ಮತ್ತೊಂದು ದಾಖಲೆ ಬರೆದ ಬೆಂಗಳೂರು; ಈಗ ನಮ್ಮ ಮೆಟ್ರೋ ದೇಶದ 2ನೇ ಅತೀ ದೊಡ್ಡ ಮೆಟ್ರೋ ಜಾಲ
Namma Metro Pink Line: ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋದ ಪಿಂಕ್ ಲೈನ್‌ಗೆ ಚಾಲನೆ ನೀಡಿದರು. ಆ ಮೂಲಕ ನಮ್ಮ ಮೆಟ್ರೋದ ಒಟ್ಟು ಉದ್ದ 103.6 ಕಿಲೋಮೀಟರ್‌ಗೆ ತಲುಪಿದೆ. ಆ ಮೂಲಕ ದೇಶದ 2ನೇ ಅತೀ ದೋಡ್ಡ ಮೆಟ್ರೋ ಜಾಲ ಎನ್ನುವ ಹೆಗ್ಗಳಿಕೆ ಪಾತ್ರವಾಗಿದೆ.
-
ಬೆಂಗಳೂರು, ನ. 13: ಸಿಲಿಕಾನ್ ಸಿಟಿಯ ಸಂಚಾರ ದಟ್ಟಣೆಯನ್ನು ತಗ್ಗಿಸಲು ಗಣನೀಯ ಕೊಡುಗೆ ನೀಡುವ ನಮ್ಮ ಮೆಟ್ರೋ ಇದೀಗ ಮತ್ತೊಂದು ಇತಿಹಾಸ ಬರೆದಿದೆ. ಶುಕ್ರವಾರ (ನವೆಂಬರ್ 13) 7.5 ಕಿ.ಮೀ. ಉದ್ದದ ಎತ್ತರಿಸಿದ ಪಿಂಕ್ ಲೈನ್ ಅನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದು, ಆ ಮೂಲಕ ನಮ್ಮ ಮೆಟ್ರೋ ದೇಶದ 2ನೇ ಅತೀ ದೊಡ್ಡ, ದಕ್ಷಿಣ ಭಾರತದ ಅತೀ ದೊಡ್ಡ ಮೆಟ್ರೋ ಜಾಲ ಎನಿಸಿಕೊಂಡಿದೆ. ಇದರೊಂದಿಗೆ ನಮ್ಮ ಮೆಟ್ರೋದ ಉದ್ದ 100 ಕಿ.ಮೀ. ದಾಟಿದೆ. ನವೆಂಬರ್ 14ರಿಂದ ಸಾರ್ವಜನಿಕೆ ಸೇವೆಗೆ ಪಿಂಕ್ ಲೈನ್ ಲಭ್ಯವಾಗಲಿದೆ.
1 ದಿನದ ಕರ್ನಾಟಕ ಪ್ರವಾದಲ್ಲಿರುವ ಮೋದಿ ಮೈಸೂರಿನಿಂದ ಶುಕ್ರವಾರ ಮಧ್ಯಾಹ್ನ ಬೆಂಗಳೂರಿಗೆ ಆಗಮಿಸಿದರು. ಸುದ್ದಗುಂಟೆ ಪಾಳ್ಯ ಮೆಟ್ರೋ ನಿಲ್ದಾಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಹಸಿರು ನಿಶಾನೆ ತೋರುವ ಮೂಲಕ 6 ಬೋಗಿಗಳ ಮೆಟ್ರೋ ರೈಲಿಗೆ ಚಾಲನೆ ನೀಡಿದರು.
ನಮ್ಮ ಮೆಟ್ರೋ ಪಿಂಕ್ ಲೈನ್‌ಗೆ ಚಾಲನೆ ನೀಡಿದ ಮೋದಿ:
On board the Pink Line. Exceptional infrastructure for a vibrant city like Bengaluru. ಗುಲಾಬಿ ಮಾರ್ಗ ಮೆಟ್ರೋದಲ್ಲಿ ಪಯಣ. ಬೆಂಗಳೂರಿನಂತಹ ಚೈತನ್ಯಶೀಲ ನಗರಕ್ಕೆ ಅತ್ಯುತ್ತಮ ಮೂಲಸೌಕರ್ಯ. https://t.co/ZCmO5IajS6
— Narendra Modi (@narendramodi) November 13, 2026
ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ (ಸುದ್ದಗುಂಟೆ ಪಾಳ್ಯ) 7.5 ಕಿಲೋ ಮೀಟರ್ ಉದ್ದದ ಮಾರ್ಗ ಇದಾಗಿದೆ. ಆ ಮೂಲಕ ಮೆಟ್ರೋದ ಒಟ್ಟು ಉದ್ದ 103.6 ಕಿಲೋಮೀಟರ್‌ಗೆ ತಲುಪಿದೆ. ಇದರಿಂದ ದಕ್ಷಿಣ ಬೆಂಗಳೂರಿನ ಬನ್ನೇರುಘಟ್ಟ ರಸ್ತೆ ಭಾಗದ ಸಾವಿರಾರು ಪ್ರಯಾಣಿಕರಿಗೆ ಹಾಗೂ ಐಟಿ ಉದ್ಯೋಗಿಗಳಿಗೆ ಸಂಚಾರ ದಟ್ಟಣೆಯಿಂದ ದೊಡ್ಡ ಮಟ್ಟದ ಮುಕ್ತಿ ಸಿಗಲಿದೆ. ಸುಮಾರು 3,470 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಹೊಸ ಮಾರ್ಗ ನಿರ್ಮಾಣವಾಗಿದೆ.
