Bigg Boss Kannada 12: ಡಿಸಿಎಂ ಡಿಕೆ ಶಿವಕುಮಾರ್ ಮಧ್ಯಸ್ಥಿಕೆ, ಜಾಲಿವುಡ್ ಬೀಗಮುದ್ರೆ ಓಪನ್, ಥ್ಯಾಂಕ್ಸ್ ಹೇಳಿದ ಕಿಚ್ಚ
DK Shivakumar: 'ಬಿಗ್ ಬಾಸ್ ಚಿತ್ರೀಕರಣ ನಡೆಯುತ್ತಿರುವ ಬಿಡದಿಯಲ್ಲಿರುವ ಜಾಲಿವುಡ್ ಅವರಣದ ಸೀಲ್ ತೆಗೆದುಹಾಕಲು ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದೇನೆ' ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಉಪ ಮುಖ್ಯಮಂತ್ರಿಗಳಿಗೆ ಕಿಚ್ಚ ಸುದೀಪ್ ಧನ್ಯವಾದ ತಿಳಿಸಿದ್ದಾರೆ.

-

ರಾಮನಗರ: ಜನಪ್ರಿಯ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ (Bigg Boss Kannada 12) ಮನೆ ಇರುವ ಬಿಡದಿಯ ಜಾಲಿವುಡ್ ಸ್ಟುಡಿಯೋಸ್ ಆ್ಯಂಡ್ ಅಡ್ವೆಂಚರ್ಸ್ ಪಾರ್ಕ್‌ಗೆ ಜಿಲ್ಲಾಡಳಿತ ಹಾಕಿದ್ದ ಬೀಗಮುದ್ರೆ ತೆಗೆಯುವಂತೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DCM DK Shivakumar) ಅವರು ಬುಧವಾರ ರಾತ್ರಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಉಪಮುಖ್ಯಮಂತ್ರಿಗಳ ಸಕಾರಾತ್ಮಕ ಸ್ಪಂದನೆಗೆ ಬಿಗ್ ಬಾಸ್ ನಿರೂಪಕ ಕಿಚ್ಚ ಸುದೀಪ್ (Kichcha Sudeep) ಧನ್ಯವಾದ ತಿಳಿಸಿದ್ದಾರೆ.
ಈ ಕುರಿತು ರಾತ್ರಿ 11.39ಕ್ಕೆ 'ಎಕ್ಸ್' ಮತ್ತು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿರುವ ಡಿಸಿಎಂ, 'ಬಿಗ್ ಬಾಸ್ ಚಿತ್ರೀಕರಣ ನಡೆಯುತ್ತಿರುವ ಬಿಡದಿಯಲ್ಲಿರುವ ಜಾಲಿವುಡ್ ಅವರಣದ ಸೀಲ್ ತೆಗೆದುಹಾಕಲು ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದೇನೆ' ಎಂದು ತಿಳಿಸಿದ್ದಾರೆ. 'ಪರಿಸರ ನಿಯಮಗಳ ಅನುಸರಣೆ ಪ್ರಮುಖ ಆದ್ಯತೆಯಾಗಿದೆ. ಆದರೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ನಿಗದಿಪಡಿಸಿದ ಮಾನದಂಡಗಳಿಗೆ ಅನುಗುಣವಾಗಿ ಉಲ್ಲಂಘನೆಗಳನ್ನು ಪರಿಹರಿಸಲು ಸ್ಟುಡಿಯೋಗೆ ಸಮಯ ನೀಡಲಾಗುವುದು. ಪರಿಸರ ಸಂರಕ್ಷಣೆಯ ಕಡೆಗೆ ನಮ್ಮ ಜವಾಬ್ದಾರಿಯನ್ನು ಎತ್ತಿಹಿಡಿಯುವುದರ ಜೊತೆಗೆ ಕನ್ನಡ ಮನರಂಜನಾ ಉದ್ಯಮವನ್ನು ಬೆಂಬಲಿಸಲು ನಾನು ಬದ್ಧನಾಗಿರುತ್ತೇನೆʼ ಎಂದು ಅವರು ಬರೆದುಕೊಂಡಿದ್ದಾರೆ.
