ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bidadi Township: 2007ರಲ್ಲಿ ಬಿಡದಿ ಟೌನ್‌ಶಿಪ್‌ಗೆ ಡಿಕೆಶಿ, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ವಿರೋಧಿಸಿದ್ದರು: ಎಚ್.ಡಿ.ಕುಮಾರಸ್ವಾಮಿ

ರಿಯಲ್ ಎಸ್ಟೇಟ್ ದುರಾಸೆಯಿಂದ ಮುಗ್ಧ ರೈತರಿಂದ ಫಲವತ್ತಾದ ಭೂಮಿಯನ್ನು ಕಸಿದುಕೊಂಡು ದಂಧೆಕೋರರಿಗೆ ನೀಡಲು ಬ್ರೋಕರ್ ಕೆಲಸ ಮಾಡುತ್ತಿರುವ ಈ ಸರ್ಕಾರದ ನೇತೃತ್ವ ವಹಿಸಿರುವ ನಾಯಕರು ಇದೇ ಬಿಡದಿ ಟೌನ್ ಶಿಪ್ ಯೋಜನೆ ಬಗ್ಗೆ ಈ ಹಿಂದೆ ವಿಧಾನ ಕಲಾಪದಲ್ಲಿಯೇ ತೀವ್ರ ವಿರೋಧ ವ್ಯಕ್ತಪಡಿಸಿದ್ದರು ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.

2007ರಲ್ಲಿ ಕಾಂಗ್ರೆಸ್‌ ನಾಯಕರು ಬಿಡದಿ ಟೌನ್‌ ಶಿಪ್ ವಿರೋಧಿಸಿದ್ದರು

-

Prabhakara R
Prabhakara R Jun 22, 2026 10:18 PM

ಬೆಂಗಳೂರು, ಜೂನ್ 22: ಬಿಡದಿ ಟೌನ್ ಶಿಪ್ ಯೋಜನೆ (Bidadi Township) ಬಗ್ಗೆ ರಾಜ್ಯದ ಹಾಲಿ ಮುಖ್ಯಮಂತ್ರಿ 2007ರಲ್ಲಿ ವಿಧಾನಸಭೆ ಕಲಾಪದಲ್ಲಿ ಹೇಳಿದ್ದ ಮಾತುಗಳನ್ನು ಒಮ್ಮೆ ನೆನಪು ಮಾಡಿಕೊಳ್ಳಲಿ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಖಾತೆ ಸಚಿವರಾದ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.

ಕಳೆದ 500 ದಿನಗಳಿಂದ ಪ್ರತಿಭಟನೆ ಮಾಡುತ್ತಿರುವವರು ಅಸಲಿ ರೈತರಲ್ಲ ಎನ್ನುತ್ತಿರುವ ಮುಖ್ಯಮಂತ್ರಿಗೆ ನೇರ ಸವಾಲು ಹಾಕಿದ ಕೇಂದ್ರ ಸಚಿವರು; ಬನ್ನಿ ಬೈರಮಂಗಲದ ಪ್ರತಿಭಟನಾ ಸ್ಥಳಕ್ಕೆ. ಅಲ್ಲಿ ಕೂತಿರುವವರು ಅಸಲಿ ರೈತರೋ ಅಥವಾ ನಕಲಿ ರೈತರೋ ಎಂಬುದು ನಿಮಗೆ ಗೊತ್ತಾಗುತ್ತದೆ. ನಾನು ಸಿದ್ಧನಿದ್ದೇನೆ, ಭೈರಮಂಗಲಕ್ಕೆ ಬರುವುದಕ್ಕೆ ನೀವು ಸಿದ್ಧರಿದ್ದೀರಾ? ಎಂದರು.

ರಿಯಲ್ ಎಸ್ಟೇಟ್ ದುರಾಸೆಯಿಂದ ಮುಗ್ಧ ರೈತರಿಂದ ಫಲವತ್ತಾದ ಭೂಮಿಯನ್ನು ಕಸಿದುಕೊಂಡು ದಂಧೆಕೋರರಿಗೆ ನೀಡಲು ಬ್ರೋಕರ್ ಕೆಲಸ ಮಾಡುತ್ತಿರುವ ಈ ಸರ್ಕಾರದ ನೇತೃತ್ವ ವಹಿಸಿರುವ ನಾಯಕರು ಇದೇ ಬಿಡದಿ ಟೌನ್ ಶಿಪ್ ಯೋಜನೆ ಬಗ್ಗೆ ವಿಧಾನ ಕಲಾಪದಲ್ಲಿಯೇ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅವರಲ್ಲಿ ಹಾಲಿ ಮುಖ್ಯಮಂತ್ರಿ ಪ್ರಮುಖರು. ನೋಡಿದರೆ ಟೌನ್ ಶಿಪ್ ಯೋಜನೆಯನ್ನು ಕಾರ್ಯಗತ ಮಾಡಿಯೇ ತೀರುತ್ತೇನೆ ಎಂದು ರಿಯಲ್ ಎಸ್ಟೇಟ್ ಮಾಡಲು ಮುಂದಾಗಿದ್ದಾರೆ ಎಂದು ಸಚಿವರು ಕಿಡಿಕಾರಿದರು.

