Asafoetida: ನಕಲಿ ಇಂಗನ್ನು ಗುರುತಿಸುವುದು ಹೇಗೆ?
ರುಚಿ, ಘಮ, ಆರೋಗ್ಯದ ಲಾಭ ಸೇರಿದಂತೆ ಹಲವು ಸದ್ಗುಣಗಳನ್ನು ಹೊಂದಿರುವ ಇಂಗು ಭಾರತೀಯ ಅಡುಗೆ ಮನೆಗಳ ಅವಿ ಭಾಜ್ಯ ಅಂಗ. ಆದರೆ ಅಡುಗೆಮನೆಯ ಎಲ್ಲ ಪರಿಕರಗಳಲ್ಲಿ ಇದ್ದಂತೆ, ಇಂಗಿಗೂ ನಕಲಿಗಳ ಹಾವಳಿ ತಪ್ಪಿದ್ದಲ್ಲ. ಹಾಗಾದರೆ ನಕಲಿ ಮತ್ತು ಅಸಲಿ ಇಂಗುಗಳ ನಡುವೆ ಗುರುತು ಹಿಡಿಯುವುದು ಹೇಗೆ?


ನವದೆಹಲಿ: ಇಂಗು, ತೆಂಗು ಇದ್ದರೆ ಮಂಗಮ್ಮನ ಅಡುಗೆಯೂ ರುಚಿʼ ಎನ್ನುತ್ತದೊಂದು ಗಾದೆ. ರುಚಿ, ಘಮ, ಆರೋಗ್ಯದ ಲಾಭ ಸೇರಿದಂತೆ ಹಲವು ಸದ್ಗುಣಗಳನ್ನು ಹೊಂದಿರುವ ಇಂಗು ಭಾರತೀಯ ಅಡುಗೆ ಮನೆಗಳ ಅವಿ ಭಾಜ್ಯ ಅಂಗ. ಆದರೆ ಅಡುಗೆಮನೆಯ ಎಲ್ಲ ಪರಿಕರಗಳಲ್ಲಿ ಇದ್ದಂತೆ, ಇಂಗಿಗೂ (Asafoetida) ನಕಲಿಗಳ ಹಾವಳಿ ತಪ್ಪಿದ್ದಲ್ಲ. ಹಾಗಾದರೆ ನಕಲಿ ಮತ್ತು ಅಸಲಿ ಇಂಗುಗಳ ನಡುವೆ ಗುರುತು ಹಿಡಿಯುವುದು ಹೇಗೆ? ನಕಲಿಗಳ ಬಳಕೆಯಿಂದ ರುಚಿ ಮತ್ತು ಘಮ ಖೋತಾ, ಆರೋಗ್ಯವೂ ಗೋತಾ ಎನ್ನುವಂತಾದರೆ ಏನು ಕತೆ? ಅಸಲಿ ಇಂಗನ್ನು ಗುರುತಿಸುವುದು ಹೇಗೆ?
ಇಂಥ ಸಂದರ್ಭಗಳಲ್ಲಿ ಖರೀದಿಸುವಾಗ ಬಣ್ಣದ ಪ್ಯಾಕಿಂಗ್ಗಿಂತ ಹೆಚ್ಚಿನದನ್ನು ನೋಡಬೇಕಾಗುತ್ತದೆ. ಉತ್ಪನ್ನದ ಘಮ, ಬಣ್ಣ ಇತ್ಯಾದಿಗಳೆಲ್ಲ ತಮ್ಮ ಸಾಚಾತನದ ಬಗ್ಗೆ ಬಹಳಷ್ಟು ಹೇಳಬಲ್ಲವು. ನಕಲಿ ಇಂಗಿನ ಬಳಕೆಯಿಂದ ಆಹಾರದ ರುಚಿ ಮತ್ತು ಘಮ ಕೆಡುವುದು ಮಾತ್ರವಲ್ಲ, ಆರೋಗ್ಯವೂ ಕೆಡುತ್ತದೆ. ಯಾವುದನ್ನು ಕಲಬೆರಕೆ ಮಾಡಿ ದ್ದಾರೆ ಎನ್ನುವುದರ ಆಧಾರದ ಮೇಲೆ ಭಿನ್ನ ರೀತಿಯ ಆರೋಗ್ಯ ತೊಂದರೆಗಳು ತೋರಬಹುದು. ಅಲರ್ಜಿಗಳು, ಜೀರ್ಣಾಂಗದ ತೊಂದರೆಗಳಿಂದ ಹಿಡಿದು, ಕ್ಯಾನ್ಸರ್ನಂಥ ಮಾರಕ ರೋಗಗಳವರೆಗೆ ಯಾವುದೂ ಬಂದೀತು. ಅಂದರೆ, ಒಂದು ಬಾರಿ ನಕಲಿ ಇಂಗು ತಿಂದರೆ ಇಷ್ಟೆಲ್ಲ ಆಗುತ್ತದೆ ಎಂದು ಅರ್ಥವಲ್ಲ, ನಕಲಿ ಎನ್ನುವ ಮಾಹಿತಿಯೇ ಇಲ್ಲದೆ, ದೀರ್ಘ ಕಾಲದವರೆಗೆ ಅವುಗಳನ್ನೇ ಬಳಸುತ್ತಿದ್ದರೆ ಆರೋಗ್ಯ ಅಧೋಗತಿಗೆ ಇಳಿಯುವುದು ಸಹಜ.
