64 Illegally gas cylinders seized: ಗುಡಿಬಂಡೆಯಲ್ಲಿ ತಹಸೀಲ್ದಾರ್ ಭರ್ಜರಿ ಬೇಟೆ: ಅಕ್ರಮವಾಗಿ ಸಂಗ್ರಹಿಸಿದ್ದ 64 ಗ್ಯಾಸ್ ಸಿಲಿಂಡರ್ ಜಪ್ತಿ
ಪ್ರಸ್ತುತ ಕೊಲ್ಲಿ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ನೆಪವೊಡ್ಡಿ ಭಾರತದಲ್ಲೂ ಸಿಲಿಂಡರ್ ಅಭಾವ ಸೃಷ್ಟಿಸಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ದಂಧೆ ಜೋರಾಗಿದೆ ಎಂಬ ಮಾಹಿತಿ ಲಭ್ಯವಾಗಿತ್ತು. ಈ ಲಾಭದ ಆಸೆಗೆ ಬಿದ್ದ ಹಲವರು ಅಕ್ರಮವಾಗಿ ಸಿಲಿಂಡರ್‌ಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದರು. ಈ ಗಂಭೀರ ವಿಚಾರವನ್ನು ಗಮನಿಸಿದ ಚಿಕ್ಕಬಳ್ಳಾಪುರ ಜಿಲ್ಲಾಧಿ ಕಾರಿಗಳು ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ತಪಾಸಣೆ ನಡೆಸುವಂತೆ ಆಯಾ ತಾಲೂಕು ತಹಸೀಲ್ದಾರ್‌ಗಳಿಗೆ ಸೂಚನೆ ನೀಡಿದ್ದರು
ಗುಡಿಬಂಡೆಯಲ್ಲಿ ತಹಸೀಲ್ದಾರ್ ಭರ್ಜರಿ ಬೇಟೆ ಮಾಡಿದ್ದು ಅಕ್ರಮವಾಗಿ ಸಂಗ್ರಹಿಸಿದ್ದ ೬೪ ಗ್ಯಾಸ್ ಸಿಲಿಂಡರ್ ಜಪ್ತಿ ಮಾಡಿದ್ದಾರೆ. -
ಗುಡಿಬಂಡೆ: ಪಟ್ಟಣದ ಜನವಸತಿ ಪ್ರದೇಶದಲ್ಲಿ ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ದಾಸ್ತಾನು ಮಾಡಿ, ಸಾರ್ವಜನಿಕರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದ್ದ ದಂಧೆಕೋರರಿಗೆ ತಹಸೀಲ್ದಾರ್ ಸಿಗ್ಬತ್ತುಲ್ಲಾ ನೇತೃತ್ವದ ತಂಡ ಬಿಸಿ ಮುಟ್ಟಿಸಿದೆ.
ಪಟ್ಟಣದ ವಿವಿಧ ಕಡೆ ದಿಢೀರ್ ದಾಳಿ ನಡೆಸಿರುವ ಅಧಿಕಾರಿಗಳು ಬರೋಬ್ಬರಿ 64 ಅಕ್ರಮ ಸಿಲಿಂಡರ್‌ಗಳನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮಕ್ಕೆ ಶಿಫಾರಸ್ಸು ಮಾಡಿದ್ದಾರೆ.
ಅಕ್ರಮ ದಾಸ್ತಾನಿಗೆ ಕಾರಣವೇನು?
ಪ್ರಸ್ತುತ ಕೊಲ್ಲಿ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ನೆಪವೊಡ್ಡಿ ಭಾರತದಲ್ಲೂ ಸಿಲಿಂಡರ್ ಅಭಾವ ಸೃಷ್ಟಿಸಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ದಂಧೆ ಜೋರಾಗಿದೆ ಎಂಬ ಮಾಹಿತಿ ಲಭ್ಯವಾಗಿತ್ತು. ಈ ಲಾಭದ ಆಸೆಗೆ ಬಿದ್ದ ಹಲವರು ಅಕ್ರಮವಾಗಿ ಸಿಲಿಂಡರ್‌ಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದರು. ಈ ಗಂಭೀರ ವಿಚಾರವನ್ನು ಗಮನಿಸಿದ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳು ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ತಪಾಸಣೆ ನಡೆಸುವಂತೆ ಆಯಾ ತಾಲೂಕು ತಹಸೀಲ್ದಾರ್‌ಗಳಿಗೆ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಗುಡಿಬಂಡೆ ತಹಸೀಲ್ದಾರ್ ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.
