ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Cabinet Expansion: ಮಾಸಾಂತ್ಯಕ್ಕೆ ʼಸಂಪುಟʼ ವಿಸ್ತರಣೆ

ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅಧಿಕಾರ ಸ್ವೀಕರಿಸಿದ್ದು, ತಮ್ಮೊಂದಿಗೆ 13 ಮಂದಿ ಸಚಿವ ರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಆರಂಭದಲ್ಲಿ ಎದ್ದಿದ್ದ ಖಾತೆ ಹಂಚಿಕೆಯ ಕ್ಯಾತೆ ಪೂರ್ಣ ಪ್ರಮಾಣದಲ್ಲಿ ನಿಲ್ಲದಿದ್ದರೂ, ವಿಸ್ತರಣೆ ವೇಳೆ ಕೆಲ ಖಾತೆಗಳು ಅದಲು-ಬದಲಾಗುವ ಭರವಸೆ ಸಿಕ್ಕಿರುವುದರಿಂದ ಸಚಿವರೆಲ್ಲರೂ ಮೌನಕ್ಕೆ ಶರಣಾಗಿದ್ದಾರೆ. ಈ ನಡುವೆ ಖಾಲಿಯಿರುವ 20 ಸಚಿವ ಸ್ಥಾನವನ್ನು ತಿಂಗಳಾಂತ್ಯಕ್ಕೆ ಭರ್ತಿ ಮಾಡುವ ಸಾಧ್ಯತೆಯಿದೆ.

Cabinet Expansion: ಮಾಸಾಂತ್ಯಕ್ಕೆ ʼಸಂಪುಟʼ ವಿಸ್ತರಣೆ

-

Profile
Ashok Nayak Jun 13, 2026 9:56 AM

20 ಸಚಿವ ಸ್ಥಾನಕ್ಕೆ 80ಕ್ಕೂ ಹೆಚ್ಚು ಆಕಾಂಕ್ಷಿಗಳು

ಸ್ಥಾನಕ್ಕಾಗಿ ತೀವ್ರಗೊಂಡ ಲಾಬಿ 3 ಸ್ಥಾನ ಉಳಿಸಿಕೊಳ್ಳುವ ಸಾಧ್ಯತೆ

ವಿಸ್ತರಣೆ ವೇಳೆ ಡಿಕೆಶಿ ಆಪ್ತರಿಗೆ ಹೆಚ್ಚಿನ ಆದ್ಯತೆ

ಬೆಂಗಳೂರು: ಸಂಪುಟ ವಿಸ್ತರಣೆ ವಿಷಯದಲ್ಲಿ ದಿನದಿಂದ ದಿನಕ್ಕೆ ಒತ್ತಡಗಳು ಹೆಚ್ಚಾಗುತ್ತಿರುವ ನಡುವೆಯೇ, ತಿಂಗಳಾಂತ್ಯಕ್ಕೆ ಬಾಕಿ ಸಚಿವ ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.

ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅಧಿಕಾರ ಸ್ವೀಕರಿಸಿದ್ದು, ತಮ್ಮೊಂದಿಗೆ 13 ಮಂದಿ ಸಚಿವ ರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಆರಂಭದಲ್ಲಿ ಎದ್ದಿದ್ದ ಖಾತೆ ಹಂಚಿಕೆಯ ಕ್ಯಾತೆ ಪೂರ್ಣ ಪ್ರಮಾಣ ದಲ್ಲಿ ನಿಲ್ಲದಿದ್ದರೂ, ವಿಸ್ತರಣೆ ವೇಳೆ ಕೆಲ ಖಾತೆಗಳು ಅದಲು-ಬದಲಾಗುವ ಭರವಸೆ ಸಿಕ್ಕಿರುವು ದರಿಂದ ಸಚಿವರೆಲ್ಲರೂ ಮೌನಕ್ಕೆ ಶರಣಾಗಿದ್ದಾರೆ. ಈ ನಡುವೆ ಖಾಲಿಯಿರುವ 20 ಸಚಿವ ಸ್ಥಾನವನ್ನು ತಿಂಗಳಾಂತ್ಯಕ್ಕೆ ಭರ್ತಿ ಮಾಡುವ ಸಾಧ್ಯತೆಯಿದೆ.