ಬಿಡದಿ ಟೌನ್‌ಶಿಪ್ ವಿವಾದ; ವಿಧಾನಸೌಧಕ್ಕಿಂತ ಭೈರಮಂಗಲದಲ್ಲೇ ಸಭೆ ಮಾಡುವಂತೆ ಸಿಎಂಗೆ ಎಚ್‌ಡಿಕೆ ಪತ್ರ

ಹಾಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ. ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಎಲ್ಲಾ ಕಾಂಗ್ರೆಸ್ ನಾಯಕರು ಬಿಡದಿ ಯೋಜನೆಯನ್ನು ತೀವ್ರವಾಗಿ ವಿರೋಧಿಸಿದ್ದರು. ಅಂದು ದೊಡ್ಡ ಗಂಟಲಿನಲ್ಲಿ ವಿರೋಧಿಸಿದವರು ಇಂದು ಯೋಜನೆಯ ಪರವಾಗಿ ಮಾತಾಡುತ್ತಿದ್ದಾರೆ. ಇದು ವಿರೋಧಾಭಾಸ. ಪ್ರಮುಖವಾಗಿ ಮಲ್ಲಿಕಾರ್ಜುನ ಖರ್ಗೆ ಮತ್ತು ಸಿದ್ದರಾಮಯ್ಯ ಅವರು ಹಾಲಿ ಮುಖ್ಯಮಂತ್ರಿ ನಡೆಸುತ್ತಿರುವ ಅಕ್ರಮಗಳನ್ನು ನೋಡಿಕೊಂಡು ಜಾಣಮೌನ ವಹಿಸಿದ್ದಾರೆ ಎಂದು ಸಚಿವ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿನ ಮೇಲೆ ಒತ್ತಡ ಕಡಿಮೆ ಮಾಡಲು ಬಿಡದಿ ಸೇರಿದಂತೆ ಐದು ಟೌನ್ ಶಿಪ್ ಗಳನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿದ್ದು ನಾನೇ. 23.9.2009 ರಂದು ಟೌನ್ ಶಿಪ್ ಯೋಜನೆ ಬಗ್ಗೆ ತೀರ್ಮಾನ ಮಾಡಲಾಯಿತು. 18.10.2006 ರಂದು ಯೋಜನೆಗೆ ಸರ್ಕಾರದ ವತಿಯಿಂದ ಅಧಿಸೂಚನೆ ಹೊರಡಿಸಲಾಯಿತು. 'ಎಚ್.ಡಿ. ಕುಮಾರಸ್ವಾಮಿ ಆರ್ಕಿಟೆಕ್ಟ್ ಆಫ್ ಬಿಡದಿ ಟೌನ್ ಶಿಪ್' ಅಂತಾರೆ. ನಾನು ಇಲ್ಲಾ ಎನ್ನುವುದಿಲ್ಲ. ಆದರೆ, ರೈತರ ಭೂಮಿಯನ್ನು ಕಿತ್ತುಕೊಂಡು ರಿಯಲ್ ಎಸ್ಟೇಟ್'ನವರಿಗೆ ಕೊಡಲು ನಾನು ಈ ಯೋಜನೆಯನ್ನು ರೂಪಿಸಿರಲಿಲ್ಲ. ಹೀಗಾಗಿ ರೈತರು ಬೇಡ ಎಂದ ಕೊಡಲಿ ಮುಲಾಜಿಲ್ಲದೆ ಆ ಯೋಜನೆಯನ್ನು ಅಲ್ಲಿಗೇ ಕೈಬಿಟ್ಟೆ. ಈಗಲೂ ಶೇಕಡ 80ರಿಂದ 90ರಷ್ಟು ರೈತರು ಯೋಜನೆಗೆ ವಿರೋಧ ಮಾಡುತ್ತಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಅವರಿಗೆ ಅದನ್ನು ಕೈ ಬಿಡಲು ಏನು ಸಮಸ್ಯೆ ಎಂದು ಸಚಿವರು ಪ್ರಶ್ನಿಸಿದರು.

