Nelamangala News: ನೆಲಮಂಗಲದಲ್ಲಿ ಭೋವಿ ಸಮುದಾಯದ ರೈತರ ಕೆಲಸ ಕಸಿದು 'ವರ್ಕ್ ಆರ್ಡರ್' ರದ್ದು; ಉಗ್ರ ಹೋರಾಟದ ಎಚ್ಚರಿಕೆ
Work order canceled: ನೆಲಮಂಗಲ ತಾಲೂಕಿನ ಸೋಂಪುರ ಹೋಬಳಿಯ ಗೊಟ್ಟಿಗೆರೆ ಗ್ರಾಮದಲ್ಲಿ ಭೂಮಿ ಕಳೆದುಕೊಂಡ ಪರಿಶಿಷ್ಟ ಜಾತಿಯ ಹತ್ತಾರು ರೈತರು ತೀವ್ರ ಅನ್ಯಾಯಕ್ಕೆ ಒಳಗಾಗಿದ್ದಾರೆ. ಖಾಸಗಿ ಸಂಸ್ಥೆಯಾದ ಮಾರ್ಕ್ ಏಷ್ಯಾ, ರೈತರಿಂದ ಭೂಮಿ ಪಡೆದು, ಪ್ರತಿಯಾಗಿ ನೀಡಿದ್ದ ಕೆಲಸವನ್ನು ಏಕಾಏಕಿ ರದ್ದುಗೊಳಿಸಿ, ಪ್ರಭಾವಿ ವ್ಯಕ್ತಿಗಳಿಗೆ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
-
Prabhakara R
Nov 2, 2025 2:10 PM
ನೆಲಮಂಗಲ, ನ.2: ತಾಲೂಕಿನ (Nelamangala News) ಸೋಂಪುರ ಹೋಬಳಿಯ ಗೊಟ್ಟಿಗೆರೆ ಗ್ರಾಮದಲ್ಲಿ ಭೂಮಿ ಕಳೆದುಕೊಂಡ ಪರಿಶಿಷ್ಟ ಜಾತಿಯ ಹತ್ತಾರು ರೈತರು ತೀವ್ರ ಅನ್ಯಾಯಕ್ಕೆ ಒಳಗಾಗಿದ್ದಾರೆ. ತಾವು ನೀಡಿದ ಜಮೀನಿಗೆ ಪ್ರತಿಯಾಗಿ ಖಾಸಗಿ ಸಂಸ್ಥೆಯಾದ ಮಾರ್ಕ್ ಏಷ್ಯಾ ನೀಡಿದ್ದ ಕೆಲಸವನ್ನು ಏಕಾಏಕಿ ರದ್ದುಗೊಳಿಸಿ, ಪ್ರಭಾವಿ ವ್ಯಕ್ತಿಗಳಿಗೆ ನೀಡಲಾಗಿದೆ ಎಂದು ಆರೋಪಿಸಿ ರೈತರು ನ್ಯಾಯಕ್ಕಾಗಿ ಹೋರಾಟಕ್ಕೆ ಇಳಿದಿದ್ದಾರೆ.
ಆರಂಭದಲ್ಲಿ ಸಿಕ್ಕ ಕೆಲಸ, ಆರು ತಿಂಗಳ ನಂತರ ಸಂಕಷ್ಟ
ಗೊಟ್ಟಿಗೆರೆ ಗ್ರಾಮದ ಭೋವಿ ಸಮುದಾಯದ ರೈತರು ತಮ್ಮ ಜಮೀನುಗಳನ್ನು ಮಾರ್ಕ್ ಏಷ್ಯಾ ಕಂಪನಿಗೆ ನೀಡಿದ್ದರು. ಸುತ್ತಮುತ್ತಲಿನ ಕಂಪನಿಗಳು ಸ್ಥಳೀಯರಿಗೆ ಕೆಲಸಕ್ಕೆ ಆದ್ಯತೆ ನೀಡುತ್ತಿರುವ ಹಿನ್ನೆಲೆಯಲ್ಲಿ, ತಾವುಗಳಿಗೂ ಜೆ.ಸಿ.ಬಿ, ಹಿಟಾಚಿ ಮತ್ತು ಮಣ್ಣು ತುಂಬುವಂತಹ ಗುತ್ತಿಗೆ ಕೆಲಸಗಳನ್ನು ನೀಡುವಂತೆ ರೈತರು ಮನವಿ ಮಾಡಿಕೊಂಡಿದ್ದರು. ಇದಕ್ಕೆ ಒಪ್ಪಿದ ಕಂಪನಿ ಮಾಲೀಕರು, ಸ್ಥಳೀಯ ರೈತರಿಗೆ ಕೆಲಸ ನೀಡಲು ಸೂಚಿಸಿ, "ಪಿ.ಓ. ಕಾಪಿ" (ವರ್ಕ್ ಆರ್ಡರ್) ಅನ್ನೂ ನೀಡಿದ್ದರು.
ಸುಮಾರು ಆರು ತಿಂಗಳಿನಿಂದ ಯಾವುದೇ ತಂಟೆ-ತಕರಾರಿಲ್ಲದೆ ರೈತರು ಈ ಕೆಲಸಗಳನ್ನು ನಿರ್ವಹಿಸುತ್ತಿದ್ದರು. ಆದರೆ, 15 ದಿನಗಳ ಹಿಂದೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಯಾವುದೇ ಕಾರಣ ನೀಡದೆ ಕೆಲಸ ನಿಲ್ಲಿಸುವಂತೆ ಸೂಚಿಸಿರುವುದು ಇಡೀ ವಿವಾದಕ್ಕೆ ಕಾರಣವಾಗಿದೆ.

