ಛಲವಾದಿ ನಾರಾಯಣಸ್ವಾಮಿ ಮನೆಗೆ ಚಾಕು, ಚೂರಿ ಆರ್ಡರ್; ಕಾಂಗ್ರೆಸ್ದು ಗೂಂಡಾ ಸಂಸ್ಕೃತಿ ಎಂದು ವಿಜಯೇಂದ್ರ ಕಿಡಿ
BY Vijayendra: ಛಲವಾದಿ ನಾರಾಯಣಸ್ವಾಮಿ ಅವರ ಮನೆಗೆ ನೂರಾರು ಚೂರಿಗಳು ಮತ್ತು ಚಾಕುಗಳನ್ನು ಕಳಿಸುವುದರ ಮುಖೇನ ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಸರ್ಕಾರ, ಕಾಂಗ್ರೆಸ್ ಕಾರ್ಯಕರ್ತರ ಸಂಸ್ಕೃತಿಯನ್ನು ಮತ್ತೊಮ್ಮೆ ಅನಾವರಣಗೊಳಿಸುವ ಕೆಲಸ ಅವರು ಮಾಡಿದ್ದಾರೆ. ಭಾರತೀಯ ಜನತಾ ಪಾರ್ಟಿ ಇದನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ (ಸಂಗ್ರಹ ಚಿತ್ರ) -
ಬೆಂಗಳೂರು, ನ.07: ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಮನೆಗೆ ನೂರಾರು ಚೂರಿಗಳು ಮತ್ತು ಚಾಕುಗಳನ್ನು ಕಳಿಸುವುದರ ಮುಖೇನ ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಸರ್ಕಾರ, ಕಾಂಗ್ರೆಸ್ ಕಾರ್ಯಕರ್ತರ ಸಂಸ್ಕೃತಿಯನ್ನು ಮತ್ತೊಮ್ಮೆ ಅನಾವರಣಗೊಳಿಸುವ ಕೆಲಸ ಅವರು ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊತ್ವಾಲ್ ರಾಮಚಂದ್ರ ಜತೆಯಲ್ಲಿ ಗೂಂಡಾಗಿರ್ದಿ ಮಾಡಿಕೊಂಡು ಬಂದಂತವರು ಕಾಂಗ್ರೆಸ್ ಪಕ್ಷದ ವ್ಯವಸ್ಥೆಯಲ್ಲೂ ಇದ್ದಾರೆ, ಸರ್ಕಾರದಲ್ಲೂ ಕೂಡ ಇದ್ದಾರೆ. ಹುಟ್ಟುಗುಣ ಸುಟ್ಟರೂ ಹೋಗಲ್ಲ ಅನ್ನುವಂತೆ ಇವರ ವರ್ತನೆ ಇದೆ. ಕಾಂಗ್ರೆಸ್ ಸರ್ಕಾರ ಸಂಪೂರ್ಣ ಹತಾಶ ಸ್ಥಿತಿಯಲ್ಲಿದೆ. ಡಿ.ಕೆ. ಶಿವಕುಮಾರ್, ಬಿ.ಕೆ. ಹರಿಪ್ರಸಾದ್, ಪ್ರಿಯಾಂಕ್ ಖರ್ಗೆ ಎಂಬ ಈ ಡಿಕೆ, ಬಿಕೆ ಮತ್ತು ಪಿಕೆ- ಇವರ ಗೂಂಡಾವರ್ತನೆಯನ್ನು ಯಾರೂ ಕ್ಷಮಿಸುವುದಕ್ಕೆ ಸಾಧ್ಯ ಇಲ್ಲ ಎಂದು ತಿಳಿಸಿದರು.
ಭಾರತೀಯ ಜನತಾ ಪಾರ್ಟಿ ಇದನ್ನು ನಾವು ಬಲವಾಗಿ ಖಂಡಿಸುತ್ತೇವೆ. ನಾನು ಇತ್ತೀಚೆಗೆ ದಾವಣಗೆರೆಯಲ್ಲಿ ಏನೋ ಒಂದು ಮಾತನ್ನು ಆಡಿದ್ದೆ, ನಾನು ಹೇಳಿದ್ದೇನೆ ಬಾಯಿ ತಪ್ಪಿನಿಂದ ಬಂದಿದೆ, ಅದನ್ನು ಹಿಂತೆಗೆದುಕೊಳ್ಳುತ್ತೇನೆ ಅಂತ ಹೇಳಿ ವಿಷಾದವನ್ನು ವ್ಯಕ್ತಪಡಿಸಿದ್ದೇನೆ. ಈ ಲಜ್ಜೆಗೆಟ್ಟ ಕಾಂಗ್ರೆಸ್ ಪಕ್ಷ ಪೋಸ್ಟರ್ ಅಭಿಯಾನವನ್ನು ಮಾಡುತ್ತಿದೆ ಎಂದು ಆಕ್ಷೇಪಿಸಿದರು.