I have directed the Deputy Commissioner of Bengaluru South District to lift the seal on Jollywood premises in Bidadi, where Bigg Boss Kannada is being filmed.
— DK Shivakumar (@DKShivakumar) October 8, 2025
While environmental compliance remains a top priority, the studio will be given time to address violations in accordance…
ಕಿಚ್ಚ ಸುದೀಪ್ ಧನ್ಯವಾದ
ಡಿಸಿಎಂ ಪೋಸ್ಟ್ ಬೆನ್ನಲ್ಲೇ ಶೋ ನಿರೂಪಕ ನಟ ಕಿಚ್ಚ ಸುದೀಪ್ ಕೂಡ ಧನ್ಯವಾದ ತಿಳಿಸಿದ್ದಾರೆ. 'ಸಕಾಲಕ್ಕೆ ನನ್ನ ಕರೆಗೆ ಸ್ಪಂದಿಸಿದ ಗೌರವಾನ್ವಿತ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಹಾಗೂ ಈ ಗೊಂದಲದಲ್ಲಿ ಬಿಗ್ ಬಾಸ್ ಯಾವುದೇ ರೀತಿಯಲ್ಲೂ ಭಾಗಿಯಾಗಿಲ್ಲ ಎಂಬುದನ್ನು ಒಪ್ಪಿಕೊಂಡಿರುವ ಸಂಬಂಧಪಟ್ಟ ಅಧಿಕಾರಿಗಳಿಗೆ ಧನ್ಯವಾದಗಳನ್ನು ಅರ್ಪಿಸುವೆ. ಈ ನಿಟ್ಟಿನಲ್ಲಿ ಪ್ರಯತ್ನಿಸಿದ ನಲಪಾಡ್ ಅವರಿಗೂ ಧನ್ಯವಾದ' ಎಂದು ತಮ್ಮ 'ಎಕ್ಸ್' ಖಾತೆಯಲ್ಲಿ ರಾತ್ರಿ
11.42ಕ್ಕೆ ಪೋಸ್ಟ್ ಹಾಕಿದ್ದಾರೆ.
I sincerely thank Hon. @DKShivakumar sir for the timely support.
— Kichcha Sudeepa (@KicchaSudeep) October 8, 2025
Also want to thank the concerned authorities for acknowledging that #BBK was not involved or was a part of the recent chaos or disturbances.
I truely appreciate the DCM for promptly responding to my call, and thank… https://t.co/94n6vh2Boc
ಡಿಸಿಎಂ ಸೂಚನೆಯ ಬೆನ್ನಲ್ಲೇ ಕಂದಾಯ ಇಲಾಖೆಯ ಸಿಬ್ಬಂದಿ, ಜಾಲಿವುಡ್ ಸ್ಟುಡಿಯೋಸ್‌ಗೆ ತೆರಳಿ ಬೀಗಮುದ್ರೆ ತೆಗೆಯುವ ನಿರೀಕ್ಷೆ ಇದೆ. ಸದ್ಯ ಈಗಲ್ಟನ್ ರೆಸಾರ್ಟ್‌ನಲ್ಲಿರುವ ಬಿಗ್ ಬಾಸ್ ಸ್ಪರ್ಧಿಗಳು ಗುರುವಾರ ಸ್ಟುಡಿಯೊಗೆ ವಾಪಸಾಗಲಿದ್ದು, ಷೋ ಚಿತ್ರೀಕರಣ ಸರಾಗವಾಗಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ನಿಯಮ ಉಲ್ಲಂಘನೆ ಕಾರಣಕ್ಕೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಜಾಲಿವುಡ್ ಮುಚ್ಚುವಂತೆ ಅ. 6ರಂದು ಜಿಲ್ಲಾಡಳಿಕ್ಕೆ ಸೂಚನೆ ನೀಡಿತ್ತು. ಮಾರನೇಯ ದಿನ ವಾಲ್ಮೀಕಿ ಜಯಂತಿ ಪ್ರಯುಕ್ತ ಸರ್ಕಾರಿ ರಜೆ ಇದ್ದರೂ, ಜಿಲ್ಲಾಡಳಿತವು ಪೊಲೀಸರ ನೆರವಿನೊಂದಿಗೆ ಜಾಲಿವುಡ್‌ಗೆ ಬೀಗ ಹಾಕಿತ್ತು. ಬಿಗ್ ಬಾಸ್ ಷೋ ಸ್ಥಗಿತಕ್ಕೆ ಸೂಚಿಸಿ, ಸ್ಪರ್ಧಿಗಳು ಸೇರಿದಂತೆ ಜಾಲಿವುಡ್‌ನಲ್ಲಿದ್ದ ಪ್ರವಾಸಿಗರು ಹಾಗೂ ಸಿಬ್ಬಂದಿಯನ್ನು ಸಹ ಹೊರಕ್ಕೆ ಕಳಿಸಿತ್ತು. ಜಿಲ್ಲಾಡಳಿತದ ಈ ದಿಢೀರ್ ನಿರ್ಧಾರದಿಂದಾಗಿ ಷೋ ಚಿತ್ರೀಕರಣ ಸ್ಥಗಿತಗೊಂಡಿತ್ತಲ್ಲದೆ, ಆಯೋಜಕರು ಸ್ಪರ್ಧಿಗಳಿಗೆ ಸಮೀಪದ ಈಗಲ್ಟನ್ ರೆಸಾರ್ಟ್‌ನಲ್ಲಿ ತಾತ್ಕಾಲಿಕವಾಗಿ ವಾಸ್ತವ್ಯ ವ್ಯವಸ್ಥೆ ಮಾಡಿದ್ದರು.
ಇದನ್ನೂ ಓದಿ: Bigg Boss Kannada 12: ಜಾಲಿವುಡ್ ಸ್ಟುಡಿಯೋ ಮ್ಯಾನೇಜ್ಮೆಂಟ್ ವಿರುದ್ಧ ಬಿಗ್‌ಬಾಸ್ ತಂಡ ಕೆಂಡಾಮಂಡಲ
ನಿಯಮ ಉಲ್ಲಂಘನೆ ಸರಿಪಡಿಸಿಕೊಳ್ಳಲು 15 ದಿನ ಕಾಲಾವಕಾಶ ನೀಡುವಂತೆ ಜಾಲಿವುಡ್ ಆಡಳಿತ ಮಂಡಳಿಯವರು ಜಿಲ್ಲಾಧಿಕಾರಿ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ದುಂಬಾಲು ಬಿದ್ದಿದ್ದರು. ವಿಷಯ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಮಂಡಳಿ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ಅವರ ಅಂಗಳ ತಲುಪಿತ್ತು. ಕಾಲಾವಕಾಶ ನೀಡಬೇಕೋ ಬೇಡವೋ ಎಂಬ ಕುರಿತು ಡಿಸಿಎಂ ಮತ್ತು ಮಂಡಳಿ ಅಧ್ಯಕ್ಷರು ಭಿನ್ನ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಕಡೆಗೆ ಷೋ ನಿರೂಪಕ ಸುದೀಪ್ ಅವರು ಡಿಸಿಎಂ ಅವರಿಗೆ ಕರೆ ಮಾಡಿ, ಸಮಸ್ಯೆ ಬಗೆಹರಿಸಿಕೊಳ್ಳಲು ಜಾಲಿವುಡ್‌ಗೆ ಕಾಲಾವಕಾಶ ನೀಡುವ ಮೂಲಕ ಬಿಗ್ ಬಾಸ್ ಷೋ ಸರಾಗವಾಗಿ ನಡೆಯಲು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದ್ದರು.