ಪೊಲೀಸರು ಮತ್ತು ಕಂಪನಿ ಮಾಲೀಕರ ಗೊಂದಲದ ಸೂಚನೆ
ಪೊಲೀಸರ ಸೂಚನೆಯಂತೆ ಠಾಣೆಗೆ ತೆರಳಿದ ರೈತರಿಗೆ, ಅಲ್ಲಿ ಕೆಲಸ ಮುಂದುವರಿಸಲು ಪಿ.ಓ. ನೀಡಿ ಎಂದು ಹೇಳಲಾಯಿತು. ರೈತರು ಪುನಃ ಕಂಪನಿ ಮಾಲೀಕರ ಬಳಿ ಪಿ.ಓ. ಪಡೆದು ಕೆಲಸ ಆರಂಭಿಸಿದರು. ಆದರೆ, ಮತ್ತೆ ಪೊಲೀಸರು ಬಂದು ಕೆಲಸ ನಿಲ್ಲಿಸುವಂತೆ ಸೂಚಿಸಿ, "ಮಾಲೀಕರನ್ನು ಠಾಣೆಗೆ ಕರೆಸುತ್ತೇವೆ, ನೀವೂ ಬನ್ನಿ" ಎಂದು ತಿಳಿಸಿದರು. ರೈತರು ಪೊಲೀಸರ ಮಾತಿಗೆ ಗೌರವಿಸಿ ಕೆಲಸವನ್ನು ನಿಲ್ಲಿಸಿ ಶಾಸಕರ ನೆರವು ಕೋರಿದರು.
ಕೆಲಸ ಕ್ಯಾನ್ಸಲ್: ಬಡ ರೈತರಿಗೆ ಮತ್ತೊಂದು ಶಾಕ್!
ಪೊಲೀಸರ ಸೂಚನೆಯಂತೆ ರೈತರು ಠಾಣೆಗೆ ಹೋಗಿ ದೂರು ದಾಖಲಿಸಲು ಸಿದ್ಧರಾಗುವಷ್ಟರಲ್ಲಿ, ಕಂಪನಿಯು ಮತ್ತೊಂದು ಶಾಕ್ ನೀಡಿದೆ. ರೈತರ ವರ್ಕ್ ಆರ್ಡರ್ ಅನ್ನು ರದ್ದುಗೊಳಿಸಿರುವ (P.O. Cancelled) ಆದೇಶದ ಪ್ರತಿಯನ್ನು ವಾಟ್ಸಪ್ ಮೂಲಕ ಕಳುಹಿಸಲಾಗಿದೆ. ಇದರಿಂದ, ಕೈಯಲ್ಲಿದ್ದ ಕೆಲಸವನ್ನು ಕಳೆದುಕೊಂಡ ರೈತರು ಕಂಗಾಲಾಗಿದ್ದಾರೆ.
ಈ ಬಗ್ಗೆ ರೈತರು ನಡೆದ ಘಟನಾವಳಿಗಳ ಸಹಿತ ಸಂಪೂರ್ಣ ದೂರು ಪತ್ರವನ್ನು ಠಾಣೆಯಲ್ಲಿ ಸಲ್ಲಿಸಿದ್ದಾರೆ. ಜಮೀನು ಇಲ್ಲದೆ, ಈಗ ಆಧಾರವಾಗಿದ್ದ ಕೆಲಸವನ್ನೂ ಕಳೆದುಕೊಂಡ ಬಹುತೇಕ ಭೋವಿ ಜನಾಂಗದ ಕಡು ಬಡ ರೈತರು ಹೀನಾಯ ಪರಿಸ್ಥಿತಿಯಲ್ಲಿದ್ದಾರೆ.
ಈ ಸುದ್ದಿಯನ್ನೂ ಓದಿ | Kannada Rajyotsava: ಗಡಿ ಭಾಗವಾದರೂ ಪಾವಗಡದ ಜನರಿಗೆ ಕನ್ನಡದ ಬಗ್ಗೆ ಅಭಿಮಾನ ಹೆಚ್ಚು: ಶಾಸಕ ವೆಂಕಟೇಶ್
ಉಗ್ರ ಹೋರಾಟದ ಎಚ್ಚರಿಕೆ
ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಗಂಭೀರ ವಿಚಾರವನ್ನು ಗಮನಿಸಿ, ಪ್ರಭಾವಿ ವ್ಯಕ್ತಿಗಳ ಕೈವಾಡಕ್ಕೆ ಕಡಿವಾಣ ಹಾಕಿ, ಮೂಲ ಜಮೀನು ಕಳೆದುಕೊಂಡ ರೈತರಿಗೆ ನ್ಯಾಯ ಒದಗಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಇಲ್ಲವಾದಲ್ಲಿ, ಮುಂಬರುವ ದಿನಗಳಲ್ಲಿ ನಾವೆಲ್ಲರೂ ಒಗ್ಗೂಡಿ ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಆಡಳಿತಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.