ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IBPS Recruitment: ಬ್ಯಾಂಕ್‌ ಸಿಬ್ಬಂದಿ ನೇಮಕಾತಿ ಸಂಸ್ಥೆಯಿಂದ 10,277 ಗ್ರಾಹಕ ಸೇವಾ ಸಹಾಯಕ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ

Bank Jobs: ಬ್ಯಾಂಕ್‌ ಸಿಬ್ಬಂದಿ ನೇಮಕಾತಿ ಸಂಸ್ಥೆ ದೇಶದ 11 ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, 10,277 ಹುದ್ದೆಗಳಿಗೆ ಪೂರ್ವಭಾವಿ ಹಾಗೂ ಮುಖ್ಯ ಪರೀಕ್ಷೆ ನಡೆಸಲು ತೀರ್ಮಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನ ಆಗಸ್ಟ್‌ 21.

IBPSನಿಂದ 10,277 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

Ramesh B Ramesh B Aug 7, 2025 2:03 PM

ಬೆಂಗಳೂರು: ಬ್ಯಾಂಕ್‌ ಸಿಬ್ಬಂದಿ ನೇಮಕಾತಿ ಸಂಸ್ಥೆ (Institute of Banking Personnel Selection) ದೇಶದ 11 ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, 10,277 ಹುದ್ದೆಗಳಿಗೆ ಪೂರ್ವಭಾವಿ ಹಾಗೂ ಮುಖ್ಯ ಪರೀಕ್ಷೆ ನಡೆಸಲು ತೀರ್ಮಾನಿಸಿದೆ (Bank Jobs). ರಾಜ್ಯದ ವಿವಿಧ ಬ್ಯಾಂಕ್‌ಗಳಲ್ಲಿ ಖಾಲಿ ಇರುವ 1,170 ಹುದ್ದೆಗಳಿಗೆ ಸೇರಿಸಿ ಅರ್ಜಿ ಆಹ್ವಾನಿಸಲಾಗಿದೆ (Job Guide). ರಾಜ್ಯದ 10 ಜಿಲ್ಲಾ ಕೇಂದ್ರಗಳಲ್ಲಿ ಪೂರ್ವಭಾವಿ ಪರೀಕ್ಷೆ ಮುಖ್ಯ ಪರೀಕ್ಷೆ ಆನ್‌ಲೈನ್‌ನಲ್ಲಿ ನಡೆಯಲಿದೆ. ಈ ಮೊದಲೇ ಸಾಲು-ಸಾಲಾಗಿ ಬ್ಯಾಂಕ್ ನೇಮಕಾತಿ ಪರೀಕ್ಷೆಗಳಿಗೆ ಅಧಿಸೂಚನೆ ಪ್ರಕಟವಾಗಿದೆ.