ಅಂದು ನಾನು ಈ ಯೋಜನೆಯ ಬಗ್ಗೆ ಪ್ರಸ್ತಾಪ ಮಾಡುತ್ತಿದ್ದಂತೆಯೇ ರೈತರು, ಬಡವರು, ಫಲವತ್ತಾದ ಭೂಮಿ, ಅರಣ್ಯ ಪ್ರದೇಶ, ಮರಗಳು ಇತ್ಯಾದಿ ಅಂಶಗಳನ್ನು ಮುಂದಕ್ಕೆ ತಂದು ಈಗಿನ ಮುಖ್ಯಮಂತ್ರಿ ಹಾಗೂ ಹಿಂದಿನ ಮುಖ್ಯಮಂತ್ರಿ ಸೇರಿದಂತೆ ಕಾಂಗ್ರೆಸ್ ಪಕ್ಷದ ನಾಯಕರು ನನ್ನ ಮೇಲೆ ದೊಡ್ಡ ಯುದ್ಧವನ್ನೇ ಮಾಡಿದ್ದರು. ಅಂದು ವೀರಾವೇಷದ ಮಾತುಗಳನ್ನು ಆಡಿದ್ದ ಕಾಂಗ್ರೆಸ್ ನಾಯಕರು, ಹಿರಿಯ ನಾಯಕ ಎಚ್.ಕೆ.ಪಾಟೀಲ್ ಅವರ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿಯನ್ನು ರಚಿಸಿದ್ದರು. ಸಮಿತಿಯು ಬಿಡದಿ, ಸೋಲೂರು, ಕಸಬಾ, ಹೊಸಕೋಟೆ ಮುಂತಾದ ಕಡೆಗಳಿಗೆ ಹೋಗಿ ಸತ್ಯಶೋಧನೆ ನಡೆಸಿತ್ತು. ಆದರೆ ಎಚ್.ಕೆ.ಪಾಟೀಲ್ ಅವರು ಸತ್ಯಶೋಧನಾ ವರದಿಯನ್ನು ಏನು ಮಾಡಿದರು ಎಂಬುದೇ ಯಕ್ಷಪ್ರಶ್ನೆ. ವಿಚಿತ್ರವೆಂದರೆ, ಆ ವರದಿಯ ಬಗ್ಗೆ ಮತ್ತು ಕಾಂಗ್ರೆಸ್ ನಾಯಕರ ದ್ವಂದ್ವ ನಿಲುವುಗಳ ಬಗ್ಗೆ ಸದನದಲ್ಲಿ ಸುಮಾರು ಮೂರು ದಿನಗಳಿಗೂ ಹೆಚ್ಚು ಕಾಲ ಚರ್ಚೆ ನಡೆಯಿತು ಎಂದು ಸಚಿವರು ಮಾಹಿತಿ ನೀಡಿದರು.

ನಮ್ಮ ಕ್ರೆಡಿಬಿಲಿಟಿ ಎಂದಿದ್ದ ಹಾಲಿ ಸಿಎಂ:

ಅಸೆಂಬ್ಲಿಯಲ್ಲಿ ನಿಯಮ 69ರ ಅಡಿಯಲ್ಲಿ ಚರ್ಚೆ ನಡೆದಿದ್ದ ಸಂದರ್ಭದಲ್ಲಿ 2007 ಆಗಸ್ಟ್ 1ರಂದು ಈ ರಾಜ್ಯದ ಘನತವೇತ್ತ ಹಾಲಿ ಮುಖ್ಯಮಂತ್ರಿ ಉದ್ದುದ್ದ ಭಾಷಣ ಮಾಡಿದ್ದರು. "ಇದು ನಮ್ಮ ಪಕ್ಷದ ಕ್ರೆಡಿಬಲಿಟಿ ವಿಚಾರ. ನಮ್ಮ ಸತ್ಯಶೋಧನಾ ಸಮಿತಿ ವಿಚಾರ ನಮ್ಮ ಕ್ರೆಡಿಬಲಿಟಿ ವಿಚಾರ. ಅದಕ್ಕೋಸ್ಕರ ತಾವು ತಮ್ಮ ಅಧಿಕಾರಿಗಳ ಬಳಿ ಏನು ಪೇಪರ್ ಇವೆ, ಅವರು ಏನು ಪ್ರಪೋಸ್ ಮಾಡಿದ್ದಾರೆ, ನಿಮ್ಮ ಇಂಡಸ್ಟ್ರೀಸ್ ಡಿಪಾರ್ಟ್ಮೆಂಟ್ ನವರು ಕೆಐಎಡಿಬಿ ಟೌನ್ ಶಿಫ್ ನವರು ಏನು ಪ್ರಪೋಸ್ ಮಾಡಿ ಘೋಷಣೆ ಮಾಡಿದ್ದಾರೆ, ಇವೆರಡನ್ನು ಲೆಕ್ಕ ಮಾಡಿಕೊಂಡು ನೀವು ಉತ್ತರಕ್ಕೆ ಬನ್ನಿ. ಯು ಹ್ಯಾವ್ ಆಸ್ಕ್ ಟು ಅಪಾಲಜಿ ಟು ದ ಕಾಂಗ್ರೆಸ್ ಪಾರ್ಟಿ. ಅದರ್ ವೈಸ್ ಯು ಹ್ಯಾವ್ ಟು ವಿತ್ ಡ್ರಾ ಯುವರ್ ಸ್ಟೇಟ್ಮೆಂಟ್" ; ಇದು ಅಂದು ಇಂದಿನ ಮುಖ್ಯಮಂತ್ರಿ ಬಾಯಿಂದ ಉದುರಿದ ಆಣೆಮುತ್ತುಗಳು. ಅಂದು ಸಚಿವರಾಗಿದ್ದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಅವರನ್ನು ಉದ್ದೇಶಿಸಿ ಡಿಕೆಶಿ ಅವರು ಈ ಮಾತುಗಳನ್ನು ಹೇಳಿದ್ದರು. ಅಂದು ರೈತರು, ಕೃಷಿ ಭೂಮಿ, ಫಲವತ್ತತೆ, ಮರಗಳು ಇತ್ಯಾದಿ ಅಂಶಗಳನ್ನು ಇಟ್ಟುಕೊಂಡು ಉದ್ದುದ್ದ ಮಾತನಾಡಿದ್ದ ಮಹಾಶಯ ಡಿಸಿಎಂ ಸಿಎಂ ಆದಕೂಡಲೇ ರೈತರ ಭೂಮಿಗೆ ಕನ್ನ ಹಾಕಿರುವುದು ಎಷ್ಟು ಸರಿ ಎಂದು ಸಚಿವ ಕುಮಾರಸ್ವಾಮಿ ಅವರು ಕಟುವಾಗಿ ಪ್ರಶ್ನಿಸಿದರು.

