ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sl Bhairappa: ಹುಟ್ಟೂರಿನ ಜನರ ಬವಣೆಗೆ ಮರುಗಿ ನೀರು ತರಿಸಿದ ಭೈರಪ್ಪ

ಎಸ್‌ಎಲ್‌ ಭೈರಪ್ಪ ಅವರು ಸಾರಸ್ವತ ಲೋಕದಲ್ಲಿ ಎಷ್ಟೇ ಉತ್ತುಂಗಕ್ಕೇರಿದ್ದರೂ, ತವರೂರನ್ನು ಮರೆಯಲಿಲ್ಲ. ಹುಟ್ಟೂರು, ಹಾಸನದ ಸಂತೇಶಿವರ ಎಂದರೆ ಅವರಿಗೆ ಬಲು ಇಷ್ಟ. ಊರಿನ ಜನರು ನೀರಿನ ಕೊರತೆಯಿಂದ ಬಳಲುತ್ತಿರುವುದನ್ನು ಕಂಡಿದ್ದ ಅವರು, ತಮ್ಮ ಇಳಿ ವಯಸ್ಸಿನಲ್ಲೂ, ಸಂತೇಶಿವರಕ್ಕೆ ಏತ ನೀರಾವರಿ ಮೂಲಕ ನೀರಿನ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಹೋರಾಟ ನಡೆಸಿದರು.

ಹುಟ್ಟೂರಿನ ಜನರ ಬವಣೆಗೆ ಮರುಗಿ ನೀರು ತರಿಸಿದ  ಎಸ್‌ ಎಲ್‌ ಭೈರಪ್ಪ

-

Vishakha Bhat Vishakha Bhat Sep 24, 2025 5:12 PM

ಬೆಂಗಳೂರು: ಎಸ್‌ಎಲ್‌ ಭೈರಪ್ಪ (SL Bhyrappa) ಅವರು ಸಾರಸ್ವತ ಲೋಕದಲ್ಲಿ ಎಷ್ಟೇ ಉತ್ತುಂಗಕ್ಕೇರಿದ್ದರೂ, ತವರೂರನ್ನು ಮರೆಯಲಿಲ್ಲ. ಹುಟ್ಟೂರು, ಹಾಸನದ ಸಂತೇಶಿವರ ಎಂದರೆ ಅವರಿಗೆ ಬಲು ಇಷ್ಟ. ಊರಿನ ಜನರು ನೀರಿನ ಕೊರತೆಯಿಂದ ಬಳಲುತ್ತಿರುವುದನ್ನು ಕಂಡಿದ್ದ ಅವರು, ತಮ್ಮ ಇಳಿ ವಯಸ್ಸಿನಲ್ಲೂ, ಸಂತೇಶಿವರಕ್ಕೆ ಏತ ನೀರಾವರಿ ಮೂಲಕ ನೀರಿನ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಹೋರಾಟ ನಡೆಸಿದರು. ಸರಕಾರದ ಪಟ್ಟು ಹಿಡಿದು ಹುಟ್ಟೂರಿಗೆ ನೀರು ತರಿಸುವ ತನಕ ವಿರಮಿಸಲಿಲ್ಲ. ಹುಟ್ಟೂರಿನ ಋಣ ಸಂದಾಯ ಮಾಡಬೇಕು ಎಂದು ಭಾವಿಸಿದ್ದ ಭೈರಪ್ಪನವರು ಭಗೀರಥನಂತೆ ಪಣ ತೊಟ್ಟು ಯೋಜನೆಯನ್ನು ಜಾರಿಗೊಳಿಸುವಲ್ಲಿ ಯಶಸ್ವಿಯಾದರು.

