ಚಿಂತಾಮಣಿ-ಬೆಂಗಳೂರು ರಸ್ತೆಯಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿಯಾಗಿ 2 ವರ್ಷದ ಮಗು ಸಾವು, ಐವರಿಗೆ ಗಂಭೀರ ಗಾಯ
ಚಿಂತಾಮಣಿಯಿಂದ ಬೆಂಗಳೂರಿನತ್ತ ತೆರಳುತ್ತಿದ್ದ ಕಾರು ಚಿನ್ನಸಂದ್ರ ಗ್ರಾಮದ ಹೋಟೆಲ್ ಒಂದರ ಬಳಿ ತಲುಪಿದಾಗ ಜೋರು ಮಳೆ ಸುರಿಯುತ್ತಿತ್ತು. ಮಳೆಯ ಪರಿಣಾಮ ರಸ್ತೆ ಮಧ್ಯದಲ್ಲಿದ್ದ ಡಿವೈಡರ್ ಚಾಲಕನಿಗೆ ಸ್ಪಷ್ಟವಾಗಿ ಕಾಣಿಸದೆ ಇದ್ದುದ್ದರಿಂದ, ಚಾಲಕನ ನಿಯಂತ್ರಣ ತಪ್ಪಿದ ಕಾರು ನೇರವಾಗಿ ಡಿವೈಡರ್‌ಗೆ ರಭಸವಾಗಿ ಡಿಕ್ಕಿಯಾಗಿದೆ. ಡಿಕ್ಕಿಯ ಭೀಕರತೆಗೆ ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
-
ಚಿಂತಾಮಣಿ : ಚಿಂತಾಮಣಿ-ಬೆಂಗಳೂರು ಮುಖ್ಯ ರಸ್ತೆಯ ಚಿನ್ನಸಂದ್ರ ಗ್ರಾಮದ ಬಳಿ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಎರಡು ವರ್ಷದ ಕಂದಮ್ಮ ಸ್ಥಳದಲ್ಲೇ ಮೃತಪಟ್ಟು, ಐವರು ತೀವ್ರವಾಗಿ ಗಾಯಗೊಂಡಿರುವ ದುರ್ಘಟನೆ ಸಂಭವಿಸಿದೆ.
ಅಪಘಾತದಲ್ಲಿ ಎರಡು ವರ್ಷದ ರಶದಾನ್ ಆಲಿ ಎಂಬ ಮಗು ಮೃತಪಟ್ಟಿದೆ. ಕಾರಿನಲ್ಲಿದ್ದ ಸಫಿನಬಾನು (45), ಚಾಲಕ ಮೊಹಮ್ಮದ್ ಶರೀಫ್ (50), ನಸರೀನ್ ತಾಜ್ (40), ಹೈದರ್ ಶರೀಫ್ (55) ಮತ್ತು ಶಾಹಿನ (45) ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಚಿಂತಾಮಣಿಯಿಂದ ಬೆಂಗಳೂರಿನತ್ತ ತೆರಳುತ್ತಿದ್ದ ಕಾರು ಚಿನ್ನಸಂದ್ರ ಗ್ರಾಮದ ಹೋಟೆಲ್ ಒಂದರ ಬಳಿ ತಲುಪಿದಾಗ ಜೋರು ಮಳೆ ಸುರಿಯುತ್ತಿತ್ತು. ಮಳೆಯ ಪರಿಣಾಮ ರಸ್ತೆ ಮಧ್ಯದಲ್ಲಿದ್ದ ಡಿವೈಡರ್ ಚಾಲಕನಿಗೆ ಸ್ಪಷ್ಟವಾಗಿ ಕಾಣಿಸದೆ ಇದ್ದುದ್ದರಿಂದ, ಚಾಲಕನ ನಿಯಂತ್ರಣ ತಪ್ಪಿದ ಕಾರು ನೇರವಾಗಿ ಡಿವೈಡರ್‌ಗೆ ರಭಸವಾಗಿ ಡಿಕ್ಕಿಯಾಗಿದೆ. ಡಿಕ್ಕಿಯ ಭೀಕರತೆಗೆ ಕಾರಿನ ಮುಂಭಾಗ ಸಂಪೂರ್ಣವಾಗಿ ಜಜ್ಜುಗುಜ್ಜಾಗಿದೆ.
ಇದನ್ನೂ ಓದಿ: Chitradurga Accident: ಚಿತ್ರದುರ್ಗದಲ್ಲಿ ಭೀಕರ ಅಪಘಾತ; ಲಾರಿಗೆ ಕಾರು ಡಿಕ್ಕಿಯಾಗಿ ಮೂವರ ಸಾವು, ಟೈರ್ ಸ್ಫೋಟದಿಂದ ದುರಂತ!
ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಐವರನ್ನು ತಕ್ಷಣವೇ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಘಟನಾ ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಬ್ಲಿಂಕರ್/ಮಿನುಗುವ ದೀಪ ಅಳವಡಿಕೆಗೆ ಸ್ಥಳೀಯರ ಆಗ್ರಹ: ಗ್ರಾಮದ ಮುಖ್ಯ ರಸ್ತೆಗಳಲ್ಲಿ ರಾತ್ರಿ ವೇಳೆ ಹಾಗೂ ಮಳೆಯ ಸಂದರ್ಭಗಳಲ್ಲಿ ಡಿವೈಡರ್‌ಗಳು ಸೂಕ್ತವಾಗಿ ಕಾಣಿಸದೆ ಸರಣಿ ಅಪಘಾತಗಳು ಸಂಭವಿಸುತ್ತಿವೆ. ಆದ್ದರಿಂದ ಇಂತಹ ದುರಂತಗಳನ್ನು ತಡೆಗಟ್ಟಲು ಗ್ರಾಮದ ಮುಖ್ಯ ರಸ್ತೆ ಹಾಗೂ ಡಿವೈಡರ್ ಬಳಿ ಮಿನುಗುವ ದೀಪಗಳನ್ನು ಮತ್ತು ಎಚ್ಚರಿಕೆ ಫಲಕಗಳನ್ನು ತಕ್ಷಣವೇ ಅಳವಡಿಸಬೇಕೆಂದು ಸಾರ್ವಜನಿಕರು ಹಾಗೂ ಸ್ಥಳೀಯರು ಸಂಬಂಧಪಟ್ಟ ಅಧಿಕಾರಿ ಗಳನ್ನು ಒತ್ತಾಯಿಸಿದ್ದಾರೆ.