Cabinet Meeting: ಕ್ರಿಮಿನಲ್ ಕಾನೂನು ತಿದ್ದುಪಡಿ ಕಾಯ್ದೆ-2022 ವಿಧೇಯಕ ಹಿಂಪಡೆಯಲು ಸಚಿವ ಸಂಪುಟ ನಿರ್ಧಾರ
Criminal Law Amendment Bill-2022: ಕೇಂದ್ರದ ಹೊಸ ಕಾನೂನಿನಲ್ಲಿ (ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023) ಈಗಾಗಲೇ ಈ ಎಲ್ಲಾ ವಿಸ್ತೃತ ಅವಕಾಶಗಳಿರುವುದರಿಂದ, 'ಕ್ರಿಮಿನಲ್ ಕಾನೂನು ತಿದ್ದುಪಡಿ ವಿಧೇಯಕ, 2022' ಅನ್ನು ಮುಂದುವರಿಸುವ ಅಗತ್ಯವಿಲ್ಲವೆಂದು ಪರಿಗಣಿಸಿ, ಅದನ್ನು ಅಧಿಕೃತವಾಗಿ ಹಿಂಪಡೆಯಲು ಸಚಿವ ಸಂಪುಟ ತೀರ್ಮಾನ ಕೈಗೊಳ್ಳಲಾಗಿದೆ.
-
ಬೆಂಗಳೂರು: 'ದಿ ಕ್ರಿಮಿನಲ್ ಲಾ ಅಮೆಂಡ್ಮೆಂಟ್ ಆರ್ಡಿನೆನ್ಸ್, 1944 (ಕರ್ನಾಟಕ ತಿದ್ದುಪಡಿ) ವಿಧೇಯಕ, 2022' (The Criminal Law Amendment Ordinance, 1944 (Karnataka Amendment) Bill, 2022) ಅನ್ನು ಹಿಂಪಡೆಯಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ ಎಂದು ಗೃಹ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ವಿಧೇಯಕದ ಹಿನ್ನೆಲೆ ಹಾಗೂ ಸನ್ನಿವೇಶ:
ಕರ್ನಾಟಕ ವಿಧಾನಮಂಡಲದ ಉಭಯ ಸದನಗಳಿಂದ ಅಂಗೀಕಾರಗೊಂಡಿದ್ದ ಈ ವಿಧೇಯಕವನ್ನು ಗೌರವಾನ್ವಿತ ರಾಜ್ಯಪಾಲರು ರಾಷ್ಟ್ರಪತಿಗಳ ಅಂಕಿತಕ್ಕಾಗಿ ಕಾಯ್ದಿರಿಸಿದ್ದರು. ಅದರಂತೆ ವಿಧೇಯಕವನ್ನು ಕೇಂದ್ರ ಸರ್ಕಾರದ ಗೃಹ ಸಚಿವಾಲಯಕ್ಕೆ ರವಾನಿಸಲಾಗಿತ್ತು.
ಕೇಂದ್ರ ಗೃಹ ಮಂತ್ರಾಲಯದ ಸಲಹೆ ಮತ್ತು ತೀರ್ಮಾನ:
ಕೇಂದ್ರ ಗೃಹ ಮಂತ್ರಾಲಯವು ತನ್ನ ಪತ್ರದಲ್ಲಿ (ದಿನಾಂಕ: 04.10.2024), ಪ್ರಸ್ತಾವಿತ ವಿಧೇಯಕದಲ್ಲಿ ಅಳವಡಿಸಲಾಗಿದ್ದ ಉಪಬಂಧಗಳು ಕೇಂದ್ರದ ನೂತನ ಕಾನೂನಾದ 'ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023' ರ (2023ರ ಕೇಂದ್ರ ಅಧಿನಿಯಮ: 46) ಪ್ರಕರಣ 107 ರ 'ದುಷ್ಕೃತ್ಯದ ಆಸ್ತಿಯ ಜಪ್ತಿ ಹಾಗೂ ಮುಟ್ಟುಗೋಲು' (Attachment, forfeiture or restoration of property which are proceeds of crime) ವಿಷಯದಲ್ಲಿ ಈಗಾಗಲೇ ವಿಸ್ತೃತವಾಗಿ ಒಳಗೊಂಡಿರುವುದಾಗಿ ತಿಳಿಸಿತ್ತು.
ಸಚಿವ ಸಂಪುಟದ ನಿರ್ಧಾರ:
ಕೇಂದ್ರದ ಹೊಸ ಕಾನೂನಿನಲ್ಲಿ (ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023) ಈಗಾಗಲೇ ಈ ಎಲ್ಲಾ ವಿಸ್ತೃತ ಅವಕಾಶಗಳಿರುವುದರಿಂದ, ಕೇಂದ್ರ ಸರ್ಕಾರ ಮತ್ತು ರಾಷ್ಟ್ರಪತಿಗಳ ಅಂಕಿತಕ್ಕಾಗಿ ಬಾಕಿ ಇರುವ 'ಕ್ರಿಮಿನಲ್ ಕಾನೂನು ತಿದ್ದುಪಡಿ ವಿಧೇಯಕ, 2022' ಅನ್ನು ಮುಂದುವರಿಸುವ ಅಗತ್ಯವಿಲ್ಲವೆಂದು ಪರಿಗಣಿಸಿ, ಅದನ್ನು ಅಧಿಕೃತವಾಗಿ ಹಿಂಪಡೆಯಲು ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.