ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ನಿಮಗೆ ತಾಕತ್ತು ಇದ್ದರೆ ಆರ್‌ಎಸ್‌ಎಸ್‌ ನಿಷೇಧಿಸಿ; ಪ್ರಿಯಾಂಕ್‌ ಖರ್ಗೆಗೆ ಛಲವಾದಿ ನಾರಾಯಣಸ್ವಾಮಿ ಸವಾಲು

Chalavadi Narayanaswamy: ಹಿಂದೆ ಕೂಡ ಆರ್‌ಎಸ್‌ಎಸ್‌ ಅನ್ನು ನಿಷೇಧಿಸಲಾಗಿತ್ತು. ಮತ್ತೆ ನಿಷೇಧವನ್ನು ಏಕೆ ವಾಪಸ್ ತೆಗೆದುಕೊಳ್ಳಲಾಯಿತು? ವಾಪಸ್ ತೆಗೆದುಕೊಳ್ಳಲು ಯಾರು ನಿಮಗೆ ಅರ್ಜಿ ಕೊಟ್ಟರು? ಆರ್‌ಎಸ್‌ಎಸ್‌ ಸಂಘಟನೆಯು ಕೇಳಿತ್ತೇ ಎಂದು ಪ್ರಶ್ನಿಸಿದರು. ಪ್ರಿಯಾಂಕ್‌ ಖರ್ಗೆ ಅವರೇ, ನಿಮಗೆ ತಾಕತ್ತು ಇದ್ದರೆ ಆರ್‌ಎಸ್‌ಎಸ್‌ ಅನ್ನು ನಿಷೇಧಿಸಿ ನೋಡಿ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸವಾಲು ಹಾಕಿದ್ದಾರೆ.

ನಿಮಗೆ ತಾಕತ್ತು ಇದ್ದರೆ ಆರ್‌ಎಸ್‌ಎಸ್‌ ನಿಷೇಧಿಸಿ: ಛಲವಾದಿ ನಾರಾಯಣಸ್ವಾಮಿ

-

Profile Siddalinga Swamy Oct 13, 2025 8:16 PM

ಬೆಂಗಳೂರು: ಕಾಂಗ್ರೆಸ್ ಆಡಳಿತದಿಂದ ದಲಿತರ ವಿರುದ್ಧ ಅನ್ಯಾಯದ ಬಗ್ಗೆ ಒಂದೇ ಒಂದು ಮಾತನಾಡದ ಪ್ರಿಯಾಂಕ್ ಖರ್ಗೆ (Priyank Kharge) ಅವರು ಇಲ್ಲಸಲ್ಲದ ವಿಚಾರಗಳಿಗೆ ಸಮಯ ವ್ಯರ್ಥ ಮಾಡುತ್ತಿದ್ದು, ದಲಿತರು ಎನ್ನಿಸಿಕೊಳ್ಳುವುದಕ್ಕೂ ಅವರು ಯೋಗ್ಯರಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಟೀಕಿಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದ್ದಾರೆ.

ಚಪಲಕ್ಕಾಗಿ, ಪ್ರಚಾರಕ್ಕಾಗಿ ಮತ್ತು ಪತ್ರಿಕೆಗಳ ಮುಖಪುಟದಲ್ಲಿ ಬರುವುದಕ್ಕೆ ಆರ್‌ಎಸ್‌ಎಸ್‌ನ (RSS) ಬಗ್ಗೆ ಕೇವಲವಾಗಿ ಮಾತನಾಡಬೇಡಿ ಎಂದು ಎಚ್ಚರಿಸಿದ ಅವರು, ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಆರ್‌ಎಸ್‌ಎಸ್ ಅವಹೇಳನ ಮಾಡಿದೆಯೇ? ಅವರ ವಿರುದ್ಧವಾಗಿ ನಡೆದುಕೊಂಡಿದ್ದಾರೆಯೇ ಎಂದು ಅವರು ಪ್ರಶ್ನಿಸಿದರು.

ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್‌ನ ಚಟುವಟಿಕೆಗಳನ್ನು ಹದ್ದುಬಸ್ತಿನಲ್ಲಿ ಇಡಬೇಕು, ಯಾವುದೇ ಸರ್ಕಾರಿ ಶಾಲೆಗಳು, ದೇವಾಲಯಗಳಲ್ಲಿ ಚಟುವಟಿಕೆ ಮಾಡುವುದಕ್ಕೆ ಬಿಡಬಾರದು ಎಂದು ಚರ್ಚೆಯನ್ನು ಹುಟ್ಟುಹಾಕಿದ್ದಾರೆ ಎಂದು ಆಕ್ಷೇಪಿಸಿದರು. ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಿಂದ ದಲಿತರು ಇಂದು ಕಂಗಾಲಾಗಿದ್ದಾರೆ. 42 ಸಾವಿರ ಕೋಟಿ ನೀಡಿದ್ದೇವೆ ಎಂದು ಹೇಳಿ ಅವರಿಗೆ ಬಿಡಿಗಾಸು ಸಿಗದ ರೀತಿಯಲ್ಲಿ ನಡೆದುಕೊಂಡಿದ್ದೀರಿ. ಇದರ ಬಗ್ಗೆ ಮಾತನಾಡುವುದಕ್ಕೆ ಇವರಿಗೆ ಯೋಗ್ಯತೆ ಇಲ್ಲ ಎಂದು ದೂರಿದರು.

ಹಿಂದೆ ಕೂಡ ಆರ್‌ಎಸ್‌ಎಸ್‌ ಅನ್ನು ನಿಷೇಧಿಸಲಾಗಿತ್ತು. ಮತ್ತೆ ನಿಷೇಧವನ್ನು ಏಕೆ ವಾಪಸ್ ತೆಗೆದುಕೊಳ್ಳಲಾಯಿತು? ವಾಪಸ್ ತೆಗೆದುಕೊಳ್ಳಲು ಯಾರು ನಿಮಗೆ ಅರ್ಜಿ ಕೊಟ್ಟರು? ಆರ್‌ಎಸ್‌ಎಸ್‌ ಸಂಘಟನೆಯು ಕೇಳಿತ್ತೇ ಎಂದು ಪ್ರಶ್ನಿಸಿದರು. ಪ್ರಿಯಾಂಕ್‌ ಖರ್ಗೆ ಅವರೇ, ನಿಮಗೆ ತಾಕತ್ತು ಇದ್ದರೆ ಆರ್‌ಎಸ್‌ಎಸ್‌ ಅನ್ನು ನಿಷೇಧಿಸಿ ನೋಡಿ ಎಂದು ಸವಾಲು ಹಾಕಿದರು.

ಮಲ್ಲಿಕಾರ್ಜುನ ಖರ್ಗೆ ಅವರಿಗೆ ನಿಮ್ಮಂತ ನಡೆಯಿಲ್ಲ. ಅವರು ಸೌಮ್ಯ ಸ್ವಭಾವಿಯಾಗಿದ್ದರು, ಎಲ್ಲರನ್ನು ಜತೆಯಲ್ಲಿ ತೆಗೆದುಕೊಂಡು ಹೋಗುವ ಭಾವನೆ ಇತ್ತು. ಒಂದು ದಿನವೂ ಆರ್‌ಎಸ್‌ಎಸ್‌ನ ವಿರುದ್ಧವಾಗಿ ಮಾತನಾಡಲಿಲ್ಲ. ಆದರೆ ನಿಮಗೆ ಏಕೆ ಹುಚ್ಚುತನ ಬಂದಿದೆ ಎಂದು ಛಲವಾದಿ ನಾರಾಯಣಸ್ವಾಮಿ ಕೇಳಿದರು.

ಆರ್‌ಎಸ್‌ಎಸ್‌ ಸಂಘಟನೆಯ ಸಮಾವೇಶ ಬೆಂಗಳೂರಿನಲ್ಲಿ ನಡೆದಾಗ ಅಂದಿನ ಗೃಹಮಂತ್ರಿಯಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಬಂದು ಉಸ್ತುವಾರಿ ವಹಿಸಿ ಎಲ್ಲಿಯೂ ಯಾವುದೇ ರೀತಿಯ ಅನಾಹುತ ಆಗದ ರೀತಿ ಮಾಡಿ, ಅವರೇ ಮೆಚ್ಚುಗೆ ಸೂಚಿಸಿದ ಉದಾಹರಣೆಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಬೇಕಿದ್ದರೆ ನೀವು ಹೋಗಿ ನೋಡಿಕೊಳ್ಳಿ ಎಂದು ಹೇಳಿದರು. ನಿಮ್ಮ ಹುಚ್ಚುತನಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಪಮಾನ ಮಾಡಬೇಡಿ ಎಂದು ತಿಳಿಸಿದರು.

