ಆನೆಗಳ ಸ್ಥಳಾಂತರದಲ್ಲಿ ನಮ್ಮ ಪಾತ್ರವಿಲ್ಲ, ಅರಣ್ಯ ಸಚಿವರ ಆದೇಶ ಪಾಲಿಸುತ್ತಿದ್ದೇವೆ ಅಷ್ಟೇ: ಸಚಿವ ಶಿವಲಿಂಗೇಗೌಡ
Elephant relocation: ನಮ್ಮಲ್ಲಿ ಅರಣ್ಯವಿಲ್ಲ. ಆನೆ ಬಂದು ಬಿಟ್ಟಿದೆ. ರೈತರ ಜಮೀನಲ್ಲಿ ಆನೆ ಮೇಯೋಕೆ ಬಿಡೋಕೆ ಆಗುತ್ತಾ?. ಭದ್ರಾ ಅಭಯಾರಣ್ಯ ಇದೆ. ಅಲ್ಲಿ ಆನೆ ಬಿಡುವ ನಿರ್ಧಾರ ಆಗಿದೆ. ಆನೆಯನ್ನು ಚಿಕ್ಕಮಗಳೂರು ಮಾರ್ಗವಾಗಿಯೇ ತೆಗೆದುಕೊಂಡು ಹೋಗಬೇಕು ಎಂದು ಸಚಿವ ಶಿವಲಿಂಗೇಗೌಡ ತಿಳಿಸಿದ್ದಾರೆ.
-
ಬೆಂಗಳೂರು: ಆನೆ ಸ್ಥಳಾಂತರದ ವಿಚಾರವಾಗಿ ಅರಣ್ಯ ಸಚಿವರ ಆದೇಶವನ್ನು ನಾವು ಪಾಲಿಸುತ್ತಿದ್ದೇವೆ. ಇದರಲ್ಲಿ ನಮ್ಮ ಪಾತ್ರವೇನೂ ಇಲ್ಲ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ (K M Shivalinge Gowda) ಹೇಳಿದ್ದಾರೆ. ವಿಕಾಸಸೌಧದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಸಚಿವರು ಮಾತನಾಡಿದರು.
ನಯನಾ ಮೋಟಮ್ಮ ರಾಜೀನಾಮೆ ಅವರ ಭಾವನೆ, ಅವರ ಇಚ್ಛಾಶಕ್ತಿ. ಅರಣ್ಯ ಸಚಿವರ ಆದೇಶವನ್ನು ನಾವು ಪಾಲನೆ ಮಾಡಿಕೊಂಡು ಬಂದಿದ್ದೇವೆ. ನಯನಾ ಮೋಟಮ್ಮ ನನ್ನ ಹೆಸರೇನೂ ಹೇಳಿಲ್ಲ. ಇದರಲ್ಲಿ ರಾಜಕಾರಣ ಒಳ್ಳೆಯದಲ್ಲ ಎಂದರು.
ನಾನು ನಿನ್ನೆ ರಾತ್ರಿ ನಯನಾ ಅವರೊಂದಿಗೆ ಮಾತಾಡಿದ್ದೇನೆ. ದಯವಿಟ್ಟು ಟ್ಯಾಕಲ್ ಮಾಡಿ ಅಂತ ಹೇಳಿದ್ದೇನೆ. ನನ್ನ ಅಭಿಪ್ರಾಯವನ್ನು ಅವರೊಂದಿಗೆ ಚರ್ಚೆ ಮಾಡಿದ್ದೇನೆ. ಮನವೊಲಿಕೆ ಆಗೋದು ಬಿಡೋದು ಅವರಿಗೆ ಬಿಟ್ಟಿದ್ದು. ನಮ್ಮಲ್ಲಿ ಅರಣ್ಯವಿಲ್ಲ. ಆನೆ ಬಂದು ಬಿಟ್ಟಿದೆ. ರೈತರ ಜಮೀನಲ್ಲಿ ಆನೆ ಮೇಯೋಕೆ ಬಿಡೋಕೆ ಆಗುತ್ತಾ?. ಭದ್ರಾ ಅಭಯಾರಣ್ಯ ಇದೆ. ಅಲ್ಲಿ ಆನೆ ಬಿಡುವ ನಿರ್ಧಾರ ಆಗಿದೆ. ಆನೆಯನ್ನು ಚಿಕ್ಕಮಗಳೂರು ಮಾರ್ಗವಾಗಿಯೇ ತೆಗೆದುಕೊಂಡು ಹೋಗಬೇಕು. ಅಭಯಾರಣ್ಯಕ್ಕೆ ತಗೊಂಡು ಹೋಗಿ ಬಿಡ್ತೇವೆ ಎಂದು ಆದೇಶವಿದೆ ಎಂದು ಸ್ಪಷ್ಟಪಡಿಸಿದರು.
