ORS Label Ban: ಹಣ್ಣಿನ ಪಾನೀಯದ ಮೇಲೆ ಒಆರ್‌ಎಸ್ ಲೇಬಲ್ ಬಳಕೆ ನಿಷೇಧ; FSSAI ಮಹತ್ವದ ಆದೇಶ
ನಿಯಮ ಪಾಲಿಸದ ಪಾನೀಯಗಳಿಗೆ ಒಆರ್‌ಎಸ್ ಲೇಬಲ್ ಬಳಸುವುದನ್ನು ನಿಷೇಧಿಸಲಾಗಿದೆ. ಅತಿಸಾರದಿಂದ ಬಳಲುತ್ತಿರುವ ಮಕ್ಕಳಿಗೆ ಒಆರ್‌ಎಸ್ ಪಾನೀಯ ನೀಡಿದರೂ ತೀವ್ರ ನಿರ್ಜಲೀಕರಣ ಉಂಟಾಗುತ್ತಿದ್ದು, ಈ ಬಗ್ಗೆ ಡಾ. ಶಿವರಂಜನಿ ಸಂತೋಷ್ ಧ್ವನಿ ಎತ್ತುತ್ತಲೇ ಬಂದಿದ್ದು, ಕೊನೆಗೂ ಅವರ ಹೋರಾಟಕ್ಕೆ ಜಯ ಸಿಕ್ಕಿದೆ.

ಸಾಂದರ್ಭಿಕ ಚಿತ್ರ -

ದೆಹಲಿ, ಅ. 18: ಹೈದರಾಬಾದ್ ಮೂಲದ ಮಕ್ಕಳ ತಜ್ಞೆ ಡಾ. ಶಿವರಂಜನಿ ಸಂತೋಷ್ (Dr. Sivaranjani Santosh) ಅವರ ಸುಮಾರು 8 ವರ್ಷಗಳ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದ್ದು, ನಿಯಮ ಪಾಲಿಸದ ಪಾನೀಯಗಳಿಗೆ ಒಆರ್‌ಎಸ್ (Oral Rehydration Solution) ಲೇಬಲ್ ಬಳಸುವುದನ್ನು ನಿಷೇಧಿಸಲಾಗಿದೆ. ಅತಿಸಾರದಿಂದ ಬಳಲುತ್ತಿರುವ ಮಕ್ಕಳಿಗೆ ಒಆರ್‌ಎಸ್ ಪಾನೀಯ ನೀಡಿದರೂ ತೀವ್ರ ನಿರ್ಜಲೀಕರಣ ಉಂಟಾಗುತ್ತಿದ್ದು, ಈ ಬಗ್ಗೆ ಡಾ. ಶಿವರಂಜನಿ ಸಂತೋಷ್ ಧ್ವನಿ ಎತ್ತುತ್ತಲೇ ಬಂದಿದ್ದಾರೆ. ಇದೀಗ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಯಾವುದೇ ಹಣ್ಣುಗಳನ್ನು ಆಧರಿಸಿ ತಯಾರಿಸುವ ಪಾನೀಯಕ್ಕೆ ಒಆರ್‌ಎಸ್ ಎಂದು ಲೇಬಲ್ ಅಳವಡಿಸುವುದನ್ನು ನಿಷೇಧಸಿದೆ.
ಮೆಡಿಕಲ್‌ಗಳಲ್ಲಿ ಮಾರಾಟವಾಗುವ, ಸೆಲೆಬ್ರಿಟಿಗಳು ಪ್ರಚಾರ ನಡೆಸುವ, ಆಕರ್ಷಕ ಪ್ಯಾಕ್‌ಗಳಲ್ಲಿ ಮಾರಾಟವಾಗುವ ಒಆರ್‌ಎಸ್ ಹೆಸರಿನ ಪಾನೀಯಗಳು ದೇಹಕ್ಕೆ ಎನರ್ಜಿ ನೀಡುತ್ತವೆ ಎಂದು ಸುಳ್ಳು ಪ್ರಚಾರ ನೀಡಲಾಗುತ್ತಿದೆ. ಆದರೆ ಅವು ಅತಿಯಾದ ಸಕ್ಕರೆ ಅಂಶಗಳಿಂದ ಕೂಡಿವೆ. ಕೆಲವೊಮ್ಮೆ ಅನುಮೋದಿತ ಪ್ರಮಾಣಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿರುತ್ತದೆ ಎನ್ನುವುದು ಡಾ. ಶಿವರಂಜನಿ ಅವರ ವಾದ. ಈ ಕಾರಣಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದ ಸೂತ್ರಗಳನ್ನು ಒಳಗೊಂಡಿರದ ಪಾನೀಯಗಳಿಗೆ ಒಆರ್‌ಎಸ್ ಲೇಬಲ್ ಬಳಸಬಾರದು ಎಂದು ಹೇಳುತ್ತಲೇ ಬಂದಿದ್ದಾರೆ.
