VTU convocation: ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಘಟಿಕೋತ್ಸವದಲ್ಲಿ ‘ವಂದೇ ಮಾತರಂ’ ಗೀತೆ ಪೂರ್ತಿ ಹಾಡಬೇಕು: ರಾಜ್ಯಪಾಲರ ನಿರ್ದೇಶನ
Governor Thawar Chand Gehlot: ಸೆಪ್ಟೆಂಬರ್ 26ರಂದು ಹಮ್ಮಿಕೊಂಡಿರುವ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 26ನೇ ಘಟಿಕೋತ್ಸವದಲ್ಲಿ ಸಂಪೂರ್ಣ ವಂದೇ ಮಾತರಂ ಗೀತೆಯನ್ನು ಕಡ್ಡಾಯವಾಗಿ ಹಾಡಬೇಕು ಎಂದು ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನಿರ್ದೇಶಿಸಿದ್ದಾರೆ.
-
ಬೆಳಗಾವಿ: ರಾಷ್ಟ್ರೀಯ ಗೀತೆಯಾಗಿರುವ ‘ವಂದೇ ಮಾತರಂ’ ಹಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ರಾಜಕೀಯ ಜಟಾಪಟಿ ಹಾಗೂ ಭಿನ್ನಾಭಿಪ್ರಾಯಗಳು ತೀವ್ರಗೊಳ್ಳುತ್ತಿರುವ ನಡುವೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 26ನೇ ಘಟಿಕೋತ್ಸವ (VTU convocation) ಸಮಾರಂಭದಲ್ಲಿ ಸಂಪೂರ್ಣ ವಂದೇ ಮಾತರಂ ಗೀತೆಯನ್ನು ಕಡ್ಡಾಯವಾಗಿ ಹಾಡಬೇಕು ಎಂದು ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲರು ಅತ್ಯಂತ ಖಡಕ್ ಆಗಿ ನಿರ್ದೇಶಿಸಿದ್ದಾರೆ.
ಈ ಬಾರಿಯ ವಿಟಿಯು ಘಟಿಕೋತ್ಸವ ಕಾರ್ಯಕ್ರಮವನ್ನು ಸೆಪ್ಟೆಂಬರ್ 26ರಂದು ಬೆಳಗಾವಿ ಕ್ಯಾಂಪಸ್‌ನಲ್ಲಿ ಹಮ್ಮಿಕೊಳ್ಳಲಾಗಿದೆ. ಸಮಾರಂಭದ ಉದ್ಘಾಟನಾ ಹಂತದಲ್ಲಿಯೇ ಒಟ್ಟು 3 ನಿಮಿಷ 10 ಸೆಕೆಂಡ್‌ಗಳ ಸುದೀರ್ಘ ಅವಧಿಯ ಪೂರ್ಣಪ್ರಮಾಣದ ವಂದೇ ಮಾತರಂ ಗೀತೆಯನ್ನು ಪ್ರಸ್ತುತಪಡಿಸಬೇಕು ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್. ವಿದ್ಯಾಶಂಕರ್ ಅವರಿಗೆ ಆಡಳಿತಾತ್ಮಕ ಸೂಚನೆ ರವಾನಿಸಲಾಗಿದೆ.
ರಾಜ್ಯಪಾಲರ ಈ ನಿರ್ಣಾಯಕ ಆದೇಶದ ಕುರಿತು ಮಾಧ್ಯಮಗಳಿಗೆ ಮಾತನಾಡಿದ ವಿಟಿಯು ಕುಲಪತಿ ಪ್ರೊ. ವಿದ್ಯಾಶಂಕರ್, ವಿಶ್ವವಿದ್ಯಾಲಯದ ಸರ್ವೋಚ್ಚ ಅಧಿಕಾರಿಯಾಗಿರುವ ಗೌರವಾನ್ವಿತ ರಾಜ್ಯಪಾಲರ ಕಟ್ಟುನಿಟ್ಟಿನ ನಿರ್ದೇಶನವನ್ನು ಪಾಲಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಘಟಿಕೋತ್ಸವದ ಆರಂಭದಲ್ಲೇ ಈ ಪೂರ್ಣ ಆವೃತ್ತಿಯ ಗೀತೆಯನ್ನು ಬಿತ್ತರಿಸಲು ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸೆ.26 ಕ್ಕೆ ವಿಟಿಯು ಘಟಿಕೋತ್ಸವ
ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ತನ್ನ 26ನೇ ವಾರ್ಷಿಕ ಘಟಿಕೋತ್ಸವವನ್ನು ಸೆ.26ರಂದು ಬೆಳಗ್ಗೆ 11 ಗಂಟೆಗೆ ಜ್ಞಾನ ಸಂಗಮದಲ್ಲಿ ನಡೆಸಲು ಉದ್ದೇಶಿಸಲಾಗಿದೆ.