ಸಾಮಾನ್ಯವಾಗಿ ಪದವಿ ಮುಗಿಸಿದ ಅಭ್ಯರ್ಥಿಗಳು ಮೊದಲ ಬಾರಿಗೆ ಈ ಪರೀಕ್ಷೆಗಳನ್ನು ಎದುರಿಸುವಾಗ ಸಹಜವಾಗಿಯೇ ಆತಂಕಗಳು ಎದುರಾಗಿರುತ್ತವೆ. ಇರುವ 1,170 ಹುದ್ದೆಗಳಿಗೆ ಲಕ್ಷಗಟ್ಟಲೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿರುವಾಗ ನನಗೆ ಈ ಹುದ್ದೆಯನ್ನ ಪಡೆಯಲು ಸಾದ್ಯವೇ? ಎಂಬ ಪ್ರಶ್ನೆ ಪ್ರತಿಯೊಬ್ಬರನ್ನ ಕಾಡುತ್ತಿರುತ್ತದೆ. ಇದು ಪ್ರತಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ಮೊದಲ ಬಾರಿಗೆ ಬರೆಯುವವರಿಗೆ ಕಾಡುವ ಮಿಲಿಯನ್ ಡಾಲರ್ ಪ್ರಶ್ನೆ. ಇದು ಸಹಜ, ಅರ್ಜಿ ಸಲ್ಲಿಸಿದ ಎಲ್ಲ ಅಭ್ಯರ್ಥಿಗಳಿಗೂ ಹೀಗೆ ಅನ್ನಿಸಿದ್ದರೆ ಆಶ್ಚರ್ಯವಿಲ್ಲ. ಬ್ಯಾಂಕ್ ಕೆಲಸವೆಂದರೆ ಅತ್ಯಂತ ಪ್ರತಿಷ್ಠಿತ ಕೆಲಸವೆಂದೇ ಜನಜನಿತ. ಹೀಗಾಗಿಯೇ ಒಂದು ಹುದ್ದೆ ಖಾಲಿ ಇದ್ದರೂ ಸಾವಿರಾರು ಮಂದಿ ಅರ್ಜಿ ಸಲ್ಲಿಸುತ್ತಾರೆ. ಯಾವುದೇ ಅಧಿಸೂಚನೆ ಪ್ರಕಟವಾದಾಗ ಅರ್ಜಿ ಸಲ್ಲಿಸಿದ ಲಕ್ಷಾಂತರ ಅಭ್ಯರ್ಥಿಗಳಲ್ಲಿ ಕೆಲವೇ ಕೆಲವು ಸಾವಿರ ಜನ ಮಾತ್ರ ಅಂತಿಮ ಸುತ್ತಿಗೆ ಆಯ್ಕೆಯಾಗುತ್ತಾರೆ ಎಂಬುದು ನಿಮಗೆ ನೆನಪಿರಲಿ.

ರಾಜ್ಯದ ಯಾವ ಬ್ಯಾಂಕ್‌ನಲ್ಲಿ ಎಷ್ಟು ಹುದ್ದೆ?

ಕೆನರಾ ಬ್ಯಾಂಕ್ -675, ಬ್ಯಾಂಕ್ ಆಫ್ ಬರೋಡ-253, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ-50, ಸೆಂಟ್ರಲ್ ಬ್ಯಾಂಕ್ ಆಪ್ ಇಂಡಿಯಾ-47, ಬ್ಯಾಂಕ್ ಆಫ್ ಇಂಡಿಯಾ-45, ಇಂಡಿಯನ್ ಓವರ್ಸೀಸ್ ಬ್ಯಾಂಕ್-44, ಪಂಜಾಬ್ ಎಂಡ್ ಸಿಂಧ ಬ್ಯಾಂಕ್-30,ಬ್ಯಾಂಕ್ ಆಪ್ ಮಹಾರಾಷ್ಟ್ರ -20, ಪಂಜಾಬ್ ನ್ಯಾಶನಲ್ ಬ್ಯಾಂಕ್-6 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವುದಾಗಿ ಪ್ರಕಟಿಸಿವೆ.

ಶೈಕ್ಷಣಿಕ ಅರ್ಹತೆ ಏನು?