ಇಂಗು ಹೇಗಿರುತ್ತದೆ?: ಇಂಗು ಮೂಲದಲ್ಲಿ ಮಡ್ಡಿಯಂಥ, ತೀವ್ರವಾದ ಘಾಟು ಮಿಳಿತವಾದ ಸಸ್ಯಜನ್ಯ ಅಂಟು. ತಿಳಿಕಂದು ಅಥವಾ ಮಸುಕು ಹಳದಿ ಬಣ್ಣದಲ್ಲಿರುವ ಇದಕ್ಕೆ ಹಲವು ಬಗೆಯ ಪಿಷ್ಟದಂಥ ವಸ್ತುಗಳನ್ನು ಮಿಶ್ರ ಮಾಡಿ ಮಾರಾಟ ಮಾಡ ಲಾಗುತ್ತದೆ. ಬಳಕೆಯ ಅನುಕೂಲತೆಯ ದೃಷ್ಟಿಯಿಂದ ಹೀಗೆ ಮಾಡಲಾಗುತ್ತದೆ. ಆದರೆ ಇದು ಪುಡಿಯಂತೆ ಇದ್ದರೂ ಮಡ್ಡಿ ಯಂತೆ ಇದ್ದರೂ ನೀರಿನಲ್ಲಿ ಸುಲಭವಾಗಿ, ಪೂರ್ಣವಾಗಿ ಕರಗುವಂಥದ್ದು. ಇವಿಷ್ಟು ಮಾಹಿತಿಗಳ ಆಧಾರದ ಮೇಲೆ ಇಂಗಿನ ಸಾಚಾತನವನ್ನು ಕಂಡು ಹಿಡಿಯುವುದು ಹೇಗೆ ಎನ್ನುವುದನ್ನು ತಿಳಿಯೋಣ.
ಯಾವುದನ್ನು ಸೇರಿಸಲಾಗುತ್ತದೆ?: ಸಾಮಾನ್ಯವಾಗಿ ನಕಲಿ ಇಂಗಿಗೆ ಕಲಬೆರಕೆ ಮಾಡುವುದು ಕೆಮ್ಮಣ್ಣು, ಸೀಮೆಸುಣ್ಣದ ಪುಡಿ, ಕಾರ್ನ್ ಪುಡಿ, ಜಿಪ್ಸಿಯಂ, ಮೈದಾಹಿಟ್ಟು ಸೇರಿದಂತೆ ಯಾವುದೇ ಬಗೆಯ ಪಿಷ್ಟಗಳನ್ನು.ಇವು ಇಂಗಿನ ಪ್ರಮಾಣ ವನ್ನಷ್ಟೇ ಹೆಚ್ಚಿಸುತ್ತವೆಯೆ ಹೊರತು, ಅದರ ಗುಣ, ಘಮ, ರುಚಿ ಎಲ್ಲವನ್ನೂ ತಗ್ಗಿಸಿ ಹಾಳು ಮಾಡುತ್ತವೆ. ತಿನ್ನುವಂಥ ವಸ್ತುವನ್ನೇ ಅಸಲಿ ಇಂಗಿಗೆ ಬೆರೆಸಿದರೆ ಆರೋಗ್ಯಕ್ಕೆ ಹಾನಿ ಕಡಿಮೆ, ಆದರೆ ಸೀಮೆಸುಣ್ಣ, ಕೆಮ್ಮಣ್ಣಿನಂಥ ಪುಡಿಗಳನ್ನು ಕಲಬೆರಕೆ ಮಾಡಿದರೆ, ಯಾವುದೋ ಸಿಂಥೆಟಿಕ್ ಡೈಗಳನ್ನು ಬೆರೆಸಿ ಆಕರ್ಷಕವಾಗಿಸಿದರೆ ಆರೋಗ್ಯದ ಮೇಲಾಗುವ ಪರಿಣಾಮಗಳು ಘೋರ. ಹಾಗಾಗಿ ಅಸಲಿ ಇಂಗು ಗುರುತಿಸುವುದಕ್ಕೆ ಇಲ್ಲಿವೆ ಸಲಹೆಗಳು.
