Akshaya Trutiya Special: ಅಕ್ಷಯ ತೃತೀಯಗೆ ಧರಿಸಿದರೂ ಭಾರವಿಲ್ಲದ ಬಗೆಬಗೆಯ ಜ್ಯುವೆಲರಿಗಳ ಆಗಮನ
Akshaya Trutiya Special: ಅಕ್ಷಯ ತೃತೀಯಗೆ ಧರಿಸಿದರೂ ಭಾರವಿಲ್ಲದ ಲೈಟ್‌ವೈಟ್‌ನ ವೈವಿಧ್ಯಮಯ ಜ್ಯುವೆಲರಿಗಳು ಆಗಮಿಸಿವೆ. ಯಾವ್ಯಾವ ಡಿಸೈನ್‌ನವು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ? ಈ ಜ್ಯುವೆಲರಿಗಳ ನಿರ್ವಹಣೆ ಹೇಗೆ? ಎಂಬುದರ ಕುರಿತು ಜ್ಯುವೆಲ್ ಡಿಸೈನರ್ ಸಂಕ್ಷಿಪ್ತವಾಗಿ ತಿಳಿಸಿದ್ದಾರೆ.

ಚಿತ್ರಕೃಪೆ: ಪಿಕ್ಸೆಲ್

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಅಕ್ಷಯ ತೃತೀಯಗೆ (Akshaya Trutiya Special) ಧರಿಸಿದರೂ ಭಾರವಿಲ್ಲದ ಲೈಟ್‌ವೈಟ್‌ನ ವೈವಿಧ್ಯಮಯ ಜ್ಯುವೆಲರಿಗಳು ಆಗಮಿಸಿವೆ. ಮಹಿಳೆಯರು ಮಾತ್ರವಲ್ಲ, ಹುಡುಗಿಯರಿಗೂ ಇಷ್ಟವಾಗುವಂತಹ ವಿನ್ಯಾಸದಲ್ಲಿ ಬಂದಿವೆ. ಉದಾಹರಣೆಗೆ, ಗಂಡುಭೇರುಂಡ, ಆನೆ, ನವಿಲು, ಗಿಡ-ಬಳ್ಳಿ-ಹೂಗಳ ಕುಸುರಿ, ಲಕ್ಷ್ಮಿ, ಗಣೇಶ, ಶಿವ, ಕೃಷ್ಣ ಸೇರಿದಂತೆ ನಾನಾ ಬಗೆಯ ಸಾಂಪ್ರದಾಯಿಕ, ಟ್ರಾಪಿಕಲ್ ಹಾಗೂ ಟಿಪಿಕಲ್ ವಿನ್ಯಾಸಗಳ ಆಭರಣಗಳು ಆಭರಣ ಲೋಕಕ್ಕೆ ಕಾಲಿಟ್ಟಿವೆ ಎನ್ನುತ್ತಾರೆ ಜ್ಯುವೆಲ್ ಎಕ್ಸ್‌ಪರ್ಟ್ಸ್. ಅವರ ಪ್ರಕಾರ, ಐವತ್ತು ಗ್ರಾಂ ಚಿನ್ನದಲ್ಲಿ ಕನಿಷ್ಟ ಐದು ಬಗೆಯ ಆಭರಣಗಳು, ಕಿವಿಯೊಲೆ, ಸಿಂಪಲ್ ಬಳೆ, ಉಂಗುರ, ಹೀಗೆ ನಾನಾ ಬಗೆಯ ಆಭರಣಗಳ ಸೆಟ್‌ಗಳನ್ನು ಖರೀದಿಸಬಹುದು. ಇನ್ನು, ತೀರಾ ಕಡಿಮೆ ತೂಕದಲ್ಲೆ ವಿನ್ಯಾಸಗೊಳಿಸಿರುವ ಮೆಷಿನ್ ಕಟ್ಟಿಂಗ್ ಚಿನ್ನದ ಆಭರಣಗಳು ದೊರೆಯುತ್ತಿವೆ. ಆ್ಯಂಟಿಕ್ ಡಿಸೈನ್ಸ್ ಅತಿ ಹೆಚ್ಚು ಬೇಡಿಕೆಯಲ್ಲಿವೆ ಎನ್ನುತ್ತಾರೆ ಎಕ್ಸ್‌ಪರ್ಟ್ಸ್.

