ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bangalore News: ಮತ್ತೊಮ್ಮೆ ಎಲ್‌ಪಿಜಿ ಬೆಲೆ ಏರಿಕೆ: ಉಜ್ವಲ ಸಿಲೆಂಡರ್ 4ಕ್ಕೆ ಇಳಿಸಿ ಅಡುಗೆ ಮನೆಗೆ ಕೊಳ್ಳಿ ಇಟ್ಟ ಪ್ರಧಾನಿ ಮೋದಿ: ಡಾ.ಆನಂದ ಕುಮಾರ್

ಉಜ್ವಲ ಯೋಜನೆಯಡಿ 14.2 ಕೆ.ಜಿ 12 ಸಿಲೆಂಡರ್ ಗಳನ್ನು ನೀಡಲಾಗುತ್ತಿತ್ತು. ಕಳೆದ ವರ್ಷ ಇದನ್ನು 9ಕ್ಕೆ ಇಳಿಸಿ, ಇದೀಗ 4ಕ್ಕೆ ತಗ್ಗಿಸಿರುವುದು ಖಂಡನೀಯ. ಮೋದಿ ಸರ್ಕಾರ ಮತ್ತೊಂದು ದುಬಾರಿ ಬದುಕಿನ ಕೊಡುಗೆ ನೀಡಿದ್ದು, ಮೂರು ತಿಂಗಳಲ್ಲಿ ಅಡುಗೆ ಬೆಲೆ ದರವನ್ನು 90 ರೂಪಾಯಿ ಹೆಚ್ಚಿಸಿದೆ. ಡಾ. ಮನಮೋಹನ್ ಸಿಂಗ್ ಅವಧಿಯಲ್ಲಿ 400 ರೂ ಇದ್ದ ಸಿಲೆಂಡರ್ ಬೆಲೆ ಇದೀಗ ಒಂದು ಸಾವಿರ ರೂ ಸನಿಹಕ್ಕೆ ಬಂದಿದೆ.

ಉಜ್ವಲ ಸಿಲೆಂಡರ್ 4ಕ್ಕೆ ಇಳಿಸಿ ಅಡುಗೆ ಮನೆಗೆ ಕೊಳ್ಳಿ ಇಟ್ಟ ಪ್ರಧಾನಿ ಮೋದಿ

-

Profile
Ashok Nayak Jun 10, 2026 9:59 PM

ಬೆಂಗಳೂರು: ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ಸಾಮಾನ್ಯರು ತತ್ತರಿಸಿರು ವಾಗ ಮತ್ತೊಮ್ಮೆ ಅಡುಗೆ ಅನಿಲದ ದರ ಏರಿಕೆ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅಡುಗೆ ಮನೆಗೆ ಕೊಳ್ಳಿ ಇಟ್ಟಿದ್ದಾರೆ. ಉಜ್ವಲ ಯೋಜನೆಯಡಿ ಸಿಲೆಂಡರ್ ಗಳನ್ನು 4ಕ್ಕೆ ಇಳಿಸಿರು ವುದು ಖಂಡನೀಯ. ಇದೇನಾ “ಸಬ್ ಕಾ ಸಾಥ್ ಸಬ್ ಕಾ ವಿಕಾಸ್” ಎಂದು ಎಐಸಿಸಿ ಎಸ್.ಸಿ ವಿಭಾಗದ ರಾಷ್ಟ್ರೀಯ ಸಂಯೋಜಕರು ಹಾಗೂ ಮಹಾರಾಷ್ಟ್ರ ಉಸ್ತುವಾರಿ ಡಾ. ಆನಂದ ಕುಮಾರ್ ಟೀಕಿಸಿದ್ದಾರೆ.