ಘಟಿಕೋತ್ಸವದ ಅಧ್ಯಕ್ಷತೆಯನ್ನು ರಾಜ್ಯಪಾಲರು ಹಾಗೂ ಕರ್ನಾಟಕ ವಿಶ್ವವಿದ್ಯಾಲಯ ಕುಲಾಧಿಪತಿಗಳ ಥಾವರ್ ಚಂದ್ ಗೆಹ್ಲೋಟ್ ವಹಿಸಲಿದ್ದಾರೆ. ಉನ್ನತ ಶಿಕ್ಷಣ ಸಚಿವರಾದ ಬಸವರಾಜ ರಾಯರೆಡ್ಡಿ ಉಪಸ್ಥಿತರಿರಲಿದ್ದು, ಮುಖ್ಯ ಅತಿಥಿಯಾಗಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಭಾಗವಹಿಸಲಿದ್ದಾರೆ ಎಂದು ವಿಟಿಯು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
74,763 ಪದವಿ ವಿದ್ಯಾರ್ಥಿಗಳು ಹಾಗೂ 329 ಪಿಎಚ್.ಡಿ ವಿದ್ಯಾರ್ಥಿಗಳು ಪದವಿ ಪಡೆಯಲಿದ್ದಾರೆ. ಇದರಲ್ಲಿ ಬಿ.ಇ ಮತ್ತು ಬಿ.ಟೆಕ್‌ನಲ್ಲಿ 74,009 ವಿದ್ಯಾರ್ಥಿಗಳು, ಬಿ.ಇ. ಆರ್ಕ್- 725, ಬಿ.ಇ.ಪ್ಲಾನಿಂಗ್- 12, ಬಿ.ಎಸ್ಸಿ- 17 ವಿದ್ಯಾರ್ಥಿಗಳು ಸೇರಿದ್ದಾರೆ.
ಮೂವರಿಗೆ ಗೌರವ ಡಾಕ್ಟರೇಟ್ ಪ್ರದಾನ:
ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ ಮೂರು ವ್ಯಕ್ತಿಗಳಿಗೆ ನಾವು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡುತ್ತಿದ್ದೇವೆ. ಸಿಎಂಆರ್ ಜ್ಞಾನಧಾರ ಟ್ರಸ್ಟ್ ನ ಅಧ್ಯಕ್ಷರಾದ ಡಾ.ಸಬಿತಾ ರಾಮಮೂರ್ತಿ, ಆರ್.ವಿ. ಶಿಕ್ಷಣ ಸಮಿತಿ ಟ್ರಸ್ಟ್ ಅಧ್ಯಕ್ಷರಾದ ಡಾ.ಎಂ.ಪಿ.ಶ್ಯಾಮ್, ಎಐಸಿಟಿಇ ಮಾಜಿ ಅಧ್ಯಕ್ಷರಾದ ಪ್ರೊ.ಟಿ.ಜಿ.ಸೀತಾರಾಂ ಇವರಿಗೆ ಗೌರವ ಡಾಕ್ಟರೇಟ್ ನೀಡುತ್ತಿದ್ದೇವೆ.
