ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Snoring Symptoms: ಗೊರಕೆ ನಿಲ್ಲಿಸಬೇಕೆ?: ಇಲ್ಲಿವೆ ಸಲಹೆಗಳು!

Health Tips: ಉಳಿದವರ ನಿದ್ದೆ ಹಾಳು ಮಾಡುವವರು ಎಂಬ ಅಪಖ್ಯಾತಿಗೆ ಈಡಾಗುವ ಗೊರಕೆ ಹೊಡೆಯುವವರ ನಿದ್ದೆಯೂ ಸಾಂಗವಾಗಿ ಇರುವುದಿಲ್ಲ ಎನ್ನುತ್ತವೆ ಅಧ್ಯಯನಗಳು. ಇದರಿಂದಾಗಿ ಹಗಲಿಗೂ ಮುಗಿಯದ ಸುಸ್ತು, ಕಿರಿಕಿರಿ ಅವರನ್ನೂ ಕಾಡುವುದಂತೆ. ಅದಿಲ್ಲದಿದ್ದರೆ ಸ್ಲೀಪ್‌ ಅಪ್ನಿಯಾದಂಥ ಸಮಸ್ಯೆಗಳು ಗೊರಕೆಯ ಹಿಂದಿನ ಕಾರಣವಾಗಿರಬಹುದು. ಆದರೆ ಕೆಲವು ಬದಲಾವಣೆ ಗಳನ್ನು ಜೀವನಶೈಲಿಯಲ್ಲಿ ಮಾಡಿಕೊಳ್ಳುವುದರಿಂದ ಗೊರಕೆ ಹೊಡೆಯುವವರನ್ನು ಸುಮ್ಮನಾಗಿಸಲು ಸಾಧ್ಯ ಎನ್ನುತ್ತಾರೆ ತಜ್ಞರು. ಹಾಗಾಗಿ ʻಯಕಶ್ಚಿತ್‌ ಗೊರಕೆʼ ಎಂದು ಉಪೇಕ್ಷೆ ಮಾಡುವ ಬದಲು, ಗೊರಕೆ ಕಡಿಮೆ ಮಾಡುವಂಥ ಟಿಪ್ಸ್‌ ಇಲ್ಲಿವೆ..

ಗೊರಕೆ ನಿಲ್ಲಿಸಲು ಇಲ್ಲಿದೆ ಸಲಹೆ!

ಗೊರಕೆ ನಿಲ್ಲಿಸಲು ಇಲ್ಲಿದೆ ಸಲಹೆ -

Profile
Pushpa Kumari Nov 6, 2025 9:40 AM

ಬೆಂಗಳೂರು: ಈಗಿನ ಜನಗಳೇ ಸೂಕ್ಷ್ಮ, ಅವರಿಗಿಂತ ಅವರ ನಿದ್ದೆ ಇನ್ನೂ ಸೂಕ್ಷ್ಮ! ದಿನವಿಡೀ ಸ್ಕ್ರೀನ್‌ ನೋಡಿ ಆಯಾಸಗೊಂಡ ಕಣ್ಣುಗಳನ್ನು ಬಲವಂತಕ್ಕೆ ಮುಚ್ಚಿದರೂ ನಿದ್ದೆ ಬರುವುದಿಲ್ಲ; ಬೇಡದ ಕಸವನ್ನೆಲ್ಲಾ ತುಂಬಿಕೊಂಡ ತಲೆ ಅವಿಶ್ರಾಂತವಾಗಿ ಯೋಚಿಸುತ್ತಲೇ ಇರುತ್ತದೆ. ಇಂಥ ಹೊತ್ತಿನಲ್ಲಿ ಗಡಿಯಾರದ ಟಿಕ್‌ ಟಿಕ್‌, ಫೋನಿಗೆ ಒತ್ತರಿಸಿಕೊಂಡು ಬರುವ ಸಂದೇಶಗಳು, ಯಾರದ್ದೂ ಮನೆಯೆದುರು ಬಂದು ನಿಂತ ಕಾರು, ಯಾವುದೋ ರಸ್ತೆಯಲ್ಲಿ ಓಡಾಡುವ ಬೈಕು, ಮೇಲಿನ ಮನೆಯಲ್ಲಿ ನಿದ್ದೆಯಲ್ಲೇ ಕಿಟ್ಟನೆ ಕಿರುಚುವ ಕಂದಮ್ಮ- ಹೀಗೆ ಲೋಕದ ಎಲ್ಲರೂ ತಮ್ಮ ನಿದ್ದೆ ಹಾಳು ಮಾಡುವುದಕ್ಕೇ ಹುಟ್ಟಿದ್ದಾರೆ ಎನಿಸುತ್ತದೆ. ಇಷ್ಟಾಗಿ ಈಗೆಲ್ಲೋ ಸ್ವಲ್ಪ ಕಣ್ಣಿಗೆ ನಿದ್ದೆ ಹತ್ತುತ್ತಿದೆ ಎನ್ನುವಾಗ ಪಕ್ಕದಲ್ಲಿ ಮಲಗಿದವರು ಗೊರಕೆ ಹೊಡೆಯಲು (Snoring Symptoms) ಪ್ರಾರಂಭಿಸಿದರೆ?