ಉಜ್ವಲ ಯೋಜನೆಯಡಿ 14.2 ಕೆ.ಜಿ 12 ಸಿಲೆಂಡರ್ ಗಳನ್ನು ನೀಡಲಾಗುತ್ತಿತ್ತು. ಕಳೆದ ವರ್ಷ ಇದನ್ನು 9ಕ್ಕೆ ಇಳಿಸಿ, ಇದೀಗ 4ಕ್ಕೆ ತಗ್ಗಿಸಿರುವುದು ಖಂಡನೀಯ. ಮೋದಿ ಸರ್ಕಾರ ಮತ್ತೊಂದು ದುಬಾರಿ ಬದುಕಿನ ಕೊಡುಗೆ ನೀಡಿದ್ದು, ಮೂರು ತಿಂಗಳಲ್ಲಿ ಅಡುಗೆ ಬೆಲೆ ದರವನ್ನು 90 ರೂಪಾಯಿ ಹೆಚ್ಚಿಸಿದೆ. ಡಾ. ಮನಮೋಹನ್ ಸಿಂಗ್ ಅವಧಿಯಲ್ಲಿ 400 ರೂ ಇದ್ದ ಸಿಲೆಂಡರ್ ಬೆಲೆ ಇದೀಗ ಒಂದು ಸಾವಿರ ರೂ ಸನಿಹಕ್ಕೆ ಬಂದಿದೆ. ಈಸ್ಟ್ ಇಂಡಿಯಾ ಕಂಪೆನಿಯ ಮಾದರಿಯಂತೆ ದೇಶದ ಜನರ ಹಣವನ್ನು ಸರ್ಕಾರ ಕೊಳ್ಳೆ ಹೊಡೆಯುತ್ತಿದೆ. ಮುಂದೆ ಅಡುಗೆ ಮಾಡುವನ್ನು ಬಿಟ್ಟು ಸೊಪ್ಪು, ಸದೆ ತಿಂದು ಬದುಕುವಂತೆ ಮೋದಿ ಕರೆ ಕೊಟ್ಟರೂ ಅಚ್ಚರಿಯಿಲ್ಲ ಎಂದಿದ್ದಾರೆ.

“ಅಚ್ಚೇ ದಿನ್” ಹಾಗೂ “ಬಡವರ ಪರ ಸರ್ಕಾರ” ಎಂಬ ಘೋಷಣೆಗಳ ಮೂಲಕ ಅಧಿಕಾರಕ್ಕೆ ಬಂತು. ಕಳೆದ ಹಲವು ವರ್ಷಗಳ ಬೆಳವಣಿಗೆಗಳನ್ನು ಗಮನಿಸಿದರೆ ಸಾಮಾನ್ಯ ಕುಟುಂಬಗಳ ಜೀವನ ನಿರ್ವಹಣೆಯ ವೆಚ್ಚ ಮಾತ್ರ ನಿರಂತರವಾಗಿ ಹೆಚ್ಚುತ್ತಲೇ ಬಂದಿದೆ. ಕಾಂಗ್ರೆಸ್ ಆಡಳಿತ ದಲ್ಲಿ ಅಡುಗೆ ಅನಿಲ ಸಬ್ಸಿಡಿ ಯೋಜನೆಗಳ ಮೂಲಕ ಬಡ ಹಾಗೂ ಮಧ್ಯಮ ವರ್ಗದ ಕುಟುಂಬ ಗಳಿಗೆ ನೆರವಾಗುತ್ತಿತ್ತು. ಇಂದು ಅದೇ ವರ್ಗಗಳ ಮೇಲೆ ಬೆಲೆ ಏರಿಕೆಯ ಭಾರವನ್ನು ಹೇರುತ್ತಿದೆ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ: Bangalore News: ಮಾನ್ಯತೆ ಇಲ್ಲದೆ ವಿದ್ಯಾರ್ಥಿಗಳ ದಾಖಲಾತಿ ಪ್ರಾರಂಭಿಸಿದ ಶಾಲೆಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ: ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಎಚ್ಚರಿಕೆ