ಸಿದ್ದರಾಮಯ್ಯ ಮೌನದ ಬಗ್ಗೆ ಬೇಸರ:

ಹಾಗೆಯೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೌನದ ಬಗ್ಗೆ ಸಚಿವ ಕುಮಾರಸ್ವಾಮಿ ಅವರು ಅತಿವ ಬೇಸರ ವ್ಯಕ್ತಪಡಿಸಿದರು. ಸತ್ಯಶೋಧನಾ ಸಮಿತಿ ರಚನೆಯಲ್ಲಿ ಮತ್ತು ನಿಯಮ 69ರ ಅಡಿಯಲ್ಲಿ ಸುಧೀರ್ಘವಾಗಿ ಮಾತನಾಡಿದ್ದ ಅವರು ತಮ್ಮ ಪಕ್ಷದ ಸರ್ಕಾರ ನಡೆಸುತ್ತಿರುವ ರೈತ ವಿರೋಧಿ ಭೂ ಮಾರಣಹೋಮವನ್ನು ತಡೆಯಲು ವಿಫಲರಾಗಿರುವುದು ಸರಿಯಲ್ಲ ಎಂದು ಹೇಳಿದರು.

ಬೆಂಗಳೂರು ಪಕ್ಕದ ಬಿಡದಿಯಲ್ಲಿ ಟೌನ್ ಶಿಪ್‌ಗಳನ್ನು ಏಕೆ ಮಾಡಬೇಕು? ದೂರದ ಹಾಸನ, ಮಂಡ್ಯದಲ್ಲಿ ಮಾಡಿಕೊಳ್ಳಲಿ. ಇಲ್ಲಿ ಅತ್ಯಂತ ಫಲವತ್ತಾದ ಕೃಷಿ ಭೂಮಿ ಇದ್ದು ಅಪಾರ ಪ್ರಮಾಣದಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಹೀಗಾಗಿ ಈ ಭಾಗದಲ್ಲಿ ಟೌನ್ಶಿಪ್ ಮಾಡುವುದನ್ನು ನಾವು ಶತಾಯಗತಾಯ ವಿರೋಧಿಸುತ್ತೇವೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದನ್ನು ನಾನು ಇಂದಿಗೂ ಮರೆತಿಲ್ಲ ಎಂದು ಸಚಿವ ಕುಮಾರಸ್ವಾಮಿ ಅವರು ಪ್ರಶ್ನೆ ಒಂದಕ್ಕೆ ಉತ್ತರಿಸಿದರು.

2007 ಜುಲೈ 31ರಂದು ಸದನದಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ ಅವರು ಟೌನ್ ಶಿಪ್ ನಿರ್ಮಾಣವನ್ನು ನಿಲ್ಲಿಸಬೇಕು ಎಂದು ಆಗ್ರಹ ಮಾಡಿದ್ದರು. ಬೆಂಗಳೂರು ಪಕ್ಕದಲ್ಲಿ ಇಂತಹ ಯೋಜನೆಗಳು ಬೇಡ, ಒಂದು ವೇಳೆ ಇಂಥ ಯೋಜನೆಗಳು ಜಾರಿಗೆ ಬಂದರೆ ರಿಯಲ್ ಎಸ್ಟೇಟ್ ಕುಳಗಳಿಗೆ ದಂಧೆ ನಡೆಸಲು ಸರ್ಕಾರವೇ ನೇರವಾಗಿ ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ ಎಂದು ಹೇಳಿದ್ದರು. ನಾನು ಮುಖ್ಯಮಂತ್ರಿ ಆಗಿ ಎಲ್ಲಾ ಆಯಾಮಗಳನ್ನು ಪರಿಶೀಲಿಸಿ ರೈತರ ವಿರುದ್ಧವಾಗಿ ಒಂದು ನಾಗರಿಕ ಸರ್ಕಾರ ಹೋಗಬಾರದು ಎನ್ನುವ ಒಳ್ಳೆಯ ಉದ್ದೇಶದಿಂದ ಆ ದಿನವೇ ಆ ಯೋಜನೆಯನ್ನು ಸಂಪೂರ್ಣವಾಗಿ ಕೈಬಿಟ್ಟೆ ಎಂದರು ಕುಮಾರಸ್ವಾಮಿ ಅವರು.