ಡಾ. ಶಿವರಂಜನಿ ಸಂತೋಷ್ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್:
ಈ ಸುದ್ದಿಯನ್ನೂ ಓದಿ: Drink Coffee: ಕಾಫಿ ಪ್ರಿಯರೇ? ಚಟವಾಗದಿರಲಿ ನಿಮ್ಮ ಅಭ್ಯಾಸ!
ಒಆರ್‌ಎಸ್ ಎಂದರೇನು?
ಎಳೆಯ ಮಕ್ಕಳಲ್ಲಿ ಕಂಡುಬರುವ ಅತಿಸಾರ ಮತ್ತು ಅದರಿಂದ ಉಂಟಾಗುವ ನಿರ್ಜಲೀಕರಣವನ್ನು ತಡೆಗಟ್ಟಲು ಬಳಸಲಾಗುವ ಸುರಕ್ಷಿತ ಪದಾರ್ಥ ಒಆರ್‌ಎಸ್. ಇದರಲ್ಲಿ ಉಪ್ಪು, ಸಕ್ಕರೆ, ಪೊಟ್ಯಾಶಿಯಂ ಮತ್ತು ಇತರ ಖನಿಜಗಳು ಸರಿಯಾದ ಪ್ರಮಾಣದಲ್ಲಿ ಬೆರೆತಿರುತ್ತದೆ. ಇದು ಅತಿಸಾರದಿಂದ ದೇಹ ಕಳೆದುಕೊಂಡ ದ್ರವ ಪದಾರ್ಥವನ್ನು ಮರಳಿ ತುಂಬುವಂತೆ ಮಾಡುತ್ತದೆ. ಆದರೆ ಕೆಲವು ಸಮಯಗಳಿಂದ ಒಆರ್‌ಎಸ್ ಹೆಸರಿನಲ್ಲಿ ಸಕ್ಕರೆ ಅಂಶ ಅಧಿಕವಿರುವ ಪಾನೀಯ ಮಾರಾಟ ಮಾಡಲಾಗುತ್ತಿದೆ.
ಹೈದರಾಬಾದ್ ಮೂಲದ ವೈದ್ಯೆ ಡಾ. ಶಿವರಂಜನಿ ಕಳೆದ 8 ವರ್ಷಗಳಿಂದ ನಕಲಿ ಒಆರ್‌ಎಸ್ ಲೇಬಲ್ ಬಳಕೆ ಕುರಿತು ಕಾನೂನು ಹೋರಾಟ ಮಾಡುತ್ತಲೇ ಬಂದಿದ್ದಾರೆ. ಇದೀಗ ಅವರ ಹೋರಾಟಕ್ಕೆ ಜಯ ಸಿಕ್ಕಿದ್ದು, ಹಣ್ಣಿನ ಪಾನೀಯ ಮೇಲೆ ಒಆರ್‌ಎಸ್ ಎಂದು ಲೇಬಲ್ ಬಳಕೆ ಮಾಡುವುದನ್ನು ಎಫ್‌ಎಸ್‌ಎಸ್‌ಎಐ ನಿಷೇಧಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದ ಸೂತ್ರಗಳನ್ನು ಒಳಗೊಂಡ ಪಾನೀಯಕ್ಕೆ ಮಾತ್ರ ಒಆರ್‌ಎಸ್ ಎಂದು ಲೇಬಲ್ ಬಳಕೆ ಮಾಡಬಹುದು.
ಒಆರ್‌ಎಸ್ ಔಷಧ. ಇದು ತಂಪು ಪಾನೀಯವಲ್ಲ ಎನ್ನುತ್ತಾರೆ ಡಾ. ಶಿವರಂಜನಿ. ಹಣ್ಣಿನ ಪಾನೀಯ ಸೇರಿದಂತೆ ಇತರ ಪಾನೀಯಗಳ ಮೇಲೆ ಒಆರ್‌ಎಸ್ ಎಂದು ಲೇಬಲ್ ಹಾಕಿ ಮಾರಾಟ ಮಾಡುತ್ತಿರುವುದು ನಿಯಮ ಉಲ್ಲಂಘನೆಯಾಗಿದೆ. ಇಂತಹ ಪಾನೀಯಗಳು ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ 2006 ಅನ್ನು ಉಲ್ಲಂಘಿಸುತ್ತದೆ ಮತ್ತು ತಪ್ಪು ಅಭಿಪ್ರಾಯವನ್ನು ರವಾನಿಸುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಒಆರ್‌ಎಸ್ ಬದಲು ತಮ್ಮ ಪಾನೀಯದಲ್ಲಿರುವ ಸೂತ್ರಗಳು, ಅಂಶಗಳನ್ನು ಆಧರಿಸಿ ಎನರ್ಜಿ ಡ್ರಿಂಕ್, ಹೈಡ್ರೇಶನ್ ಡ್ರಿಂಕ್, ಎಲೆಕ್ಟ್ರೋಲೈಟ್ ಡ್ರಿಂಕ್ ಎಂದು ಹೆಸರಿಸಲು ಎಫ್‌ಎಸ್‌ಎಸ್‌ಎಐ ಸೂಚಿಸಿದೆ.