ಬಿಡದಿ ಟೌನ್‌ಶಿಪ್ ವಿವಾದ; ವಿಧಾನಸೌಧಕ್ಕಿಂತ ಭೈರಮಂಗಲದಲ್ಲೇ ಸಭೆ ಮಾಡುವಂತೆ ಸಿಎಂಗೆ ಎಚ್‌ಡಿಕೆ ಪತ್ರ
Bidadi Township: ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದ ಸಭೆಗೆ ನನ್ನನ್ನು ಮತ್ತು ನನ್ನ ತಂಡದ ಐವರು ಪ್ರತಿನಿಧಿಗಳೊಂದಿಗೆ ಚರ್ಚೆಗೆ ಆಹ್ವಾನಿಸಿರುವ ತಮ್ಮ ಪತ್ರ ನನ್ನ ಕೈ ಸೇರಿದೆ. ತಮ್ಮ ಆಹ್ವಾನಕ್ಕೆ ಧನ್ಯವಾದಗಳು. ಆದರೆ, ಬಿಡದಿ ಟೌನ್‌ಶಿಪ್ ಯೋಜನೆ ಬಗ್ಗೆ ವಿಧಾನಸೌಧದಲ್ಲಿ ಚರ್ಚೆ ಉಪಯೋಗವಿಲ್ಲ, ಬಾಧಿತ ರೈತರ ಭಾಗದಲ್ಲಿಯೇ ಚರ್ಚೆ ನಡೆಯಬೇಕು ಎಂದು ಕೇಂದ್ರ ಸಚಿವರು ಮನವಿ ಮಾಡಿದ್ದಾರೆ.
-
ಬೆಂಗಳೂರು, ಜೂನ್ 22: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆರಂಭ ಮಾಡಿರುವ ಬಿಡದಿ ನೂತನ ಟೌನ್‌ಶಿಪ್ ಯೋಜನೆ ಬಗ್ಗೆ ಚರ್ಚಿಸಲು ಸಿಎಂ ತಮಗೆ ಬರೆದಿದ್ದ ಪತ್ರಕ್ಕೆ ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಅವರು ಉತ್ತರ ಬರೆದಿದ್ದಾರೆ. ಬಿಡದಿ ಟೌನ್‌ಶಿಪ್ (Bidadi Township) ಯೋಜನೆ ಬಗ್ಗೆ ವಿಧಾನಸೌಧದಲ್ಲಿ ಚರ್ಚೆ ಉಪಯೋಗವಿಲ್ಲ, ಬಾಧಿತ ರೈತರ ಭಾಗದಲ್ಲಿಯೇ ಚರ್ಚೆ ನಡೆಯಬೇಕು ಎಂದು ಸಚಿವರು ಸಿಎಂಗೆ ತಿಳಿಸಿದ್ದಾರೆ.
ಕೇಂದ್ರ ಸಚಿವರ ಪತ್ರದಲ್ಲಿ ಏನಿದೆ?
ಶ್ರೀ ಡಿ.ಕೆ.ಶಿವಕುಮಾರ್ ಅವರೇ, ದಿನಾಂಕ: 22-06-2026ರ ತಮ್ಮ ಪತ್ರದಲ್ಲಿ ವಿಧಾನಸೌಧದಲ್ಲಿ ದಿನಾಂಕ: 26-06-2026ರಂದು ಬೆಳಗ್ಗೆ 11 ಗಂಟೆಗೆ ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದ ಸಭೆಗೆ ನನ್ನನ್ನು ಮತ್ತು ನನ್ನ ತಂಡದ ಐವರು ಪ್ರತಿನಿಧಿಗಳೊಂದಿಗೆ ಚರ್ಚೆಗೆ ಆಹ್ವಾನಿಸಿರುವ ತಮ್ಮ ಪತ್ರ ನನ್ನ ಕೈ ಸೇರಿದೆ. ತಮ್ಮ ಆಹ್ವಾನಕ್ಕೆ ಧನ್ಯವಾದಗಳು.
ಬಿಡದಿ ಸಮಗ್ರ ಉಪನಗರ ಯೋಜನೆ ಅನುಷ್ಠಾನದಿಂದ ರಾಮನಗರ ತಾಲೂಕಿನ ಬಿಡದಿ ಹೋಬಳಿಯ ಎಂಟು ಗ್ರಾಮಗಳು ಮತ್ತು ಹಾರೋಹಳ್ಳಿ ತಾಲ್ಲೂಕಿನ ಒಂದು ಗ್ರಾಮದ ರೈತರು, ಗ್ರಾಮಸ್ಥರು ಮತ್ತು ಪಾಲುದಾರರು ಹಲವಾರು ಸಮಸ್ಯೆ ಮತ್ತು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಅಲ್ಲದೇ, ಈ ಭಾಗದಲ್ಲಿರುವ ಅಪಾರ ಪರಿಸರ ಸಂಪತ್ತಿಗೆ ಹಾನಿಯಾಗುತ್ತದೆ.