ರೆಡ್ ಜೋನ್ ವಿಷಯ ಏಕೆ? ಇಡೀ ಯೋಜನೆ ಕೈಬಿಡಿ:

ಅಲ್ಲದೆ ರೈತರ ಭೂಮಿ ಕಂಡೋರ ಪಾಲು ಆಗದಿರಲಿ ಎಂದು 2006ರಲ್ಲಿ ಅಂದಿನ ನನ್ನ ಸರ್ಕಾರ ಸಿಡಿಪಿ ಪ್ಲಾನ್ ಗೆ ಒಪ್ಪಿಗೆ ನೀಡಿತು. ಅದರ ಪರಿಣಾಮವಾಗಿ ರೈತರ ಭೂಮಿ ಅವರಿಗೆ ಉಳಿದುಕೊಂಡಿತು. ಆದರೆ ಈ ಮುಖ್ಯಮಂತ್ರಿ ನನ್ನ ಮೇಲೆ ರೆಡ್ ಜೋನ್ ಹಾಕಿದರು ಎಂದು ಅನಗತ್ಯವಾಗಿ ಹೇಳುತ್ತಿದ್ದಾರೆ. ರೆಡ್ ಜೋನ್ ಬಂತು ಎಂದರೆ ಅದರಲ್ಲಿ ಅಪರಾಧವೆನಿದೆ? ರೈತರು ತಮ್ಮ ಭೂಮಿಯನ್ನು ಅಭಿವೃದ್ಧಿ ಮಾಡಿಕೊಳ್ಳಬಹುದು, ಮನೆ ಕಟ್ಟಿಕೊಳ್ಳಬಹುದು. ದೇಗುಲ, ಶಾಲೆ, ಆಸ್ಪತ್ರೆ ಇತ್ಯಾದಿಗಳ ನಿರ್ಮಾಣಕ್ಕೆ ಅಡ್ಡಿ ಇರಲಿಲ್ಲ. ಅಂತಿಮವಾಗಿ ಕೈತಪ್ಪಿ ಹೋಗುತ್ತಿದ್ದ ಭೂಮಿ ರೈತರಿಗೆ ಉಳಿಯಿತು. ಹೀಗಾಗಿ ರೆಡ್ ಜೋನ್ ಎನ್ನುವುದರ ಬಗ್ಗೆ ಚರ್ಚೆ ಅನಗತ್ಯ ಎಂದು ಸಚಿವರು ಹೇಳಿದರು.

ಡಿನೋಟಿಫಿಕೇಷನ್ ಮಾಡಿದರೆ ಸಿಎಂ ಜೈಲಿಗೆ ಹೋಗಲ್ಲ:

ನೋಟಿಫಿಕೇಶನ್ ಆಗಿರುವ ಭೂಮಿಯನ್ನು ಡಿ ನೋಟಿಫಿಕೇಷನ್ ಮಾಡಿ ನಾನು ಜೈಲಿಗೆ ಹೋಗಲೇ? ಎಂದು ಹಾಲಿ ಮುಖ್ಯಮಂತ್ರಿ ಕೇಳುತ್ತಿದ್ದಾರೆ. ನೋಟಿಫಿಕೇಷನ್ ಮಾಡಿದವರೆಲ್ಲ ಜೈಲಿಗೆ ಹೋಗಿದ್ದಾರ ಈ ರಾಜ್ಯದಲ್ಲಿ? ಅರ್ಕಾವತಿಯಲ್ಲಿ ರೀಡೂ ಮಾಡಿಕೊಂಡವರೆ ನೆಮ್ಮದಿಯಾಗಿ ಓಡಾಡಿಕೊಂಡಿದ್ದಾರೆ. ಹಂತದಲ್ಲಿ ರೈತರ ಉದ್ಧಾರಕ್ಕಾಗಿ ಇಡೀ ಯೋಜನೆಯನ್ನೇ ಕೈಬಿಟ್ಟರೆ ಮುಖ್ಯಮಂತ್ರಿ ಏತಕ್ಕೆ ಜೈಲಿಗೆ ಹೋಗುತ್ತಾರೆ? ಇವರು ಕೇವಲ ಸಬೂಬು ಹೇಳಿಕೊಂಡು ರೈತರಿಗೆ ವಂಚಿಸುತ್ತಿದ್ದಾರೆ. ಇವರಿಗೆ ಟೌನ್ ಶಿಪ್ ಮಾಡಿ ಭೂಮಿ ಕೊಳ್ಳೆ ಹೊಡೆಯುವುದೇ ಮುಖ್ಯವಾಗಿದೆ. ರೈತರನ್ನು ಉಳಿಸಿಕೊಳ್ಳಲು ಡಿನೋಟಿಫಿಕೇಷನ್ ಮಾಡಿದರೆ ಯಾರು ಕೂಡ ಜೈಲಿಗೆ ಹೋಗುವುದಿಲ್ಲ ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

ಟೌನ್ ಶಿಪ್ ಯೋಜನೆ ಕೈ ಬಿಟ್ಟು ಅಸೆಂಬ್ಲಿಯಲ್ಲೇ ಹೇಳಿದ್ದೆ:

ಸದನದಲ್ಲಿ ನಾನು ಕೂಡ ಈ ಬಗ್ಗೆ ಸುದೀರ್ಘವಾಗಿ ಉತ್ತರ ನೀಡಿದ್ದೆ. 11.6.2007ರಂದು ಟೌನ್ ಶಿಪ್ ಯೋಜನೆಗೆ ಬಗ್ಗೆ ಮಾತನಾಡಿ ಫಲವತ್ತಾದ ಒಂದು ಇಂಚು ಭೂಮಿಯನ್ನು ನಾನು ವಶಕ್ಕೆ ಪಡೆಯುವುದಿಲ್ಲ ಎಂದು ಘಂಟಾಘೋಷವಾಗಿ ಹೇಳಿದ್ದೆ. ನನ್ನ ಅಂತಿಮ ಹೇಳಿಕೆ ಕಲಾಪದ ಕಡತದಲ್ಲಿ ದಾಖಲಾಗಿದೆ ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದರು.

ನನ್ನ ಮೇಲೆ ಕಾಂಗ್ರೆಸ್ ನಾಯಕರು ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಪೊಳ್ಳು ಮಾಹಿತಿಯನ್ನು ಹರಡುತ್ತಿದ್ದಾರೆ. ಹೀಗಾಗಿ ನಾನು ಸದನದ ಕಲಾಪದ ದಾಖಲೆಗಳನ್ನು ಇಟ್ಟುಕೊಂಡೆ ಮಾತನಾಡುತ್ತಿದ್ದೇನೆ. ದಾಖಲೆಗಳನ್ನು ಮತ್ತು ಅಂದಿನ ನನ್ನ ಹೇಳಿಕೆಯ ಎಲ್ಲಾ ವಿವರಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದೇನೆ. ಜನತೆಗೆ ಸತ್ಯ ಹೇಳುವುದು ಮತ್ತು ಜನತೆಯ ಪರವಾಗಿ ನಿಲ್ಲುವುದು ನನ್ನ ಕರ್ತವ್ಯ ಎಂದು ಭಾವಿಸಿದ್ದೇನೆ ಎಂಬುದಾಗಿ ಸಚಿವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

2006 ಮತ್ತು 2007ರಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಸರ್ಕಾರ ಇತ್ತು. ಅಗಸ್ಟ್ ತಿಂಗಳ ಮೊದಲ ವಾರ ವಿಧಾನಸಭೆಯಲ್ಲಿ ನಡೆದ ಎಲ್ಲಾ ಚರ್ಚೆಗಳಿಗೆ ನನ್ನ ಮಿತಕೂಡಪಕ್ಷದ ನಾಯಕರು ಕೂಡ ಸಾಕ್ಷಿಯಾಗಿದ್ದರು. ರಾಜ್ಯದ ಜನತೆ ಅತಿ ಮುಖ್ಯವಾಗಿ ಬಿಡದಿಯ ಜನರು ನನ್ನ ಹೇಳಿಕೆಗಳನ್ನು ಮತ್ತು ಸ್ಪಷ್ಟನೆಗಳನ್ನು ಗಮನಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ ನಾಯಕರು ಹಬ್ಬಿಸುವ ಸುಳ್ಳುಗಳು ಹೆಚ್ಚು ಕಾಲ ಬದುಕುವುದಿಲ್ಲ ಎಂದು ಅವರು ಕಿಡಿಕಾರಿದರು.