ಅಂಗೀಕೃತ ವಿಶ್ವವಿದ್ಯಾನಿಲಯ ದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದವರು ಈ ಪರೀಕ್ಷೆ ಬರೆಯಬಹುದು, ಕೇಂದ್ರ ಸರ್ಕಾರದ ಮಾನ್ಯತೆ ಪಡೆದ ಸಂಸ್ಥೆಯಿಂದ ಪದವಿಗೆ ಸರಿಸಮನಾದ ಕೋರ್ಸ್‌ ಮಾಡಿದವರಿಗೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಅಭ್ಯರ್ಥಿಯು ಕಂಪ್ಯೂಟರ್ ನಲ್ಲಿ ಕಾರ್ಯ ನಿರ್ವಹಿಸುವ ಜ್ಞಾನ ಹೊಂದಿರುವುದು ಕಡ್ಡಾಯ. ಹೀಗಾಗಿ ಕಂಪ್ಯೂಟರ್ ಕಲಿಕೆಯ ಬಗ್ಗೆ ದೃಢೀಕರಣ ಪತ್ರವನ್ನು ಕೂಡ ಅಭ್ಯರ್ಥಿಯು ಹೊಂದಿರಬೇಕಾಗುತ್ತದೆ (ಕಂಪ್ಯೂಟರ್‌ಗೆ ಸಂಬಂಧಿಸಿದ ವಿಷಯದಲ್ಲಿ ಸರ್ಟಿಫಿಕೇಟ್/ ಡಿಪ್ಲೊಮಾ ಅಥವಾ ಡಿಗ್ರಿ ಪಡೆದಿರುವುದು ಅಥವಾ ಶಾಲೆ ಅಥವಾ ಕಾಲೇಜಿನಲ್ಲಿ ಕಂಪ್ಯೂಟರ್ ಅಥವಾ ಐಟಿ (Information Technology)ಯನ್ನು ಒಂದು ವಿಷಯವಾಗಿ ಓದಿರಬೇಕು). ಅಲ್ಲದೆ, ರಾಜ್ಯದ ಅಧಿಕೃತ ಭಾಷೆಯಲ್ಲಿ ಮಾತನಾಡುವ, ಬರೆಯುವ ಸಾಮರ್ಥ್ಯ ಹೊಂದಿರಬೇಕು. ಪದವಿ ಪೂರ್ಣಗೊಳಿಸಿದವರು ಮಾತ್ರ ಅರ್ಜಿ ಸಲ್ಲಿಸಬಹುದು. ಪದವಿಯಲ್ಲಿ ಪಡೆದ ಶೇಕಡಾವಾರು ಅಂಕಗಳನ್ನು ಅರ್ಜಿಯಲ್ಲಿ ಭರ್ತಿ ಮಾಡಬೇಕಾಗಿರುತ್ತದೆ.

ವಯೋಮಿತಿ ಎಷ್ಟು?

20 ವರ್ಷದಿಂದ 28 ವರ್ಷದೊಳಗಿನವರು ಅರ್ಜಿ ಸಲ್ಲಿಸಲು ಅರ್ಹರು. ಅಭ್ಯರ್ಥಿಗಳು 1997ರ ಆಗಸ್ಟ್ 2 ಮತ್ತು 2005ರ ಆಗಸ್ಟ್ 1ರ ನಡುವೆ ಜನಿಸಿರಬೇಕು. ನಿಯಮಾನುಸಾರ ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ವಿಶೇಷ ಚೇತನರಿಗೆ 10 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

ಈ ಸುದ್ದಿಯನ್ನೂ ಓದಿ: IB Recruitment 2025: ಗುಪ್ತಚರ ಇಲಾಖೆಯಲ್ಲಿದೆ ಬರೋಬ್ಬರಿ 4,987 ಹುದ್ದೆ; 10ನೇ ತರಗತಿ ಪಾಸಾದವರು ಅಪ್ಲೈ ಮಾಡಿ

