Health Tips: ರೋಗ ನಿರೋಧಕ ಶಕ್ತಿ ಹೆಚ್ಚಿಸಬೇಕೆ? ಸೀಬೆಕಾಯಿ ತಿನ್ನಿ
Guava benefits: ಸೀಬೆಕಾಯಿಯಲ್ಲಿ ವಿಟಮಿನ್ ಎ, ಸಿ, ನಾರು ಮತ್ತು ಪೊಟಾಶಿಯಂನಂಥ ಖನಿಜಗಳು ಸಾಕಷ್ಟಿವೆ. ಜತೆಗೆ ಉತ್ಕರ್ಷಣ ನಿರೋಧಕಗಳು ಹೇರಳವಾಗಿ ಇರುವುದರಿಂದ ದೇಹಕ್ಕೆ ಹಲವು ರೀತಿಯಲ್ಲಿ ಪ್ರಯೋಜನಗಳನ್ನು ಒದಗಿಸಬಲ್ಲದು ಈ ಹಣ್ಣು. ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸುವ ಈ ಹಣ್ಣಿನಲ್ಲಿ ಕ್ಯಾಲರಿ ಕಡಿಮೆಯಿದೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು, ಮೇ 31: ಸೀಬೆಕಾಯಿಗೆ (Guava) ಸಾಮಾನ್ಯವಾಗಿ ಎರಡು ಋತುಗಳಿವೆ. ಅಂದರೆ ವರ್ಷಕ್ಕೆರಡು ಬಾರಿ ಇದು ದೊರೆಯುತ್ತದೆ. ಮಕ್ಕಳಿಂದ ವೃದ್ಧರಾದಿಯಾಗಿ ಕರೆದು ಕೊಟ್ಟರೂ, ಸೀಬೆಯನ್ನು ಕದ್ದು ತಿನ್ನುವುದೇ ಪ್ರಿಯವಾದ್ದರಿಂದ ಹೀಗೆ ಒಂದಕ್ಕಿಂತ ಹೆಚ್ಚಿನ ಬೆಳೆಗಳನ್ನು ಸೃಷ್ಟಿಯೇ ನೀಡಿರಬಹುದು ಇದಕ್ಕೆ. ಎಳೆ ಮಿಡಿ, ಕಾಯಿ, ಹಣ್ಣು ಮುಂತಾದ ಯಾವುದೇ ಭೇದವಿಲ್ಲದೆ ಇದನ್ನು ಖಾಲಿ ಮಾಡುವವರಿದ್ದಾರೆ. ಬಾಯಿ ರುಚಿಗಷ್ಟೇ ಇದನ್ನು ತಿನ್ನುವುದಲ್ಲ, ಸೀಬೆ ತಿನ್ನುವುದರಿಂದ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಗಳಿವೆ.
ಸತ್ವಗಳು: ಇದರಲ್ಲಿ ವಿಟಮಿನ್ ಎ, ಸಿ, ನಾರು ಮತ್ತು ಪೊಟಾಶಿಯಂನಂಥ ಖನಿಜಗಳು ಸಾಕಷ್ಟಿವೆ. ಜೊತೆಗೆ ಉತ್ಕರ್ಷಣ ನಿರೋಧಕಗಳು ಹೇರಳವಾಗಿ ಇರುವುದರಿಂದ ದೇಹಕ್ಕೆ ಹಲವು ರೀತಿಯಲ್ಲಿ ಪ್ರಯೋಜನಗಳನ್ನು ಒದಗಿಸಬಲ್ಲದು ಈ ಹಣ್ಣು. ಬಿಳಿ ಪೇರಲೆ, ಹಳದಿ ಬಣ್ಣದ್ದು, ಕೆಂಪು ಬಣ್ಣದ್ದು- ಹೀಗೆ ಯಾವುದೇ ಆದರೂ ಅವೆಲ್ಲವೂ ಆರೋಗ್ಯಕ್ಕೆ ಒಳ್ಳೆಯವೇ.
