KAS Exam Scam: ಕೆಎಎಸ್ ಪರೀಕ್ಷೆಯಲ್ಲಿ ಮತ್ತೊಂದು ಅಕ್ರಮ; ಸಂದರ್ಶನಕ್ಕೆ ಒಂದೇ ಕೊಠಡಿಯ 15 ಮಂದಿ ಆಯ್ಕೆ!
ಕೆಎಎಸ್ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, 1:3 ಅನುಪಾತದಲ್ಲಿ ಸಂದರ್ಶನಕ್ಕೆ ಅರ್ಹತೆ ಪಡೆದ ಅಭ್ಯರ್ಥಿಗಳ ಪಟ್ಟಿಯನ್ನು ಕೆಪಿಎಸ್‌ಸಿ ಸೋಮವಾರ ಪ್ರಕಟಿಸಿತ್ತು. ಆದರೆ, ಈ ಪಟ್ಟಿಯಲ್ಲಿ ಗೋಲ್‌ಮಾಲ್ ನಡೆದಿದೆ ಎಂಬ ಆರೋಪಿಸಿರುವ ಅಭ್ಯರ್ಥಿಗಳು, ಸೂಕ್ತ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಕರ್ನಾಟಕ ಲೋಕಾಸೇವಾ ಆಯೋಗ ಕಚೇರಿ. -
ಬೆಂಗಳೂರು: ಕೆಪಿಎಸ್‌ಸಿ ನಡೆಸಿರುವ ಕೆಎಎಸ್ ಮುಖ್ಯ ಪರೀಕ್ಷೆಯಲ್ಲಿ (KAS Exam Scam) ಮತ್ತೆ ಅಕ್ರಮ ನಡೆದಿರುವ ಆರೋಪ ಕೇಳಿಬಂದಿದೆ. 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಮುಖ್ಯ ಪರೀಕ್ಷೆಯ ಫಲಿತಾಂಶದಲ್ಲಿ ಒಂದೇ ಕೊಠಡಿಯಲ್ಲಿ ಎಕ್ಸಾಂ ಬರೆದ 15 ಮಂದಿ ಸಂದರ್ಶನಕ್ಕೆ ಆಯ್ಕೆಯಾಗಿರುವುದರಿಂದ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ.
ಕೆಎಎಸ್ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, 1:3 ಅನುಪಾತದಲ್ಲಿ ವ್ಯಕ್ತಿತ್ವ ಪರೀಕ್ಷೆಗೆ (ಸಂದರ್ಶನ) ಅರ್ಹತೆ ಪಡೆದ ಅಭ್ಯರ್ಥಿಗಳ ಪಟ್ಟಿಯನ್ನು ಕೆಪಿಎಸ್‌ಸಿ ಸೋಮವಾರ ಪ್ರಕಟಿಸಿತ್ತು. ಆದರೆ, ಈ ಪಟ್ಟಿಯಲ್ಲಿ ಗೋಲ್‌ಮಾಲ್ ನಡೆದಿದೆ ಎಂಬ ಆರೋಪಿಸಿರುವ ಅಭ್ಯರ್ಥಿಗಳು, ಸೂಕ್ತ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಈ ಬಾರಿ ಕೆಎಎಸ್ ಹುದ್ದೆಗಳಿಗೆ ನೇಮಕಾತಿ ಆರಂಭದಿಂದಲೇ ಕೆಪಿಎಸ್‌ಸಿಯಿಂದ ಹಲವು ಎಡವಟ್ಟುಗಳು ನಡೆದಿದ್ದವು. ಪೂರ್ವಭಾವಿ ಪರೀಕ್ಷೆಯಲ್ಲಿ ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಲೋಪಗಳು ಆಗಿದ್ದವು. ಇದಕ್ಕೆ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ಮರು ಪರೀಕ್ಷೆ ನಡೆದಿತ್ತು. ಈಗ ಸಂದರ್ಶನಕ್ಕೆ ಅರ್ಹತೆ ಪಡೆದ ಪಟ್ಟಿಯಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿಬಂದಿದೆ.
ಕೆಪಿಎಸ್‌ಸಿ ಪರೀಕ್ಷಾ ಅಕ್ರಮದ ವಿರುದ್ಧ ಬಿಜೆಪಿ ಕೂಡ ಧ್ವನಿ ಎತ್ತಿದೆ. ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಮಾಡುವುದಾಗಿ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.
ಕೆಪಿಎಸ್‌ಸಿ ಸ್ಪಷ್ಟನೆ ಏನು?
ಕೆಎಎಸ್ ಪರೀಕ್ಷೆ ಅಕ್ರಮ ಆರೋಪದ ಬಗ್ಗೆ ಕೆಪಿಎಸ್‌ಸಿ ಕಾರ್ಯದರ್ಶಿ ಜ್ಯೋತಿ ಸ್ಪಷ್ಟನೆ ನೀಡಿದ್ದು, ಕೆಪಿಎಸ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಿ, ಫಲಿತಾಂಶವನ್ನು ಬಿಡುಗಡೆ ಮಾಡಲಾಗಿದೆ. ಆಧಾರ ಇಲ್ಲದೆ ಭ್ರಷ್ಟಾಚಾರ ಆರೋಪ ಮಾಡುವುದು ಸರಿಯಲ್ಲ. ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ವರದಿ ಕೇಳಿದ್ದಾರೆ, ಇನ್ನೆರಡು ದಿನಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.
ಅಕ್ರಮವಾಗಿ 300 ಕೋಟಿ ರುಪಾಯಿ ವಹಿವಾಟು: ಹವಾಲಾ ಹಗರಣದಲ್ಲಿ ರ‍್ಯಾಪಿಡೋ ಚಾಲಕ
ಫಲಿತಾಂಶದ ಕುರಿತು ಹಲವಾರು ಜನ ತುಂಬಾ ತಪ್ಪುಗಳು ನಡೆದಿದೆ ಎಂದು ಹೇಳುತ್ತಿದ್ದಾರೆ. ಈ ಕುರಿತು ಮುಖ್ಯ ಅಧಿಕಾರಿಗಳ ಜತೆ ಚರ್ಚೆ ಮಾಡಿದ್ದೇವೆ. ಯಾವುದೇ ತಪ್ಪುಗಳು ಇದರಲ್ಲಿ ನಡೆದಿಲ್ಲ. ಮಾಹಿತಿಯನ್ನು ಅರ್ಥ ಮಾಡಿಕೊಳ್ಳುವರಲ್ಲಿ ಸ್ವಲ್ಪ ಗೊಂದಲಕ್ಕೆ ಈಡಾಗಿದ್ದಾರೆ. ಏನೇ ವಿಚಾರ ಇದ್ದರೂ ಅಭ್ಯರ್ಥಿಗಳು ನಮ್ಮನ್ನು ಕೇಳಬಹುದು, ನಾವು ಅದನ್ನು ಪರಿಶೀಲನೆ ಮಾಡಿ ಅವರಿಗೆ ಉತ್ತರ ಕೊಡುತ್ತೇವೆ ಎಂದು ತಿಳಿಸಿದ್ದಾರೆ.