ಪಿಂಕ್ ಮೆಟ್ರೋ ಮಾರ್ಗ ಕಾಳೇನ ಅಗ್ರಹಾರದಿಂದ ನಾಗವಾರವನ್ನು ಸಂಪರ್ಕಿಸುತ್ತದೆ. ಈ ಮಾರ್ಗದ ಒಟ್ಟು ಉದ್ದ ಸುಮಾರು 21.25 ಕಿ.ಮೀ. ಒಟ್ಟು 18 ನಿಲ್ದಾಣಗಳಿದೆ. ಸದ್ಯ 7.5 ಕಿ.ಮೀ. ಎತ್ತರಿಸಿದ ಮಾರ್ಗಕ್ಕೆ ಚಾಲನೆ ನೀಡಲಾಗಿದೆ. ಉಳಿದ 13.76 ಕಿ.ಮೀ. ಭೂಗತ ಸುರಂಗ ಮಾರ್ಗದ ಕಾಮಗಾರಿ ನಡೆಯುತ್ತಿದೆ. ಈ ಮಾರ್ಗ ಮುಂದಿನ ವರ್ಷ ಸಾರ್ವಜನಿಕ ಸೇವೆಗೆ ತೆರೆಯುವ ಸಾಧ್ಯತೆ ಇದೆ.
ಸೆಂಚುರಿ ಬಾರಿಸಿದ ನಮ್ಮ ಮೆಟ್ರೋ
ವಿಶೇಷ ಎಂದರೆ 7.5 ಕಿ.ಮೀ. ಉದ್ದದ ಪಿಂಕ್ ಮಾರ್ಗದ ಉದ್ಘಾಟನೆಯೊಂದಿಗೆ ನಮ್ಮ ಮೆಟ್ರೋ ಸೆಂಚುರಿ ಬಾರಿಸಿದೆ. ಇದುವರೆಗೆ ನಮ್ಮ ಮೆಟ್ರೋ 3 ಮಾರ್ಗಗಳ ಮೂಲಕ ಸುಮಾರು 96.1 ಕಿ.ಮೀ. ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿತ್ತು. ಇದೀಗ ಈ ಮಾರ್ಗ 103.6 ಕಿ.ಮೀ.ಗೆ ಏರಿಕೆಯಾಗಿದೆ. ಇದರೊಂದಿಗೆ ದೇಶದ 2ನೇ ಅತೀ ದೊಡ್ಡ ಮೆಟ್ರೋ ಜಾಲ ಎನ್ನುವ ಹೆಗ್ಗಳಿಕೆಗೆ ನಮ್ಮ ಮೆಟ್ರೋ ಪಾತ್ರವಾಗಿದೆ. ಅಲ್ಲದೆ ದಕ್ಷಿಣ ಭಾರತದಲ್ಲಿ 100 ಕಿ.ಮೀ. ಉದ್ದ ದಾಟಿದ ಮೊದಲ ಮೆಟ್ರೋ ಎನ್ನುವ ವಿಶೇಷತೆಯೂ ಇನ್ನು ನಮ್ಮ ಮೆಟ್ರೋಗೆ ಸ್ವಂತ. ನಮ್ಮ ಮೆಟ್ರೋ 2011ರಲ್ಲಿ ಆರಂಭವಾಯ್ತು.
ಮೊದಲ ಸ್ಥಾನದಲ್ಲಿ ದಿಲ್ಲಿ ಮೆಟ್ರೋ
416 ಕಿ.ಮೀ. ಮೂಲಕ ದಿಲ್ಲಿ ಮೆಟ್ರೋ ಮೊದಲ ಸ್ಥಾನದಲ್ಲಿದೆ. ಇನ್ನು ಮೂರನೇ ಸ್ಥಾನದಲ್ಲಿರುವ ಮುಂಬೈ ಮೆಟ್ರೋದ ಉದ್ದ 102.6 ಕಿ.ಮೀ. ಇನ್ನು ಕೋಲ್ಕತಾ 73.42 ಕಿ.ಮೀ., ಹೈದರಾಬಾದ್ 69 ಕಿ.ಮೀ. ವ್ಯಾಪ್ತಿಯಲ್ಲಿದೆ.