದಿದ” ಎಂದು ಲೊರೆನಾ ತಿಳಿಸಿದ್ದಾಳೆ. ಅಲೆಸ್ಸಾಂಡ್ರೊ ಕುಟುಂಬ ಸಮೇತ ಕೊಲಂಬಿಯಾಕ್ಕೆ ಹೋಗುವ ಚರ್ಚೆಯಲ್ಲಿದ್ದ. ಆದರೆ ಲೊರೆನಾ ತನ್ನ ಕುಟುಂಬಕ್ಕೆ ಮಗನಿಂದ ಆಗಬಹುದಾದ ಹಾನಿಯ ಬಗ್ಗೆ ಭಯಭೀತಳಾಗಿದ್ದಳು.
ಈ ಸುದ್ದಿಯನ್ನು ಓದಿ: Viral Post: ಭಾರತ ಬಲಿಷ್ಠ ರಾಷ್ಟ್ರವಾಗಿ ಬೆಳೆಯುತ್ತದೆ ಎಂದು ಊಹಿಸುವ ಶತಮಾನದಷ್ಟು ಹಳೆಯ ಕಾರ್ಟೂನ್ ವೈರಲ್
ವರದಿಯ ಪ್ರಕಾರ, ಲೊರೆನಾ ಮತ್ತು ಮೈಲಿನ್ ಅಲೆಸ್ಸಾಂಡ್ರೊಗೆ ಟ್ರಾಂಕ್ವಿಲೈಜರ್ ಮಿಶ್ರಿತ ಲಿಮೊನೇಡ್ ನೀಡಿದರು ಮತ್ತು ಲೊರೆನಾ ಕೆಲಸ ಮಾಡುತ್ತಿದ್ದ ಆಸ್ಪತ್ರೆಯಿಂದ ತಂದ ಎರಡು ಇನ್ಸುಲಿನ್‌ನ ಇಂಜೆಕ್ಷನ್‌ಗಳನ್ನು ಚುಚ್ಚಿದರು. ಆದರೂ ಅವನು ಸಂಪೂರ್ಣವಾಗಿ ಪ್ರಜ್ಞೆ ಕಳೆದುಕೊಳ್ಳದಿದ್ದಾಗ, ದಿಂಬಿನಿಂದ ಉಸಿರುಗಟ್ಟಿಸಿ, ಶೂಲೇಸ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಲಾಯಿತು. ಶವದ ವಾಸನೆಯನ್ನು ಮರೆಮಾಚಲು ಕ್ವಿಕ್‌ಲೈಮ್‌ನಿಂದ ಮುಚ್ಚಲಾಗಿತ್ತು.
ಪತ್ನಿ ಮೈಲಿನ್ ಕೇವಲ ತನ್ನ ಗಂಡನ ಶವದ ತುಂಡುಗಳನ್ನು ಸ್ಥಳಾಂತರಿಸಿದ್ದಾಳೆ ಎಂದು ನ್ಯಾಯಾಲಯದಲ್ಲಿ ಹೇಳಿದ್ದಾಳೆ. ಲೊರೆನಾ ವಿರುದ್ಧ ಕೊಲೆ ಮತ್ತು ಶವವನ್ನು ಮರೆಮಾಚಿದ ಆರೋಪವಿದ್ದು, ಮೈಲಿನ್ ಕೃತ್ಯವನ್ನು ಪ್ರಚೋದಿಸಿದ ಆರೋಪ ಕೇಳಿ ಬಂದಿದೆ.