ಬಿಡದಿ ರೈತರ ಪರವಾಗಿ ಅಂದು ಕಲಾಪದಲ್ಲಿ ಗಂಟಲು ಬರೆದುಕೊಂಡು ಮಾತನಾಡಿದ ಸಿದ್ದರಾಮಯ್ಯ ಮತ್ತು ಡಿಕೆಶಿ ಅವರ ಕಾಳಜಿ ಮತ್ತು ನೀರಾವೇಶದ ಭಾಷಣ ಏನಾಯಿತು ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ ಕೇಂದ್ರ ಸಚಿವರು, ಶೇಕಡ 80 ರಿಂದ 90ರಷ್ಟು ರೈತರು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬೆರಳೆಣಿಕೆಯ ಜನರಷ್ಟೇ ಪರವಾಗಿದ್ದಾರೆ. ಈ ಸರ್ಕಾರ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ದಿನದಿಂದ ಇಲ್ಲಿಯವರೆಗೆ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ರೈತರು ಅಕ್ಷೇಪ ಎತ್ತಿ ತಕರಾರ್ಜಿಗಳನ್ನು ಸಲ್ಲಿಸಿದ್ದಾರೆ. ಇದುವರೆಗೆ ಒಬ್ಬ ರೈತನಿಗೂ ಉತ್ತರ ಕೊಡುವ ಸೌಜನ್ಯ ತೋರಿಸಿಲ್ಲ. ಪ್ರಜಾ ಸೇವೆ ಎಂದರೆ ಇದೇನಾ? ಯಾವ ಪುರುಷಾರ್ಥಕ್ಕೆ ಪ್ರಜಾಸೇವೆ ಇಲಾಖೆ ಮಾಡುತ್ತೀರಿ? ಎಂದು ಸಚಿವರು ಸರ್ಕಾರವನ್ನು ಹಾಗೂ ಮುಖ್ಯಮಂತ್ರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಬಿಡದಿ ಯೋಜನೆಯನ್ನು ಕೈ ಬಿಟ್ಟು ನಂತರ ನಾನು ಕಾಂಪಿಟ್ ವಿತ್ ಚೀನಾ ಎನ್ನುವ ಯೋಜನೆಯನ್ನು ಕೈಗೆತ್ತಿಕೊಂಡೆ. ರಾಜ್ಯದ ರಾಜ್ಯದ ಹಲವಾರು ಕಡೆ ಕೈಗಾರಿಕಾ ಕ್ಲಸ್ಟರ್ ಗಳನ್ನು ಸ್ಥಾಪಿಸಿ ಆ ಮೂಲಕ ಉತ್ಪಾದನೆ ಮತ್ತು ಉದ್ಯೋಗ ಸೃಷ್ಟಿ ಮಾಡಲು ಕ್ರಮ ಕೈಗೊಂಡಿದ್ದೆ. ಆ ಸಂದರ್ಭದಲ್ಲಿ ನಾನು ಎಲ್ಲಿಯೂ ನೀರಾವರಿ ಅಥವಾ ಕೃಷಿ ಆಧರಿತ ಭೂಮಿಯಲ್ಲಿ ಟೌನ್ ಶಿಪ್ ಇಲ್ಲವೇ ಕೈಗಾರಿಕೆಗಳನ್ನು ಸ್ಥಾಪಿಸಲು ಅನುಮತಿ ಕೊಡಲು ಒಪ್ಪಿರಲಿಲ್ಲ. ಅದಕ್ಕೆ ಸಂಬಂಧಿಸಿದ ದಾಖಲೆಗಳು ಇರಬೇಕು, ಬೇಕಾದರೆ ಪರಿಶೀಲನೆ ಮಾಡಿಕೊಳ್ಳಬಹುದು ಎಂದು ಸಚಿವರು ಹೇಳಿದರು.

ನಾನು ಎಸಿ ರೂಂನಲ್ಲಿ ಕೋರುವವನಲ್ಲ:

ನಿಮ್ಮ ದುಡ್ಡು ಬೆದರಿಕೆಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ. ಎಸಿ ರೂಂನಲ್ಲಿ ಕೂತು ಚರ್ಚೆ ಮಾಡುವ ಜಾಯಮಾನ ನನ್ನದಲ್ಲ. ಬೀದಿಯಲ್ಲಿ ನಿಂತು ಚರ್ಚೆಗೆ ತಯಾರಿದ್ದೇನೆ. ಈಗಲೇ ಹೊರಬಂದು ಬಹಿರಂಗ ಚರ್ಚೆ ನಡೆಸಲು ಸಿದ್ಧನಿದ್ದೇನೆ. ನಿಮಗೆ ಧೈರ್ವಿದ್ದರೆ ಬೈರಮಂಗಲಕ್ಕೆ ಬನ್ನಿ. ಅಲ್ಲೇ ಯೋಜನೆ ಬೇಕೋ ಬೇಡವೋ ಎಂಬುದು ಜನರ ಮುಂದೆ ತೀರ್ಮಾನ ಆಗಿಬಿಡಲಿ. ಅದು ಏನೇನೋ ಚಾಲೆಂಜ್ ಮಾಡುತ್ತಿದ್ದರಲ್ಲ ನನ್ನ ಮೇಲೆ, ಈಗ ಬನ್ನಿ ನಾನು ತಯಾರಿದ್ದೇನೆ. ನನ್ನ ರೈತರಗಾಗಿ ಬಿಡು ಮಾಡಿಕೊಂಡು ಬರುತ್ತೇನೆ ಎಂದು ಡಿಕೆಶಿಗೆ ಸಚಿವ ಕುಮಾರಸ್ವಾಮಿ ಅವರು ನೇರ ಸವಾಲು ಹಾಕಿದರು.

ನಾಗರಬಾವಿಯಲ್ಲಿ ಬಾಡಿಗೆ ಮನೆಯಲ್ಲಿ ದಂಧೆ!:

ವಿಧಾನಸೌಧ ಅಥವಾ ಸರ್ಕಾರಿ ಕಚೇರಿಯಲ್ಲಿ ಕೆಲಸಗಳು ನಡೆದರೆ ಎಲ್ಲರಿಗೂ ಸುಲಭವಾಗಿ ಗೊತ್ತಾಗುತ್ತದೆ, ಇಲ್ಲವೇ ಕುಮಾರಸ್ವಾಮಿಗೆ ಮಾಹಿತಿ ಹೋಗುತ್ತದೆ ಎಂಬ ಉದ್ದೇಶದಿಂದ ನಾಗರಬಾವಿಯಲ್ಲಿ ಬಾಡಿಗೆ ಮನೆಯಿಂದ ಇವರು ಟೌನ್ಶಿಪ್ ದಂಧೆ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವರು ನೇರ ಆರೋಪ ಮಾಡಿದರು.