ಗಮನಿಸಿ

ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ನಿಮ್ಮ ಆಯ್ಕೆಯ ಆದ್ಯತೆಯ ಆದೇಶವನ್ನು ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಳವಡಿಸಲಾಗಿದೆ. ಅಭ್ಯರ್ಥಿಗಳು ಈ ಹಂತದಲ್ಲಿ ಅವರ ಬ್ಯಾಂಕ್ ಗಳ ಆದ್ಯತೆಯ ಕ್ರಮವನ್ನು ಅಗತ್ಯವಾಗಿ ಸೂಚಿಸಬೇಕು. ಯಾವ್ಯಾವ ಬ್ಯಾಂಕ್ ಗಳಲ್ಲಿ ಎಷ್ಟೆಷ್ಟು ಹುದ್ದೆಗಳಿವೆ ಎಂಬುದರ ಮೇಲೆ ನಿಮ್ಮ ಆದ್ಯತೆಯ ಆಯ್ಕೆ ಇರಲಿ.ಒಮ್ಮೆ ನೀವು ಆಯ್ಕೆಯಾದರೆ ಬ್ಯಾಂಕ್ ಬದಲಾವಣೆಗೆ ಯಾವುದೇ ವಿನಂತಿಯನ್ನು ನಂತರದ ದಿನಗಳಲ್ಲಿ ಪರಿಗಣಿಸಲಾಗುವುದಿಲ್ಲ. ಆಯ್ಕೆ ಪ್ರಕ್ರಿಯೆಯ ಹಂತದಲ್ಲಿ ಅಥವಾ ಅಪಾಯಿಂಟ್‌ಮೆಂಟ್‌ನ ನಂತರ ನಿಮ್ಮ ಕೈಬರಹದ ಘೋಷಣೆ ಹಾಗೂ ನಿಮ್ಮ ಕೈಬರಹದಲ್ಲಿ ಭಿನ್ನವಾಗಿರುವುದು ತಜ್ಞರ ವಿಶ್ಲೇಷಣೆಯಲ್ಲಿ ಕಂಡುಬಂದರೆ, ಅಭ್ಯರ್ಥಿಯ ಉಮೇದುವಾರಿಕೆಯನ್ನ ರದ್ದುಗೊಳಿಸಲಾಗುವುದು. ಹೀಗಾಗಿ ಅರ್ಜಿ ಸಲ್ಲಿಸುವ ಹಂತದಲ್ಲಿಯೇ ಬಹಳ ಎಚ್ಚರಿಕೆಯಿಂದ ಅರ್ಜಿ ಸಲ್ಲಿಸುವುದು ಒಳಿತು. ಯಾವ ರಾಜ್ಯದ ಹುದ್ದೆಗಳಿಗೆ ಅರ್ಜಿ ಸಲ್ಲಿಸುತ್ತಿದ್ದೇವೆ ಎಂಬುದನ್ನು ಸ್ಪಷ್ಟಪಡಿಸತಕ್ಕದ್ದು. ಈ ಆಯ್ಕೆಯನ್ನು ಬದಲಾಯಿಸಲು ಅವಕಾಶವಿರುವುದಿಲ್ಲ.

ಪರೀಕ್ಷೆಯ ಮಾಧ್ಯಮ

ಆನ್‌ಲೈನ್ ಅರ್ಜಿಯಲ್ಲಿ, ಅಭ್ಯರ್ಥಿಗಳಿಗೆ ಅನ್ವಯವಾಗುವ ಪರೀಕ್ಷೆಗಳ ಆವೃತ್ತಿಯನ್ನು (ಪರೀಕ್ಷಾ ಮಾಧ್ಯಮ) ಬಹು ಮುಖ್ಯವಾಗಿ ಕನ್ನಡದಲ್ಲಿ ಪರೀಕ್ಷೆ ನಡೆಯೋದರಿಂದ ಪರೀಕ್ಷಾ ಆವೃತ್ತಿ ಸೂಚಿಸುವ ಆಯ್ಕೆಯನ್ನು ಒದಗಿಸಲಾಗುವುದು. ಅಭ್ಯರ್ಥಿಗಳು ಪರೀಕ್ಷೆಯ ಮಾಧ್ಯಮವನ್ನು ಸೂಚಿಸುವ ಈ ಆಯ್ಕೆಯನ್ನು ಬಳಸುವಾಗ ಜಾಗರೂಕರಾಗಿರಬೇಕು.

ಪರೀಕ್ಷಾ ಪೂರ್ವ ತರಬೇತಿ

ಎಸ್‌ಸಿ/ಎಸ್‌ಟಿ/ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ/ ಮಾಜಿ ಸೈನಿಕ ಅಭ್ಯರ್ಥಿಗಳಿಗೆ/ವಿಶೇಷಚೇತನ ಅಭ್ಯರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿಯನ್ನು ಐಬಿಪಿಎಸ್ ನೀಡುತ್ತವೆ. ಒಂದು ವೇಳೆ ಅಭ್ಯರ್ಥಿಗಳು ಪರೀಕ್ಷಾ ಪೂರ್ವ ತರಬೇತಿ ಬಯಸಿದಲ್ಲಿ ಅಂಥವರು ಆನ್‌ಲೈನ್ ಅರ್ಜಿ ಸಲ್ಲಿಸುವಾಗಲೇ ತರಬೇತಿ ಪಡೆಯುವ ಬಗ್ಗೆ ಅರ್ಜಿಯಲ್ಲಿ ನಮೂದಿಸಬೇಕು.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ದಿನಾಂಕ

01-08-2025ರಿಂದ 21-08-2025.