ಬಗೆಬಗೆಯ ಆಭರಣ
ಏರುತ್ತಿರುವ ಚಿನ್ನದ ಬೆಲೆಯಿಂದಾಗಿ ಒಂದೇ ಡಿಸೈನ್ ಆಭರಣಕ್ಕೆ ಸಾಕಷ್ಟು ದುಡ್ಡು ಸುರಿಯುವ ಬದಲು ಲೈಟ್‌ವೈಟ್‌ನಲ್ಲೆ ನಾನಾ ಬಗೆಯ ಆಭರಣಗಳನ್ನು ಕೊಂಡು ಧರಿಸುವವರು ಇಂದು ಹೆಚ್ಚಾಗಿದ್ದಾರೆ. ಇದಕ್ಕೆ ಪೂರಕ ಎಂಬಂತೆ, ನಾನಾ ವೆರೈಟಿಗಳಲ್ಲಿ ಜ್ಯುವೆಲರಿಗಳು ದೊರೆಯುತ್ತಿವೆ. ಇಂಡಿಯನ್ ಹಾಗೂ ವೆಸ್ಟರ್ನ್ ಉಡುಗೆಗಳಿಗೆ ಎರಡಕ್ಕೂ ಹೊಂದುವಂತಹ ಡಿಸೈನ್‌ನವು ಚಾಲ್ತಿಯಲ್ಲಿವೆ ಎನ್ನುತ್ತಾರೆ ಆಭರಣ ವಿನ್ಯಾಸಕಿ ಚಿತ್ರಾ.
ಹಬ್ಬಗಳ ಹೆಸರಲ್ಲಿ ಖರೀದಿ
ಬೆಲೆ ಏರಿದೆ ಎಂದು ಅಕ್ಷಯ ತೃತೀಯಾದಂದು ಚಿನ್ನ ಕೊಳ್ಳದೇ ಸುಮ್ಮನೆ ಇರಲಾಗದು ಕೂಡ. ಹಬ್ಬ-ಹರಿದಿನಗಳ ಹೆಸರಲ್ಲಿ ಕೂಡಿಟ್ಟ ಹಣದಲ್ಲಿ ಒಂದಿಷ್ಟು ಚಿನ್ನವನ್ನು ತೆಗೆದಿಡುವುದು ನಮಗೆ ರೂಢಿಯಾಗಿದೆ. ಮುಂದೊಮ್ಮೆ ಇವು ಕಷ್ಟಕಾಲದಲ್ಲಿ ಸಹಾಯವಾಗಲೂಬಹುದು. ಹಾಗಾಗಿ ಈ ಬಾರಿ ಲೈಟ್‌ವೈಟ್ ಆಭರಣಗಳನ್ನು ಕೊಳ್ಳುತ್ತಿದ್ದೇವೆ ಎನ್ನುತ್ತಾರೆ ಉದ್ಯೋಗಸ್ಥ ಮಹಿಳೆ ಜೀವಿತಾ. ಇನ್ನು, ಅಕ್ಷಯ ತೃತೀಯ ಎಂದರೆ ಸಂಪತ್ತು ವೃದ್ಧಿಸುವ ದಿನ. ಈ ಕಾರಣಕ್ಕೆ ಆಭರಣವನ್ನು ಪ್ರತಿ ವರ್ಷ ಖರೀದಿಸುತ್ತೇವೆ. ಈ ಸಲ ಲೈಟ್‌ವೈಟ್ ನೆಕ್ಲೇಸ್ ಖರೀದಿಸುತ್ತಿದ್ದೇವೆ ಎನ್ನುತ್ತಾರೆ ಗೃಹಿಣಿ ರಾಜಿ ಹಾಗೂ ಧನ್ಯಾ.