ಕೆಲವು ಪುಡಾರಿಗಳು, ಟೌನ್ಶಿಪ್ ಕಿಂಗ್ ಪಿನ್ ಚೇಲಾಗಳು ಸೇರಿಕೊಂಡು ಆ ಮನೆಯಲ್ಲಿ ವ್ಯವಹಾರ ನಡೆಸುತ್ತಿದ್ದಾರೆ. ಟೌನ್ ಷಿಪ್ ಗೆ ಸಂಬಂಧಿಸಿದ ಯಾವುದೇ ಕೆಲಸಗಳು ರಾಮನಗರ ಜಿಲ್ಲಾಧಿಕಾರಿಯ ಕಚೇರಿಯಲ್ಲಿ ನಡೆಯುತ್ತಿಲ್ಲ. ಎಲ್ಲವೂ ತೆರೆಮರೆಯಲ್ಲಿ ರಹಸ್ಯವಾಗಿ ಮಾಡುತ್ತಿದ್ದಾರೆ. ಇದು ಏನನ್ನು ಸೂಚಿಸುತ್ತದೆ. ಕುಮಾರಸ್ವಾಮಿ ಏನಪ್ಪಾ ಹರಿದಾ ಎನ್ನುವ ವ್ಯಕ್ತಿ ಈಗ ಹರಿತಿರುವುದು ಏನು ಎಂದು ಸಚಿವ ಕುಮಾರಸ್ವಾಮಿ ಅವರು ಪ್ರಶ್ನಿಸಿದರು.

ನಿಮ್ಮ ಪಾಪದ ಕೂಡ ತುಂಬಿದೆ. ಎಲ್ಲವನ್ನೂ ಜನರು ನೋಡುತ್ತಿದ್ದಾರೆ. ನಿಮಗೆ ಶಾಸ್ತಿಯಾಗುವ ಕಾಲ ಸನಿಹದಲ್ಲಿದೆ ಎಂದು ಅವರು ಗುಡುಗಿದರು.

ಹೊಸಕೆರೆಹಳ್ಳಿ ನೈಸ್ ರೋಡ್ ಪೆನ್ಷನ್ ಬಳಿ ದೊಡ್ಡ ಅಪಾರ್ಟ್ಮೆಂಟ್ ಗಳು ಎದ್ದು ನಿಂತಿವೆ. ಆ ರಸ್ತೆಯಲ್ಲಿ ಓಡಾಡುವ ಎಲ್ಲರೂ ನೋಡಿರುತ್ತಾರೆ. ಅದ್ಯಾವುದೋ ಶೋಭಾ ಹೆಸರಿನಲ್ಲಿ ಬಿಲ್ಡಿಂಗ್ ಮೇಲೆ ಬಿಲ್ಡಿಂಗ್ ಕಟ್ಟಿದ್ದಾರೆ. ಅದನ್ನು ಕಟ್ಟಲಿಕ್ಕೆ ಯಾರ ಹೆಸರಿನಲ್ಲಿ ನೈಸ್ ಕಂಪನಿಯಿಂದ ಅನುಭವಿ ಪಡೆದುಕೊಂಡಿದ್ದಾರೆ ಇವರು ಆಗ ಯಾರು ನಿಮ್ಮನ್ನು ಜೈಲಿಗೆ ಕಳಿಸಲಿಲ್ಲ, ಈಗ ರೈತರ ಭೂಮಿ ಡಿ ನೋಟಿಫಿಕೇಶನ್ ಮಾಡಿದರೆ ಯಾರಾದ್ರೂ ಜೈಲಿಗೆ ಕಳಿಸುತ್ತಾರ ಎಂದು ಲೇವಡಿ ಮಾಡಿದರು.

Bidadi Township: ಬಿಡದಿ ಟೌನ್‌ಶಿಪ್ ಕುರಿತು ಚರ್ಚೆಗೆ ಸಿದ್ಧ; ಜೂ.26ಕ್ಕೆ ವಿಧಾನಸೌಧಕ್ಕೆ ಬರುವಂತೆ ಕುಮಾರಸ್ವಾಮಿಗೆ ಸಿಎಂ ಡಿಕೆಶಿ ಆಹ್ವಾನ

ಮಾಧ್ಯಮಗೋಷ್ಠಿಯಲ್ಲಿ ಮಾಜಿ ಶಾಸಕರಾದ ಆರ್ ಮಂಜುನಾಥ್, ಪಕ್ಷದ ಗ್ರೇಟರ್ ಬೆಂಗಳೂರು ಅಧ್ಯಕ್ಷರಾದ ಹೆಚ್.ಎಂ. ರಮೇಶ್ ಗೌಡ, ಶಾಸಕ ಜವರಾಯಿಗೌಡ, ಮಾಜಿ ಶಾಸಕರಾದ ಕೆಎ ತಿಪ್ಪೇಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.