ವಿಟಮಿನ್ ಸಿ: ಒಂದು ದೊಡ್ಡ ಸೀಬೆ ಹಣ್ಣಿನಲ್ಲಿ ಎರಡು ಕಿತ್ತಳೆ ಹಣ್ಣುಗಳಲ್ಲಿ ಇರುವಷ್ಟು ಸಿ ಜೀವಸತ್ವ ಇದೆಯೆಂಬುದು ಗೊತ್ತೇ? ಇದರಿಂದ ರೋಗ ನಿರೋಧಕ ಶಕ್ತಿ ಬಲವಾಗುವುದಲ್ಲದೆ, ಕಬ್ಬಿಣದ ಅಂಶ ದೇಹದೊಳಗೆ ಚೆನ್ನಾಗಿ ಹೀರಲ್ಪಡುತ್ತದೆ. ಮಾತ್ರವಲ್ಲ, ಕೊಲಾಜಿನ್ ಉತ್ಪಾದನೆ ಹೆಚ್ಚಾಗಿ, ಕೂದಲು ಮತ್ತು ಚರ್ಮದ ಆರೋಗ್ಯವೂ ಸುಧಾರಿಸುತ್ತದೆ.
ಮಧುಮೇಹಿಗಳಿಗೆ ಸೂಕ್ತ: ಇದು ಹಣ್ಣಾದಾಗ ರುಚಿ ಸಿಹಿಯೇ ಇದ್ದರೂ, ಇದರ ಗ್ಲೈಸೆಮಿಕ್ ಸೂಚಿ ಕಡಿಮೆ. ಪೇರಲೆಯ ಎಲೆಯ ಕಷಾಯಗಳನ್ನು ಸಕ್ಕರೆ ಕಾಯಿಲೆಯ ನಿಯಂತ್ರಣಕ್ಕೆ ಬಳಸುವ ಪದ್ಧತಿ ಪರಂಪರಾಗತ ಔಷಧಕ್ರಮದಲ್ಲಿ ಇದೆ. ನಾರಿನಂಶ ಹೇರಳವಾಗಿ ಇರುವುದರಿಂದ, ದೀರ್ಘ ಕಾಲದವರೆಗೆ ಹೊಟ್ಟೆ ತುಂಬಿದ ಅನುಭವವನ್ನೇ ನೀಡುತ್ತದೆ. ಜೊತೆಗೆ, ಗ್ಲೂಕೋಸ್ ಅಂಶ ದಿಢೀರನೆ ರಕ್ತ ಸೇರದಂತೆ ತಡೆಯುವ ಗುಣವಿದೆ ಇದಕ್ಕೆ.
ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿದರೆ ಈ ಅದ್ಭುತ ಪ್ರಯೋಜನಗಳು ಸಿಗಲಿವೆ!
ಕ್ಯಾಲರಿ ಕಡಿಮೆ: ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸುವ ಈ ಹಣ್ಣಿನಲ್ಲಿ ಕ್ಯಾಲರಿ ಕಡಿಮೆ, ಕೊಬ್ಬು ಬಹುತೇಕ ಇಲ್ಲವೇ ಇಲ್ಲ. ಇದರಲ್ಲಿ ಅಗತ್ಯ ಪ್ರಮಾಣದ ನಾರು ಇರುವುದರಿಂದ ಹೊಟ್ಟೆ ತುಂಬಿದ ಅನುಭವ ನೀಡಿ, ಕಳ್ಳ ಹಸಿವೆಯನ್ನು ನೀಗಿಸುತ್ತದೆ. ಹೆಚ್ಚು ಕಾಲದವರೆಗೆ ಹಸಿವಾಗದಂತೆ ತಡೆಯುತ್ತದೆ. ಬಾಯಾಡುವುದಕ್ಕೆ ಇನ್ನೇನಿದೆ ಎಂದು ತಡಕುವುದನ್ನು ತಡೆಯುತ್ತದೆ. ಜೊತೆಗೆ, ದೇಹಕ್ಕೆ ಅಗತ್ಯವಾದ ಖನಿಜಗಳು, ವಿಟಮಿನ್ ಸಿ ಮತ್ತಿತರ ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತದೆ. ಹಾಗಾಗಿ ತೂಕ ಇಳಿಸುವ ಯೋಜನೆಯಿದ್ದರೆ ಪೇರಲೆ ಹಣ್ಣನ್ನು ಸಂತೋಷದಿಂದ ನಿಮ್ಮ ಆಹಾರಯೋಜನೆಯಲ್ಲಿ ಸೇರಿಸಿಕೊಳ್ಳಿ. ಆದರೆ ಇದನ್ನು ಆಹಾರದ ಭಾಗವಾಗಿ ಬಳಸಿಕೊಳ್ಳುವುದು ಹೇಗೆ? ಪೇರಲೆಯನ್ನು ಕಚ್ಚಿ ತಿನ್ನುವುದು ಮಾತ್ರವೇ ಎಲ್ಲರಿಗೂ ಪರಿಚಿತವಾದದ್ದು. ಹೀಗೆ ಎಷ್ಟು ತಿನ್ನಲು ಸಾಧ್ಯ? ದಿನವೂ ಅದನ್ನೇ ಮಾಡಿದರೆ ಬೋರಾಗುವುದಿಲ್ಲವೇ? ಇಲ್ಲಿದೆ ಪರಿಹಾರ.