ಇದನ್ನೂ ಓದಿ: Bengaluru Crime: ಬೆಂಗಳೂರಿನಲ್ಲಿ ಭೀಕರ ಅತ್ಯಾಚಾರ ದಂಧೆ, ಡ್ರಗ್ಸ್ ನೀಡಿ 19 ಕಾಲೇಜು ಯುವತಿಯರ ಮೇಲೆ ದೌರ್ಜನ್ಯ
ಜನವಸತಿ ಪ್ರದೇಶದಲ್ಲೇ ಪತ್ತೆಯಾದ 'ಸಜೀವ ಬಾಂಬ್'ಗಳು
ಪಟ್ಟಣದ 1ನೇ ವಾರ್ಡ್ನಲ್ಲಿ ಶಂಕರ್ ನಾಯಕ್ ಎಂಬುವವರ ಮನೆಯ ಪಕ್ಕದ ಗೋಡೌನ್ ಮೇಲೆ ದಾಳಿ ನಡೆಸಿದಾಗ ಅಧಿಕಾರಿಗಳಿಗೆ ಅಚ್ಚರಿ ಕಾದಿತ್ತು. ಅಲ್ಲಿ 31 ಗೃಹಬಳಕೆಯ ಖಾಲಿ ಸಿಲಿಂಡರ್, 15 ಗೃಹ ಬಳಕೆಯ ಭರ್ತಿ ಮಾಡಿದ ಸಿಲಿಂಡರ್ ಹಾಗೂ 8 ವಾಣಿಜ್ಯ ಬಳಕೆಯ ಖಾಲಿ ಸಿಲಿಂಡರ್‌ಗಳು ಪತ್ತೆಯಾಗಿವೆ. ವಿಚಾರಣೆ ವೇಳೆ ತಾನು ಗೌರಿಬಿದನೂರು ಹೆಚ್.ಪಿ. ಏಜೆನ್ಸಿಯಿಂದ ಗ್ಯಾಸ್ ತಂದು ಡೆಲಿವರಿ ಮಾಡುವ ಕೆಲಸ ಮಾಡುತ್ತಿರುವುದಾಗಿ ಶಂಕರ್ ನಾಯಕ್ ಸಮರ್ಥನೆ ನೀಡಿದ್ದಾರೆ. ಆದರೆ ಜನವಸತಿ ಪ್ರದೇಶದಲ್ಲಿ ಇಷ್ಟೊಂದು ಪ್ರಮಾಣದ ಸಿಲಿಂಡರ್ ಸಂಗ್ರಹಿಸುವುದು ಕಾನೂನುಬಾಹಿರವಾಗಿದೆ. ಇದೇ ರೀತಿ ಪಟ್ಟಣದ ಬಾಪೂಜಿ ನಗರದಲ್ಲಿ ಜಯಚಂದ್ರ ಎಂಬುವವರಿಗೆ ಸೇರಿದ ಗೋಡೌನ್ ಮೇಲೂ ದಾಳಿ ನಡೆಸಿ 10 ಖಾಲಿ ಗೃಹಬಳಕೆ ಸಿಲಿಂಡರ್‌ಗಳನ್ನು ಸೀಜ್ ಮಾಡಲಾಗಿದೆ.
ತಹಸೀಲ್ದಾರ್ ಸಿಗ್ಬತ್ತುಲ್ಲಾ ಅವರ ಎಚ್ಚರಿಕೆ
ದಾಳಿಯ ಕುರಿತು ಮಾಹಿತಿ ನೀಡಿದ ತಹಸೀಲ್ದಾರ್ ಸಿಗ್ಬತ್ತುಲ್ಲಾ ಅವರು, ಜಿಲ್ಲಾಧಿಕಾರಿಗಳ ಆದೇಶದಂತೆ ಕಳೆದ ಮೂರು ದಿನಗಳಿಂದ ತಾಲೂಕಿನಾದ್ಯಂತ ಅಕ್ರಮ ದಾಸ್ತಾನು ಪತ್ತೆಹಚ್ಚಲು ಹುಡುಕಾಟ ನಡೆಸಲಾಗುತ್ತಿತ್ತು ಎಂದಿದ್ದಾರೆ. ಇದೀಗ ವಶಪಡಿಸಿಕೊಂಡಿರುವ ಎಲ್ಲಾ ಸಿಲಿಂಡರ್‌ಗಳನ್ನು ಆಹಾರ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದ್ದು, ಈ ಅಕ್ರಮದ ಬಗ್ಗೆ ಮೇಲಾಧಿಕಾರಿಗಳಿಗೆ ಸಮಗ್ರ ವರದಿ ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಭಾಗಿಯಾದ ತಂಡ
ಈ ಭರ್ಜರಿ ಕಾರ್ಯಾಚರಣೆಯಲ್ಲಿ ಕಂದಾಯ ಇಲಾಖೆಯ ಶಿರಸ್ತೇದಾರ್ ನಟರಾಜ್, ಕಂದಾಯ ನಿರೀಕ್ಷಕ ಸುರೇಶ್ ನಾಯ್ಕ್, ಆಹಾರ ನಿರೀಕ್ಷಕಿ ಪುಷ್ಪಾ ಮತ್ತು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗಣೇಶ್ ಸೇರಿದಂತೆ ಹಲವು ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಇಂತಹ ಅಕ್ರಮ ಚಟುವಟಿಕೆಗಳು ಸಾರ್ವಜನಿಕರ ಸುರಕ್ಷತೆಗೆ ಧಕ್ಕೆ ತರುವ ಕಾರಣ, ಜಿಲ್ಲಾಡಳಿತವು ಮುಂದಿನ ದಿನಗಳಲ್ಲೂ ಇಂತಹ ಕಟ್ಟುನಿಟ್ಟಿನ ಕ್ರಮಗಳನ್ನು ಮುಂದುವರಿಸುವ ಮುನ್ಸೂಚನೆ ನೀಡಿದೆ.