ಪಕ್ಷಕ್ಕೆ ದ್ರೋಹ ಬಗೆದವರನ್ನು ಪತ್ತೆ ಮಾಡಲು ಮಂಜುನಾಥನ ಮೊರೆ; ಧರ್ಮಸ್ಥಳದಲ್ಲಿ ಶಾಸಕರಿಂದ ಆಣೆ- ಪ್ರಮಾಣ ಮಾಡಿಸುತ್ತಾ ಬಿಜೆಪಿ?
ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದಿರುವ ಅಡ್ಡ ಮತದಾನದ ಇದೀಗ ರಾಜ್ಯ ರಾಜಕಾರಣದಲ್ಲಿ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ಅಡ್ಡ ಮತದಾನ ಮಾಡಿದವರನ್ನು ಪತ್ತೆ ಹಚ್ಚಲು ಬಿಜೆಪಿ ಇದೀಗ ಆಣೆ ಪ್ರಮಾಣವನ್ನು ಮಾಡಿಸಲು ಮುಂದಾಗಿದೆ ಎಂದು ತಿಳಿದು ಬಂದಿದೆ.
ಸಂಗ್ರಹ ಚಿತ್ರ -
ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ (Vidhan Parishad Election) ನಡೆದಿರುವ ಅಡ್ಡ ಮತದಾನದ ಇದೀಗ ರಾಜ್ಯ ರಾಜಕಾರಣದಲ್ಲಿ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ಅಡ್ಡ ಮತದಾನ ಮಾಡಿದವರನ್ನು ಪತ್ತೆ ಹಚ್ಚಲು ಬಿಜೆಪಿ (BJP) ಇದೀಗ ಆಣೆ ಪ್ರಮಾಣವನ್ನು ಮಾಡಿಸಲು ಮುಂದಾಗಿದೆ ಎಂದು ತಿಳಿದು ಬಂದಿದೆ. ಪಕ್ಷಕ್ಕೆ ದ್ರೋಹ ಬಗೆದವರನ್ನು ಪತ್ತೆಹಚ್ಚಲು ಪಕ್ಷದ ಎಲ್ಲಾ 63 ಶಾಸಕರಿಂದಲೂ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿರುವ ಶ್ರೀ ಮಂಜುನಾಥ ಸ್ವಾಮಿಯ ಮುಂದೆ ಆಣೆ-ಪ್ರಮಾಣ ಮಾಡಿಸಲು ಕಮಲ ಪಾಳಯ ನಿರ್ಧರಿಸಿದೆ.
ಇದೇ ಗುರುವಾರ ಅಥವಾ ಶುಕ್ರವಾರದಂದು ಧರ್ಮಸ್ಥಳದಲ್ಲೇ ಶಾಸಕಾಂಗ ಪಕ್ಷದ ಸಭೆ ನಡೆಸಲು ತೀರ್ಮಾನಿಸಲಾಗಿದ್ದು, ಸಭೆಯ ನಂತರ ಎಲ್ಲ 63 ಶಾಸಕರಿಂದಲೂ “ನಾವು ಅಡ್ಡ ಮತದಾನ ಮಾಡಿಲ್ಲ” ಎಂದು ಮಂಜುನಾಥನ ಸನ್ನಿಧಿಯಲ್ಲಿ ಪ್ರಮಾಣ ಮಾಡಿಸಲಾಗುತ್ತದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರೊಂದಿಗೆ ದೂರವಾಣಿ ಮೂಲಕ ಸುದೀರ್ಘ ಚರ್ಚೆ ನಡೆಸಿದ್ದಾರೆ. ಸಭೆಗೆ ಯಾರೊಬ್ಬರೂ ಗೈರಾಗದಂತೆ ತಡೆಯಲು ಎಲ್ಲ ಶಾಸಕರಿಗೂ ಅಧಿಕೃತ ‘ವಿಪ್’ಜಾರಿ ಮಾಡಲು ನಿರ್ಧರಿಸಲಾಗಿದೆ. ಆರ್. ಅಶೋಕ್ ಅವರು ಎಲ್ಲ ಶಾಸಕರಿಗೂ ವಿಪ್ ಕೊಡಿಸುವ ಮೂಲಕ ಶಾಸಕಾಂಗ ಪಕ್ಷದ ಸಭೆಗೆ ಕಡ್ಡಾಯವಾಗಿ ಹಾಜರಿರುವಂತೆ ಸೂಚನೆ ನೀಡಲಿದ್ದಾರೆ.
ಇದಕ್ಕೂ ಮುನ್ನ ಸೋಮವಾರ ಸಂಜೆ ಆರ್ ಅಶೋಕ್ ಹಾಗೂ ಬಿ.ವೈ ವಿಜಯೇಂದ್ರ ದೆಹಲಿಗೆ ಪ್ರಯಾಣ ಬೆಳಿಸಲಿದ್ದಾರೆ. ಹೈಕಮಾಂಡ್ ನಾಯಕರಿಗೆ ವರದಿ ಸಲ್ಲಿಸಲಿದ್ದಾರೆ. ಮಂಗಳವಾರ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿ ರಾಜ್ಯದಲ್ಲಿ ನಡೆದ ಅಡ್ಡ ಮತದಾನದ ಬೆಳವಣಿಗೆಗಳು, ಅದಕ್ಕೆ ಕಾರಣರಾದ ಶಂಕಿತರು ಮತ್ತು ಅದರ ಹಿಂದಿರುವ ರಾಜಕೀಯ ಕೈವಾಡಗಳ ಬಗ್ಗೆ ಸಂಪೂರ್ಣ ಲಿಖಿತ ಹಾಗೂ ಮೌಖಿಕ ವಿವರಣೆಯನ್ನು ಹೈಕಮಾಂಡ್‌ಗೆ ನೀಡಲಿದ್ದಾರೆ.
BJP-JDS alliance: ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಅಡ್ಡಡ್ಡ ಅನುಮಾನ
ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ನಾಲ್ಕು ಮಂದಿ ಶಾಸಕರು ಅಡ್ಡ ಮತದಾನ ಮಾಡಿದ್ದಾರೆ. ಅವರು ಯಾರು ಎಂಬುವುದು ಗೊತ್ತಿದೆ ಎಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಹೇಳಿದರು. ಮೈಸೂರಿನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಾರೆ. ನಾಲ್ಕು ಜನರು ಅಡ್ಡ ಮತದಾನ ಮಾಡಿದ್ದಾರೆ. ಅವರು ಯಾರು ಎಂಬುವುದು ಗೊತ್ತಿದೆ. ಯಾವ ಕಾರಣಕ್ಕಾಗಿ ಕ್ರಾಸ್ ಓಟಿಂಗ್ ಅಗಿದೆ ಎಂಬುವುದು ಗೊತ್ತಿಲ್ಲ. ನಾನು ಮಾನಸಿಕವಾಗಿ ಸಿದ್ದಗೊಂಡಿದ್ದೇನೆ. ಯುವಕರಿಗೆ ಆದ್ಯತೆ ನೀಡಬೇಕು ಎಂದು ನಿರ್ಧಾರ ಮಾಡಿದ್ದೇನೆ ಎಂದು ಹೇಳಿದ್ದಾರೆ.