ಸೀಬೆ ಸ್ಮೂಥಿ: ತೂಕ ಇಳಿಸುವವರಿಗೆ ಸ್ಮೂಥಿ ಉತ್ತಮ ಆಹಾರ. ಯಾವುದೇ ಹಣ್ಣುಗಳನ್ನು ಇಡಿಯಾಗಿ ಅಥವಾ ಉಳಿದೆಲ್ಲ ಹಣ್ಣುಗಳ ಜೊತೆಯಾಗಿ ಹಾಕಿ ಸ್ಮೂಥಿ ಮಾಡಿಕೊಳ್ಳಬಹುದು. ಇದಕ್ಕೆ ಪೇರಲೆಯನ್ನೂ ಸೇರಿಸಿದರೆ ಉತ್ತಮ. ಇದು ಸ್ಮೂಥಿಯ ರುಚಿ ಮತ್ತು ಘಮವನ್ನು ಇಮ್ಮಡಿಗೊಳಿಸುತ್ತದೆ. ಮಾತ್ರವಲ್ಲ, ಪೌಷ್ಟಿಕಾಂಶವನ್ನೂ ಹೆಚ್ಚಿಸುತ್ತದೆ. ಬಾಳೆಹಣ್ಣು, ಬೆರ್ರಿಗಳು ಮುಂತಾದ ನಿಮ್ಮ ಆಯ್ಕೆಯ ಹಣ್ಣುಗಳ ಜೊತೆಗೆ ಸೀಬೆಯನ್ನೂ ಸೇರಿಸಿ. ಜತೆಗೆ ಹಾಲು ಅಥವಾ ಮೊಸರು- ಯಾವುದು ಸರಿ ಹೊಂದುತ್ತದೆ ಎಂಬುದೂ ನಿಮ್ಮದೇ ಆಯ್ಕೆ. ಇದರ ಮೇಲೆ ಚಿಯಾ, ಅಗಸೆ ಮುಂತಾದ ಬೀಜಗಳನ್ನು ಉದುರಿಸಿದರೆ ಸತ್ವಯುತ ಸ್ಮೂಥಿ ಸಿದ್ಧ.
ಸೀಬೆ ಸಲಾಡ್: ತೂಕ ಇಳಿಸುವವರಿಗೆ ಸಲಾಡ್ ಇಲ್ಲದೆ ಮುಂದೆ ಹೋಗುವುದೇ ಇಲ್ಲ. ಕಡಿಮೆ ಕೊಬ್ಬಿರುವ ಅಗತ್ಯ ಸತ್ವಗಳನ್ನು ಹೊಂದಿರುವ ಸಲಾಡ್‌ಗಳು ದೇಹಕ್ಕೆ ಚೈತನ್ಯ ನೀಡುವುದರ ಜೊತೆಗೆ ಕೊಬ್ಬು ಕರಗಿಸಲು ನೆರವಾಗುತ್ತವೆ. ಇಂಥ ಯಾವುದೇ ಸಲಾಡ್‌ಗೂ ಪೇರಲೆಯನ್ನು ಸೇರಿಸಬಹುದು. ತರಕಾರಿ ಸಲಾಡ್, ಹಣ್ಣುಗಳ ಸಲಾಡ್ ಎರಡಕ್ಕೂ ಪೇರಲೆಯ ರುಚಿ ಮತ್ತು ಪರಿಮಳ ಹೊಂದಿಕೊಳ್ಳುತ್ತದೆ. ಹೊತೆಗೆ ಒಂದಿಷ್ಟು ನಿಂಬೆ ರಸ ಅಥವಾ ನಿಮ್ಮಿಷ್ಟ ಯಾವುದೇ ಕಡಿಮೆ ಕೊಬ್ಬಿನ ಡ್ರೆಸ್ಸಿಂಗ್ ಬಳಸಬಹುದು.