ಕಾಂಗ್ರೆಸ್ಸಿಗರಿಗೆ ಹತಾಶೆ ಯಾಕೆ?
ಪ್ರಿಯಾಂಕ್ ಖರ್ಗೆ ಒಬ್ಬ ಕೇಂದ್ರ ಸಚಿವರ ಬಗ್ಗೆ ಹಳ್ಳಿ ಗುಗ್ಗು ಎನ್ನುತ್ತಾರೆ. ಒಬ್ಬ ಗೃಹ ಸಚಿವರಾಗಿ ಮಾತಾಡುವ ಮಾತೇ ಇದು ಎಂದು ಕೇಳಿದರು. ಕಾಂಗ್ರೆಸ್ಸಿನವರು ಚುನಾಯಿತ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರ ಕುರಿತು ಹಗುರ ಮಾತನಾಡುತ್ತಾರೆ. ಅವರ ತಂದೆ- ತಾಯಿಯನ್ನೂ ಟೀಕಿಸಿದ್ದಾರೆ ಎಂದು ದೂರಿದರು. ಮೊನ್ನೆ ಮಲ್ಲಿಕಾರ್ಜುನ ಖರ್ಗೆಯವರು ಬಿಹಾರದಲ್ಲಿ ನರೇಂದ್ರ ಮೋದಿಜೀ ಅವರ ತಂದೆ ಬಗ್ಗೆ ಟೀಕೆ ಮಾಡಿದ್ದಾರೆ. ಯಾಕೆ ಇಷ್ಟು ಹತಾಶರಾಗಿದ್ದೀರಿ ಕಾಂಗ್ರೆಸ್ನವರು? ಎಂದು ಪ್ರಶ್ನೆ ಹಾಕಿದರು.
ಜೇಬು ಖಾಲಿ ಇದೆ ಎಂದ ಸಿಎಂ
ರಾಜ್ಯದ ಆರ್ಥಿಕ ಪರಿಸ್ಥಿತಿ ಎಲ್ಲಿಗೆ ಬಂದು ಮುಟ್ಟಿದೆ ಎಂದರೆ, ಸ್ವತಃ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಮುಂದೆ ಹೋಗಿ, ತನ್ನ ಜೇಬು ಖಾಲಿ ಇದೆ, ಸರ್ಕಾರದಲ್ಲಿ ದುಡ್ಡಿಲ್ಲ ನಿಮಗೆ ಪರಿಹಾರ ಕೊಡೋದಕ್ಕೆ ಅಂತ ಹೇಳಿ ಬಂದಿದ್ದಾರೆ ಎಂದು ಟೀಕಿಸಿದ ಅವರು, ಡೀಸೆಲ್ ಹಾಕಿಸೋಕೆ ದುಡ್ಡಿಲ್ಲ ನಮ್ಮ ಹತ್ರ ಸರ್ಕಾರದಲ್ಲಿ ಅಂತ ಹೇಳಿ ಸ್ವತಃ ಮುಖ್ಯಮಂತ್ರಿಗಳು ಹೇಳಿದ್ದಾರೆ. ಕಳೆದ ಮೂರೂವರೆ ವರ್ಷದಲ್ಲಿ ಬಡವರಿಗೆ ಒಂದು ಮನೆ ಕೊಡೋದಕ್ಕೆ ಆಗಿಲ್ಲ. ವಿಕಲಚೇತನರಿಗೆ ಇವತ್ತು ಪಿಂಚಣಿ, ವೃದ್ಧಾಪ್ಯ ವೇತನ, ವಿಧವಾ ವೇತನ ಕೊಡುತ್ತಿಲ್ಲ. ಹಲವಾರು ಬಾರಿ ನಾವು ಮುಖ್ಯಮಂತ್ರಿಗಳಿಗೆ, ಹಿಂದಿನ ಮುಖ್ಯಮಂತ್ರಿಗಳಿಗೂ ಕೂಡ ಕೇಳಿದ್ದೇವೆ. ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಶ್ವೇತಪತ್ರವನ್ನು ಹೊರಡಿಸಿ ಅಂತ ಡಿ. ಕೆ. ಶಿವಕುಮಾರ್ ಅವರಿಗೂ ಕೂಡ ಕೇಳಿದ್ದೇವೆ. ಆದರೆ, ಅದನ್ನು ಕೊಟ್ಟಿಲ್ಲ ಎಂದು ದೂರಿದರು.
