ಶಾಸಕ ಬೈರತಿ ಬಸವರಾಜ್ ನಿರೀಕ್ಷಣಾ ಜಾಮೀನು ಅರ್ಜಿ ವಜಾ; ಯಾವುದೇ ಕ್ಷಣದಲ್ಲಿ ಬಂಧನ ಸಾಧ್ಯತೆ
ಬಂಧನದ ಭೀತಿಯಿಂದ ಈಗಾಗಲೇ ಶಾಸಕ ಬೈರತಿ ಬಸವರಾಜ್ ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಸಿಐಡಿ ಪೊಲೀಸರು 3 ವಿಶೇಷ ತಂಡ ರಚನೆ ಮಾಡಿ ಬಲೆ ಬೀಸಿದ್ದಾರೆ. ಗೋವಾ ಮತ್ತು ಮಹಾರಾಷ್ಟ್ರ ಸೇರಿ ವಿವಿಧೆಡೆ ಪೊಲೀಸರಿಂದ ಹುಡುಕಾಟ ನಡೆಸುತ್ತಿದ್ದಾರೆ.
ಶಾಸಕ ಬೈರತಿ ಬಸವರಾಜ್ (ಸಂಗ್ರಹ ಚಿತ್ರ) -
ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಭೈರತಿ ಬಸವರಾಜ್‌ಗೆ ಸಂಕಷ್ಟ ಎದುರಾಗಿದೆ. ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಂಗಳವಾರ ಸಂಜೆ ವಜಾ ಮಾಡಿದ್ದು, ಇದರಿಂದ ಯಾವುದೇ ಕ್ಷಣದಲ್ಲಿ ಶಾಸಕನ ಬಂಧನವಾಗುವ ಸಾಧ್ಯತೆ ಇದೆ.
ಬಂಧನದ ಭೀತಿಯಿಂದ ಈಗಾಗಲೇ ಶಾಸಕ ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಸಿಐಡಿ ಪೊಲೀಸರು 3 ವಿಶೇಷ ತಂಡ ರಚನೆ ಮಾಡಿ ಬಲೆ ಬೀಸಿದ್ದಾರೆ. ನಿರೀಕ್ಷಣಾ ಜಾಮೀನು ವಜಾಗೊಂಡಿರುವ ಹಿನ್ನೆಲೆಯಲ್ಲಿ ಶಾಸಕನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಮೊದಲಿಗೆ ಗೋವಾದಲ್ಲಿ ಶಾಸಕನ ಮೊಬೈಲ್ ಲೊಕೇಷನ್ ತೋರಿಸಿತ್ತು. ನಂತರ ಮಹಾರಾಷ್ಟ್ರಕ್ಕೆ ಜಂಪ್ ಆಗಿರಬಹುದು ಅಂತ ಎಂದು ಪುಣೆ ಸೇರಿ ವಿವಿಧೆಡೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಇನ್ನು ಕೋರ್ಟ್‌ನಲ್ಲಿ ಬೈರತಿ ಬಸವರಾಜ್ ಪರ ಸಂದೇಶ್ ಚೌಟ ವಾದ ಮಂಡಿಸಿ, ಕೊಲೆಯಲ್ಲಿ ಬೈರತಿ ಬಸವರಾಜ್ ಪಾತ್ರ ಇಲ್ಲ. ಆದರೂ ಅವರನ್ನು ಕೇಸ್‌ನಲ್ಲಿ ಐದನೇ ಆರೋಪಿಯನ್ನಾಗಿ ಮಾಡಲಾಗಿದೆ. ಸಿಐಡಿಗೆ ಪ್ರಕರಣ ವರ್ಗಾವಣೆ ಆದ ನಂತರ ನೋಟಿಸ್ ನೀಡಿಲ್ಲ. ಸಮನ್ಸ್ ನೀಡದೆ ವಿಚಾರಣೆಗೆ ಹಾಜರಾಗಿಲ್ಲ ಎಂದರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ.
ಸಿಐಡಿ ಪರ ವಕೀಲ, ಎಸ್‌ಪಿಪಿ ಅಶೋಕ್ ನಾಯಕ್ ವಾದ ಮಂಡಿಸಿದ್ದು, ಶಾಸಕನಾದರೂ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಾರೆ. ಹತ್ಯೆಗೆ ಮುನ್ನಾ ಶಾಸಕನ ವಿರುದ್ಧ ಬಿಕ್ಲು ಶಿವ ದೂರು ನೀಡಿದ್ದ. ಎ1 ಜಗದೀಶ್ ಮತ್ತು ಎ5 ಬೈರತಿ ಬಸವರಾಜ್ ಇಬ್ಬರು ಕುಂಭಮೇಳಕ್ಕೆ ಹೋಗಿದ್ದರು. ಅಲ್ಲಿಗೆ ಹೋಗುವ ಮುನ್ನ ಕೊಲೆ ಸಂಚು ರೂಪಿಸಿದ್ದರು. ಆರೋಪಿಗಳು ಇಬ್ಬರೂ ಒಂದೇ ಕಡೆ ಇದ್ದ ಬಗ್ಗೆ ಮಾಹಿತಿ ಇದೆ ಎಂದು ತಿಳಿಸಿದ್ದಾರೆ. ವಾದ-ಪ್ರತಿವಾದ ಆಲಿಸಿದ ಕೋರ್ಟ್, ಶಾಸಕನ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾ ಮಾಡಿದೆ.