ವಿಟಿಯು ನೀಡುವ ಚಿನ್ನದ ಪದಕವನ್ನು 38 ವಿದ್ಯಾರ್ಥಿಗಳು ಪಡೆದಿದ್ದಾರೆ. 49 ವಿದ್ಯಾಥ್ಥಿಗಳು ದತ್ತಿ ಚಿನ್ನದ ಪದಕ ಮತ್ತು ನಗದು ಬಹುಮಾನ ಪಡೆಯಲು ಅರ್ಹರಾಗಿದ್ದಾರೆ. ಇನ್ನೂ ಕೇವಲ ದತ್ತಿ ಚಿನ್ನದ ಪದಕ ಪಡೆದವರ ಸಂಖ್ಯೆ 7 ಇದೆ.
ಒಟ್ಟಾರೆ 45 ವಿದ್ಯಾರ್ಥಿಗಳಿಗೆ 94 ಚಿನ್ನದ ಪದಕವನ್ನು(38 ವಿಟಿಯು ಗೋಲ್ಡ್ ಮೆಡಲ್ ಹಾಗೂ 56 ದತ್ತಿ ನಿಧಿ ಗೋಲ್ಡ್ ಮೆಡಲ್ ) ನೀಡಿ ಗೌರವಿಸಲಿದೆ. ಇದರ ಜತೆಗೆ 300 ವಿದ್ಯಾರ್ಥಿಗಳು ರ್ಯಾಂಕ್ ಪಡೆಯಲು ಅರ್ಹತೆ ಪಡೆದಿದ್ದಾರೆ.
ಅತಿ ಹೆಚ್ಚು ಚಿನ್ನ ಪಡೆದವರು:
ದಾವಣಗೆರೆಯ ಜೈನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಚ್.ಎಂ.ವಿಶ್ವನಾಥ್ 12 ಚಿನ್ನದ ಪದಕ ಪಡೆಯಲು ಅರ್ಹರಾಗಿದ್ದು, ಅತಿ ಹೆಚ್ಚು ಚಿನ್ನದ ಪದಕ ಪಡೆಯುವ ಪಟ್ಟಿಯಲ್ಲಿ ಮೊದಲಿಗರಾಗಿದ್ದಾರೆ.
ನಿಪ್ಪಾಣಿಯ ವಿಎಸ್‌ಎಂ ಸೋಮಶೇಖರ್ ಆರ್.ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯದ ಸಾಕ್ಷಿ ಎಸ್.ಹಡಲಗೆ ಇವರು 8 ಚಿನ್ನದ ಪದಕ ಪಡೆದು ದ್ವಿತೀಯ ಸ್ಥಾನ ಪಡೆದರೆ, ಬೆಂಗಳೂರಿನ ಸಿಎಂಆರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಚಿನ್ಮಯಿ ಎಂ.ಕಶ್ಯಪ್ ಹಾಗೂ ಶಿವಮೊಗ್ಗದ ಜೆಎನ್‌ಎನ್ ಕಾಲೇಜ್ ಆಫ್ ಎಂಜಿನಿಯರಿಂಗ್‌ನ ಬಿ.ಏಂ.ಧನ್ಯಶ್ರೀ ತಲಾ ಇಬ್ಬರು 7 ಚಿನ್ನದ ಪದಕವನ್ನು ಪಡೆಯುವ ಮೂಲಕ ತೃತೀಯ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಕೂರ್ಗ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿ ಎ.ಸಿ. ಕವಿನಾ 6 ಚಿನ್ನದ ಪದಕ ಪಡೆಯಲು ಅರ್ಹರಾಗಿದ್ದಾರೆ.
ಈ ಸುದ್ದಿಗೋಷ್ಠಿಯಲ್ಲಿ ವಿಟಿಯು ಕುಲಸಚಿವರಾದ(ಮೌಲ್ಯಮಾಪನ) ಪ್ರೊ.ಯು.ಜೆ.ಉಜ್ವಲ್, ಕುಲಸಚಿವರು(ಆಡಳಿತ) ಪ್ರೊ.ಪ್ರಸಾದ ಬಿ.ರಾಂಪುರೆ ಇದ್ದರು.
ಕಾಲೇಜು ಹೆಸರು ಮತ್ತು ರ‍್ಯಾಂಕ್ ಸಂಖ್ಯೆ
ಬೆಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರು-29
ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿ-16
ಆರ್‌ಎನ್‌ಎಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರು-13
ಸಿಎಂಆರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ-11
ಮಹಾರಾಜ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ-11