ಇದೇ ಕಾರಣಕ್ಕಾಗಿ ಈ ವರ್ಷ ಸಂತೇಶಿವರದಲ್ಲಿ ಎಸ್‌.ಎಲ್‌ ಭೈರಪ್ಪನವರಿಗೆ ಗೌರವ ಸನ್ಮಾನ ನಡೆಸಲಾಗಿತ್ತು. ಹುಟ್ಟೂರಿನ ಕೆರೆಯನ್ನು ಹೂಳುಮುಕ್ತಗೊಳಿಸಿದ ಹಾಗೂ ಏತ ನೀರಾವರಿ ನೀರನ್ನು ತರಿಸಿದ ಹಿನ್ನೆಲೆಯಲ್ಲಿ "ನಮ್ಮ ಭೈರಪ್ಪ ನಮ್ಮ ಹೆಮ್ಮೆ" ಹೆಸರಿನಲ್ಲಿ ಸನ್ಮಾನ ಹಾಗೂ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಎಸ್‌ಎಲ್‌ ಭೈರಪ್ಪನವರು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಸಂತೇಶಿವರ ಮತ್ತು ಅಗ್ರಹಾರ ಬೆಳಗುಲಿ ಗ್ರಾಮಗಳ ಕೆರೆ ಕಟ್ಟೆಗಳಿಗೆ ಸರ್ಕಾರದ ವತಿಯಿಂದ ಏತ ನೀರಾವರಿ ಯೋಜನೆಯಡಿ ನೀರು ಪೂರೈಕೆಗೆ ಶ್ರಮ ವಹಿಸಿದ್ದರು. ಇದಕ್ಕಾಗಿ ಹತ್ತಾರು ವರ್ಷಗಳಿಂದ ಅವರು ಪ್ರಯತ್ನಿಸಿದ್ದರು. ಮುಖ್ಯಮಂತ್ರಿಗಳಾಗಿದ್ದ ಬಿಎಸ್‌ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರನ್ನು ಕಂಡು ಮನವಿ ಸಲ್ಲಿಸಿದ್ದರು.

ಅವರ ಪ್ರಯತ್ನದ ಫಲವಾಗಿ ಯೋಜನೆ ಸಫಲಗೊಂಡು ಸಂತೇಶಿವರ ಮತ್ತು ಅಗ್ರಹಾರ ಬೆಳಗುಲಿ ಗ್ರಾಮಗಳ ಕೆರೆಕಟ್ಟೆಗಳಿಗೆ ನೀರು ಪೂರೈಕೆಯಾಗಿತ್ತು. ಸುತ್ತಲ 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಏರಿಕೆಯಿಂದಾಗಿ ಸಾವಿರಾರು ಕೊಳವೆ ಬಾವಿಗಳು ಮರುಪೂರಣಗೊಂಡು ರೈತ ಸಮುದಾಯಕ್ಕೆ ಖುಷಿ ನೆಮ್ಮದಿ ದೊರೆತಿದೆ. ಇದರಿಂದ ಹರ್ಷಗೊಂಡ ಊರಿನ ಜನ ಭೈರಪ್ಪನವರನ್ನು ಸನ್ಮಾನಿಸಿದ್ದರು.

ಚನ್ನರಾಯಪಟ್ಟಣ ತಾಲೂಕಿನ ಸಂತೇಶಿವರ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ, ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿಗಳಾದ ಬಿಎಸ್‌ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಸಂಸದರಾದ ಡಾ.ಸಿಎನ್‌ ಮಂಜುನಾಥ್‌, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌, ಶ್ರೇಯಸ್‌ ಎಂ. ಪಟೇಲ್‌, ಶಾಸಕರಾದ ಕೆಎನ್‌ ರಾಜಣ್ಣ, ಸಿಎನ್‌ ಬಾಲಕೃಷ್ಣ, ಷಡಕ್ಷರಿ, ಜೆಸಿ ಮಾಧುಸ್ವಾಮಿ ಮುಂತಾದವರು ಭಾಗವಹಿಸಲಿದ್ದರು. ಭೈರಪ್ಪನವರ ಮೆರವಣಿಗೆ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಭೈರಪ್ಪನವರ ಕೃತಿಗಳ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಹುಟ್ಟೂರಿನ ಜನರಿಗೆ ಅತ್ಯಂತ ಅವಶ್ಯವಿರುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಿದ್ದಕ್ಕೆ ಎಸ್‌.ಎಲ್‌ ಭೈರಪ್ಪನವರಿಗೆ ಸಂತಸವಾಗಿತ್ತು.

" ಈ ಭಾಗದ ರೈತರ ಹಲವು ದಶಕಗಳ ಕನಸು ಈಡೇರಿದೆ. ಹುಟ್ಟೂರಿನ ಜನತೆಗೆ ಶಾಶ್ವತವಾಗಿ ನೀರಿನ ವ್ಯವಸ್ಥೆ ಮಾಡಬೇಕು ಎಂಬ ಉದ್ದೇಶದಿಂದ ಇದು ಅನುಷ್ಠಾನವಾಗಿದೆ. ಇದು ನನ್ನ ಬಯಕೆಯೂ ಆಗಿದೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳುʼ ಎಂದು ಭೈರಪ್ಪನವರು ಹೇಳಿದ್ದರು.