Fuel pump fraud: ರಾಜ್ಯದ 768 ಪೆಟ್ರೋಲ್ ಬಂಕ್‌ಗಳಲ್ಲಿ ಭಾರಿ ಗೋಲ್ಮಾರ್; ಅಳತೆಯಲ್ಲಿ ದೋಷ, ಲೀಟರ್‌ಗಟ್ಟಲೇ ವಂಚನೆ!
ಕರ್ನಾಟಕ ಕಾನೂನು ಮಾಪನಶಾಸ್ತ್ರ ಇಲಾಖೆಯು ಕಳೆದ 8 ದಿನಗಳಲ್ಲಿ 805 ಇಂಧನ ಕೇಂದ್ರಗಳನ್ನು ತಪಾಸಣೆ ಮಾಡಲಾಗಿದ್ದು, ಅವುಗಳಲ್ಲಿ 768 ಕೇಂದ್ರಗಳ ವಿತರಕ ಯಂತ್ರಗಳಿಗೆ ಮರುಮಾಪನಾಂಕನ ಅಗತ್ಯವಿರುವುದು ಕಂಡುಬಂದಿದೆ. ಅಲ್ಲದೆ, 101 ಇಂಧನ ಕೇಂದ್ರಗಳಲ್ಲಿ ಅನುಮತಿಸಲಾದ ಮಿತಿಗಿಂತ ಹೆಚ್ಚಿನ ವ್ಯತ್ಯಾಸ ಪತ್ತೆಯಾಗಿದೆ.
-
ಬೆಂಗಳೂರು, ಸೆ.16: ರಾಜ್ಯದ ಪೆಟ್ರೋಲ್ ಬಂಕ್‌ಗಳಲ್ಲಿ (Fuel pump fraud) ಅಳತೆಯಲ್ಲಿ ಭಾರಿ ಗೋಲ್ಮಾಲ್ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಸ್ವತಃ ರಾಜ್ಯ ಸರ್ಕಾರದಿಂದ ನಡೆಸಿರುವ ತಪಾಸಣೆಯಲ್ಲಿ ಅಘಾತಕಾರಿ ವಿಚಾರಗಳು ಬಹಿರಂಗವಾಗಿದೆ. ಕಾನೂನು ಮಾಪನಶಾಸ್ತ್ರ ಇಲಾಖೆಯಿಂದ 805 ಪೆಟ್ರೋಲ್ ಬಂಕ್‌ಗಳಲ್ಲಿ ತಪಾಸಣೆ ಮಾಡಲಾಗಿದ್ದು, ಅವುಗಳಲ್ಲಿ 768 ಕೇಂದ್ರಗಳಲ್ಲಿ ಅಳತೆಯಲ್ಲಿ ದೋಷ ಕಂಡುಬಂದಿದೆ.
ಈ ಬಗ್ಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಸಚಿವ ರಿಜ್ವಾನ್ ಅರ್ಷದ್ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ʼಕಡಿಮೆಯೂ ಇಲ್ಲ, ಹೆಚ್ಚೂ ಇಲ್ಲ- ನಿಖರ ಪ್ರಮಾಣವೇ ಗ್ರಾಹಕರ ಹಕ್ಕುʼ ಎಂಬ ಧ್ಯೇಯದೊಂದಿಗೆ, ಗ್ರಾಹಕರಿಗೆ ನಿಖರ ಅಳತೆ ಮತ್ತು ಪ್ರಮಾಣ ಖಚಿತಪಡಿಸುವುದು ಕಾನೂನು ಮಾಪನಶಾಸ್ತ್ರ ಇಲಾಖೆಯ ಪ್ರಮುಖ ಗುರಿಯಾಗಿದೆ ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು 2025ರ ಡಿಸೆಂಬರ್ 18ರಂದು ಹೊರಡಿಸಿದ G.S.R. 905(E) ಅಧಿಸೂಚನೆಯ ಮೂಲಕ ಇಂಧನ ವಿತರಕ ಯಂತ್ರಗಳ ಕಡ್ಡಾಯ ಮರುಸತ್ಯಾಪನೆ ಅವಧಿಯನ್ನು 12 ತಿಂಗಳಿಂದ 24 ತಿಂಗಳಿಗೆ ವಿಸ್ತರಿಸಿದೆ.
2026ರ ಮೇ 8ರಂದು ಹೊರಡಿಸಿದ G.S.R. 346(E) ಅಧಿಸೂಚನೆಯ ಮೂಲಕ ಪೆಟ್ರೋಲ್, ಡೀಸೆಲ್, CNG, LPG, LNG ಹಾಗೂ ಹೈಡ್ರೋಜನ್ ವಿತರಕ ಯಂತ್ರಗಳನ್ನು ಸರ್ಕಾರದಿಂದ ಅನುಮೋದಿತ ಪರೀಕ್ಷಾ ಕೇಂದ್ರಗಳ ವ್ಯಾಪ್ತಿಗೆ ತರಲಾಗಿದ್ದು, ಖಾಸಗಿ ಪರೀಕ್ಷಾ ಕೇಂದ್ರಗಳ ಮೂಲಕ ಪರಿಶೀಲನೆ ಮತ್ತು ಮುದ್ರೆ ಹಾಕುವಿಕೆಗೆ ಅವಕಾಶ ಕಲ್ಪಿಸಲಾಗಿದೆ.