ಪ್ರಿಲಿಮ್ಸ್ ನಡೆಯುವ ದಿನಾಂಕ: ಅಕ್ಟೋಬರ್-2025.

ಪ್ರಿಲಿಮ್ಸ್ ಫಲಿತಾಂಶ: ನವೆಂಬರ್ 2025.

ಮುಖ್ಯ ಪರೀಕ್ಷೆ ನಡೆಯುವ ದಿನಾಂಕ: ನವೆಂಬರ್ 2025.

ಪ್ರಿಲಿಮ್ಸ್‌ ಹಾಗೂ ಮೇನ್ಸ್ ನಡೆಯುವ ಕೇಂದ್ರಗಳು

ಬೆಳಗಾವಿ, ಬೆಂಗಳೂರು,, ದಾವಣಗೆರೆ, ಧಾರವಾಡ, ಕಲಬುರಗಿ, ಹುಬ್ಬಳ್ಳಿ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿ.

ಅರ್ಜಿ ಶುಲ್ಕವೆಷ್ಟು?

ಜಿಎಸ್‌ಟಿ ಸೇರಿ ಎಸ್‌ಸಿ/ ಎಸ್‌ಟಿ/ವಿಶೇಷ ಚೇತನ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ 175 ರೂ. ಉಳಿದ ಎಲ್ಲ ವರ್ಗದ ಅಭ್ಯರ್ಥಿಗಳಿಗೆ 850 ರೂ ಶುಲ್ಕ ನಿಗದಿಪಡಿಸಲಾಗಿದೆ. ಆನ್‌ಲೈನ್‌ನಲ್ಲಿಯೇ ಅರ್ಜಿ ಶುಲ್ಕವನ್ನೂ ಪಾವತಿಸಬೇಕಿರುತ್ತದೆ.

ನೆನಪಿಡಿ

ಒಬಿಸಿ ವರ್ಗಕ್ಕೆ ಸೇರಿದ ಆದರೆ ಕೆನೆ ಪದರದ ಅಡಿಯಲ್ಲಿ ಬರುವ ಅಭ್ಯರ್ಥಿಗಳು ಒಬಿಸಿ ಮೀಸಲಾತಿಗೆ ಅರ್ಹರಾಗಿರುವುದಿಲ್ಲ. ಅವರು ಆನ್‌ಲೈನ್ ಅರ್ಜಿ ನಮೂನೆಯಲ್ಲಿ ತಮ್ಮ ವರ್ಗವನ್ನು ಸಾಮಾನ್ಯ ಎಂದು ಸೂಚಿಸಬೇಕು. ಅಭ್ಯರ್ಥಿಯು ಕಾಲಕಾಲಕ್ಕೆ ಭಾರತ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಕೆನೆರಹಿತ ಲೇಯರ್ (Non-creamy layer) ಷರತ್ತಿನೊಂದಿಗೆ OBC ಪ್ರಮಾಣಪತ್ರವನ್ನು ಹೊಂದಿರಬೇಕು.

ಇದರ ಜೊತೆಯಲ್ಲಿ ಸಿಬಿಲ್ ಸ್ಕೋರ್ ಕೂಡಾ ಬಹು ಮುಖ್ಯ.ಉತ್ತಮ ಕ್ರೆಡಿಟ್ ಹಿಸ್ಟರಿ ಹೊಂದಿರುವುದು ಕಡ್ಡಾಯ. ಸಿಬಿಲ್‌ ಸ್ಕೋರ್‌ನಲ್ಲಿ ವ್ಯತ್ಯಾಸವಾಗಿದ್ದಲ್ಲಿ, ಆಯಾ ಸಾಲಗಾರರಿಂದ ಮರುಪಾವತಿ ಕುರಿತಾದ ಪ್ರಮಾಣಪತ್ರವನ್ನು ಸಲ್ಲಿಸುವುದ ಕಡ್ಡಾಯವಾಗಿರುತ್ತದೆ. ಇಲ್ಲದಿದ್ದಲ್ಲಿ ನೇಮಕಾತಿಯನ್ನು ಅಸಿಂಧುಗೊಳಿಸಲಾಗುತ್ತದೆ.