ಈ ಹಿನ್ನೆಲೆಯಲ್ಲಿ ತಾವು ಪ್ರಸ್ತಾಪಿಸಿರುವ ಸಭೆಯನ್ನು ರಾಮನಗರ ಜಿಲ್ಲೆಯ ಬಿಡದಿ ಅಥವಾ ಬಾಧಿತ ಪ್ರದೇಶವಾದ ಭೈರಮಂಗಲದ ಯಾವುದಾದರೂ ಸೂಕ್ತ ಸಾರ್ವಜನಿಕ ಸ್ಥಳದಲ್ಲಿ ಸಭೆ ಕರೆಯುವುದು ಸಮಂಜಸವೆನಿಸುತ್ತದೆ. ಈ ಮೇಲೆ ಸೂಚಿಸಿದ ಸ್ಥಳಗಳಲ್ಲಿ ಬಿಡದಿ ಸಮಗ್ರ ಉಪನಗರ ಯೋಜನೆಯಿಂದ ಬಾಧಿತರಾಗಿರುವ ರೈತರು, ಗ್ರಾಮಸ್ಥರು, ಕೃಷಿ ಕಾರ್ಮಿಕರು, ಹೈನುಗಾರಿಕೆ ಉದ್ಯಮದಲ್ಲಿರುವ ರೈತ ಮಹಿಳೆಯರು, ಸಣ್ಣ ವ್ಯಾಪಾರಸ್ಥರು, ಉದ್ಯಮಿಗಳು ಹಾಗೂ ಬಾಧಿತ ಇತರ ಪಾಲುದಾರರನ್ನು ಭಾಗವಹಿಸಲು ಅವಕಾಶ ನೀಡಿದಲ್ಲಿ ಈ ಸಭೆಯಲ್ಲಿ ಮುಕ್ತ ಮನಸ್ಸಿನ ಚರ್ಚೆ ನಡೆಸಿ, ಬಾಧಿತ ವರ್ಗದ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅವಕಾಶವಾಗುತ್ತದೆ ಎನ್ನುವುದು ನನ್ನ ಸ್ಪಷ್ಟ ಅಭಿಪ್ರಾಯ ಮತ್ತು ನಿಲುವು.
ಈ ಯೋಜನೆಯ ರಚನೆ ಮತ್ತು ಅನುಷ್ಠಾನದಲ್ಲಿ ನನಗೆ ಯಾವುದೇ ವೈಯಕ್ತಿಕ ಹಿತಾಸಕ್ತಿ ಇಲ್ಲ ಎನ್ನುವುದನ್ನು ಈ ಪತ್ರದ ಮೂಲಕ ಸ್ಪಷ್ಟಪಡಿಸುತ್ತಿದ್ದೇನೆ. ಮುಂದುವರೆದು, ವಿಧಾನಸೌಧದಲ್ಲಿ ನಡೆಸಲು ಉದ್ದೇಶಿಸಿರುವ ಸಭೆಯಲ್ಲಿ ಬಾಧಿತ ರೈತ ವರ್ಗ, ಗ್ರಾಮಸ್ಥರು ಮತ್ತು ಪಾಲುದಾರರನ್ನು ಆಹ್ವಾನಿಸದೆ ಅವರನ್ನು ಹೊರಗೆ ಇಟ್ಟು ಸಭೆ ನಡೆಸುವುದರಿಂದ ಸಭೆ ಫಲಪ್ರದವಾಗುವುದಿಲ್ಲ. ತಾವು ನಿಗದಿಪಡಿಸಿದ ದಿನಾಂಕ: 26-06-2026ರಂದು ನನಗೆ ಪೂರ್ವ ನಿಯೋಜಿತ ಕಾರ್ಯಕ್ರಮಗಳು ಇರುವುದರಿಂದ, ಈ ಉದ್ದೇಶಿತ ಸಭೆಯನ್ನು ದಿನಾಂಕ: 27-06-2026ರಂದು ಮೇಲೆ ತಿಳಿಸಿದಂತೆ ಬಿಡದಿ ಅಥವಾ ಭೈರಮಂಗಲದ ಸೂಕ್ತ ಸ್ಥಳದಲ್ಲಿ ಆಯೋಜಿಸಿ ಮೇಲೆ ಕಾಣಿಸಿದ ಬಾಧಿತ ವರ್ಗದ ಜನರನ್ನು ಆಹ್ವಾನಿಸಿ ಸಭೆ ನಡೆಸಬೇಕೆಂದು ಈ ಮೂಲಕ ಕೋರುತ್ತೇನೆ ಎಂದು ಕೇಂದ್ರ ಸಚಿವರು ಪತ್ರದಲ್ಲಿ ಬರೆದಿದ್ದಾರೆ.