ಜೂನ್ 18ಕ್ಕೆ ವಿಧಾನಪರಿಷತ್ ಮತದಾನವಿರುವುದರಿಂದ ಸಹಜವಾಗಿಯೇ ಈ ಪ್ರಕ್ರಿಯೆ ಮುಕ್ತಾಯವಾಗುವ ತನಕ ಸಂಪುಟ ವಿಸ್ತರಣೆ ಸಾಧ್ಯವಿಲ್ಲ. ಇದಾದ ಬಳಿಕ ಜೂನ್ 21ಕ್ಕೆ ಕೆಪಿಸಿಸಿ ಅಧ್ಯಕ್ಷರಾಗಿ ಬಿ.ಕೆ.ಹರಿಪ್ರಸಾದ್ ಪದಗ್ರಹಣ ಕಾರ್ಯಕ್ರಮ ಅರಮನೆ ಮೈದಾನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೈಕಮಾಂಡ್‌ನ ಬಹುತೇಕ ನಾಯಕರು ಬರುವುದರಿಂದ, ಬೆಂಗಳೂರಿಗೆ ಆಗಮಿಸಿದಾಗ ಸಂಪುಟ ವಿಸ್ತರಣೆ ಕುರಿತು ಮತ್ತೊಂದು ಸುತ್ತಿನ ಸಭೆ ನಡೆಸಿ ಅಂತಿಮಗೊಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಇದನ್ನೂ ಓದಿ: Bangalore News: ಮತ್ತೊಮ್ಮೆ ಎಲ್‌ಪಿಜಿ ಬೆಲೆ ಏರಿಕೆ: ಉಜ್ವಲ ಸಿಲೆಂಡರ್ 4ಕ್ಕೆ ಇಳಿಸಿ ಅಡುಗೆ ಮನೆಗೆ ಕೊಳ್ಳಿ ಇಟ್ಟ ಪ್ರಧಾನಿ ಮೋದಿ: ಡಾ.ಆನಂದ ಕುಮಾರ್

ಖಾಲಿಯಿರುವ 20 ಸಚಿವ ಸ್ಥಾನಕ್ಕೆ 80ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಮೂರಕ್ಕಿಂತ ಹೆಚ್ಚು ಬಾರಿ ಗೆದ್ದಿರುವ ಶಾಸಕರ ಪಟ್ಟಿಯೇ ದೊಡ್ಡದಾಗಿದೆ. ಜಾತಿವಾರು ಪಟ್ಟಿಯಲ್ಲಿಯೂ ಒಂದೊಂದು ಸಮುದಾಯದಿಂದ ಎರಡಕ್ಕಿಂತ ಹೆಚ್ಚು ಆಕಾಂಕ್ಷಿಗಳು ಸಚಿವ ಸ್ಥಾನಕ್ಕೆ ಓಡಾಡುತ್ತಿರುವುದು ನಾಯಕರಿಗೆ ನುಂಗಲಾರದ ತುತ್ತಾಗಿದೆ. ಆದ್ದರಿಂದ ಇರುವ 20 ಸ್ಥಾನಗಳ ಪೈಕಿ ಎರಡರಿಂದ ಮೂರು ಸ್ಥಾನಗಳನ್ನು ಬಾಕಿ ಉಳಿಸಿಕೊಂಡು ಇನ್ನುಳಿದ ಎಲ್ಲ ಸಚಿವ ಸ್ಥಾನವನ್ನು ಭರ್ತಿ ಮಾಡಿ ಕೊಳ್ಳುವ ಲೆಕ್ಕಾಚಾರದಲ್ಲಿ ಡಿ.ಕೆ.ಶಿವಕುಮಾರ್ ಇದ್ದಾರೆ ಎನ್ನಲಾಗಿದೆ.

ಮೊದಲ ಸಂಪುಟ ರಚನೆಯಲ್ಲಿ ಸಿದ್ದರಾಮಯ್ಯ ಅವರ ಆಪ್ತರು ಹಾಗೂ ಸಿದ್ದರಾಮಯ್ಯ ಸಂಪುಟದಲ್ಲಿ ಕಾರ್ಯನಿರ್ವಹಿಸಿದ ಹಲವರಿಗೆ ಸಚಿವ ಸ್ಥಾನ ಸಿಕ್ಕಿತ್ತು. ಆದ್ದರಿಂದ ಎರಡನೇ ಹಂತದ ವಿಸ್ತರಣೆಯಲ್ಲಿ ತಮ್ಮ ಆಪ್ತರಿಗೆ ಮಣೆ ಹಾಕುವ ಲೆಕ್ಕಾಚಾರದಲ್ಲಿ ಡಿ.ಕೆ.ಶಿವಕುಮಾರ್ ಇದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿಯೂ ಹೈಕಮಾಂಡ್ ನಾಯ ಕರೊಂದಿಗೆ ಚರ್ಚೆ ನಡೆಸಿದ್ದಾರೆ. ಆದರೆ ಈ ಚರ್ಚೆ ಪ್ರಾಥಮಿಕ ಹಂತಕ್ಕೆ ಸೀಮಿತವಾಗಿದ್ದರಿಂದ ಯಾವುದೇ ಸ್ಪಷ್ಟ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಿಲ್ಲ ಎನ್ನಲಾಗಿದೆ.

