ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; 4 ವರ್ಷದಿಂದ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳ ಬಂಧನ

2022ರ ಜುಲೈ 26ರಂದು ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು ಹತ್ಯೆ ಮಾಡಲಾಗಿತ್ತು. ಕೃತ್ಯ ಎಸಗಿದ್ದ ಮುಖ್ಯ ಶೂಟರ್‌ಗಳು ಹಾಗೂ ಪ್ರಮುಖ ಆರೋಪಿಗಳಿಗೆ ಕಾನೂನಿನ ಕೈಯಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದ ಇಬ್ಬರು ಆರೋಪಿಗಳನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ.

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; ಇಬ್ಬರು ಆರೋಪಿಗಳ ಬಂಧನ

-

Prabhakara R
Prabhakara R Jul 12, 2026 4:28 PM

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು (Praveen Nettaru) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಇಬ್ಬರು ಪ್ರಮುಖ ಆರೋಪಿಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಪೊಯ್ಯೆಗುಡ್ಡೆ ನಿವಾಸಿಯಾಗಿದ್ದ ನೌಶಾದ್‌ನನ್ನು (32) ಬೆಂಗಳೂರಿನಲ್ಲಿ ಬಂಧಿಸಿದ್ದರೆ, ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಚೌಡ್ಲಿ ಕಾನ್ವೆಂಟ್ ರಸ್ತೆ ನಿವಾಸಿ ಅಬ್ದುಲ್ ನಾಸಿರ್‌ನನ್ನು (41) ಕೇರಳದ ಕೊಚ್ಚಿಯಲ್ಲಿ ವಶಕ್ಕೆ ಪಡೆಯಲಾಗಿದೆ.

ಕೃತ್ಯ ಎಸಗಿದ್ದ ಮುಖ್ಯ ಶೂಟರ್‌ಗಳು ಹಾಗೂ ಪ್ರಮುಖ ಆರೋಪಿಗಳಿಗೆ ಕಾನೂನಿನ ಕೈಯಿಂದ ತಪ್ಪಿಸಿಕೊಳ್ಳಲು ಈ ಆರೋಪಿಗಳು ಸಹಾಯ ಮಾಡಿದ್ದರು. ಆರೋಪಿಗಳಿಗೆ ಮೈಸೂರು, ಚಾಮರಾಜನಗರ ಹಾಗೂ ತಮಿಳುನಾಡಿನ ಈರೋಡ್‌ನಲ್ಲಿ ಸುರಕ್ಷಿತವಾಗಿ ಅಡಗಿಕೊಳ್ಳಲು ರಹಸ್ಯ ಅಡಗುತಾಣಗಳನ್ನು ವ್ಯವಸ್ಥೆ ಮಾಡಿಕೊಟ್ಟ ಗಂಭೀರ ಆರೋಪ ಇವರ ಮೇಲಿದೆ. ಈ ಪ್ರಕರಣದಲ್ಲಿ ಒಟ್ಟು 27 ಜನ ಆರೋಪಿಗಳ ಪಟ್ಟಿಯಲ್ಲಿ ಇವರ ಹೆಸರನ್ನೂ ಸೇರಿಸಲಾಗಿತ್ತು.

ಇನ್ನು ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಎನ್‌ಐಎ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿ ಒಬ್ಬೊಬ್ಬರನ್ನೇ ಜೈಲಿಗಟ್ಟಿದ್ದರು. ಆದರೆ ಕೊನೆಯಲ್ಲಿ ಆರು ಮಂದಿ ಆರೋಪಿಗಳು ಮಾತ್ರ ಸಿಗದೆ ತಲೆಮರೆಸಿಕೊಂಡಿದ್ದರು.

ಇವರ ಪತ್ತೆಗಾಗಿ ನಿಖರ ಮಾಹಿತಿ ನೀಡಿದವರಿಗೆ ತಲಾ 2 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಎನ್ಐಎ ಘೋಷಿಸಿತ್ತು. ಇದೇ ವೇಳೆ ಸೋಮವಾರಪೇಟೆಯ ಹಾನಗಲ್ಲು ನಿವಾಸಿಯಾದ ಮತ್ತೊಬ್ಬ ಆರೋಪಿ ಅಬ್ದುಲ್ ನಾಸಿರ್ (24) ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂಬ ಶಂಕೆ ವ್ಯಕ್ತವಾಗಿತ್ತು. ತನಿಖೆ ನಡೆಸಿದ ಎನ್‌ಐಎ ಅಧಿಕಾರಿಗಳು, 2025ರ ಏಪ್ರಿಲ್‌ನಲ್ಲಿ ತಲೆಮರೆಸಿಕೊಂಡಿದ್ದ ನಾಲ್ವರು ಆರೋಪಿಗಳ ವಿರುದ್ಧ ಹೆಚ್ಚುವರಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದರು.

ಬೆಂಗಳೂರಿನಲ್ಲಿ ಮಹಿಳೆಗೆ ಕಿರುಕುಳ ಕೇಸ್‌; ಫ್ಲಿಪ್‌ಕಾರ್ಟ್ ಡೆಲಿವರಿ ಏಜೆಂಟ್‌ ಬಂಧನ

ಏನಿದು ಪ್ರಕರಣ?

2022ರ ಜುಲೈ 26ರಂದು ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು ಹತ್ಯೆ ಮಾಡಲಾಗಿತ್ತು. ನಿಷೇಧಿತ ಪಿಎಫ್‌ಐ ಸಂಘಟನೆಯ ಕಾರ್ಯಕರ್ತರು, ಹಿಂದೂ ಮುಖಂಡರನ್ನು ಗುರಿಯಾಗಿಸಿಕೊಂಡು ಸಮಾಜದಲ್ಲಿ ಕೋಮು ಸೌಹಾರ್ದತೆ ಕೆಡಿಸುವ ಸಂಚಿನ ಭಾಗವಾಗಿ ಈ ಟಾರ್ಗೆಟ್ ಹತ್ಯೆ ನಡೆಸಿದ್ದರು ಎಂದು ಎನ್‌ಐಎ ತನ್ನ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿತ್ತು.