ವೈಫಲ್ಯ ಮುಚ್ಚಿ ಹಾಕಲು ನಾಟಕ
ಅಭಿವೃದ್ಧಿ ಕೆಲಸ ಮಾಡೋದಕ್ಕೆ ಆಗುತ್ತಿಲ್ಲ. ನಿಮ್ಮ ವೈಫಲ್ಯಗಳನ್ನು ಮುಚ್ಚಿ ಹಾಕಿಕೊಳ್ಳುವ ಸಲುವಾಗಿ ಈ ರೀತಿ ನಾಟಕ ಮಾಡುತ್ತೀರಿ. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಬಿಎ ಚುನಾವಣೆ ಮಾಡೋದಕ್ಕೂ ತಯಾರಿಲ್ಲ. ಖಜಾನೆ ಖಾಲಿಯಾಗಿದೆ, ಇದು ವಾಸ್ತವಿಕ ಸತ್ಯ ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರ ಕಳೆದ ಮೂರೂವರೆ ವರ್ಷದಲ್ಲಿ ಏನು ಸಾಧನೆ ಮಾಡಿದೆ ಎಂಬ ಪೋಸ್ಟರ್ ಹಚ್ಚಲಿ. ಎಷ್ಟು ಬಡವರಿಗೆ ಮನೆ ಕೊಟ್ಟಿದ್ದಾರೆ ಕರ್ನಾಟಕ ರಾಜ್ಯದಲ್ಲಿ ಅದರ ಬಗ್ಗೆ ಪೋಸ್ಟರ್ ಹಚ್ಚಲಿ. ಎಷ್ಟು ಬಾರಿ ಬೆಲೆ ಏರಿಕೆ ಮಾಡಿದ್ದಾರೆ ಅದರ ಬಗ್ಗೆ ಪೋಸ್ಟರ್ ಹಚ್ಚಲಿ. ಎಷ್ಟು ರಸ್ತೆ ಗುಂಡಿಗಳನ್ನು ಮುಚ್ಚಿದ್ದಾರೆ, ಶಾಸಕರ ಕ್ಷೇತ್ರಕ್ಕೆ ಎಷ್ಟು ಕೋಟಿ ಅನುದಾನ ಕೊಟ್ಟಿದ್ದೀರಿ ಅದರ ಬಗ್ಗೆ ಪೋಸ್ಟರ್ ಹಚ್ಚಲಿ ಎಂದು ಸವಾಲು ಹಾಕಿದರು. ಹಾಲಿನ ದರ ಏರಿಸಿದ್ದು, ಬಸ್ ಪ್ರಯಾಣದರ ಏರಿಕೆಯನ್ನು ಅವರು ಖಂಡಿಸಿದರು. ಇವರು ಅತೀ ಶೀಘ್ರದಲ್ಲಿ ವಿದ್ಯುತ್ನ ದರವನ್ನು ಕೂಡ ಹೆಚ್ಚಿಸುತ್ತಾರೆ ಎಂದು ತಿಳಿಸಿದರು.
ಅಮಿತ್ ಶಾ ಹೇಳಿಕೆ ವೀಡಿಯೊ ತಿರುಚಲಾಗಿದೆ; ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ
ಒಗ್ಗೂಡಿ ನಡೆಯುತ್ತೇವೆ
ಬಿಜೆಪಿ-ಜೆಡಿಎಸ್ ಒಟ್ಟಾಗಿ ಹೋಗಬೇಕು ಅಂತ ಹೇಳಿ ಎಲ್ಲಾ ಹಿರಿಯರ ಅಪೇಕ್ಷೆಯೂ ಇದೆ, ಆ ನಿಟ್ಟಿನಲ್ಲಿ ನಾವು ಮುಂದೆ ಹೋಗುತ್ತೇವೆ ಎಂದು ಅವರು ತಿಳಿಸಿದರು. ಲಂಚ ಇಲ್ಲದೇ ಈ ಕಾಂಗ್ರೆಸ್ ಸರ್ಕಾರದಲ್ಲಿ ಏನೂ ಕೂಡ ನಡೀತಾ ಇಲ್ಲ. ಇದರ ಕುರಿತು ಸದನದಲ್ಲಿ ಮಾತನಾಡುವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.