ಜುಲೈ ಮಧ್ಯದಲ್ಲಿ ಅಧಿವೇಶನ: ಜುಲೈನ ಎರಡನೇ ವಾರದಲ್ಲಿ ಮಳೆಗಾಲದ ಅಧಿವೇಶನ ಕರೆಯಬೇಕಿರುವುದರಿಂದ ಆ ವೇಳೆ ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ಗೊಂದಲಗಳನ್ನು ಬಗೆಹರಿಸಿ ಕೊಳ್ಳುವ ಅನಿವಾರ್ಯತೆಯಿದೆ. ಜೂನ್ ಅಂತ್ಯಕ್ಕೆ ಸಂಪುಟ ವಿಸ್ತರಣೆ ಯಾದರೂ, ಸಚಿವರಿಗೆ ಖಾತೆಯನ್ನು ಅರ್ಥೈಸಿಕೊಳ್ಳಲು ಕನಿಷ್ಠ ಒಂದೆರೆಡುವಾರಗಳ ಅಗತ್ಯವಿರುತ್ತದೆ. ಆದ್ದರಿಂದ ಜೂನ್ ಕೊನೆಯ ವಾರದಲ್ಲಿ ಸಂಪುಟ ವಿಸ್ತರಣೆ ಮಾಡಲೇಬೇಕು ಎನ್ನುವ ಮಾತುಗಳು ಪಕ್ಷದ ವಲಯ ದಲ್ಲಿ ಕೇಳಿ ಬರುತ್ತಿದೆ.

ದೆಹಲಿಯಲ್ಲಿದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇದೇ ವಿಷಯವನ್ನು ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿದ್ದು, ದಿನದಿಂದ ದಿನಕ್ಕೆ ಸಂಪುಟ ವಿಸ್ತರಣೆಯ ಒತ್ತಡ ಹೆಚ್ಚಾಗುತ್ತಿದೆ. ಆದ್ದರಿಂದ ವಿಧಾನಪರಿಷತ್ ಚುನಾವಣೆ ಮುಗಿಯುತ್ತಿದ್ದಂತೆ ಈ ಪ್ರಕ್ರಿಯೆಯನ್ನು ಆರಂಭಿಸುವುದು ಸೂಕ್ತ.

ಒಂದು ವೇಳೆ ಅಸಮಾಧಾನ ವೆದ್ದರೂ, ಮಳೆಗಾಲದ ಅಧಿವೇಶನದ ವೇಳೆಗೆ ಈ ಅಸಮಧಾನವನ್ನು ತಣಿಸಲು ಅವಕಾಶ ವಿರುತ್ತದೆ. ಮಳೆಗಾಲದ ಅಧಿವೇಶನಕ್ಕೆ ಹತ್ತಿರದಲ್ಲಿ ಸಂಪುಟ ವಿಸ್ತರಣೆಯಾಗಿ, ಬಹಿರಂಗ ಹೇಳಿಕೆಗಳು ಕೇಳಿಬಂದರೆ ಆ ಕಲಾಪದಲ್ಲಿ ಸರಕಾರಕ್ಕೆ ಡ್ಯಾಮೇಜ್ ಆಗುತ್ತದೆ ಎನ್ನುವ ಮಾತನ್ನು ವರಿಷ್ಠರ ಬಳಿ ಡಿಕೆ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.

