ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬಜೆಟ್‌ನಿಂದ ಯಾವ ಕ್ಷೇತ್ರಕ್ಕೂ ಪ್ರಯೋಜನವಾಗಿಲ್ಲ: ಡಾ.ಸಿ.ಎನ್. ಅಶ್ವತ್ಥ ನಾರಾಯಣ್

Karnataka Budget 2026: ಗುಣಮಟ್ಟದ ಶಿಕ್ಷಣ, ಗುಣಮಟ್ಟದ ಆರೋಗ್ಯ ಸೇವೆಗಳಾಗಲೀ, ರೈತರ ಪರವಾಗಲೀ, ದೀನ ದಲಿತರ ಪರವಾಗಿ ಆಗಲೀ ಇಲ್ಲ. ಒಟ್ಟಿನಲ್ಲಿ ಯಾವುದೇ ಕ್ಷೇತ್ರಕ್ಕೂ ಅನುಕೂಲವಾಗಿಲ್ಲ. ಇದು ನಿರಾಸೆ ಮೂಡಿಸಿದೆ ಎಂದು ಶಾಸಕ ಮತ್ತು ಮಾಜಿ ಡಿಸಿಎಂ ಡಾ.ಸಿ.ಎನ್. ಅಶ್ವತ್ಥ ನಾರಾಯಣ್ ಟೀಕಿಸಿದ್ದಾರೆ.

ಬಜೆಟ್‌ನಿಂದ ಯಾವ ಕ್ಷೇತ್ರಕ್ಕೂ ಪ್ರಯೋಜನವಾಗಿಲ್ಲ: ಅಶ್ವತ್ಥ ನಾರಾಯಣ್ ಟೀಕೆ

ಮಾಜಿ ಡಿಸಿಎಂ ಡಾ.ಸಿ.ಎನ್. ಅಶ್ವತ್ಥ ನಾರಾಯಣ್ (ಸಂಗ್ರಹ ಚಿತ್ರ) -

Profile
Siddalinga Swamy Mar 6, 2026 9:46 PM

ಬೆಂಗಳೂರು, ಮಾ. 6: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ (Karnataka Budget 2026) ಯಾವು ಭರವಸೆಯನ್ನೂ ಮೂಡಿಸಿಲ್ಲ ಎಂದು ಶಾಸಕ ಮತ್ತು ಮಾಜಿ ಡಿಸಿಎಂ ಡಾ.ಸಿ.ಎನ್. ಅಶ್ವತ್ಥ ನಾರಾಯಣ್ (CN Ashwath Narayan) ಟೀಕಿಸಿದ್ದಾರೆ. ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಬಜೆಟ್‌ ಗುಣಮಟ್ಟದ ಶಿಕ್ಷಣ, ಗುಣಮಟ್ಟದ ಆರೋಗ್ಯ ಸೇವೆಗಳಾಗಲೀ, ರೈತರ ಪರವಾಗಲೀ, ದೀನ ದಲಿತರ ಪರವಾಗಿ ಆಗಲೀ ಇಲ್ಲ. ಯಾವುದೇ ಕ್ಷೇತ್ರಕ್ಕೂ ಅನುಕೂಲ ಒದಗಿಸುವ ಬಜೆಟ್ ಇದಲ್ಲ. ಇದು ನಿರಾಶೆಯನ್ನು ಹುಟ್ಟಿಸಿದೆ ಎಂದು ಹೇಳಿದ್ದಾರೆ.

ಹಣಕಾಸು ತಜ್ಞ ಸಿದ್ದರಾಮಯ್ಯ ಕೊರತೆ ಬಜೆಟ್ ಮಂಡಿಸಿದ್ದಾರೆ. ಇದು ಅತ್ಯಂತ ನಿರಾಶಾದಾಯಕ ಎಂದು ತಿಳಿಸಿದ ಅವರು, ಕಾಂಗ್ರೆಸ್ಸಿಗರು ಅಧಿಕಾರಕ್ಕೆ ಬಂದಾಗಿನಿಂದ 4 ಲಕ್ಷ 40 ಸಾವಿರ ಕೋಟಿ ರುಪಾಯಿ ಸಾಲ ಪಡೆದಿದ್ದಾರೆ. ಇವರು ಸಾಲದ ಹೊರೆ ಹೆಚ್ಚಿಸಿದ್ದಾರೆ. ಇದರಲ್ಲಿ ಪ್ರಗತಿಗೆ ಪೂರಕ ಅಂಶಗಳಿಲ್ಲ ಎಂದು ಅಶ್ವತ್ಥ ನಾರಾಯಣ್ ಟೀಕಿಸಿದ್ದಾರೆ.‌