ಗೊರೆಯುವವರು ಹೊಮ್ಮಿಸುವ ಶಬ್ದವೇನು ಸಾಮಾನ್ಯದ್ದೇ? ಈ ಗೊರಕಾಸುರರಿಂದ ಹಾಳಾಗುವ ಉಳಿದವರ ನಿದ್ದೆಯನ್ನು ಅಳೆದು, ಇದರಿಂದ ಬರುವ ಆರೋಗ್ಯ ಸಮಸ್ಯೆಗಳು, ಅದರಿಂದಾಗುವ ಕೆಲಸದ ನಷ್ಟ- ಇತ್ಯಾದಿಗಳ ರಾಷ್ಟ್ರವಾರು ಸರಾಸರಿಯನ್ನು ಲೆಕ್ಕ ಹಾಕಿದರೆ- ದೇಶಕ್ಕಾಗುವ ಆ ಘೋರ ನಷ್ಟವನ್ನು ತುಂಬುವುದಾದರೂ ಹೇಗೆ? ತುಂಬುವವರು ಯಾರು? ಸದಾ ಕಾಲ ಕೊರತೆ ಅಯವ್ಯಯವನ್ನೇ ಕಾಣುವ ನಮ್ಮ ದೇಶದಲ್ಲಿ ಇದಕ್ಕೆಲ್ಲಾ ಆರ್ಥಿಕ ಅನುದಾನ ತರುವುದಾದರೂ ಎಲ್ಲಿಂದ? ಯಾಕೋ ಮ್ಯಾಟರು ಗಂಭೀರವಾಯಿತು ಎನಿಸಿದರೆ- ವಿಷಯ ಇರುವುದೇ ಹಾಗೆ!

ಇದನ್ನೂ ಓದಿ:Health Tips: ಮಹಿಳೆಯರಿಗೆ ಬೇಕಾಗುವ ಈ ಸತ್ವಗಳು ನಿಮ್ಮ ಆಹಾರದಲ್ಲೂ ಇದೆಯೇ?

ಉಳಿದವರ ನಿದ್ದೆ ಹಾಳು ಮಾಡುವವರು ಎಂಬ ಅಪಖ್ಯಾತಿಗೆ ಈಡಾಗುವ ಗೊರಕೆ ಹೊಡೆ ಯುವವರ ನಿದ್ದೆಯೂ ಸಾಂಗವಾಗಿ ಇರುವುದಿಲ್ಲ ಎನ್ನುತ್ತವೆ ಅಧ್ಯಯನಗಳು. ಇದರಿಂದಾಗಿ ಹಗಲಿಗೂ ಮುಗಿಯದ ಸುಸ್ತು, ಕಿರಿಕಿರಿ ಅವರನ್ನೂ ಕಾಡುವುದಂತೆ. ಅದಿಲ್ಲದಿದ್ದರೆ ಸ್ಲೀಪ್‌ ಅಪ್ನಿ ಯಾದಂಥ ಸಮಸ್ಯೆಗಳು ಗೊರಕೆಯ ಹಿಂದಿನ ಕಾರಣವಾಗಿರಬಹುದು. ಆದರೆ ಕೆಲವು ಬದಲಾವಣೆ ಗಳನ್ನು ಜೀವನಶೈಲಿಯಲ್ಲಿ ಮಾಡಿಕೊಳ್ಳುವುದರಿಂದ ಗೊರಕೆ ಹೊಡೆಯುವವರನ್ನು ಸುಮ್ಮನಾಗಿ ಸಲು ಸಾಧ್ಯ ಎನ್ನುತ್ತಾರೆ ತಜ್ಞರು. ಹಾಗಾಗಿ ʻಯಕಶ್ಚಿತ್‌ ಗೊರಕೆʼ ಎಂದು ಉಪೇಕ್ಷೆ ಮಾಡುವ ಬದಲು, ಗೊರಕೆ ಕಡಿಮೆ ಮಾಡುವಂಥ ಟಿಪ್ಸ್‌ ಇಲ್ಲಿವೆ ಕೇಳಿ.

ತೂಕ ನಿಯಂತ್ರಿಸಿ: ಅಗತ್ಯಕ್ಕಿಂತ ಹೆಚ್ಚಿನ ದೇಹ ತೂಕವಿದ್ದರೆ, ತೂಕ ಇಳಿಸುವುದು ಅಗತ್ಯ. ಕುತ್ತಿಗೆಯ ಸುತ್ತ ಕೊಬ್ಬು ಹೆಚ್ಚಿದ್ದರೆ, ಶ್ವಾಸನಾಳಗಳ ಮೇಲೆ ಒತ್ತಡ ಹೆಚ್ಚಿ, ಆ ವ್ಯಕ್ತಿ ಗೊರಕೆ ಹೊಡೆಯಬಹುದು. ಸರಿಯಾದ ಆಹಾರ ಕ್ರಮ ಮತ್ತು ನಿಯಮಿತವಾದ ವ್ಯಾಯಾಮದಿಂದ ತೂಕ ಇಳಿಕೆ ಮಾತ್ರವೇ ಅಲ್ಲ, ನಿದ್ದೆಯ ಗುಣಮಟ್ಟವೂ ವೃದ್ಧಿಸುತ್ತದೆ. ಒಟ್ಟಾರೆ ಆರೋಗ್ಯ ನಳನಳಿಸುತ್ತದೆ.

