KEA Exam: ಒಳ ಮೀಸಲಾತಿ ಎಫೆಕ್ಟ್; ವಿವಿಧ ಹುದ್ದೆಗಳ ನೇಮಕಾತಿಗೆ ಮೇ 9, 10ರಂದು ನಡೆಯಬೇಕಿದ್ದ ಪರೀಕ್ಷೆ ರದ್ದು
KEA Recruitment: ಏಪ್ರಿಲ್ 24ರಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ವಿಶೇಷ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ನಿಗದಿ ಬಗ್ಗೆ ಮಹತ್ವದ ತೀರ್ಮಾನ ಮಾಡಲಾಗಿತ್ತು. ಒಳಮೀಸಲಾತಿ ಅಳವಡಿಸದೇ ಹೊರಡಿಸಿರುವ ಎಲ್ಲಾ ನೇಮಕಾತಿ ಅಧಿಸೂಚನೆಗಳನ್ನು ಹಿಂಪಡೆದು, ಪರಿಷ್ಕೃತ ಅಧಿಸೂಚನೆಗಳನ್ನು ಹೊರಡಿಸಲು ಆದೇಶ ಹೊರಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳ ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಕೆಇಎ ರದ್ದುಪಡಿಸಿದೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು: ಆರ್‌ಜಿಯುಎಚ್‌ಎಸ್, ಬೆಂಗಳೂರು ಜಲಮಂಡಲಿ, ಕೃಷಿ ಮಾರಾಟ ಇಲಾಖೆ ಹಾಗೂ ಕೆಎಸ್ಎಸ್ಐಡಿಸಿಯ ವಿವಿಧ ಹುದ್ದೆಗಳ ನೇಮಕಾತಿಗೆ ಮೇ 9 ಮತ್ತು 10ರಂದು ನಡೆಸಬೇಕಿದ್ದ ಲಿಖಿತ ಪರೀಕ್ಷೆಯನ್ನು (KEA Exam) ರದ್ದುಪಡಿಸಲಾಗಿದೆ. ಪರೀಕ್ಷೆ ನಡೆಸದಿರುವ ಹುದ್ದೆಗಳಿಗೆ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಅಳವಡಿಸಿಕೊಂಡು ಹೊಸದಾಗಿ ಅಧಿಸೂಚನೆ ಹೊರಡಿಸಲು ಏ.4ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿರುವ ಕಾರಣ ಈ ಪರೀಕ್ಷೆಯನ್ನು ರದ್ದುಪಡಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examination authority) ತಿಳಿಸಿದೆ.
ಈ ಹುದ್ದೆಗಳ ನೇಮಕಾತಿ ಪರೀಕ್ಷೆ ಇದೆ:
ವ್ಯವಸ್ಥಾಪಕರು, ಸಹಾಯಕ ವ್ಯವಸ್ಥಾಪಕರು ಮತ್ತು ಸಹಾಯಕ ಎಂಜಿನಿಯರ್ (ವಿದ್ಯುತ್) ಹುದ್ದೆಗಳಿಗೆ ಏ.26 ಮತ್ತು 27ರಂದು ಪತ್ರಿಕೆ-2ರ (ನಿರ್ದಿಷ್ಟ ಪತ್ರಿಕೆ) ಪರೀಕ್ಷೆ ನಡೆಸಿದ್ದು, ಅಂತಹವರಿಗೆ ಮೇ 9 ಮತ್ತು 10 ರಂದು ಸಾಮಾನ್ಯ ಜ್ಞಾನ ಪತ್ರಿಕೆಯ (ಪತ್ರಿಕೆ-1) ಪರೀಕ್ಷೆ ನಡೆಸಲಾಗುವುದು. ಇದಕ್ಕೆ ಪ್ರವೇಶ ಪತ್ರವನ್ನು ಕೆಇಎ ವೆಬ್ ಸೈಟ್ ನಿಂದ ಡೌನ್ ಲೋಡ್ ಮಾಡಿಕೊಳ್ಳಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
#KeaRecruitment: ಆರ್ ಜಿ ಯು ಹೆಚ್ ಎಸ್, ಬೆಂಗಳೂರು ಜಲಮಂಡಲಿ, ಕೃಷಿ ಮಾರಾಟ ಇಲಾಖೆ ಹಾಗೂ ಕೆಎಸ್ಎಸ್ಐಡಿಸಿ ಯ ವಿವಿಧ ಹುದ್ದೆಗಳ ನೇಮಕಾತಿಗೆ ಇದೇ 9 ಮತ್ತು 10ರಂದು ನಡೆಸಬೇಕಿದ್ದ ಲಿಖಿತ ಪರೀಕ್ಷೆಯನ್ನು ರದ್ದುಪಡಿಸಲಾಗಿದೆ.
— ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA (@KEA_karnataka) May 5, 2026
ಪರೀಕ್ಷೆ ನಡೆಸದಿರುವ ಹುದ್ದೆಗಳಿಗೆ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಅಳವಡಿಸಿಕೊಂಡು ಹೊಸದಾಗಿ ಅಧಿಸೂಚನೆ… pic.twitter.com/akfvJjBQ3E
ಒಳಮೀಸಲಾತಿ ಜಾರಿ ಮಾಡಿ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ
ಬೆಂಗಳೂರು: ಹೈಕೋರ್ಟ್ ಮಧ್ಯಂತರ ಆದೇಶದನ್ವಯ ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಶೇ.17 ರಿಂದ ಶೇ.15ಕ್ಕೆ ಸೀಮಿತಗೊಳಿಸಿ, ಒಳಮೀಸಲಾತಿ (Internal Reservation) ಜಾರಿ ಮಾಡಿ ರಾಜ್ಯ ಸರ್ಕಾರ ಇತ್ತೀಚೆಗೆ ಅಧಿಕೃತ ಆದೇಶ ಹೊರಡಿಸಿತ್ತು. ಏಪ್ರಿಲ್ 24ರಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ವಿಶೇಷ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ನಿಗದಿ ಬಗ್ಗೆ ಮಹತ್ವದ ತೀರ್ಮಾನ ಮಾಡಲಾಗಿತ್ತು. ಈ ನಿಟ್ಟಿನಲ್ಲಿ ಒಳ ಮೀಸಲಾತಿ ಜಾರಿ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವಾ ನಿಯಮಗಳು) ಸರ್ಕಾರದ ಅಧೀನ ಕಾರ್ಯದರ್ಶಿ ಆಶಾಕುಮಾರಿ ಎ.ಜೆ. ಆದೇಶ ಹೊರಡಿಸಿದ್ದರು.
ಶೇ.50% ಮೀಸಲಾತಿ ಪ್ರಮಾಣವನ್ನು ತಾತ್ಕಾಲಿಕವಾಗಿ ಅಳವಡಿಸಿಕೊಂಡು ನೇಮಕಾತಿ ಮುಂದುವರಿಸಲು ನಿರ್ಧರಿಸಿರುವುದರಿಂದ, ಅದರಂತೆ ನೇಮಕಾತಿ ಹಾಗೂ ಪ್ರವೇಶಾತಿಗಳಲ್ಲಿ ಪರಿಶಿಷ್ಟ ಜಾತಿಗೆ ನಿಗದಿಪಡಿಸಿರುವ ಶೇಕಡಾ 15 ಮೀಸಲಾತಿಯಲ್ಲಿ ಪ್ರವರ್ಗ-ಎ, ಪ್ರವರ್ಗ-ಬಿ ಪ್ರವರ್ಗ-ಸಿ ಗಳಿಗೆ ಒಳಮೀಸಲಾತಿಯನ್ನು ಕ್ರಮವಾಗಿ 5.25, 5.25, 4.5 ಪ್ರಮಾಣದಲ್ಲಿ ಅನುಷ್ಠಾನಗೊಳಿಸಬೇಕು. ಪ್ರವರ್ಗ-ಸಿಗೆ ಲಭ್ಯವಾಗುವ ಹುದ್ದೆಗಳಲ್ಲಿ/ಪ್ರವೇಶಾತಿ ಸೀಟುಗಳಲ್ಲಿ ಶೇಕಡಾ 20ರಷ್ಟು ಹುದ್ದೆಗಳನ್ನು/ಪ್ರವೇಶಾತಿ ಸೀಟುಗಳನ್ನು ಪರಿಶಿಷ್ಟ ಜಾತಿಗಳಲ್ಲಿನ 59 ಅತ್ಯಂತ ಹಿಂದುಳಿದ ಜಾತಿಗಳಿಗೆ ಮೀಸಲಿರಿಸುವುದು. ಒಂದು ವೇಳೆ, ಈ 59 ಅತ್ಯಂತ ಹಿಂದುಳಿದ ಜಾತಿಗಳಿಗೆ ಸೇರಿದವರು ಲಭ್ಯವಾಗದಿದ್ದಲ್ಲಿ ಆ ಹುದ್ದೆಗಳನ್ನು ಹಾಗೂ ಪ್ರವೇಶಾತಿ ಸೀಟುಗಳನ್ನು ಪ್ರವರ್ಗ 'ಸಿ' ಯ ಇತರೆ ಜಾತಿಗಳಿಗೆ ಲಭ್ಯಗೊಳಿಸಬೇಕು.
Cabinet meeting: ಹೊಸ ಒಳ ಮೀಸಲಾತಿ ಅನ್ವಯ 56,432 ಹುದ್ದೆಗಳ ನೇಮಕಾತಿಗೆ ತುರ್ತು ಕ್ರಮ: ಸಿಎಂ ಘೋಷಣೆ
ಸರ್ಕಾರದ 27.02.2026ರ ಆದೇಶದ ಅನ್ವಯ ಒಳಮೀಸಲಾತಿ ಅಳವಡಿಸದೇ ಹೊರಡಿಸಿರುವ ಎಲ್ಲಾ ನೇಮಕಾತಿ ಅಧಿಸೂಚನೆಗಳನ್ನು ಹಿಂಪಡೆದು, ಮೇಲಿನಂತೆ ಒಳಮೀಸಲಾತಿ ಅಳವಡಿಸಿಕೊಂಡು ಪರಿಷ್ಕೃತ ಅಧಿಸೂಚನೆಗಳನ್ನು ಕೂಡಲೇ ಹೊರಡಿಸಿ, ನೇಮಕಾತಿಗಳನ್ನು ಮಾಡಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿತ್ತು.