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸಿಲಿಂಡರ್ ದರಗಳು ನಿರಂತರವಾಗಿ ಏರಿದರೆ, ಅನೇಕ ಬಡ ಕುಟುಂಬಗಳು ಮತ್ತೆ ಕಟ್ಟಿಗೆ, ಸೌದೆ ಹಾಗೂ ಸಾಂಪ್ರದಾಯಿಕ ಇಂಧನಗಳತ್ತ ಮರಳುವ ಅಪಾಯವಿದೆ. ಸಂಪರ್ಕ ಪಡೆದ ನಂತರವೂ ಮರುಪೂರೈಕೆ ಸಿಲಿಂಡರ್ ಖರೀದಿಸಲು ಸಾಧ್ಯವಾಗದ ಕಾರಣ ಹಲವು ಉಜ್ವಲ ಫಲಾನುಭವಿಗಳು ಗ್ಯಾಸ್ ಬಳಕೆಯನ್ನು ಕಡಿಮೆ ಮಾಡಿರುವುದಾಗಿ ವಿವಿಧ ಅಧ್ಯಯನಗಳು ಮತ್ತು ವರದಿಗಳು ಸೂಚಿಸಿವೆ. ಕಚ್ಚಾ ತೈಲದ ಬೆಲೆ ಇಳಿದಾಗ ಅದರ ಸಂಪೂರ್ಣ ಲಾಭವನ್ನು ಗ್ರಾಹಕರಿಗೆ ನೀಡದೆ, ಕೇಂದ್ರ ಸರ್ಕಾರ ವಿವಿಧ ತೆರಿಗೆಗಳ ಮೂಲಕ ಹೆಚ್ಚಿನ ಆದಾಯ ಸಂಗ್ರಹಿಸಿದೆ. ಜಾಗತಿಕವಾಗಿ ಬೆಲೆ ಏರಿದಾಗ ಅದರ ಹೊರೆ ನೇರವಾಗಿ ಜನರ ಮೇಲೆ ಬೀಳುತ್ತಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಇಂಧನ ಕ್ಷೇತ್ರದಲ್ಲಿ ಸರ್ಕಾರದ ನೀತಿಗಳು ಜನಪರವಾಗಿರುವುದಕ್ಕಿಂತ ಬಡವರ ಜೇಬಿನಿಂದ ಹಣ ಕಿತ್ತು ಉಳ್ಳವರಿಗೆ ವರ್ಗಾಯಿಸುವ ನೀತಿ ಅನುಸರಿಸುತ್ತಿದೆ ಎಂದು ಟೀಕಿಸಿದ್ದಾರೆ.

ದೇಶದ ಮಧ್ಯಮ ವರ್ಗವು ತೆರಿಗೆ ಕಟ್ಟುವ ವರ್ಗವಾಗಿದ್ದರೂ, ಬೆಲೆ ಏರಿಕೆಯ ಸಂದರ್ಭದಲ್ಲಿ ಅವರಿಗೆ ಸಿಗುವ ನೆರವು ಅತ್ಯಂತ ಕಡಿಮೆ ಎಂಬ ಅಸಮಾಧಾನವಿದೆ. ಶಿಕ್ಷಣ, ಆರೋಗ್ಯ, ಮನೆ ಬಾಡಿಗೆ, ವಿದ್ಯುತ್, ಸಾರಿಗೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ವೆಚ್ಚ ಹೆಚ್ಚುತ್ತಿರುವ ಸಂದರ್ಭದಲ್ಲಿ ಅಡುಗೆ ಅನಿಲದ ದರ ಏರಿಕೆಯೂ ಕುಟುಂಬದ ಬಜೆಟ್‌ಗೆ ಮತ್ತೊಂದು ಹೊಡೆತವಾಗಿದೆ. ತಿಂಗಳ ಆದಾಯ ಸ್ಥಿರವಾಗಿದ್ದರೂ ಖರ್ಚು ಮಾತ್ರ ನಿರಂತರವಾಗಿ ಏರುತ್ತಿರುವುದರಿಂದ ಮಧ್ಯಮ ವರ್ಗದ ಉಳಿತಾಯ ಸಾಮರ್ಥ್ಯ ಕುಸಿಯುತ್ತಿದೆ. ಇದು ದೇಶದ ಆರ್ಥಿಕತೆಯ ಮೇಲೆಯೂ ದೀರ್ಘಾವಧಿ ಯಲ್ಲಿ ಪರಿಣಾಮ ಬೀರುವ ಸಾಧ್ಯತೆ ಇದೆ.