ಈ ಹಿನ್ನೆಲೆಯಲ್ಲಿ, ಕರ್ನಾಟಕ ಕಾನೂನು ಮಾಪನಶಾಸ್ತ್ರ ಇಲಾಖೆ ರಾಜ್ಯಾದ್ಯಂತ ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸಿದೆ. ಕಳೆದ 8 ದಿನಗಳಲ್ಲಿ 805 ಇಂಧನ ಕೇಂದ್ರಗಳನ್ನು ತಪಾಸಣೆ ಮಾಡಲಾಗಿದ್ದು, ಅವುಗಳಲ್ಲಿ 768 ಕೇಂದ್ರಗಳ ವಿತರಕ ಯಂತ್ರಗಳಿಗೆ ಮರುಮಾಪನಾಂಕನ ಅಗತ್ಯವಿರುವುದು ಕಂಡುಬಂದಿದೆ. ಅಲ್ಲದೆ, 101 ಇಂಧನ ಕೇಂದ್ರಗಳಲ್ಲಿ ಅನುಮತಿಸಲಾದ ಮಿತಿಗಿಂತ ಹೆಚ್ಚಿನ ವ್ಯತ್ಯಾಸ ಪತ್ತೆಯಾಗಿದ್ದು, ಪ್ರಕರಣಗಳನ್ನು ದಾಖಲಿಸಿ ₹6.66 ಲಕ್ಷ ದಂಡ ವಿಧಿಸಲಾಗಿದೆ.
ಇದೇ ಅವಧಿಯಲ್ಲಿ 3,071 ಇಂಧನ ವಿತರಣಾ ನಳಿಕೆಗಳನ್ನು ಪರಿಶೀಲಿಸಲಾಗಿದ್ದು, ಅವುಗಳಲ್ಲಿ 2,618 ನಳಿಕೆಗಳಲ್ಲಿ ಪೆಟ್ರೋಲ್ ಅಥವಾ ಡೀಸೆಲ್ ನಿಗದಿತ ಪ್ರಮಾಣಕ್ಕಿಂತ ಕಡಿಮೆ ವಿತರಿಸುತ್ತಿರುವುದು ಪತ್ತೆಯಾಗಿದೆ. ಈ ಅಂಶವು ಇಂಧನ ವಿತರಕ ಯಂತ್ರಗಳ ನಿಯಮಿತ ಮರುಸತ್ಯಾಪನೆ ಹಾಗೂ ಸಮಯೋಚಿತ ಮರುಮಾಪನಾಂಕನದ ಅಗತ್ಯವನ್ನು ಮತ್ತಷ್ಟು ಸ್ಪಷ್ಟಪಡಿಸುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಸರ್ಕಾರದ ಕ್ರಮಗಳೇನು?
- ಕರ್ನಾಟಕದಾದ್ಯಂತ ಇಂಧನ ಕೇಂದ್ರಗಳ ತಪಾಸಣೆಯನ್ನು ನಿರಂತರವಾಗಿ ಮುಂದುವರಿಕೆ.
- ಡಿಸೆಂಬರ್ 2026ರೊಳಗೆ ಮರುಸತ್ಯಾಪನೆಗೆ ಬಾಕಿಯಿರುವ 2,500 ಇಂಧನ ಕೇಂದ್ರಗಳ ಪರಿಶೀಲನೆ ಪೂರ್ಣಗೊಳಿಸುವುದು.
- ರಾಜ್ಯದ ಎಲ್ಲಾ 5,946 ಇಂಧನ ಕೇಂದ್ರಗಳ ಪರಿಶೀಲನೆ ಮತ್ತು ಮುದ್ರೆ ಹಾಕುವಿಕೆಯ ವಿವರಗಳನ್ನು ಒಳಗೊಂಡ ಆನ್‌ಲೈನ್ ಡ್ಯಾಶ್‌ಬೋರ್ಡ್ ಪ್ರಾರಂಭಿಸಲಾಗುವುದು.
- ಗ್ರಾಹಕರ ದೂರು ಹಾಗೂ ಕುಂದುಕೊರತೆ ಪರಿಹಾರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗುವುದು.
- ಗ್ರಾಹಕರನ್ನು ಅಳತೆ ಸಂಬಂಧಿತ ವಂಚನೆ ಹಾಗೂ ಉಲ್ಲಂಘನೆಗಳಿಂದ ರಕ್ಷಿಸುವ ಉದ್ದೇಶದಿಂದ ರಾಜ್ಯಾದ್ಯಂತ ‘ಮಿಷನ್ ನಿಖರ – Measurement Guarantee ’ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಗುವುದು.
ಇಂಧನ ವಿತರಕ ಯಂತ್ರಗಳ ಪರಿಶೀಲನೆ ಮತ್ತು recalibration ಮಹತ್ವದ ಕಾರ್ಯಗಳನ್ನು ಖಾಸಗಿ ಸಂಸ್ಥೆಗಳಿಗೆ ವಹಿಸುವುದರಿಂದ ಸ್ವತಂತ್ರ ಹೊಣೆಗಾರಿಕೆ ಹಾಗೂ ಪರಿಣಾಮಕಾರಿ ಮೇಲ್ವಿಚಾರಣೆಗೆ ಧಕ್ಕೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು ಈ ಎರಡೂ ನಿರ್ಧಾರಗಳನ್ನು ಮರುಪರಿಶೀಲಿಸಿ, ಪರಿಶೀಲನೆ ಮತ್ತು ಮಾಪನಾಂಕನ ಪ್ರಕ್ರಿಯೆಯಲ್ಲಿ ಸರ್ಕಾರಿ ಮೇಲ್ವಿಚಾರಣೆ ಹಾಗೂ ಹೊಣೆಗಾರಿಕೆಯನ್ನು ಖಚಿತಪಡಿಸಬೇಕು ಎಂದು ಸಚಿವ ರಿಜ್ವಾನ್ ಅರ್ಷದ್ ಆಗ್ರಹಿಸಿದ್ದಾರೆ.