ಒಂದು ಲಕ್ಷ ಹೆಕ್ಟೇರ್ ಜಾಗ ಇರುವ ಅಭಯಾರಣ್ಯ ಅದು. ಇವರ ಆತಂಕ ಅಂದರೆ ಅಲ್ಲೇ ಬಿಟ್ ಬಿಡ್ತಾರೇನೋ ಅಂತ. 15 ದಿನ ಸ್ವಲ್ಪ ತೊಂದರೆ ಆಗಬಹುದು ಅಷ್ಟೇ ಎಂದರು.
ಕಾಡಾನೆಗಳ ಸ್ಥಳಾಂತರಕ್ಕೆ ವಿರೋಧ; ಶಾಸಕಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ನಯನಾ ಮೋಟಮ್ಮ!
ಬೆಂಗಳೂರು: ಹಾಸನ ಜಿಲ್ಲೆಯಿಂದ ಚಿಕ್ಕಮಗಳೂರಿನ ಭದ್ರಾ ಅಭಯಾರಣ್ಯಕ್ಕೆ ಕಾಡಾನೆಗಳನ್ನು ಸ್ಥಳಾಂತರಿಸುವ ರಾಜ್ಯ ಸರ್ಕಾರದ ನಿರ್ಧಾರ ವಿರೋಧಿಸಿ, ಮೂಡಿಗೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ (MLA Nayana Motamma) ಅವರು ತಮ್ಮ ಶಾಸಕಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಸೋಮವಾರ ವಿಧಾನಸೌಧಕ್ಕೆ ಆಗಮಿಸಿದ ಅವರು, ಸ್ಪೀಕರ್ ಕಚೇರಿಗೆ ತೆರಳಿ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಆನೆಗಳ ಸ್ಥಳಾಂತರ ವಿಚಾರವಾಗಿ ಸ್ವಪಕ್ಷೀಯ ಸರ್ಕಾರದ ವಿರುದ್ಧವೇ ಅಸಮಾಧಾನ ಹೊರಹಾಕಿರುವ ನಯನಾ ಮೋಟಮ್ಮ, ಸೋಮವಾರ ರಾಜೀನಾಮೆ ಪತ್ರದೊಂದಿಗೆ ವಿಧಾನಸೌಧದ ಸ್ಪೀಕರ್ ಕಚೇರಿಗೆ ತೆರಳಿದ್ದರು. ಆ ಸಮಯದಲ್ಲಿ ಸ್ಪೀಕರ್ ಅವರು ಕಚೇರಿಯಲ್ಲಿ ಇಲ್ಲದ ಕಾರಣ, ಸ್ಪೀಕರ್ ಆಪ್ತ ಕಾರ್ಯದರ್ಶಿ ಅಶೋಕ್ ಮಿರ್ಜಿ ಅವರ ಮೂಲಕ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.
ಈ ವೇಳೆ ನಿಯಮಾವಳಿಗಳ ಪ್ರಕಾರ ತಮಗೆ ರಾಜೀನಾಮೆ ಪತ್ರವನ್ನು ಅಧಿಕೃತವಾಗಿ ಅಂಗೀಕರಿಸಲು ಅವಕಾಶವಿಲ್ಲ ಎಂದು ತಿಳಿಸಿದ ಅಶೋಕ್ ಮಿರ್ಜಿ ಅವರು, ಶಾಸಕಿ ನಯನಾ ಮೋಟಮ್ಮ ಅವರು ರಾಜೀನಾಮೆ ಸಲ್ಲಿಸಿರುವ ವಿಚಾರವನ್ನು ತಕ್ಷಣವೇ ದೂರವಾಣಿ ಕರೆ ಮೂಲಕ ಸ್ಪೀಕರ್ ಅವರ ಗಮನಕ್ಕೆ ತಂದಿದ್ದಾರೆ. ಇಂದು ಸ್ಪೀಕರ್ ಅವರು ಕಚೇರಿಯಲ್ಲಿ ಇಲ್ಲದ ಕಾರಣ ನಾಳೆ ಬೆಳಗ್ಗೆ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸುವುದಾಗಿ ಶಾಸಕಿ ತಿಳಿಸಿದ್ದಾರೆ.