Priyanka Jarkiholi's engagement: ಸರಳವಾಗಿ ನೆರವೇರಿತು ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ನಿಶ್ಚಿತಾರ್ಥ; ಹುಡುಗ ಯಾರು?
ಬೆಳಗಾವಿಯ ಪ್ರತಿಷ್ಠಿತ ಕ್ಲಬ್ ರಸ್ತೆಯಲ್ಲಿರುವ ಹಿಲ್ ಗಾರ್ಡನ್ ನಿವಾಸದಲ್ಲಿ ಯುವ ಸಂಸದೆ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕ್ ಜಾರಕಿಹೊಳಿ ಅವರ ವಿವಾಹ ನಿಶ್ಚಿತಾರ್ಥ ನಡೆಯಿತು. ಕಾರ್ಯಕ್ರಮದಲ್ಲಿ ಕುಟುಂಬದ ಆಪ್ತರು ಹಾಗೂ ಬಂಧುಗಳು ಭಾಗವಹಿಸಿದ್ದರು.
-
ಬೆಳಗಾವಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದೆ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅವರ ವಿವಾಹ ನಿಶ್ಚಿತಾರ್ಥವು (Priyanka Jarkiholi's engagement) ಬೆಳಗಾವಿಯಲ್ಲಿ ಸರಳವಾಗಿ ನೆರವೇರಿದೆ. ಬೆಳಗಾವಿಯ ಪ್ರತಿಷ್ಠಿತ ಕ್ಲಬ್ ರಸ್ತೆಯಲ್ಲಿರುವ ಹಿಲ್ ಗಾರ್ಡನ್ ನಿವಾಸದಲ್ಲಿ ಶುಭ ಸಮಾರಂಭ ನಡೆಯಿತು. ಕುಟುಂಬದ ಆಪ್ತರು ಹಾಗೂ ಬಂಧುಗಳ ಸಮ್ಮುಖದಲ್ಲಿ ನವ ಜೋಡಿ ಉಂಗುರ ಬದಲಿಸಿಕೊಂಡಿದ್ದಾರೆ.
ಪ್ರಿಯಾಂಕಾ ಜಾರಕಿಹೊಳಿ ಭಾವಿ ಪತಿ ಯಾರು?
ಪ್ರಿಯಾಂಕಾ ಜಾರಕಿಹೊಳಿ ಅವರ ಕೈಹಿಡಿಯಲಿರುವ ಹುಡುಗನ ಹೆಸರು ಗೌತಮ್ ಪಾಟೀಲ್. ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಆಗಿರುವ ಗೌತಮ್, ರಾಯಚೂರು ಜಿಲ್ಲೆಯ ದೇವದುರ್ಗ ಮೂಲದವರು. ಗೌತಮ್ ಅವರ ತಂದೆ ನಿವೃತ್ತ ಆರ್‌ಟಿಒ ಅಧಿಕಾರಿಯಾಗಿದ್ದಾರೆ.ವರನ ಕುಟುಂದ ಹೆಚ್ಚಿನ ಮಾಹಿತಿಯನ್ನು ಜಾರಕಿಹೊಳಿ ಕುಟುಂಬ ಇನ್ನೂ ಬಹಿರಂಗಪಡಿಸಿಲ್ಲ.

ಶುಭ ಸಮಾರಂಭಕ್ಕಾಗಿ ಒಂದಾದ ಜಾರಕಿಹೊಳಿ ಸಹೋದರರು
ರಾಜಕೀಯವಾಗಿ ಜಾರಕಿಹೊಳಿ ಸಹೋದರರ ನಡುವೆ ಭಿನ್ನಾಭಿಪ್ರಾಯಗಳಿದ್ದರೂ, ಮನೆಯ ಶುಭ ಸಮಾರಂಭಕ್ಕಾಗಿ ಎಲ್ಲ ಸಹೋದರರು ಒಟ್ಟಾಗಿ ಸೇರಿದ್ದು ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ನಿಶ್ಚಿತಾರ್ಥ ಸಮಾರಂಭದಲ್ಲಿ ಶಾಸಕರಾದ ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ, ಪ್ರಿಯಾಂಕಾ ಅವರ ಸಹೋದರ ರಾಹುಲ್ ಜಾರಕಿಹೊಳಿ ಸೇರಿದಂತೆ ಇಡೀ ಕುಟುಂಬದ ಸದಸ್ಯರು ಉಪಸ್ಥಿತರಿದ್ದು, ಭಾವಿ ದಂಪತಿಗೆ ಶುಭ ಹಾರೈಸಿದರು.

ಮದುವೆ ಯಾವಾಗ?
ಕಳೆದ 2024ರ ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಭರ್ಜರಿ ಗೆಲುವು ದಾಖಲಿಸುವ ಮೂಲಕ ದೇಶದ ಅತಿ ಕಿರಿಯ ಸಂಸದೆಯರಲ್ಲಿ ಒಬ್ಬರಾಗಿ ಪ್ರಿಯಾಂಕಾ ಜಾರಕಿಹೊಳಿ ಸಂಸತ್ ಪ್ರವೇಶಿಸಿದ್ದರು. ತಮ್ಮ ಸರಳತೆ ಮತ್ತು ಅಭಿವೃದ್ಧಿ ಪರ ಚಿಂತನೆಗಳಿಂದ ಗುರುತಿಸಿಕೊಂಡಿರುವ ಪ್ರಿಯಾಂಕಾ, ಇದೀಗ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಮದುವೆಯ ದಿನಾಂಕ ಹಾಗೂ ಹೆಚ್ಚಿನ ವಿವರಗಳನ್ನು ಕುಟುಂಬದ ಮೂಲಗಳು ಶೀಘ್ರದಲ್ಲೇ ಪ್ರಕಟಿಸುವ ಸಾಧ್ಯತೆಯಿದೆ.