ರಾಜ್ಯ ಬಜೆಟ್‌ ವಿರುದ್ಧ ಬಿಜೆಪಿ ನಾಯಕರ ಪ್ರತಿಭಟನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ರಾಜ್ಯ ಬಜೆಟ್ ಖಾಲಿ ಚೊಂಬಿನಂತಿದೆ ಎಂದು ರಾಜ್ಯ ಬಿಜೆಪಿ ನಾಯಕರು ಆಕ್ರೋಶ ಹೊರಹಾಕಿದ್ದಾರೆ. ರಾಜ್ಯ ಬಜೆಟ್‌ ವಿರುದ್ಧ ಬಿಜೆಪಿ ವತಿಯಿಂದ ಶುಕ್ರವಾರ ವಿಧಾನಸೌಧದ ಬಳಿ ಪ್ರತಿಭಟನೆ ನಡೆಸಲಾಯಿತು. ಕನ್ನಡಿಗರಿಗೆ ಖಾಲಿ ಚೊಂಬು ಕೊಟ್ಟ ಕಾಂಗ್ರೆಸ್ ಸರ್ಕಾರ ಎಂಬ ಪೋಸ್ಟರ್ ಹಿಡಿದು ಎಲ್ಲರೂ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಪ್ರಮುಖರು ಕೈಯಲ್ಲಿ ಖಾಲಿ ಚೊಂಬನ್ನು ಪ್ರತಿಭಟನೆಯ ವೇಳೆ ಪ್ರದರ್ಶಿಸಿದರು.

ಯುವಕರಿಗೆ ಮೋಸ ಮಾಡಿದ ಸರ್ಕಾರಕ್ಕೆ ಧಿಕ್ಕಾರ, 3 ವರ್ಷದಲ್ಲಿ ಮೂರೂವರೆ ಲಕ್ಷ ಕೋಟಿ ಸಾಲ ಮಾಡಿದ ಸರ್ಕಾರಕ್ಕೆ ಧಿಕ್ಕಾರ, ಬಜೆಟ್ಟಂತೆ ಬಜೆಟ್ ಖಾಲಿ ಚೊಂಬಿನ ಬಜೆಟ್- ಎಂಬಿತ್ಯಾದಿ ಘೋಷಣೆಗಳನ್ನು ಕೂಗಲಾಯಿತು.

ಕರ್ನಾಟಕದ ಪಾಲಿಗೆ ಮತ್ತೊಂದು ಪೊಳ್ಳು ಭರವಸೆಯ ಬಜೆಟ್: ವಿಜಯೇಂದ್ರ ಕಿಡಿ

ರಾಜ್ಯದ ಜನರಿಗೆ ಖಾಲಿ ಚೊಂಬು ನೀಡಿದ ಸಿದ್ದರಾಮಯ್ಯ ಅವರಿಗೆ ಧಿಕ್ಕಾರ, ಕನ್ನಡಿಗರಿಗೆ ಖಾಲಿ ಚೊಂಬು ನೀಡಿದ ಸಿದ್ದರಾಮಯ್ಯ ಅವರಿಗೆ ಧಿಕ್ಕಾರ, ರಾಜ್ಯದ ರೈತರಿಗೆ ಖಾಲಿ ಚೊಂಬು ಕೊಟ್ಟ ಸರ್ಕಾರಕ್ಕೆ ಧಿಕ್ಕಾರ ಎಂದು ಪ್ರತಿಭಟನೆಯಲ್ಲಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.‌ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ, ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್, ಉಪ ನಾಯಕ ಅರವಿಂದ ಬೆಲ್ಲದ, ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿ ಕುಮಾರ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.