ಚುನಾವಣೆಗಳ ಸಮಯದಲ್ಲಿ ಮಾತ್ರ ಸಬ್ಸಿಡಿ, ಬೆಲೆ ಇಳಿಕೆ ಅಥವಾ ಜನಪರ ಘೋಷಣೆಗಳು ಮೊಳಗುತ್ತವೆ. ಚುನಾವಣೆ ಬಳಿಕ ಮತ್ತೆ ಬೆಲೆ ಏರಿಕೆಗಳ ಸರಣಿ ಆರಂಭವಾಗುತ್ತದೆ. ಜನರ ಬದುಕಿನ ಮೇಲೆ ನೇರ ಪರಿಣಾಮ ಬೀರುವ ಇಂಧನ ಮತ್ತು ಅಡುಗೆ ಅನಿಲದಂತಹ ವಿಷಯಗಳಲ್ಲಿ ಸರ್ಕಾರ ದೀರ್ಘಾವಧಿಯ ಸ್ಥಿರ ನೀತಿ ರೂಪಿಸಬೇಕೇ ಹೊರತು, ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರದಲ್ಲಿ ನಿರ್ಧಾರಗಳನ್ನು ಕೈಗೊಳ್ಳಬಾರದು. ಅಡುಗೆ ಅನಿಲವು ಇಂದು ಐಷಾರಾಮಿ ವಸ್ತುವಲ್ಲ; ಪ್ರತಿ ಯೊಂದು ಮನೆಯ ಮೂಲ ಅಗತ್ಯವಾಗಿದೆ. ಇಂತಹ ಅಗತ್ಯ ಸೇವೆಯ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವುದು ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಜೀವನವನ್ನು ಇನ್ನಷ್ಟು ಕಷ್ಟಕರಗೊಳಿಸುತ್ತಿದೆ. ಬೆಲೆ ಏರಿಕೆಯ ಭಾರದಿಂದ ನರಳುತ್ತಿರುವ ಜನರು ಅಭಿವೃದ್ಧಿಯ ಫಲವನ್ನು ಅನುಭವಿಸುತ್ತಿದ್ದಾರೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.

ಜನರ ಜೀವನಮಟ್ಟ ಸುಧಾರಿಸುವುದೇ ಸರ್ಕಾರದ ನಿಜವಾದ ಸಾಧನೆಯಾಗಬೇಕು. ಆದರೆ ಅಡುಗೆ ಮನೆಯ ಅಗ್ನಿಯನ್ನು ಉಳಿಸಿಕೊಳ್ಳುವುದೇ ಸವಾಲಾಗುತ್ತಿರುವ ಸಂದರ್ಭದಲ್ಲಿ ಎಲ್‌ಪಿಜಿ ದರ ಏರಿಕೆಗಳು ಮೋದಿ ಸರ್ಕಾರದ ಆರ್ಥಿಕ ನೀತಿಗಳ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿವೆ. ಜನರ ಬದುಕಿನ ವಾಸ್ತವ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತಕ್ಷಣವೇ ಬೆಲೆ ನಿಯಂತ್ರಣ ಹಾಗೂ ಪರಿಣಾಮಕಾರಿ ಸಬ್ಸಿಡಿ ವ್ಯವಸ್ಥೆ ಜಾರಿಗೆ ತರಬೇಕೆಂಬ ಒತ್ತಾಯ ಮತ್ತಷ್ಟು ಬಲವಾಗುತ್ತಿದೆ ಎಂದಿದ್ದಾರೆ.

ಮೋದಿ ಸರ್ಕಾರ ಎಲ್ಲಾ ರಂಗಗಳಲ್ಲೂ ವಿಫಲವಾಗಿದೆ. ಭಾರತದ ಮಾವಿಗೆ ಜಪಾನ್ ನಿಷೇಧ ಹೇರಿತು, ಅಕ್ಕಿಯನ್ನು ಚೀನಾ ನಿಷೇಧಿಸಿತು. ವೀಸಾ ಇಲ್ಲದವರಿಗೆ ತೈವಾನ್ ದೇಶದ ಪ್ರಯಾಣ ಬಂದ್ ಆಯಿತು. ಕೋರಿಯಾ ದೇಶಗಳು ಷೇರು ಮಾರುಕಟ್ಟೆಯಲ್ಲಿ ವಿಜೃಂಭಿಸುತ್ತಿವೆ. ಸೂಪಾಯಿ ಮೌಲ್ಯ ಕುಸಿಯುತ್ತಿದ್ದರೂ ವಿಶ್ವಗುರು ಮೋದಿ ಚಕಾರ ಎತ್ತುತ್ತಿಲ್ಲ ಎಂದು ಡಾ. ಆನಂದ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.