ವೇತನ ಶ್ರೇಣಿ

24,050-64,480 ರೂ. ಅಭ್ಯರ್ಥಿಗಳು ಆಯಾ ಬ್ಯಾಂಕ್‌ನ ನಿಯಮಾನುಸಾರ ಇತರ ಭತ್ಯೆಗಳಿಗೆ ಅರ್ಹರಾಗಿರುತ್ತಾರೆ.

ಪರೀಕ್ಷೆ ಹೇಗಿರಲಿದೆ? ಹಾಗೂ ಈ ಸಲದ ಬದಲಾವಣೆಗಳೇನು?

ಬ್ಯಾಂಕಿಂಗ್ ಪರೀಕ್ಷೆಗಳು IAS ಹಾಗೂ KAS ಮಾದರಿಯಲ್ಲಿ ಎರಡು ಹಂತಗಳಲ್ಲಿ ನಡೆಯಲಿವೆ. ಪೂರ್ವಭಾವಿ (prelims), ಮುಖ್ಯ ಪರೀಕ್ಷೆ (mains). ಐಬಿಪಿಎಸ್‌ ನ ಗುಮಾಸ್ತರ ಹುದ್ದೆಗೆ ಸಂದರ್ಶನ ಇರುವುದಿಲ್ಲ. ಪೂರ್ವಭಾವಿ ಪರೀಕ್ಷೆ ಮೊದಲ ಹಂತದ ಅರ್ಹತಾ ಪರೀಕ್ಷೆಯಾಗಿದ್ದು, ಇದರಲ್ಲಿ ಅಭ್ಯರ್ಥಿಗಳನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಗುತ್ತದೆ.

ಪೂರ್ವಭಾವಿ ಪರೀಕ್ಷೆ

ಪೂರ್ವಭಾವಿಯಲ್ಲಿ ಪಡೆದ ಅಂಕಗಳು ಅರ್ಹತಾ ಪಟ್ಟಿಗೆ ಮಾತ್ರ ಮೀಸಲಾಗಿದ್ದು ಅದರಲ್ಲಿ ಪಡೆದ ಅಂಕಗಳನ್ನು ಮುಂದೆ ಪರಿಗಣಿಸಲಾಗುವುದಿಲ್ಲ. ಎರಡೂ ಪರೀಕ್ಷೆಗೂ ಅಷ್ಟೆ ಮಹತ್ವ ನೀಡಬೇಕು ಎಂಬುದನ್ನು ಖಂಡಿತಾ ಮರೆಯದಿರಿ.ನಿಗದಿತ ದಿನದಂದು ಆನ್ ಲೈನ್‌ನಲ್ಲಿಯೇ ಎರಡೂ ಲಿಖಿತ ಪರೀಕ್ಷೆಗಳು ನಡೆಯಲಿವೆ.

ಪೂರ್ವಭಾವಿ ಪರೀಕ್ಷೆ

ಪೂರ್ವಭಾವಿ ಪರೀಕ್ಷೆ ಒಂದು ಗಂಟೆಗಳ ಕಾಲ ನಡೆಯಲಿದ್ದು,(ಪ್ರತಿ ಪತ್ರಿಕೆಗೂ 20 ನಿಮಿಷಗಳಂತೆ ಒಟ್ಟಾರೆ 60 ನಿಮಿಷಗಳು) 100 ಅಂಕಗಳಿಗೆ 100 ಪ್ರಶ್ನೆಗಳನ್ನು ಕೇಳಲಾಗುತ್ತದೆ. (ಅಂದರೆ ಪ್ರತಿ ಪ್ರಶ್ನೆಗೆ ಒಂದೊಂದು ಅಂಕ ನಿಗದಿಯಾಗಿರುತ್ತದೆ) ಇದರಲ್ಲಿ ಇಂಗ್ಲೀಷ್ ಲಾಂಗ್ವೇಜಗೆ 30, ನ್ಯೂಮರಿಕಲ್ ಎಬಿಲಿಟಿಯ 35 ಹಾಗೂ ರೀಸನಿಂಗ್ ಎಬಿಲಿಟಿಯ 35 ಪ್ರಶ್ನೆಗಳಿರಲಿವೆ. ಪ್ರತಿ ಪರೀಕ್ಷೆ ಯಲ್ಲೂ ಕನಿಷ್ಟ ಅಂಕ ಗಳಿಸುವದರ ಜೊತೆಯಲ್ಲಿ ಒಟ್ಟಾರೆ ಹೆಚ್ಚು ಅಂಕ ಗಳಿಸುವುದು ಮುಖ್ಯ. ಇಂಗ್ಲೀಷ್ ಹೊರತುಪಡಿಸಿ ಉಳಿದ ಎರಡು ಪ್ರಶ್ನೆ ಪತ್ರಿಕೆಗಳು ಕನ್ನಡ,ಕೊಂಕಣಿ, ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಲಭ್ಯವಿದೆ.