ಕಲುಷಿತ ಮನಸುಗಳು ಆರ್‌ಎಸ್‌ಎಸ್‌ ಅನ್ನು ನಿಷೇಧಿಸಲು, ನಿಯಂತ್ರಿಸಲು ಮಾಡಿರುವ ಎಲ್ಲ ಪ್ರಯತ್ನಗಳ ಮಧ್ಯೆಯು 100 ವರ್ಷಗಳನ್ನು ಕಳೆದು ಶತಮಾನೋತ್ಸವವ ಸಂಭ್ರಮಾಚರಣೆಯನ್ನು ಇಡೀ ದೇಶಾದ್ಯಂತ ಮಾಡುತ್ತಿದೆ ಎಂದು ತಿಳಿಸಿದ ಅವರು, ಈ 100 ಸಂಭ್ರಮ ಇಡೀ ದೇಶಾದ್ಯಂತ ನಡೆಯುವ ಸಂದರ್ಭದಲ್ಲಿ ಬೆಂಗಳೂರಿನ 100 ಕಡೆಗಳಲ್ಲಿ ಪಥಸಂಚಲನ ನಡೆದಿದೆ. ಅದನ್ನು ನೋಡಿ ಅವರಿಗೆ ಉರಿ ಪ್ರಾರಂಭವಾಗಿದೆ ಎಂದು ವ್ಯಂಗ್ಯವಾಡಿದರು.

ಆರ್‌ಎಸ್‌ಎಸ್‌ ದೇಶದ ರಕ್ಷಣೆ ಮತ್ತು ದೇಶವನ್ನು ಸದೃಢವಾಗಿ ಇಡಲು ಅನೇಕ ಸ್ವಯಂಸೇವಕರು ಮನೆಗಳನ್ನು ಬಿಟ್ಟು ಈ ಸಂಘಟನೆಯಲ್ಲಿ ಸೇರಿ ತ್ಯಾಗ ಮಾಡುತ್ತಿದ್ದಾರೆ. ಇಂತಹ ತ್ಯಾಗದ ಸಂಘಟನೆ ಈ ದೇಶದಲ್ಲಿ ಇರುವುದಕ್ಕೆ ಸಾಧ್ಯವಿಲ್ಲ. ಆದರೆ ಪ್ರಿಯಾಂಕ್‌ ಖರ್ಗೆ ಅವರು ದೇಶಕ್ಕೆ ಬಾಂಬ್ ಹಾಕಿದವರನ್ನ ರಕ್ಷಣೆ ಮಾಡುವುದು, ಓಲೈಕೆ ಮಾಡುವುದು, ಉಗ್ರ ಸಂಘಟನೆಗಳ ಪೋಷಿಸುವ ಮನಸ್ಥಿತಿ ಅವರದ್ದು ಎಂದು ಆರೋಪಿಸಿದರು.

ಪ್ರಿಯಾಂಕ್ ಖರ್ಗೆ ಅವರಿಗೆ ಕೊಟ್ಟಿರುವ ಸಚಿವ ಜವಾಬ್ದಾರಿಯನ್ನು ನಿಭಾಯಿಸಲಿ; ನಿಮ್ಮ ಕ್ಷೇತ್ರದ ಪರಿಸ್ಥಿತಿ ಏನು ಇದೆ ಎಂಬುದನ್ನು ಪರಿಶೀಲಿಸಲಿ. ನಿಮ್ಮ ಊರಿನ ಶಿಕ್ಷಣ ಪರಿಸ್ಥಿತಿ ನೋಡಿ ಎಂದು ಅವರು ಒತ್ತಾಯಿಸಿದರು.

ಈ ಸುದ್ದಿಯನ್ನೂ ಓದಿ | Karnataka Weather: ಯೆಲ್ಲೋ ಅಲರ್ಟ್‌ ಮುಂದುವರಿಕೆ; ರಾಜ್ಯದಲ್ಲಿ ಅ.16ರವರೆಗೆ ಧಾರಾಕಾರ ಮಳೆ ನಿರೀಕ್ಷೆ!

ಕಾಂಗ್ರೆಸ್ ಕುತಂತ್ರ ಮಾಡಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಸೋಲಿಸಿತ್ತು. ಅದನ್ನು ಅವರೇ ಒಪ್ಪಿಕೊಂಡಿದ್ದಾರೆ. ನಾವು ರಾಜಕೀಯ ಪಕ್ಷ ಅದಕ್ಕಾಗಿ ನಾವು ಸೋಲಿಸಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ. ಹಾಗಿದ್ದಲ್ಲಿ ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ವಿರೋಧಿ ಅಲ್ಲವೇ ಎಂದು ಕೇಳಿದರು. ಇಂದು ಎಲ್ಲ ಸಮುದಾಯಗಳನ್ನು ಒಗ್ಗೂಡಿಸುತ್ತಿರುವ ಆರ್‌ಎಸ್‌ಎಸ್‌ ಬಗ್ಗೆ ಕ್ಷುಲ್ಲಕ ಹೇಳಿಕೆಯನ್ನು ನೀಡುವುದನ್ನು ಬಿಟ್ಟು ಅವರು ಕ್ಷಮೆ ಯಾಚಿಸಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.