ಲೈಟ್‌ವೈಟ್ ಆಭರಣಗಳ ಮೇಲೂ ಆಫರ್
ಅಕ್ಷಯ ತೃತೀಯದ ಅಂಗವಾಗಿ ಎಲ್ಲೆಡೆ ಆಭರಣಗಳ ಅಂಗಡಿಗಳಲ್ಲಿ ಆಫರ್‌ಗಳನ್ನು ನೀಡಲಾಗುತ್ತಿದೆ. ಅಲ್ಲದೇ, ನಾನಾ ರಿಯಾಯಿತಿ ಘೋಷಿಸಿರುವ ಆಭರಣ ಮಳಿಗೆಗಳಿಗೆ ಗ್ರಾಹಕರು ಅಪಾರ ಪ್ರಮಾಣದಲ್ಲಿ ಭೇಟಿ ನೀಡುತ್ತಿದ್ದಾರೆ. ಗ್ರಾಹಕರನ್ನು ಆಕರ್ಷಿಸುವ ಆಭರಣ ಜಾಹೀರಾತುಗಳು ಇಂಟರ್‌ನೆಟ್, ಮಾಧ್ಯಮಗಳ ಮೂಲಕ ಸಾರ್ವಜನಿಕರನ್ನು ಆಕರ್ಷಿಸುತ್ತಿವೆ ಎನ್ನುತ್ತಾರೆ ಜ್ಯುವೆಲ್ ಶಾಪ್‌ವೊಂದರ ಮಾಲೀಕರು.
ಈ ಸುದ್ದಿಯನ್ನೂ ಓದಿ | Akshaya Trutiya Special: ಅಕ್ಷಯ ತೃತೀಯಾಗೆ ಎಂಟ್ರಿ ನೀಡಿದ ಕಂಟೆಂಪರರಿ ಡೈಮಂಡ್ ಜ್ಯುವೆಲರಿಗಳು
ಲೈಟ್‌ವೈಟ್ ಆಭರಣ ಪ್ರಿಯರ ಗಮನಕ್ಕೆ
- ತೂಕವಿರದ ಆಭರಣಗಳನ್ನು ಪ್ರತಿದಿನ ಬಳಸದಿರಿ.
- ಇವು ಅತಿ ಸೂಕ್ಷ್ಮವಾಗಿರುತ್ತವೆ. ಬಳಸುವಾಗ ಜಾಗ್ರತೆ.
- ತೆಗೆದಿರಿಸುವಾಗ ಇತರೆ ಆಭರಣಗಳಿಂದ ಪ್ರತ್ಯೇಕವಾಗಿರಿಸಿ.
- ಕೊಳ್ಳುವಾಗ ಮರೆಯದೇ ಸರ್ಟಿಫಿಕೇಟ್ ಪಡೆಯಿರಿ
- ಗುಣಮಟ್ಟದ ಸೇವೆ ಒದಗಿಸುವ ಆಭರಣ ಮಳಿಗೆಗಳಿಗೆ ಭೇಟಿ ನೀಡುವುದು ಒಳ್ಳೆಯದು
- ಆನ್‌ಲೈನ್ ಮೂಲಕ ಆಭರಣ ಖರೀದಿಸಬೇಕೆಂದರೆ ಅಲ್ಲಿಯ ನಿಯಮ, ಷರತ್ತುಗಳನ್ನು ಸರಿಯಾಗಿ ಓದಿಕೊಳ್ಳಿ. ಇಲ್ಲವಾದರೆ ಮೋಸಕ್ಕೊಳಗಾಗುವ ಸಾಧ್ಯತೆ ಇರುತ್ತದೆ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)