Period Postponing Pills: ಮುಟ್ಟು ವಿಳಂಬಕ್ಕೆ ತೆಗೆದುಕೊಂಡ ಮಾತ್ರೆಯಿಂದ ಯುವತಿಯ ಜೀವವೇ ಹೋಯ್ತು!
ಮನೆಯಲ್ಲಿ ಪೂಜೆ ಇದ್ದ ಕಾರಣ ಮುಟ್ಟು ವಿಳಂಬವಾಗುವುದಕ್ಕೆ ವಿದ್ಯಾರ್ಥಿನಿಯೊಬ್ಬಳು ತೆಗೆದುಕೊಂಡ ಮಾತ್ರೆ ಆಕೆಯ ಜೀವಕ್ಕೆ ಕುತ್ತು ತಂದಿದೆ. ಈ ಕುರಿತು ಆಗಸ್ಟ್ 14ರಂದು ರೀಬೂಟಿಂಗ್ ದಿ ಬ್ರೈನ್ ಪಾಡ್‌ಕ್ಯಾಸ್ಟ್‌ನಲ್ಲಿ ನಾಳೀಯ ಶಸ್ತ್ರಚಿಕಿತ್ಸಕ ಡಾ. ವಿವೇಕಾನಂದ್, ನರಶಸ್ತ್ರಚಿಕಿತ್ಸಕ ಡಾ. ಶರಣ್ ಶ್ರೀನಿವಾಸನ್ ಹಂಚಿಕೊಂಡಿರುವ ಮಾಹಿತಿ ಇಲ್ಲಿದೆ.

ಸಾಂದರ್ಭಿಕ ಚಿತ್ರ

ಮುಂಬೈ: ಮನೆಯಲ್ಲಿ ಪೂಜೆ ಇದ್ದ ಕಾರಣ ಮುಟ್ಟಾಗುವುದನ್ನು (Period) ತಡೆಯಲು 18 ವರ್ಷದ ವಿದ್ಯಾರ್ಥಿನಿಯೊಬ್ಬಳು ತೆಗೆದುಕೊಂಡ ಮಾತ್ರೆ (Period Postponing Pills) ಅವಳ ಜೀವಕ್ಕೆ ಕುತ್ತು ತಂದಿತ್ತು. ಈ ಕುರಿತು ನಾಳೀಯ ಶಸ್ತ್ರಚಿಕಿತ್ಸಕ (Vascular surgeon) ಡಾ. ವಿವೇಕಾನಂದ್, ನರಶಸ್ತ್ರಚಿಕಿತ್ಸಕ (Neurosurgeon) ಡಾ. ಶರಣ್ ಶ್ರೀನಿವಾಸನ್ ರೀಬೂಟಿಂಗ್ ದಿ ಬ್ರೈನ್ ಪಾಡ್‌ಕ್ಯಾಸ್ಟ್‌ನ ಸಂಚಿಕೆಯಲ್ಲಿ ಹಂಚಿಕೊಂಡಿದ್ದಾರೆ. ಮುಟ್ಟಾಗುವುದನ್ನು ತಡೆಯಲು ವಿದ್ಯಾರ್ಥಿನಿ ತೆಗೆದುಕೊಂಡ ಮಾತ್ರೆ ಆಕೆಯಲ್ಲಿ ಡೀಪ್ ವೇನ್ ಥ್ರಂಬೋಸಿಸ್ ಅನ್ನು ಉಂಟು ಮಾಡಿದೆ. ಇದೊಂದು ಗಂಭೀರ ವೈದ್ಯಕೀಯ ಸ್ಥಿತಿಯಾಗಿದ್ದು, ಇದರಲ್ಲಿ ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಉಂಟಾಗುತ್ತದೆ. ಆರಂಭಿಕ ರೋಗ ನಿರ್ಣಯ ಮತ್ತು ಚಿಕಿತ್ಸೆಯಿಂದ ಚೇತರಿಸಿಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.
ಆಗಸ್ಟ್ 14ರಂದು ರೀಬೂಟಿಂಗ್ ದಿ ಬ್ರೈನ್ ಪಾಡ್‌ಕ್ಯಾಸ್ಟ್‌ನ ಸಂಚಿಕೆಯಲ್ಲಿ ಮಾತನಾಡಿರುವ ನಾಳೀಯ ಶಸ್ತ್ರಚಿಕಿತ್ಸಕ ಡಾ. ವಿವೇಕಾನಂದ್, ನರಶಸ್ತ್ರಚಿಕಿತ್ಸಕ ಡಾ. ಶರಣ್ ಶ್ರೀನಿವಾಸನ್, ಡೀಪ್ ವೇನ್ ಥ್ರಂಬೋಸಿಸ್ (DVT)ನ ಅಪಾಯದ ಬಗ್ಗೆ ವಿವರಿಸಿದರು. ತೀವ್ರ ಕಾಲು ನೋವು ಮತ್ತು ಊತದಿಂದ ಬಳಲುತ್ತಿದ್ದ ಯುವತಿಯು ಚಿಕಿತ್ಸೆಗೆ ಬರುವಾಗ ತುಂಬಾ ತಡವಾಗಿತ್ತು ಎಂಬುದಾಗಿ ಡಾ. ವಿವೇಕಾನಂದ್ ಹೇಳಿದ್ದಾರೆ.