ಅಲ್ಕೋಹಾಲ್‌ ಬೇಡ: ನಶೆ ಹೆಚ್ಚಾದರೆ ನಿದ್ರೆ ಹೆಚ್ಚು ಎಂಬ ಕಲ್ಪನೆ ಹಲವರಲ್ಲಿದೆ. ವಾಸ್ತವದಲ್ಲಿ, ಆರೋಗ್ಯವನ್ನು ಹಲವು ರೀತಿಯಲ್ಲಿ ಏರುಪೇರು ಮಾಡುತ್ತವೆ ಅಲ್ಕೋಹಾಲ್‌ನಂಥವು. ಕ್ರಮೇಣ ನಶೆಯಲ್ಲೇ ತೇಲಾಡಿದರೂ ನಿದ್ದೆ ಮಾತ್ರ ಸುಳಿಯುವುದಿಲ್ಲ. ಹಾಗಾಗಿ ಮೊದಲು ಬಾಟಲಿ ಬಿಸಾಡಿ. ಬದಲಿಗೆ, ಆರೋಗ್ಯಕರ ರೀತಿಯಲ್ಲಿ ಶರೀರಕ್ಕೆ ಜಲಪೂರಣ ಮಾಡಿ. ಸಾಕಷ್ಟು ನೀರು ಕುಡಿಯಿರಿ, ಮಲಗುವ ಮುನ್ನ ಯಾವುದಾದರೂ ಹರ್ಬಲ್‌ ಚಹಾ ಸೇವಿಸಿ.

ಮಲಗುವ ಭಂಗಿ: ಮುಖ ಮೇಲೆ ಮಾಡಿ, ನೇರವಾಗಿ ಮಲಗಿದರೆ ಗೊರೆಯುವ ಸಾಧ್ಯತೆ ಹೆಚ್ಚು. ಹಾಗಾಗಿ ಮಗ್ಗುಲಾಗಿ ಮಲಗಿ, ಮಗುಚಿ ಮಲಗುವ ಅಭ್ಯಾಸವಿದ್ದರೂ ತೊಂದರೆಯಿಲ್ಲ. ಹೀಗೆ ಮಗ್ಗುಲಾಗಿ ಮಲಗುವುದರಿಂದ ಶ್ವಾಸನಾಳಗಳು ಕಟ್ಟಕೊಳ್ಳದೆ, ಉಸಿರಾಟ ಸರಾಗವಾಗುತ್ತದೆ. ನಿದ್ದೆಯನ್ನು ಆರಾಮದಾಯಕ ಮಾಡಿಕೊಳ್ಳಲು ಅಕ್ಕಪಕ್ಕದಲ್ಲಿ ದಿಂಬಿರಿಸಿಕೊಳ್ಳಿ.

ನಿಯಮಿತವಾಗಿರಿ: ಆದಷ್ಟೂ ನಿಗದಿತ ಸಮಯಕ್ಕೆ ಮಲಗಿ-ಏಳಿ. ಇದರಿಂದ ದೇಹಕ್ಕೆ ತನ್ನ ಟೈಮ್‌ಟೇಬಲ್‌ ಹಾಕಿಕೊಳ್ಳಲು ಸುಲಭವಾಗುತ್ತದೆ. ಮಲಗುವ ಕೋಣೆಯನ್ನು ಶುಚಿಯಾಗಿ, ಗಾಳಿ-ಬೆಳಕು ಬರುವಂತೆ ಇರಿಸಿಕೊಳ್ಳಿ. ರಾತ್ರಿಯ ಸಮಯದಲ್ಲಿ, ಅಗತ್ಯವಿದ್ದರೆ, ಮಂದ ಬೆಳಕು ಸಾಕು. ಅತೀ ಚಳಿ ಅಥವಾ ತುಂಬಾ ಸೆಕೆಯೂ ನಿದ್ದೆಯನ್ನು ದೂರ ಓಡಿಸುತ್ತದೆ. ಗೆಜೆಟ್‌ಗಳನ್ನು ಹತ್ತಿರ ಎಲ್ಲೂ ಇರಿಸಿಕೊಳ್ಳಬೇಡಿ. ನಿಶ್ಶಬ್ದವಾಗಿ ಕಣ್ತುಂಬಾ ನಿದ್ದೆ ಮಾಡಿ, ಮನೆಯಲ್ಲಿ ಉಳಿದವರಿಗೂ ನಿದ್ದೆ ಮಾಡಲು ಬಿಡಿ!