ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಮಾವಾಸ್ಯೆ ಪೂಜೆ ನೆಪದಲ್ಲಿ ಒಡವೆ ಪಡೆದು ವಂಚಿಸಿದ ಜ್ಯೋತಿಷಿ; 40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳೆದುಕೊಂಡ ಬೆಂಗಳೂರಿನ ಮಹಿಳೆ!

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಬಳಿಯ ಜ್ಯೋತಿಷಿ ಮಾತು ನಂಬಿ, ಸುಮಾರು 40 ಲಕ್ಷ ರೂ. ಮೌಲ್ಯದ ಒಡವೆಗಳನ್ನು ನೀಡಿ ಮಹಿಳೆಯೊಬ್ಬರು ಮೋಸ ಹೋಗಿದ್ದಾರೆ. ಈ ಸಂಬಂಧ ಬ್ಯಾಟರಾಯನಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಅಮಾವಾಸ್ಯೆ ಪೂಜೆ ನೆಪದಲ್ಲಿ ಒಡವೆ ಪಡೆದು ಮಹಿಳೆಗೆ ವಂಚಿಸಿದ ಜ್ಯೋತಿಷಿ!

-

Prabhakara R
Prabhakara R Sep 16, 2026 10:45 PM

ಬೆಂಗಳೂರು: ಚೌಡೇಶ್ವರಿ ದೇವಿಗೆ ಪೂಜೆ ಮಾಡುವ ನೆಪದಲ್ಲಿ ಮಹಿಳೆಯಿಂದ ನಕಲಿ ಜ್ಯೋತಿಷಿಯೊಬ್ಬ ಬರೋಬ್ಬರಿ 40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಪಡೆದು ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬ್ಯಾಟರಾಯನಪುರ ನಿವಾಸಿ 62 ವರ್ಷದ ಶಾಂತಮ್ಮ ವಂಚನೆಗೊಳಗಾದ ಮಹಿಳೆ.

ವಿಕ್ಟೋರಿಯಾ ಆಸ್ಪತ್ರೆ ಬಳಿ ಫುಟ್‌ಪಾತ್‌ನಲ್ಲಿ ಜ್ಯೋತಿಷ್ಯ ಹೇಳುತ್ತಿದ್ದ ವೆಂಕಟೇಶ್ ಆರೋಪಿಯಾಗಿದ್ದಾನೆ. ಆರೋಗ್ಯ ಸಮಸ್ಯೆ ಹಿನ್ನೆಲೆ ಶಾಂತಮ್ಮ ಆಗಾಗ ವಿಕ್ಟೋರಿಯಾ ಆಸ್ಪತ್ರೆಗೆ ತೆರಳುತ್ತಿದ್ದರು. ಇದೇ ವೇಳೆ ಜ್ಯೋತಿಷಿಯನ್ನು ಭೇಟಿಯಾಗಿದ್ದರು. ಕೆಲವೇ ದಿನಗಳಲ್ಲಿ ಆರೋಗ್ಯ ಸುಧಾರಿಸಲಿದೆ ಎಂದು ವೆಂಕಟೇಶ್ ಹೇಳಿದ್ದ ಎನ್ನಲಾಗಿದೆ. ಬಳಿಕ ಶಾಂತಮ್ಮ ಅವರಿಗೆ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿತ್ತು. ಇದರಿಂದ ಜ್ಯೋತಿಷಿಯ ಮಾತಿನ ಮೇಲೆ ಶಾಂತಮ್ಮ ಅವರಿಗೆ ನಂಬಿಕೆ ಹೆಚ್ಚಾಗಿತ್ತು. ನಂತರ ಮಗನ ಕುಡಿತದ ಚಟ ಹಾಗೂ ಮಗಳ ಮದುವೆ ವಿಚಾರವಾಗಿ ಭವಿಷ್ಯ ಕೇಳಲು ಮತ್ತೆ ಜ್ಯೋತಿಷಿಯನ್ನು ಹುಡುಕಿಕೊಂಡು ಬಂದಿದ್ದರು.

