KSET Hall Ticket 2025: ಕೆಸೆಟ್ ಪ್ರವೇಶ ಪತ್ರ ಬಿಡುಗಡೆ; ಹೀಗೆ ಡೌನ್‌ಲೋಡ್ ಮಾಡಿ
KSET Exam: ಕೆಸೆಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಕರ್ನಾಟಕ ರಾಜ್ಯದ ಯಾವುದೇ ವಿಶ್ವವಿದ್ಯಾನಿಲಯ / ಪ್ರಥಮ ದರ್ಜೆ ಪದವಿ ಕಾಲೇಜು/ ಉನ್ನತ ಶಿಕ್ಷಣ ಸಂಸ್ಥೆ (ಸರ್ಕಾರಿ, ಅನುದಾನಿತ ಮತ್ತು ಖಾಸಗಿ) ಗಳಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇಮಕಗೊಳ್ಳಲು ಅರ್ಹರಾಗಿರುತ್ತಾರೆ.
-
Prabhakara R
Oct 25, 2025 4:54 PM
ಬೆಂಗಳೂರು: 2025ನೇ ಸಾಲಿನ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯ (KSET Hall Ticket 2025) ಪ್ರವೇಶ ಪತ್ರವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಶುಕ್ರವಾರ ಬಿಡುಗಡೆ ಮಾಡಿದೆ. ನ.2 ರಂದು ರಾಜ್ಯದ ವಿವಿಧ ಪರೀಕ್ಷಾ ಕೇಂದ್ರದಲ್ಲಿ ಕೆಸೆಟ್ ಪರೀಕ್ಷೆ ನಡೆಯಲಿದೆ. ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಕೆಇಎ ವೆಬ್‌ಸೈಟ್ ಮೂಲಕ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಹಾಲ್ ಟಿಕೆಟ್ ಡೌನ್‌ಲೋಡ್ ಮಾಡುವುದು ಹೇಗೆ?
- ಕೆಇಎ ವೆಬ್‌ಸೈಟ್‌ಗೆ ಭೇಟಿ ನೀಡಿ
- ಕೆಇಎ ಮುಖಪುಟದ ಪ್ರವೇಶ ಕೆಟಗರಿಯಲ್ಲಿ ಕೆಸೆಟ್ 2025 ಲಿಂಕ್ ಕ್ಲಿಕ್ ಮಾಡಿ https://cetonline.karnataka.gov.in/kea/kset2025
- ನಂತರ ಪರೀಕ್ಷೆ, ಅರ್ಜಿ ಸಂಖ್ಯೆ, ಹೆಸರು ನಮೂದಿಸಿ, ಹಾಲ್ ಟಿಕೆಟ್ ಡೌನ್‌ಲೋಡ್ ಮಾಡಿಕೊಳ್ಳಿ
ಕೆಸೆಟ್ ಪರೀಕ್ಷೆ ಕುರಿತ ವಿವರ
ಕೆಸೆಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಕರ್ನಾಟಕ ರಾಜ್ಯದ ಯಾವುದೇ ವಿಶ್ವವಿದ್ಯಾನಿಲಯ / ಪ್ರಥಮ ದರ್ಜೆ ಪದವಿ ಕಾಲೇಜು/ ಉನ್ನತ ಶಿಕ್ಷಣ ಸಂಸ್ಥೆ (ಸರ್ಕಾರಿ, ಅನುದಾನಿತ ಮತ್ತು ಖಾಸಗಿ) ಗಳಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇಮಕಗೊಳ್ಳಲು ಅರ್ಹರಾಗಿರುತ್ತಾರೆ. ಕೆಸೆಟ್ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಸಾಮಾನ್ಯ ಅಭ್ಯರ್ಥಿಗಳು ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇ.55 ಅಂಕ ಹಾಗೂ ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ವಿಶೇಷ ಚೇತನ, ತೃತೀಯ ಲಿಂಗಿ ಅಭ್ಯರ್ಥಿಗಳಿಗೆ ಕನಿಷ್ಠ 50 ಅಂಕ ಪಡೆದಿರಬೇಕು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ-2025 (ಕೆಸೆಟ್-2025) ನ.2ರಂದು ನಡೆಯಲಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆ.28ರಂದು ಆರಂಭವಾಗಿತ್ತು. ಅರ್ಜಿ ಸಲ್ಲಿಸಲು ಸೆ.18 ಕೊನೆಯ ದಿನವಾಗಿತ್ತು.ನ.2ರಂದು ಕೆಸೆಟ್ (KSET) 2025ರ ಪರೀಕ್ಷೆಯನ್ನು 33 ವಿಷಯಗಳಲ್ಲಿ ನಡೆಸಲಾಗುತ್ತಿದೆ.
ಕೆಸೆಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆಯಲು, ಸಾಮಾನ್ಯ ವರ್ಗದ ಅಭ್ಯರ್ಥಿಗಳು ಎರಡೂ ಪತ್ರಿಕೆಗಳಲ್ಲಿ ಕನಿಷ್ಠ ಶೇ. 40 ಅಂಕಗಳು ಮತ್ತು ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ವಿಶೇಷ ಚೇತನ, ತೃತೀಯ ಲಿಂಗಿ ಅಭ್ಯರ್ಥಿಗಳಿಗೆ ಕನಿಷ್ಠ ಶೇ.35 ಒಟ್ಟು ಅಂಕಗಳು ಅಗತ್ಯವಿದೆ.
ಈ ಸುದ್ದಿಯನ್ನೂ ಓದಿ | Government job age limit: ರಾಜ್ಯ ಸರ್ಕಾರಿ ನೌಕರಿ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್; ನೇರ ನೇಮಕಾತಿಗೆ 3 ವರ್ಷ ವಯೋಮಿತಿ ಸಡಿಲಿಕೆ
ಕೆಸೆಟ್ ಪರೀಕ್ಷೆ ಮುಂದೂಡಿ; ಕೆಇಎಗೆ ರಾಜ್ಯ ಸರ್ಕಾರಿ ನೌಕರರ ಸಂಘ ಮನವಿ
ಬೆಂಗಳೂರು: ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ -2025 (ಕೆಸೆಟ್-2025) ಮುಂದೂಡಲು ಕೆಇಎಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮನವಿ ಮಾಡಿದೆ. ಈ ಬಗ್ಗೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರಿಗೆ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಪತ್ರ ಸಲ್ಲಿಸಿದ್ದಾರೆ. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ-2025ರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಶಿಕ್ಷಕರು ಕೆಸೆಟ್ ಪರೀಕ್ಷೆಗೆ (KSET 2025) ಪೂರ್ವಸಿದ್ಧತೆ ಮಾಡಿಕೊಳ್ಳಲು ಸಮಯಾವಕಾಶ ಕಲ್ಪಿಸಿ, ನ.2ರಂದು ನಡೆಯುವ KSET ಪರೀಕ್ಷೆಯನ್ನು ಮುಂದೂಡಬೇಕು ಎಂದು ಕೋರಿದ್ದಾರೆ.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ-2025ರ ಗಣತಿ ಕಾರ್ಯವು ರಾಜ್ಯದಾದ್ಯಂತ ಅ.4ರಿಂದ ಆರಂಭವಾಗಿದ್ದು, ರಾಜ್ಯ ಸರ್ಕಾರದ ಅಧಿಕಾರಿ-ನೌಕರರು/ಶಿಕ್ಷಕರು ಸಮೀಕ್ಷಾ ಕಾರ್ಯದಲ್ಲಿ ತೊಡಗಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ಅಂತೆಯೇ, ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ವತಿಯಿಂದ ನ.2 ರಂದು KSET ಪರೀಕ್ಷೆ ನಿಗದಿಯಾಗಿದೆ.
ಆದರೆ, ಕಳೆದ 15 ದಿನಗಳಿಂದ ಸಮೀಕ್ಷಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಕೆಸೆಟ್ ಪರೀಕ್ಷೆ ಬರೆಯುತ್ತಿರುವ ಶಿಕ್ಷಕರು ಪೂರ್ವಸಿದ್ಧತೆ ನಡೆಸಲು ಸಮಯಾವಕಾಶ ಲಭ್ಯವಾಗದೆ ಇರುವ ಕಾರಣ ನ.2ರಂದು ನಿಗದಿಪಡಿಸಿರುವ KSET ಪರೀಕ್ಷೆಯನ್ನು ಮುಂದೂಡಿ ಅಭ್ಯಾಸಕ್ಕೆ ಸಮಯಾವಕಾಶ ಕಲ್ಪಿಸುವಂತೆ ಶಿಕ್ಷಕರುಗಳಿಂದ ಮನವಿ ಸಲ್ಲಿಕೆಯಾಗಿದೆ. ಈ ಹಿನ್ನೆಲೆಯಲ್ಲಿ KSET ಪರೀಕ್ಷೆಯನ್ನು ಮುಂದೂಡಬೇಕು ಎಂದು ಸಿ.ಎಸ್.ಷಡಾಕ್ಷರಿ ಕೋರಿದ್ದಾರೆ.