ಮುಖ್ಯ ಪರೀಕ್ಷೆ

ಮುಖ್ಯ ಪರೀಕ್ಷೆಯು ಎರಡು ಗಂಟೆ ಗಳ ಕಾಲ ನಡೆಯಲಿದ್ದು, 155 ಪ್ರಶ್ನೆಗಳನ್ನು 200 ಅಂಕಗಳಿಗೆ ಬಿಡಿಸಬೇಕು.

  • General/ Financial Awareness (ಸಾಮಾನ್ಯ/ಆರ್ಥಿಕ ಅರಿವು} 40 ಪ್ರಶ್ನೆ 50 ಅಂಕಗಳು 20 ನಿಮಿಷಗಳು.
  • General English (ಸಾಮಾನ್ಯ ಇಂಗ್ಲೀಷ್) 40 ಪ್ರಶ್ನೆ 40 ಅಂಕಗಳು 35 ನಿಮಿಷಗಳು.
  • Reasoning Ability (ತಾರ್ಕಿಕ ಸಾಮರ್ಥ್ಯ) 40 ಪ್ರಶ್ನೆ 60 ಅಂಕಗಳು 35 ನಿಮಿಷಗಳು.
  • Quantitative Aptitude (ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್) 35ಪ್ರಶ್ನೆ 50 ಅಂಕಗಳು 30 ನಿಮಿಷಗಳು.

ಹೀಗೆ ಒಟ್ಟಾರೆ 155 ಪ್ರಶ್ನೆಗಳಿದ್ದು 200 ಅಂಕಗಳು ಹಾಗೂ 120 ನಿಮಿಷದ ಪರೀಕ್ಷೆಯಾಗಿದೆ.

ಇಂಗ್ಲಿಷ್‌ ಭಾಷೆಯೊಂದನ್ನು ಹೊರತುಪಡಿಸಿ ಮತ್ತೆಲ್ಲ ಪ್ರಶ್ನೆಗಳು ಇಂಗ್ಲಿಷ್, ಹಿಂದಿ, ಕನ್ನಡ ಮತ್ತು ಕೊಂಕಣಿ ಭಾಷೆಯಲ್ಲಿ ಇರುತ್ತದೆ. ಆದರೆ ಬ್ಯಾಂಕ್ ಪರೀಕ್ಷೆಯಲ್ಲಿ ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಪ್ರಶ್ನೆಗಳಿಗೆ ಉತ್ತರ ಗುರುತಿಸಬೇಕಿರುತ್ತದೆ. ಅಲ್ಲದೆ ಬಿಡಿಸಿದ ಪ್ರಶ್ನೆಗಳಿಗೆ ಉತ್ತರ ಸರಿಯಾಗಿರಲೇಬೇಕಾದುದು ಬಹಳ ಮುಖ್ಯವಾಗಿರುತ್ತದೆ. ಏಕೆಂದರೆ ಬ್ಯಾಂಕ್ ಪರೀಕ್ಷೆಗಳಲ್ಲಿ ನೆಗೆಟಿವ್ ಮಾಕ್ಸ್ (ಋಣಾತ್ಮಕ ಮೌಲ್ಯಮಾಪನ) ಇರುತ್ತದೆ. ಪದವಿ ಪರೀಕ್ಷೆಗಳಲ್ಲಿ ಇ ರೀತಿಯಾಗಿ ಇರೋದಿಲ್ಲ. ಹಾಗಾಗಿ ಋಣಾತ್ಮಕ ಮೌಲ್ಯಮಾಪನದ ಕುರಿತಂತೆ ಧನಾತ್ಮಕ ಚಿಂತನೆ ಇರಬೇಕಾದುದು ಮೊದಲ ಆದ್ಯತೆ. ತಪ್ಪು ಉತ್ತರ ಗುರುತಿಸಿದಲ್ಲಿ, ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಳಲ್ಲಿ ನಿಗದಿ ಪಡಿಸಿದ ಅಂಕದ 0.25 ಅಂಕವನ್ನು (ಋಣಾತ್ಮಕ ಅಂಕ) ಕಳೆಯಲಾಗುತ್ತದೆ.