ಖರ್ಗೆ ನಿವಾಸಕ್ಕೆ ಆಕಾಂಕ್ಷಿಗಳ ಸಾಲು

ಈ ನಡುವೆ ಶುಕ್ರವಾರ ಬೆಂಗಳೂರಿಗೆ ಆಗಮಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಚಿವಾಕಾಂಕ್ಷಿಗಳು ಭೇಟಿಯಾಗಿ ತಮಗೊಂದು ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ರಾಜ್ಯಸಭೆಯ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿರುವುದರಿಂದ ಖರ್ಗೆ ಅವರು, ಚುನಾವಣಾಧಿಕಾರಿಯಿಂದ ಪ್ರಮಾಣಪತ್ರ ಪಡೆದುಕೊಂಡಿದ್ದಾರೆ. ಈ ವೇಳೆ ಖರ್ಗೆ ಅವರನ್ನು ಭೇಟಿಯಾದ ಹಲವು ಆಕಾಂಕ್ಷಿಗಳು ತಮಗೆ ಅವಕಾಶ ನೀಡುವಂತೆ ಆಗ್ರಹಿಸಿದ್ದಾರೆ. ಹಿರಿಯ ಸಚಿವ ಆರ್.ವಿ.ದೇಶಪಾಂಡೆ, ಮಾಂಕಾಳ ವೈದ್ಯ, ಹಂಪನಗೌಡ ಬಾದರ್ಲಿ ಸೇರಿದಂತೆ ಹಲವು ಶಾಸಕರು ಖರ್ಗೆ ಅವರನ್ನು ಭೇಟಿಯಾಗಿ ತಮ್ಮ ಮನವಿ ಸಲ್ಲಿಸಿದ್ದಾರೆ. ತಮ್ಮನ್ನು ಭೇಟಿ ಯಾಗಿರುವ ಎಲ್ಲ ಸಚಿವಾಕಾಂಕ್ಷಿಗಳಿಗೂ, ‘ನೋಡೋಣಎಂದಷ್ಟೇ ಹೇಳಿದ್ದಾರೆ ಎನ್ನಲಾಗಿದೆ.

ಲೆಕ್ಕಾಚಾರಗಳು

1 ಜೂ.18ಕ್ಕೆ ವಿಧಾನ ಪರಿಷತ್ ಚುನಾವಣೆ, ಅಲ್ಲಿಯವರೆಗೆ ಸಚಿವ ಸಂಪುಟ ವಿಸ್ತರಣೆ ಮಾಡುವುದು ಅಸಾಧ್ಯ

೨ ಜೂ.21ಕ್ಕೆ ಕೆಪಿಸಿಸಿ ಅಧ್ಯಕ್ಷರಾಗಿ ಹರಿಪ್ರಸಾದ್ ಅಧಿಕಾರ ಸ್ವೀಕಾರ, ಅನಂತರವೇ ವಿಸ್ತರಣೆಗೆ ಅವಕಾಶ

3 ಹರಿಪ್ರಸಾದ್ ಪದಗ್ರಹಣಕ್ಕೆ ಹೈಕಮಾಂಡ್‌ನ ಉನ್ನತ ನಾಯಕರ ಆಗಮನ, ಆಗಲೇ ಸಂಪುಟ ವಿಸ್ತರಣೆ ಕುರಿತು ಗಹನ ಚರ್ಚೆ ಸಾಧ್ಯತೆ

4 ಪಟ್ಟಿಯಲ್ಲಿ ಸ್ಥಾನ ಪಡೆಯಲು ಹೊಸತಾಗಿ ಗೆದ್ದವರಿಂದಲೂ ತೀವ್ರ ಕಸರತ್ತು. ಒಂದೇ ಸ್ಥಾನಕ್ಕೆ ಇಬ್ಬಿಬ್ಬರು ಜಾತಿ ನಾಯಕರಿಂದ ತೀವ್ರ ಲಾಬಿ

5 ಮೊದಲ ಪಟ್ಟಿಯಲ್ಲಿ ಸಿದ್ದು ಆಪ್ತರಿಗೆ ಮಣೆ, ವಿಸ್ತರಣೆ ವೇಳೆ ಶಿವಕುಮಾರ್ ಆಪ್ತರಿಗೆ ಹೆಚ್ಚಿನ ಸ್ಥಾನ ಸಾಧ್ಯತೆ

6 ಈ ಕುರಿತು ಹೈಕಮಾಂಡ್‌ನೊಂದಿಗೆ ಡಿಕೆಶಿ ಮಾತುಕತೆ. ಇನ್ನೂ ಅಂತಿಮ ನಿರ್ಧಾರ ಆಗಿಲ್ಲ: ಮೂಲಗಳು