ಮೇಲ್ಮೈ ಶುದ್ಧ, ಅಸಲಿ ಇಂಗು ಮಡ್ಡಿಯಂತೆ ಇದ್ದರೂ ಪುಡಿಯಾಗಿದ್ದರೂ, ನೀರು ಅಥವಾ ಯಾವುದೇ ದ್ರವ ವಸ್ತುಗಳಲ್ಲಿ ತ್ವರಿತವಾಗಿ ಮತ್ತು ಪೂರ್ಣವಾಗಿ ಕರಗುತ್ತದೆ. ಹೀಗೆ ನೀರಿನಲ್ಲಿ ಕರಗಿದ ಮೇಲೆ ಬಿಳಿಯ ಬಣ್ಣದ ಶೇಷವಿಲ್ಲದ ದ್ರವ ಮಾತ್ರವೇ ಉಳಿಯಬೇಕು. ಶೇಷ ಉಳಿದರೆ ಬೇರೇನೋ ಸೇರಿಸಲಾಗಿದೆ ಎಂಬುದು ಸ್ಪಷ್ಟ. ಇದಷ್ಟೇ ಅಲ್ಲ, ಇಂಗು ಪುಡಿಯಾಗಿದ್ದರೆ ಬೆರಳುಗಳಲ್ಲಿ ಉಜ್ಜಿ ನೋಡಿ, ತರಿತರಿಯಾಗಿದ್ದು ಉಂಡೆಗಟ್ಟಿದ್ದರೆ, ಇದಕ್ಕೆ ಬೇರೇನನ್ನೋ ಬೆರೆಸಿರುವ ಸಾಧ್ಯತೆ ಹೆಚ್ಚು. ಶುದ್ಧ ಇಂಗಿನ ಪುಡಿ ನುಣ್ಣಗೆ ಇರಬೇಕು.
ಬಣ್ಣ: ಶುದ್ಧ ಇಂಗು ಮಸುಕು ಹಳದಿ ಅಥವಾ ತಿಳಿಕಂದು ಬಣ್ಣದಲ್ಲಿ ಇರುತ್ತದೆ. ಮೈದಾ ಹಿಟ್ಟು, ಅಕ್ಕಿ ಹಿಟ್ಟು ಮುಂತಾದ ಯಾವುದೇ ಬಗೆಯ ಪಿಷ್ಟ ಸೇರಿದರೆ, ಇಂಗಿನ ಬಣ್ಣ ಹೆಚ್ಚು ಬಿಳಿಯಾಗಿರುತ್ತದೆ. ಕೆಮ್ಮಣ್ಣಿನಂಥವು ಸೇರಿದ್ದರೆ ಅಗತ್ಯಕ್ಕಿಂತ ಹೆಚ್ಚು ಕೆಂಪು ಇಲ್ಲವೇ ಕಂದು ಬಣ್ಣಕ್ಕೆ ತಿರುಗಬಹುದು. ಇಂಗಿನ ಮೂಲ ಬಣ್ಣಗಳನ್ನು ಹೊರತುಪಡಿಸಿ ಇನ್ನಾವುದೇ ಬಣ್ಣದಲ್ಲಿ ಇದ್ದರೂ ಅಂಥವನ್ನು ಖರೀದಿಸಬೇಡಿ. ಬೇಡದ ವಸ್ತುಗಳು ಅದರಲ್ಲಿ ಸೇರಿರಬಹುದು.
ಇದನ್ನೂ ಓದಿ: Health Tips: ಜೀರ್ಣಾಂಗ ಆರೋಗ್ಯ ದಿನ: ಹೊಟ್ಟೆ ಕೆಡಿಸಿಕೊಳ್ಳಬೇಡಿ
ಘಮ: ಕಟುವಾದ ಪರಿಮಳವನ್ನು ಇಂಗು ಹೊಂದಿರಬೇಕು. ಇಂಗಿನ ಡಬ್ಬಿಯ ಮುಚ್ಚಳ ತೆಗೆಯುವ ಮುನ್ನವೇ ಮೂಗಿನ ಬಳಿ ಹಿಡಿದರೆ, ಇದರ ಘಾಟು ಬರಬೇಕು. ಅದಲ್ಲದೆ, ಮುಚ್ಚಳ ತೆರೆದರೂ ಲಘುವಾದ ಪರಿಮಳವಿದ್ದರೆ, ಯಾವುದಾದರೂ ಅಡ್ಡ ಕಂಪಿದ್ದರೆ, ಅದರ ನೈಜತೆಯ ಬಗ್ಗೆ ಸಂಶಯಿಸಬೇಕು. ಇಂಗನ್ನು ಕಾದ ಎಣ್ಣೆಗೆ ಹಾಕಿದರೆ ತೀವ್ರವಾದ ಘಮ, ತ್ವರಿತವಾಗಿ ಮನೆಯೆಲ್ಲ ಹರಡಬೇಕು. ಜೊತೆಗೆ, ಕಾದ ಎಣ್ಣೆಯಲ್ಲಿ ಹಾಕಿದ ಇಂಗು ಸೀದು ಹೋದಂತೆ ಕಾಣಬಾರದು. ಆಗ ಮಾತ್ರ ಅದನ್ನು ಶುದ್ಧ ಇಂಗು ಎಂದು ಪರಿಗಣಿಸಬಹುದು..