ಪರೀಕ್ಷೆಯಲ್ಲಿ ನೀವು ಯಶಸ್ವಿಯಾಗಬೇಕಾದರೆ ಎಲ್ಲವನ್ನೂ ಉತ್ತರಿಸಲು ಹೋಗದೆ ಗೊತ್ತಿರುವ ಪ್ರಶ್ನೆಗಳಿಗೆ ಮಾತ್ರ ಉತ್ತರವನ್ನು ಗುರುತಿಸಿದರೆ ಸಾಕು. ಅತ್ಯಂತ ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸುವುದಕ್ಕಿಂತ ನಿಖರವಾಗಿ ಗೊತ್ತಿರುವ ಪ್ರಶ್ನೆಗಳಿಗೆ ಮಾತ್ರ ಉತ್ತರಿಸಬೇಕಾದುದು ಅಗತ್ಯ.

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಸಲ್ಲಿಸುವಾಗ ಎಲ್ಲ ಅಭ್ಯರ್ಥಿಗಳೂ 'ಲಿಖಿತ ದೃಢೀಕರಣ' ಅಪ್‌ಲೋಡ್ ಮಾಡಬೇಕಿರುತ್ತದೆ. ಅಭ್ಯರ್ಥಿಗಳು ಅಧಿಸೂಚನೆಯಲ್ಲಿರುವಂತೆಯೇ ಕೈಯಲ್ಲಿ ಬರೆದು ಸಹಿ ಮಾಡಿ,ಅದನ್ನು ಸ್ಕ್ಯಾನ್ ಮಾಡಿಟ್ಟುಕೊಂಡು ಅಪ್ ಲೋಡ್ ಮಾಡಬೇಕು. ಇಂಗ್ಲಿಷ್‌ನಲ್ಲಿ ಮಾತ್ರ ಈ ದೃಢೀಕರಣ ಪತ್ರ ಇರಬೇಕೆಂದು ಸೂಚಿಸಲಾಗಿದೆ. ಭಾವಚಿತ್ರ, ಸಹಿ, ಎಡಗೈ ಹೆಬ್ಬರಳ ಗುರುತು, ಸ್ವಯಂದೃಡೀಕರಣದ ಲಿಖಿತ ಪತ್ರ, ಅಂಕಪಟ್ಟಿಗಳ ಸ್ಕ್ಯಾನ್ ಪ್ರತಿಯನ್ನು ಅಪ್‌ಲೋಡ್ ಮಾಡತಕ್ಕದ್ದು. ದಾಖಲಾತಿಗಳ ಅಪ್‌ಲೋಡ್‌ಗೆ ಡಿಜಿ ಲಾಕರ್ ಸೌಲಭ್ಯವನ್ನು ಬಳಸಿಕೊಳ್ಳಬಹುದು.

ಅಧಿಸೂಚನೆಯ ಲಿಂಕ್‌

https://www.ibps.in/wpcontent/uploads/DetailedNotification_CRP_CSA_XV_Final_for_Website_1.8.2025.pdf

https://ibpsreg.ibps.in/crpcsaxvjl25/

ಹೆಚ್ಚಿನಮಾಹಿತಿಗೆ ವೆಬ್‌ಸೈಟ್‌: https://www.ibps.in/ಗೆ ಭೇಟಿ ನೀಡಿ.