ಬಳಿಕ ಜ್ಯೋತಿಷಿಯು ಮಹಿಳೆಗೆ ಕರೆ ಮಾಡಿದ್ದ. ನಂತರ ಬ್ಯಾಟರಾಯನಪುರದ ಶಾಂತಮ್ಮ ಅವರ ಮನೆಗೆ ಬಂದಿದ್ದ ವೆಂಕಟೇಶ್, ನಿಂಬೆಹಣ್ಣು ನೀಡಿ ಚೌಡೇಶ್ವರಿ ದೇವಿಗೆ ಪೂಜೆ ಮಾಡಬೇಕು ಎಂದು ಹೇಳಿದ್ದಾನೆ. ಮನೆಯಲ್ಲಿರುವ ಚಿನ್ನಾಭರಣಗಳಿಗೆ ಪೂಜೆ ಮಾಡಿದರೆ ಕುಟುಂಬಕ್ಕೆ ಒಳ್ಳೆಯದಾಗುತ್ತದೆ ಎಂದು ನಂಬಿಸಿದ್ದಾನೆ. ಅಲ್ಲದೇ ಪ್ರತಿ ಅಮಾವಾಸ್ಯೆ ದಿನ ಬಂದು ಒಡವೆಗಳನ್ನು ಪಡೆದು ಪೂಜೆ ಮಾಡುವುದಾಗಿ ಹೇಳಿದ್ದ. ಜ್ಯೋತಿಷಿಯ ಮಾತನ್ನು ನಂಬಿದ ಶಾಂತಮ್ಮ, ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಆತನಿಗೆ ನೀಡುತ್ತಿದ್ದರು. ಹೀಗೆ ಸುಮಾರು ಒಂದು ವರ್ಷದಿಂದ ಹಂತ ಹಂತವಾಗಿ 40 ಲಕ್ಷ ರೂ. ಮೌಲ್ಯದ ಒಡವೆಗಳನ್ನು ಪಡೆದುಕೊಂಡಿದ್ದಾನೆ.

ಕಳೆದ ಆಗಸ್ಟ್ 19ರಂದು ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ತಮ್ಮ ಒಡವೆಗಳನ್ನು ವಾಪಸ್ ನೀಡುವಂತೆ ಶಾಂತಮ್ಮ ಜ್ಯೋತಿಷಿಯನ್ನು ಕೇಳಿದ್ದಾರೆ. ಒಡವೆಗಳನ್ನು ವಾಪಸ್ ಕೇಳಿದ ದಿನವೇ ವೆಂಕಟೇಶ್ ಹೊಸ ಕಥೆ ಕಟ್ಟಿದ್ದಾನೆ. ತನಗೆ ಅಪಘಾತವಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎಂಬಂತೆ ಶಾಂತಮ್ಮ ಅವರನ್ನು ನಂಬಿಸಲು ಯತ್ನಿಸಿದ್ದಾನೆ. ಇದಕ್ಕಾಗಿ ಅಪಘಾತ ಸಂಭವಿಸಿರುವಂತೆ ಕಾಣುವ ಎಐ ವಿಡಿಯೋವೊಂದನ್ನು ಶಾಂತಮ್ಮ ಅವರಿಗೆ ಕಳುಹಿಸಿದ್ದಾನೆ. ಬಳಿಕ ತಾನು ಬದುಕುಳಿಯುವುದೇ ಅನುಮಾನ ಎಂಬ ರೀತಿಯಲ್ಲಿ ಹೇಳಿಕೊಂಡು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ.

ಜ್ಯೋತಿಷಿಯ ಮಾತಿನಿಂದ ಆತಂಕಗೊಂಡ ಶಾಂತಮ್ಮ ಈ ವಿಚಾರವನ್ನು ತಮ್ಮ ಮಗಳ ಬಳಿ ಹೇಳಿಕೊಂಡಿದ್ದಾರೆ. ಬಳಿಕ ವಿಡಿಯೋವನ್ನು ಪರಿಶೀಲಿಸಿದಾಗ ಅದು ನಿಜವಾದ ಅಪಘಾತದ ದೃಶ್ಯವಲ್ಲ, ಎಐ ಮೂಲಕ ಸೃಷ್ಟಿಸಿರುವ ವಿಡಿಯೋ ಎಂಬುದು ಗೊತ್ತಾಗಿದೆ. ನಂತರ ವೆಂಕಟೇಶ್‌ಗೆ ಕರೆ ಮಾಡಲು ಪ್ರಯತ್ನಿಸಿದರೂ ಆತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು.

ಇದರಿಂದ ಅನುಮಾನಗೊಂಡ ಶಾಂತಮ್ಮ, ತಾವು ವಂಚನೆಗೊಳಗಾಗಿರುವ ಬಗ್ಗೆ ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಬ್ಯಾಟರಾಯನಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ವೆಂಕಟೇಶ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.