KSET 2025: ಕೆಸೆಟ್ ಪರೀಕ್ಷೆ ಮುಂದೂಡಿ; ಕೆಇಎಗೆ ರಾಜ್ಯ ಸರ್ಕಾರಿ ನೌಕರರ ಸಂಘ ಮನವಿ
karnataka examination authority: ಕೆಸೆಟ್ ಪರೀಕ್ಷೆ ಬರೆಯಬೇಕಿರುವ ಶಿಕ್ಷಕರು ಕಳೆದ 15 ದಿನಗಳಿಂದ ಸಮೀಕ್ಷಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಿಂದ ಅವರಿಗೆ ಪೂರ್ವಸಿದ್ಧತೆ ನಡೆಸಲು ಸಮಯಾವಕಾಶ ಲಭ್ಯವಾಗದೆ ಇರುವ ಕಾರಣ ನ.2ರಂದು ನಿಗದಿಪಡಿಸಿರುವ KSET ಪರೀಕ್ಷೆಯನ್ನು ಮುಂದೂಡಬೇಕು ಎಂದು ಕೆಇಎಗೆ ರಾಜ್ಯ ಸರ್ಕಾರಿ ನೌಕರರ ಸಂಘ ಮನವಿ ಮಾಡಿದೆ.

-

ಬೆಂಗಳೂರು: ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ -2025 (ಕೆಸೆಟ್-2025) ಮುಂದೂಡಲು ಕೆಇಎಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮನವಿ ಮಾಡಿದೆ. ಈ ಬಗ್ಗೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರಿಗೆ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಪತ್ರ ಸಲ್ಲಿಸಿದ್ದಾರೆ. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ-2025ರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಶಿಕ್ಷಕರು ಕೆಸೆಟ್ ಪರೀಕ್ಷೆಗೆ (KSET 2025) ಪೂರ್ವಸಿದ್ಧತೆ ಮಾಡಿಕೊಳ್ಳಲು ಸಮಯಾವಕಾಶ ಕಲ್ಪಿಸಿ, ನ.2ರಂದು ನಡೆಯುವ KSET ಪರೀಕ್ಷೆಯನ್ನು ಮುಂದೂಡಬೇಕು ಎಂದು ಕೋರಿದ್ದಾರೆ.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ-2025ರ ಗಣತಿ ಕಾರ್ಯವು ರಾಜ್ಯದಾದ್ಯಂತ ಅ.4ರಿಂದ ಆರಂಭವಾಗಿದ್ದು, ರಾಜ್ಯ ಸರ್ಕಾರದ ಅಧಿಕಾರಿ-ನೌಕರರು/ಶಿಕ್ಷಕರು ಸಮೀಕ್ಷಾ ಕಾರ್ಯದಲ್ಲಿ ತೊಡಗಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ಅಂತೆಯೇ, ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ವತಿಯಿಂದ ನ.2 ರಂದು KSET ಪರೀಕ್ಷೆ ನಿಗದಿಯಾಗಿದೆ.
ಆದರೆ, ಕಳೆದ 15 ದಿನಗಳಿಂದ ಸಮೀಕ್ಷಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಕೆಸೆಟ್ ಪರೀಕ್ಷೆ ಬರೆಯುತ್ತಿರುವ ಶಿಕ್ಷಕರು ಪೂರ್ವಸಿದ್ಧತೆ ನಡೆಸಲು ಸಮಯಾವಕಾಶ ಲಭ್ಯವಾಗದೆ ಇರುವ ಕಾರಣ ನ.2ರಂದು ನಿಗದಿಪಡಿಸಿರುವ KSET ಪರೀಕ್ಷೆಯನ್ನು ಮುಂದೂಡಿ ಅಭ್ಯಾಸಕ್ಕೆ ಸಮಯಾವಕಾಶ ಕಲ್ಪಿಸುವಂತೆ ಶಿಕ್ಷಕರುಗಳಿಂದ ಮನವಿ ಸಲ್ಲಿಕೆಯಾಗಿದೆ. ಈ ಹಿನ್ನೆಲೆಯಲ್ಲಿ KSET ಪರೀಕ್ಷೆಯನ್ನು ಮುಂದೂಡಬೇಕು ಎಂದು ಸಿ.ಎಸ್.ಷಡಾಕ್ಷರಿ ಕೋರಿದ್ದಾರೆ.