ಮುಟ್ಟು ಮುಂದೂಡುವ ಮಾತ್ರೆಗಳನ್ನು ಸೇವಿಸಿದ ಯುವತಿಯಲ್ಲಿ ಡೀಪ್ ವೇನ್ ಥ್ರಂಬೋಸಿಸ್ ಇರುವುದು ಪತ್ತೆಯಾಗಿತ್ತು. ಇದು ಆಕೆಯ ಹೊಕ್ಕುಳಿಗೆ ವಿಸ್ತರಿಸಿತ್ತು. ಗಂಭೀರ ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗಿತ್ತು. ತಕ್ಷಣ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವಂತೆ ವೈದ್ಯರು ಸೂಚಿಸಿದರು. ಆದರೆ ಆಕೆಯ ತಂದೆ ಅದನ್ನು ವಿಳಂಬ ಮಾಡಿದರು. ಬಳಿಕ ರಾತ್ರಿಯೇ ಆಕೆಯನ್ನು ತುರ್ತು ವಿಭಾಗಕ್ಕೆ ದಾಖಲಿಸಲಾಯಿತು. ಆದರೆ ಅವಳು ಮತ್ತೆ ಉಸಿರಾಡಲಿಲ್ಲ ಎಂದು ಡಾ. ವಿವೇಕಾನಂದ್ ಅವರು ನೆನಪಿಸಿಕೊಂಡರು.
ಯುವತಿಗೆ ಏನಾಗಿತ್ತು?
18 ವರ್ಷದ ಯುವತಿಯ ತನ್ನ ಸ್ನೇಹಿತರೊಂದಿಗೆ ಕ್ಲಿನಿಕ್‌ಗೆ ಬಂದಳು. ತೊಡೆ, ಕಾಲು ನೋವು, ಊತ ಇತ್ತು. ತೀವ್ರ ಅಸ್ವಸ್ಥವಾಗಿದ್ದಳು. ಪೂಜೆ ಇದ್ದ ಕಾರಣ ಮುಟ್ಟನ್ನು ಮುಂದೂಡಲು ಕೆಲವು ಹಾರ್ಮೋನುಗಳ ಮಾತ್ರೆಗಳನ್ನು ತೆಗೆದುಕೊಂಡಿರುವುದಾಗಿ ಆಕೆ ಹೇಳಿದ್ದರಿಂದ ಶೀಘ್ರದಲ್ಲೇ ರೋಗ ನಿರ್ಣಯ ಮಾಡಲಾಯಿತು. ಕೂಡಲೇ ಆಕೆಗೆ ಸ್ಕ್ಯಾನ್ ಮಾಡಿಸಲಾಯಿತು. ರಕ್ತ ಹೆಪ್ಪುಗಟ್ಟುವಿಕೆ ಹೊಕ್ಕುಳಿನ ಹಂತದವರೆಗೆ ತಲುಪಿದ್ದು, ಕೂಡಲೇ ಮನೆಯವರೊಂದಿಗೆ ಮಾತನಾಡಲು ಕರೆದು ಆಕೆಯ ಪರಿಸ್ಥಿತಿಯನ್ನು ವಿವರಿಸಿದೆ. ಆದರೆ ಆಕೆಯ ತಂದೆ ನಾಳೆ ನಾವು ಆಸ್ಪತ್ರೆಗೆ ದಾಖಲಿಸುತ್ತೇವೆ ಎಂದು ಹೇಳಿದರು ಎಂದು ವಿವರಿಸಿದ್ದಾರೆ ಡಾ. ವಿವೇಕಾನಂದ್.
ಇದನ್ನೂ ಓದಿ: 193 ಕೆಜಿ ತೂಕ ಎತ್ತುವ ಮೂಲಕ ಚಿನ್ನದ ಪದಕ ಮುಡಿಗೇರಿಸಿಕೊಂಡ ಮೀರಾಬಾಯಿ ಚಾನು!
ಮಧ್ಯರಾತ್ರಿ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಕರೆ ಬಂತು. ಕೂಡಲೇ ಯುವತಿಯನ್ನು ತುರ್ತು ವಿಭಾಗಕ್ಕೆ ಕರೆದೊಯ್ಯಲಾಯಿತು. ಆದರೆ ಅವಳು ಉಸಿರಾಡಲಿಲ್ಲ. ತುಂಬ ದುಃಖವಾಯಿತು. ನಾನು ಅವಳ ತಂದೆಯ ಕಾಲರ್ ಹಿಡಿದು ಅವಳನ್ನು ಆಸ್ಪತ್ರೆಗೆ ದಾಖಲಿಸಬೇಕಿತ್ತು ಎಂದು ಯೋಚಿಸುವಂತೆ ಮಾಡಿತ್ತು. ಆದರೆ ತುಂಬಾ ತಡವಾಗಿತ್ತು ಎಂದು ಹೇಳಿದರು.
ರೀಬೂಟಿಂಗ್ ದಿ ಬ್ರೈನ್‌ನ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಡಾ. ವಿವೇಕಾನಂದ್ ಅವರು ಡಾ. ಶರಣ್ ಶ್ರೀನಿವಾಸನ್ ಅವರೊಂದಿಗೆ ಹೃದಯವಿದ್ರಾವಕ ಕಥೆಯನ್ನು ಹಂಚಿಕೊಂಡಿದ್ದಾರೆ.